ADVERTISEMENT

ಬೆರಗಿನ ಬೆಳಕು: ಬೇಕೂಫ

ಡಾ. ಗುರುರಾಜ ಕರಜಗಿ
Published 30 ಡಿಸೆಂಬರ್ 2020, 19:31 IST
Last Updated 30 ಡಿಸೆಂಬರ್ 2020, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು | ಬೇಕೆನುತ ಬೊಬ್ಬಿಡುತಲಿಹ ಘಟವನಿದನು ||
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ |
ಸಾಕೆನಿಪುದೆಂದಿಗೆಲೊ – ಮಂಕುತಿಮ್ಮ || 371 ||

ಪದ-ಅರ್ಥ: ಬೇಕಿದೆನಗಿನ್ನೊಂದು=ಬೇಕು+ ಇದು+ಎನಗೆ+ಇನ್ನೊಂದು, ಬೊಬ್ಬಿಡು ತಲಿಹ=ಬೊಬ್ಬೆ ಹಾಕುತ್ತಿರುವ, ಘಟ=ಪಾತ್ರೆ, ದೇಹ, ಸಾಕೆನಿಪುದೆಂದಿಗೆಲೊ=ಸಾಕು+ಎನಿಪುದು (ಎನ್ನಿಸುವುದು)+ಎಂದಿಗೆ+ಎಲೊ

ವಾಚ್ಯಾರ್ಥ: ಅದು ಬೇಕು, ಇದು ಬೇಕು, ಮತ್ತಷ್ಟು ಬೇಕೆಂದು ಹಪಾಹಪಿ ಪಡುವ ಈ ದೇಹವನ್ನು ಭಗವಂತ ಅದೇಕೆ ನಿರ್ಮಾಣ ಮಾಡಿದನೊ? ಬೇಕು ಬೇಕು ಎನ್ನುವ ಈ ಜಪ ನಿಂತು ಸಾಕು ಎನ್ನಿಸುವುದು ಯಾವಾಗ?

ADVERTISEMENT

ವಿವರಣೆ: ಅವನೊಬ್ಬ ಶ್ರೀಮಂತ. ಅರಮನೆಯಂಥ ಮನೆ, ಸಾಕಷ್ಟು ಜಮೀನು, ಸಮೃದ್ಧವಾದ ಬೆಳೆ, ಅನುರೂಪಳಾದ ಪತ್ನಿ, ಪರಿವಾರ. ಆದರೂ ಅವನಿಗೆ ಮನದಲ್ಲಿ ಕೊರೆ. ತಾನು ಮತ್ತಷ್ಟು ಶ್ರೀಮಂತನಾಗಬೇಕು. ತನ್ನ ಸುತ್ತಮುತ್ತ ಯಾರೂ ತನ್ನಷ್ಟು ಸಿರಿವಂತರಾಗಿರಬಾರದು ಎಂದು ಅಪೇಕ್ಷೆ. ಆ ದೇಶದ ರಾಜ ಶಾಲೆಯಲ್ಲಿ ಓದುವಾಗ ಈ ಶ್ರೀಮಂತನ ಸಹಪಾಠಿಯಾಗಿದ್ದ. ಆ ಸಲುಗೆಯಿಂದ ಶ್ರೀಮಂತ, ರಾಜನ ಬಳಿಗೆ ಹೋಗಿ ಕಷ್ಟ ಹೇಳಿಕೊಂಡ. ತನ್ನೂರಲ್ಲೇ ಇದ್ದ ಬೇಕಾದಷ್ಟು ಖಾಲಿ ಜಮೀನನ್ನು ಕೊಡಲು ಬೇಡಿದ. ರಾಜ ನಕ್ಕ. ಶರತ್ತಿನ ಮೇಲೆ ಜಮೀನು ಕೊಡಲು ಒಪ್ಪಿದ. ಅದು ಮೇಲ್ನೋಟಕ್ಕೆ ಸುಲಭದ ಶರತ್ತು. ಬೆಳಿಗ್ಗೆ ಆರು ಗಂಟೆಗೆ ಶ್ರೀಮಂತ ಊರಿನ ಹೊರಭಾಗದ ಒಂದು ಜಾಗೆಯಿಂದ ಹೊರಡಬೇಕು. ಆತ ನಡೆಯಬಹುದು, ಓಡಿಬಹುದು. ಆದರೆ ಮರಳಿ ಸಾಯಂಕಾಲ ಆರು ಗಂಟೆಗೆ ಅದೇ ಸ್ಥಳಕ್ಕೆ ಬಂದು ಸೇರಬೇಕು. ಎಷ್ಟು ದೂರವನ್ನು ಆತ ಕ್ರಮಿಸುತ್ತಾನೋ, ಅದೆಲ್ಲ ಭೂಮಿ ಅವನದೇ. ಶ್ರೀಮಂತನಿಗೆ ಅಪಾರ ಸಂತೋಷ. ರಾತ್ರಿಯನ್ನು ನಿದ್ರೆಯಿಲ್ಲದೆ ಕಳೆದ. ಬೆಳಿಗ್ಗೆ ಆರು ಗಂಟೆಗೆ ಹೊರಟ. ಹೆಜ್ಜೆ ಇಟ್ಟ ನೆಲವೆಲ್ಲ ತನ್ನದೇ ಎಂಬ ತೃಪ್ತಿ, ಆದಷ್ಟು ದೂರ ಕ್ರಮಿಸಬೇಕೆಂಬ ಆಸೆ. ಆತ ಅವಸರದಿಂದ ನಡೆದ. ವೇಗ ಸಾಕಾಗಲಿಲ್ಲವೆಂದು ಓಡಿದ. ಅವನಿಗೂ ವಯಸ್ಸಾಗಿದೆ. ಆದರೂ ಸಾವರಿಸಿಕೊಂಡು, ಏದುಸಿರುಬಿಡುತ್ತ ಓಡಿದ. ಆರು ತಾಸು ಹೀಗೆ ಓಡಬೇಕು. ಮತ್ತೆ ಮರಳಿ ಮೂಲಸ್ಥಾನ ಸೇರಬೇಕು. ಮಧ್ಯಾಹ್ನ ಹನ್ನೆರಡಾಯಿತು. ಈಗ ಮತ್ತೆ ಬಂದ ದಾರಿಯನ್ನು ಸವೆಸಬೇಕು. ಆತನಿಗೆ ತಲೆಸುತ್ತಿ ಬಂದಂತಾಯಿತು. ಹೃದಯದ ಬಡಿತ ವಿಪರೀತವಾಯಿತು. ನೆಲದ ದಾಹ ಅವನನ್ನು ಓಡಿಸಿತು. ಕಣ್ಣು ಮಂಜಾಗುತ್ತಿತ್ತು. ಸ್ವಲ್ಪ ದೂರದಲ್ಲೇ ರಾಜ ನಿಂತಿದ್ದ. ಅಲ್ಲಿಗೆ ಮುಟ್ಟಿದರೆ ಸಾಕು. ಆದರೆ ಶಕ್ತಿಯೆಲ್ಲ ಕುಸಿದು ಹೋಗಿ ನೆಲಕ್ಕೆ ಬಿದ್ದು ಸತ್ತು ಹೋದ. ಚೆನ್ನಾಗಿಯೇ ಇದ್ದ ಮನುಷ್ಯ ಮತ್ತಷ್ಟಕ್ಕಾಗಿ ಹಂಬಲಿಸಿ ಪ್ರಾಣ ಕಳೆದುಕೊಂಡ. ಅದಕ್ಕೇ ಪುರಂದರದಾಸರು ಹಾಡಿದರು. ‘ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ, ಅಷ್ಟು ದೊರಕಿದರು ಮತ್ತಷ್ಟರಾಸೆ. ಕಷ್ಟ ಬೇಡೆಂಬಾಸೆ, ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರ ವಿಠಲ’.

ಈ ಕಗ್ಗದ ಧ್ವನಿಯೂ ಅದೇ. ದೇಹ ಅದು ಬೇಕು, ಇದು ಬೇಕು ಎಂದು ಒದ್ದಾಡುತ್ತದೆ. ಅದಕ್ಕೆ ತೃಪ್ತಿ ಎಂಬುದೇ ಇಲ್ಲ. ನನ್ನ ಗುರುಗಳೊಬ್ಬರು ಹೇಳುತ್ತಿದ್ದರು. ‘ಮನುಷ್ಯ ಸದಾಕಾಲ ಬೇಕು, ಬೇಕು ಎನ್ನುವುದರಿಂದಲೇ ಅವನನ್ನು ‘ಬೇಕೂಫಾ’ ಎನ್ನುತ್ತಾರೆ. ಹಿಂದಿಯಲ್ಲಿ ‘ಬೇಕೂಫ್’ ಎಂದರೆ ಮೂರ್ಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.