ADVERTISEMENT

ಬೆರಗಿನ ಬೆಳಕು | ದೈವವೇ ಕಾಪಿಡಬೇಕು

ಡಾ. ಗುರುರಾಜ ಕರಜಗಿ
Published 3 ಆಗಸ್ಟ್ 2023, 23:56 IST
Last Updated 3 ಆಗಸ್ಟ್ 2023, 23:56 IST
ಬೆರಗಿನ ಬೆಳಕು
ಬೆರಗಿನ ಬೆಳಕು    

ಹರಸುವುದದೇನ ನೀಂ? ವರವದೇನೆಂದರಿವೆ? |
ಸರಿಯಿಂದು ತೋರುವುದು ನಾಳೆ ಸರಿಯಿಹುದೆ? ||
ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು? |
ಅರಿವ ದೈವವೆ ಪೊರೆಗೆ – ಮಂಕುತಿಮ್ಮ || 942 ||

ಪದ-ಅರ್ಥ: ಹರಸುವುದದೇನ=ಹರಸುವುದು+ಅದು+ಏನ, ವರವದೇನೆಂದರಿವೆ=ವರವು+
ಅದು+ಏನೆಂದು+ಅರಿವೆ, ನಿರುಕಿಸುವುದೆಂತು=ನಿರುಕಿಸುವುದು(ನಿರೀಕ್ಷಿಸುವುದು)+ಎಂತು, ಪೊರೆಗೆ=ಕಾಪಾಡುತ್ತದೆ.

ವಾಚ್ಯಾರ್ಥ: ನೀನು ಅದೇನು ಹರಸುತ್ತೀ? ವರ ಎಂದರೇನು ತಿಳಿದಿದೆಯೆ? ಇಂದು ಸರಿ ಎಂದು ಕಂಡದ್ದು ನಾಳೆ ಸರಿಯಾಗಲಿಕ್ಕಿಲ್ಲ. ಸದಾಕಾಲವೂ ಒಳ್ಳೆಯದಾಗುವುದನ್ನು ನಿರೀಕ್ಷಿಸುವುದು ಹೇಗೆ? ಎಲ್ಲವನ್ನೂ ತಿಳಿದ ದೈವವೇ ಕಾಪಾಡಬೇಕು.

ADVERTISEMENT

ವಿವರಣೆ: ಮತ್ತೊಬ್ಬರಿಗೆ ಏನೆಂದು ಹರಸುವುದು ಮತ್ತು ಬೇರೆಯವರಿಂದ ಯಾವುದನ್ನು ಬೇಡುವುದು ಎಂಬುದರ ಸರಿಯಾದ ಅರಿವು ನಮಗಿಲ್ಲ. ನಾವು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹರಸುತ್ತೇವೆ. ಆದರೆ ಅದರಿಂದ ಅವರಿಗೆ ಒಳ್ಳೆಯದಾದೀತೆ? ತನ್ನ ಮಗ ಭರತ ಚಕ್ರವರ್ತಿಯಾಗಲಿ ಎಂದು ಬಯಸಿ, ಅದಕ್ಕಾಗಿ ರಾಮನ ವನವಾಸಕ್ಕೆ ಯೋಜನೆ ಮಾಡಿದಳು ಕೈಕೇಯಿ. ಆದರೆ ಏನಾಯಿತು? ಮಗ ಚಕ್ರವರ್ತಿಯಾಗದೆ, ಅಣ್ಣ ಬರುವವರೆಗೆ ಹದಿನಾಲ್ಕು ವರ್ಷ ಸನ್ಯಾಸಿಯಂತೆ ಊರ ಹೊರಗೇ ಬದುಕಿದ. ವರವೆಂದದ್ದು ಶಾಪವಾಗಿತ್ತು.

ಕುಂತಿಗೆ ದುರ್ವಾಸರು ವರ ನೀಡಿದರು. ಆದರೆ ಪುಟ್ಟ ಹುಡುಗಿಗೆ ಯಾವ ವರ ಕೊಡಬೇಕೆಂಬುದು ತಿಳಿಯದೆ ಹೋಯಿತೇ? ಇನ್ನೂ ಆಟವಾಡುವ ವಯಸ್ಸಿನ ಹುಡುಗಿಗೆ, ನೀನು ಯಾರನ್ನು ನೆನೆಯುತ್ತೀಯೋ, ಅವನಿಂದ ಮಗ ಹುಟ್ಟುತ್ತಾನೆ ಎಂಬ ಐದು ವರ ನೀಡಿದರು. ಪರಿಣಾಮವಾಗಿ ಮದುವೆಗಿಂತ ಮೊದಲೇ ಕರ್ಣನಿಗೆ ಜನ್ಮವಿತ್ತು ಅಸಹಾಯಕತೆ, ಭಯ, ಅಪರಾಧೀ ಭಾವದಿಂದ ಬದುಕಿನುದ್ದಕ್ಕೂ ಶಾಪಗ್ರಸ್ತಳಂತೆ ಬದುಕಬೇಕಾಯಿತು.

ಕಗ್ಗ ಈ ಮಾತನ್ನು ಕೇಳುತ್ತದೆ, ಇಂದು ನಮಗೆ ಸರಿ ಎಂದದ್ದು ಯಾವಾಗಲೂ ಸರಿಯಾದೀತೇ? ಅಣು ವಿಭಜನೆ ಮಾಡಿದಾಗ ಅಪಾರ ಶಕ್ತಿಯನ್ನು ಪರಮಾಣುವಿನಿಂದ ಪಡೆಯಬಹುದೆಂದು ವಿಜ್ಞಾನಿಗಳು ಸಂಭ್ರಮಪಟ್ಟರು. ಅದೊಂದು ಸರ್ವಶ್ರೇಷ್ಠ ಅವಿಷ್ಕಾರ ಎಂದರು. ಆದರೆ ಪರಮಾಣು ಬಾಂಬ್ ಜಪಾನನ್ನು ಉಧ್ವಸ್ಥಗೊಳಿಸಿಬಿಟ್ಟಿತು. ವರವಾಗಬೇಕಾಗಿದ್ದ ಪರಮಾಣು ಶಕ್ತಿ ಮಹಾ ಶಾಪವಾಗಿತ್ತು. ಮೊದಲ ಬಾರಿಗೆ ಪ್ಲಾಸ್ಟಿಕ್ ಕಂಡುಹಿಡಿದಾಗ ಅದೊಂದು ಮಹಾನ್ ವರವಾಗಿತ್ತು ಅಂದು. ಇಂದು ಅದು ಪೆಡಂಭೂತವಾಗಿ ಕಾಡುತ್ತಿದೆ. ವಿಜ್ಞಾನಿಗಳು ಕೃತಕ ಗೊಬ್ಬರಗಳನ್ನು ರಸಾಯನಿಕ ಪದಾರ್ಥಗಳಿಂದ ಸಿದ್ಧಪಡಿಸಿದಾಗ ಪ್ರಪಂಚ ಬೆರಗಾಗಿತ್ತು. ಇನ್ನೇನು ಕೃಷಿಕ್ರಾಂತಿ ಬಂದೇಬಂತು ಎಂದು ರೈತರೆಲ್ಲ ಹಿಗ್ಗಿ ಬೇಕಾದ ಹಾಗೆ ಬಳಸತೊಡಗಿದರು. ಈಗ ಅದೇ ಗೊಬ್ಬರ ನೆಲವನ್ನು ಬರಡು ಮಾಡಿದೆ. ಮತ್ತೆ ಜನ ಸಾವಯವ ಗೊಬ್ಬರಗಳ ಕಡೆಗೆ ಮನನೀಡುವಂತಾಗಿದೆ.

ಹೀಗೆಂದರೇನಾಯಿತು? ನಮಗೆ ಏನು ಹರಸಬೇಕು, ಏನು ವರ ಬೇಡಬೇಕು ಎಂಬುದು ತಿಳಿದಿಲ್ಲ. ಇಂದು ಸರಿಯಾದದ್ದು ಎಂದೆಂದಿಗೂ ಸರಿಯಾದೀತೇ ಎಂಬುದೂ ಗೊತ್ತಿಲ್ಲ. ಸದಾಕಾಲ ಒಳ್ಳೆಯದನ್ನು ಪಡೆಯುವುದು ಹೇಗೆಂದು ನಿರೀಕ್ಷಿಸುವುದು ಹೇಗೆ? ಅದಕ್ಕೆ ಕಗ್ಗ ಹೇಳುತ್ತದೆ, ಅದು ನಮ್ಮನ್ನು ಮೀರಿದ್ದು. ಎಲ್ಲವನ್ನೂ ತಿಳಿದ ಭಗವಂತನೇ ಕಾಪಿಡುತ್ತಾನೆ ಎಂಬ ಭರವಸೆಯೇ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.