ADVERTISEMENT

ಬೆರಗಿನ ಬೆಳಕು | ಸ್ವಾವಲೋಕನ

ಡಾ. ಗುರುರಾಜ ಕರಜಗಿ
Published 31 ಜುಲೈ 2023, 23:41 IST
Last Updated 31 ಜುಲೈ 2023, 23:41 IST
ಬೆರಗಿನ ಬೆಳಕು
ಬೆರಗಿನ ಬೆಳಕು    

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ |
ಇಂದು ನಂಬಿಹುದೆ ಮುಂದೆಂದುಮೆಂದಲ್ಲ ||
ಕುಂದು ತರ‍್ದಂದದನು ತಿದ್ದಿಕೊಳೆ ಮನಸುಂಟು |
ಇಂದಿಗೀ ಮತವುಚಿತ – ಮಂಕುತಿಮ್ಮ || 939 ||

ಪದ-ಅರ್ಥ: ಸಂದೇಹವೀ=ಸಂದೇಹವು+ಈ,
ಕೃತಿಯೊಳಿನ್ನಿಲ್ಲವೆಂದಲ್ಲ=ಕೃತಿಯೊಳು+ಇನ್ನಿಲ್ಲ+ಎಂದಲ್ಲ,
ಮುಂದೆಂದುಮೆಂದಲ್ಲ=ಮುಂದೆ+ಎಂದೆಂದುಮ್+ಅಂದಲ್ಲ,
ತರ‍್ದಂದದನು=ತರ‍್ದಂದು(ತೋರಿದಂದು)+ಅದನು,
ಮತವುಚಿತ=ಮತ(ಅಭಿಪ್ರಾಯ)+ಉಚಿತ (ಸರಿಯಾದದ್ದು).


ವಾಚ್ಯಾರ್ಥ: ಈ ಕೃತಿಯೊಳಗೆ ಸಂದೇಹವಾವುದೂ ಇಲ್ಲ ಎಂದಲ್ಲ, ಇಂದು ನಂಬಿದ್ದೇ ಮುಂದೆ ಯಾವಾಗಲೂ ಸರಿ ಎಂದಲ್ಲ, ತಪ್ಪನ್ನು ತೋರಿಸಿದರೆ ತಿದ್ದಿಕೊಳ್ಳುವ ಮನವಿದೆ. ಇಂದಿಗೆ ಈ ಮತ ಸರಿಯಾದದ್ದು.

ADVERTISEMENT

ವಿವರಣೆ: ಈ ಕಗ್ಗ ಸಾಧಕರೊಬ್ಬರು ಮಾಡಿಕೊಂಡ ಆತ್ಮವಿಮರ್ಶೆಯ ಅತ್ಯುತ್ತಮ ಮಾದರಿ. ತಾವು ಬರೆದ ಕೃತಿಯಲ್ಲಿ ಸಂದೇಹಗಳೇ ಇಲ್ಲ ಎನ್ನುವಂತಿಲ್ಲ. ತಾನು ಇಂದು ನಂಬಿದ್ದನ್ನು ಮುಂದೆಯೂ ನಂಬಿಯೇ ತೀರುತ್ತೇನೆ ಎಂಬ ಹಟವಿಲ್ಲ. ಇದರಲ್ಲಿ ಏನಾದರೂ ತಪ್ಪು ಕಂಡರೆ ತಿದ್ದಿಕೊಳ್ಳುವ ಮನಸ್ಸಿದೆ ಎನ್ನುವ ವಿನಮ್ರತೆಯೊಂದಿಗೆ, ಸ್ವವಿಮರ್ಶೆ ಇದೆ. ಆತ್ಮವಿಮರ್ಶೆ ಶರಣಾಗತಿಯಲ್ಲ, ಮಹತ್ವಾಕಾಂಕ್ಷೆಯೂ ಅಲ್ಲ. ಅದು ಪ್ರಾಮಾಣಿಕ ಮನಸ್ಸಿನ ಅತ್ಯಂತ ಸಹಜ ಅವಲೋಕನ. ಈ ಸ್ವಾವಲೋಕನ ಇಲ್ಲದೆ ವ್ಯಕ್ತಿ, ಸಮಾಜ, ಧರ್ಮ ಯಾವುದೂ ಬೆಳೆಯುವುದು ಸಾಧ್ಯವಿಲ್ಲ.

ಶಾಸ್ತ್ರಗಳಿಂದ, ಗ್ರಂಥಗಳಿಂದ, ಜೀವನಾನುಭವಗಳಿಂದ ಪಡೆದ ಜ್ಞಾನವನ್ನು ಪರಿಷ್ಕರಿಸಿ, ಸರಿಯಾಗಿ ಜೋಡಿಸಿ ರಚಿಸಿದ ಈ ಕಗ್ಗಗಳಲ್ಲಿ ಸಾರ್ಥಕ ಜೀವನಕ್ಕೆ ಬೇಕಾದ ಸರ್ವಪದಾರ್ಥವೂ ಇದೆ. ತಾವು ಕಂಡದ್ದನ್ನು, ಕೇಳಿದ್ದನ್ನು, ಓದಿದ್ದನ್ನು ಅರಗಿಸಿಕೊಂಡು ಅತ್ಯಂತ ಸಾಮಾನ್ಯರ ಮನಸ್ಸಿಗೂ ತಟ್ಟುವಂತೆ ಬರೆದ ಕಗ್ಗದ ಬಗ್ಗೆ ಡಿ.ವಿ.ಜಿ ಎಷ್ಟು ನಿರ್ವಿಕಾರವಾಗಿ ಹೇಳುತ್ತಾರೆ, “ತಪ್ಪು ತೋರಿಸಿದರೆ ಒಪ್ಪಿಕೊಳ್ಳುವ, ತಿದ್ದಿಕೊಳ್ಳುವ ಮನಸ್ಸಿದೆ” ಎಂದು! ಇಂತಹುದೇ ಧ್ವನಿ ಮಹಾತ್ಮಾ ಗಾಂಧಿಯವರ ಜೀವನ ಚರಿತ್ರೆ, “ನನ್ನ ಸತ್ಯಾನ್ವೇಷಣೆ” ಯಲ್ಲಿ ಕೇಳುತ್ತದೆ.

ಅವರೂ ಹೀಗೆಯೇ ಹೇಳುತ್ತಾರೆ, “ನಾನು ಬರೆದದ್ದೆಲ್ಲ ಶಾಶ್ವತ ಸತ್ಯವೆಂದೋ, ಕೊನೆಯ ತೀರ್ಮಾನಗಳೆಂದೋ, ನಿರ್ದೋಷವಾದವುಗಳೆಂದೋ ನಾನು ಹೇಳುವುದಿಲ್ಲ.. ಅವು ನನ್ನ ಮಟ್ಟಿಗೆ, ಈ ಪರಿಸ್ಥಿತಿಯಲ್ಲಿ, ಸರಿಯೆಂದೇ ತೋರಿವೆ. ನನ್ನ ಇಂದಿನ ಅಭಿಪ್ರಾಯ ಮುಂದೆಯೂ ಹಾಗೆಯೇ ಇದ್ದೀತು ಎಂದು ಹೇಳಲಾರೆ”. ಇದು ಸತ್ಯವಲ್ಲವೆ? ನಮ್ಮ ಇಂದಿನ ಅಭಿಪ್ರಾಯಕ್ಕೆ ನಮ್ಮ ಇದುವರೆಗಿನ ಅನುಭವ, ಓದು, ಪರಿಸರ, ಪರಿಸ್ಥಿತಿ ಎಲ್ಲವೂ ಕಾರಣವಾಗುತ್ತವೆ. ಮುಂದೆ ಇವುಗಳು ಬದಲಾದಾಗ ಅಭಿಪ್ರಾಯಗಳೂ ಬದಲಾಗುತ್ತವೆ. ಅದಕ್ಕೇ ಕಗ್ಗ ಹೇಳುತ್ತದೆ, “ಇಂದಿಗೀ ಮತವುಚಿತ”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.