ADVERTISEMENT

ಬೆರಗಿನ ಬೆಳಕು– ಗುರುರಾಜ ಕರಜಗಿ ಅವರ ಅಂಕಣ: ನಿದ್ರೆಯಂತೆ ಸಾವು

ಡಾ. ಗುರುರಾಜ ಕರಜಗಿ
Published 17 ಜುಲೈ 2023, 19:27 IST
Last Updated 17 ಜುಲೈ 2023, 19:27 IST
ಬೆರಗಿನ ಬೆಳಕು- ಗುರುರಾಜ ಕರಜಗಿ
ಬೆರಗಿನ ಬೆಳಕು- ಗುರುರಾಜ ಕರಜಗಿ   

ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ |
ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ||
ಗದ್ದಲವ ಬಿಡಲು ಕಡೆದಿನವಾನುಮಾದೀತೆ? |
ನಿದ್ದೆವೊಲು ಸಾವ ಪಡೆ – ಮಂಕುತಿಮ್ಮ || 929 ||

ಪದ-ಅರ್ಥ: ಬಾಳೆಲ್ಲವಾಯ್ತು=ಬಾಳೆಲ್ಲವೂ+ಆಯ್ತು, ಕಡೆದಿನವಾನುಮಾದೀತೆ=ಕಡೆದಿನವಾನುಮ್(ಕಡೆದಿನವಾದರೂ)+ಆದೀತೆ, ನಿದ್ದೆವೊಲು=ನಿದ್ರೆಯ ಹಾಗೆ.

ವಾಚ್ಯಾರ್ಥ: ಜಗಕ್ಕೆ ನೀನು ಸದ್ದು ಮಾಡದೆ ಬಂದವನಲ್ಲ. ಆಮೇಲೆಯೂ ಬದುಕೆಲ್ಲ ಒದ್ದಾಟ, ಗುದ್ದಾಟವೇ ಆಯಿತು. ಬದುಕಿನ ಕಡೆಯ ದಿನವಾದರೂ ಗದ್ದಲವನ್ನು ಬಿಡಲು ಆದೀತೆ? ನಿದ್ರೆಯಂತೆ ಸಾವನ್ನು ಪಡೆ.
ವಿವರಣೆ: ಹುಟ್ಟುವಾಗ ಬಂದ ಉಸಿರು ಸಾಯುವಾಗ ಹೋಗಿಬಿಡುತ್ತದೆ. ಉಸಿರು ಬಂದು ಹೋಗುವ ನಡುವಿನ ಸಮಯ ಬದುಕು ಎನ್ನಿಸಿಕೊಳ್ಳುತ್ತದೆ. ಹುಟ್ಟಿದೊಡನೆಯೇ ಅಳಬೇಕು. ಅದೇ ಬದುಕಿಗೆ ಮೊದಲ ಪ್ರತಿಕ್ರಿಯೆ. ಅಳದೆ ಹೋದರೆ ಸೂಲಗಿತ್ತಿ ಬೆನ್ನ ಮೇಲೆ ಪೆಟ್ಟು ಹಾಕಿ ಅಳಿಸುತ್ತಾಳೆ. ಮಗು ಅತ್ತಾಗ ಆಕೆ ನಗುತ್ತಾಳೆ, ತಾಯಿಯೂ ನಗುತ್ತಾಳೆ. ಬಹುಶ: ಮಗು ಅತ್ತಾಗ ತಾಯಿ ನಗುವುದು ಅದೊಂದೇ ಬಾರಿ. ಅಲ್ಲಿಂದ ಪ್ರಾರಂಭವಾದದ್ದು ಅಳು, ನಗುಗಳ ಸರದಿ. ಕೆಲವರಿಗೆ ಒಂದು ಹೆಚ್ಚು ಒಂದು ಕಡಿಮೆ. ಆದರೆ ಬಾಳೆಲ್ಲ ಒದ್ದಾಟವೇ. ಇಲ್ಲದ್ದಕ್ಕೆ ಕೊರಗು. ಹೆಚ್ಚು ಬಂದರೆ ಕಾಪಾಡಿಕೊಳ್ಳುವ ಭಯ. ಬಂದದ್ದರ ಚಿಂತೆ, ಬರದಿರುವುದರ ಬಗ್ಗೆ ಆತಂಕ. ಅದನ್ನೇ ಕಗ್ಗ ಹೇಳುತ್ತದೆ, “ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು”. ಬದುಕೆಲ್ಲ ಹೀಗಾದರೆ, ಅಂತ್ಯವಾದರೂ ನಿರಾಳವಾದೀತೆ? ಹುಟ್ಟುವಾಗ ಅಮ್ಮನಿಗೆ ಅಷ್ಟು ಕಷ್ಟಕೊಟ್ಟ ಮನುಷ್ಯ ಸಾಯುವಾಗಲಾದರೂ ಸುತ್ತಮುತ್ತಲಿನವರಿಗೆ, ತನಗೆ ಸಂಕಟಕೊಡದೇ ಅನಾಯಾಸವಾಗಿ ಹೋಗಲಾದೀತೇ? ಅದು ಕೆಲವರಿಗೆ, ಪುಣ್ಯವಂತರಿಗೆ ಮಾತ್ರ ಸಾಧ್ಯ ಎನ್ನುತ್ತಾರೆ.

ADVERTISEMENT


ಒಬ್ಬ ಝೆನ್ ಗುರುವಿದ್ದ. ತನಗೆ ಸಾವು ಹತ್ತಿರ ಬಂದಿತು ಎಂಬುದು ತಿಳಿಯಿತು. ಶಿಷ್ಯರಿಗೆ ಕೇಳಿದ, “ಹೇಗೆ ಸತ್ತರೆ ಒಳ್ಳೆಯದು?”. ಅವರು ಏನೇನೋ ಉತ್ತರಗಳನ್ನು ಕೊಟ್ಟರು. ಆತ ಹೇಳಿದ, “ಎಲ್ಲರ ಹಾಗೆ ಸತ್ತರೆ ಏನು ವಿಶೇಷ? ನಾನು ತಲೆ ಕೆಳಗಾಗಿ ಸಾಯುತ್ತೇನೆ”. ಹಾಗೆಂದು ಕಾಲಿಗೆ ಹಗ್ಗ ಕಟ್ಟಿಕೊಂಡು ಮರದ ಕೊಂಬೆಯಿಂದ ನೇತಾಡುತ್ತ ಉಸಿರು ನಿಲ್ಲಿಸಿಬಿಟ್ಟ. ಅವನು ಸತ್ತು ಹೋದದ್ದನ್ನು ಖಾತ್ರಿ ಮಾಡಿಕೊಂಡ ಶಿಷ್ಯರು, ಅವನ ಅಕ್ಕನಿಗೆ ಸಂದೇಶ ಮುಟ್ಟಿಸಿದರು. ಆಕೆಯೂ ಒಬ್ಬ ಮಹಾನ್ ಸಾಧಕಿ, ಝೆನ್ ಸನ್ಯಾಸಿನಿ. ಆಕೆ ಕೈಯಲ್ಲೊಂದು ಕೋಲು ಹಿಡಿದುಕೊಂಡು ಧಾವಿಸಿ ಬಂದಳು. ತಲೆ ಕೆಳಗಾಗಿ ನೇತಾಡುತ್ತಿದ್ದ ತಮ್ಮನ ದೇಹಕ್ಕೆ ನಾಲ್ಕು ರಪರಪನೆ ಕೋಲಿನಿಂದ ಹೊಡೆದು, “ಛೇ, ಸಾಯುವಾಗಲಾದರೂ ಶಾಂತವಾಗಿ ಮಲಗಿ ಸಾಯಿ” ಎಂದಳು. ಆಗ ಝೆನ್ ಸನ್ಯಾಸಿ ಛಕ್ಕನೇ ಹಗ್ಗದಿಂದ ಬಿಡಿಸಿಕೊಂಡು, ನೆಲದ ಮೇಲೆ ಕಾಲುಚಾಚಿ ನಗುತ್ತ ಮಲಗಿ ಸತ್ತು ಹೋದ. ಇದು ಕಥೆ. ಸಾವು ಇಷ್ಟು ಸುಲಭವೇ? ಬಹಳಷ್ಟು ಜನರಿಗೆ ನಿದ್ರೆಯೇ ಕಷ್ಟ. ಒದ್ದಾಡಿ ಹೋಗುತ್ತಾರೆ. ಇನ್ನು ಸಾವಿನ ಗತಿಯೇನು? ನಿದ್ರೆಯಂತೆ ಸಾವನ್ನು ಪಡೆ ಎನ್ನುತ್ತದೆ ಕಗ್ಗ. ಅದಕ್ಕೆ ಬದುಕು ಪರಿಷ್ಕಾರವಾಗಬೇಕು. ಅಪೇಕ್ಷೆಗಳ ಅಂಟು ಕಡಿಮೆಯಾಗಬೇಕು. ಆಗ ಅದು ಶರಣರ ಸಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.