ADVERTISEMENT

ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ವೆಸ್ಸಂತರನನ್ನು ಕರೆತರುವ ಸಿದ್ಧತೆ

ಡಾ. ಗುರುರಾಜ ಕರಜಗಿ
Published 12 ಸೆಪ್ಟೆಂಬರ್ 2021, 19:30 IST
Last Updated 12 ಸೆಪ್ಟೆಂಬರ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಮಹಾರಾಜ ತನ್ನ ಮುಖ್ಯ ತೋಟಗಾರನನ್ನು ಕರೆದು ಆಜ್ಞೆ ಮಾಡಿದ, ‘ನನ್ನ ಮಗ ವೆಸ್ಸಂತರ ಬರುವ ದಾರಿಯಲ್ಲಿ ಎರಡು ಕಡೆಗೂ ಒಲೊಪಿಯಾ ಹೂವುಗಳು ಹರಡಿರಲಿ. ಅಲ್ಲಲ್ಲಿ ಹೂವು, ಗಂಧ, ವಿಲೇಪನಾದಿಗಳ ವಿತಾನವಿರಲಿ. ಅಮೂಲ್ಯವಾದ ವಸ್ತುಗಳು ಇದ್ದಿರಲಿ. ಆತ ಬರುವ ದಾರಿಯಲ್ಲಿ, ಹಳ್ಳಿ ಹಳ್ಳಿಗಳಲ್ಲಿ ನೂರು, ನೂರು ಸುರೆಯ ಭಾಂಡಗಳಿರಲಿ. ಆತ ಬರುವ ಮಾರ್ಗದಲ್ಲಿ ಮಾಂಸ, ಪೂರಿ, ಪಲ್ಯ, ಮೀನುಗಳ ತರತರಹದ ತಿಂಡಿಗಳು ಇದ್ದಿರಲಿ. ಮಾರ್ಗದಲ್ಲಿ ತುಪ್ಪ, ಎಣ್ಣೆ, ಮೊಸರು ಹಾಗೂ ಧಾನ್ಯಗಳಿಂದ ತುಂಬಿದ ಕಡಾಯಿಗಳನ್ನಿಡಲಿ’. ಆಸ್ಥಾನದ ಸಂಗೀತ, ನೃತ್ಯ ವಿದ್ವಾಂಸರುಗಳಿಗೆ ಹೇಳಿದ, ‘ದಾರಿಯಲ್ಲಿ ನಟರು, ಗಾಯಕರು, ಹಸ್ತ ಸಂಗೀತಕರು, ಢೋಲು ನುಡಿಸುವವರು, ಮುಂಡಗಾಯಕರು, ಜಾದುಗಾರರು ಇರಲಿ. ಎಲ್ಲ ರೀತಿಯ ವೀಣೆಗಳು, ಭೇರಿಗಳು, ಡಿಂಡಿಮಗಳು, ಶಂಖಗಳು ಮೊಳಗಲಿ. ಮೃದಂಗ, ಪಣವ, ಗೋಧ, ಪರಿವದೆಂತಿ, ದಿಂದಿಮಾನಿ, ವಾದ್ಯಗಳು ಸಂಭ್ರಮದಿಂದ ನುಡಿಸಲ್ಪಡಲಿ’. ಈ ರೀತಿ ಮಾರ್ಗಾಲಂಕಾರಕ್ಕೆಂದು ರಾಜ ಆದೇಶಗಳನ್ನು ನೀಡಿದ.

ಈ ಸಮಯದಲ್ಲಿ ಇನ್ನೊಂದು ವಿಶೇಷ ನಡೆಯಿತು. ಮುದುಕ ಬ್ರಾಹ್ಮಣ ದಾಸ್ಯ ವಿಮುಕ್ತಿಗೆ ಅಷ್ಟೊಂದು ಹಣ, ಸೌಭಾಗ್ಯಗಳನ್ನು ಪಡೆದಿದ್ದನಷ್ಟೇ? ಅವನು ಜನ್ಮದಲ್ಲಿ ಆ ಪರಿಯ ಸಿರಿಯನ್ನು ಕಂಡವನಲ್ಲ. ಒಂದೇ ಬಾರಿ ಅಷ್ಟು ಐಶ್ವರ್ಯ ಬಂದದ್ದು ಅವನ ತಲೆ ತಿರುಗಿಸಿತು. ಆತ ಆ ನಗರದಲ್ಲೇ ಎರಡು ದಿನವಿದ್ದು, ಬಾಯಿಚಪಲದಿಂದ ಮಿತಿಮೀರಿ ತಿಂದು ಅರಗಿಸಲಾರದೆ ಸತ್ತು ಹೋದ. ಅವನ ಸಂಬಂಧಿಕರಾರಾದರೂ ಇದ್ದಾರೆಯೇ ಎಂದು ಕಾಣಲು ರಾಜ ಡಂಗೂರ ಹೊಡೆಸಿದ. ಯಾರಿಗೂ ಅವನ ಪರಿಚಯವಿರಲಿಲ್ಲವಾದ್ದರಿಂದ ರಾಜನೇ ಅವನ ಅಂತ್ಯಕ್ರಿಯೆ ಮಾಡಿಸಿದ. ಹೀಗಾಗಿ ದಾಸ್ಯವಿಮುಕ್ತಿಗೆಂದು ಕೊಟ್ಟ ಹಣ, ಆನೆ, ಕುದುರೆ, ರಥಗಳು, ದಾಸ, ದಾಸಿಯರು ಮತ್ತು ಹಣವೆಲ್ಲ ಮತ್ತೆ ರಾಜನಿಗೇ ಸೇರಿತು. ಅಂತೂ ಬ್ರಾಹ್ಮಣನ ದುರಾಸೆಗೆ ತಕ್ಕ ಶಿಕ್ಷೆಯೇ ದೊರಕಿದಂತಾಯಿತು.

ಏಳು ದಿನಗಳಲ್ಲಿ ಸಮಸ್ತ ಪಡೆಯನ್ನು ಸಂಗ್ರಹಿಸಿದ ರಾಜ ಜಾಲಿಕುಮಾರನನ್ನೇ ಮಾರ್ಗದರ್ಶಕನನ್ನಾಗಿ ಮಾಡಿಕೊಂಡು, ಸಮಸ್ತ ಪರಿವಾರದೊಂದಿಗೆ ವೈಭವದಿಂದ ಹೊರಟ. ಆ ಸಿವಿ ಸೇನೆ ಅಮಿತವಾಗಿತ್ತು. ಜಾಲಿಕುಮಾರನ ನೇತೃತ್ವದಲ್ಲಿ ಅದು ನಡೆದು ವಂಕ ಪರ್ವತವನ್ನು ಸೇರಿತು. ಆನೆಗಳು, ಕುದುರೆಗಳು, ರಥಗಳು ಹೋಗುವ ರಭಸಕ್ಕೆ ಆಕಾಶ ಧೂಳಿನಿಂದ ಮುಚ್ಚಿಬಿಟ್ಟಿತು. ಪರ್ವತ ಪ್ರದೇಶದಲ್ಲಿ ಅನೇಕ ತರಕಾರಿಗಳನ್ನು, ನೀರಿನ ಸರೋವರಗಳನ್ನು, ಹೂವು, ಹಣ್ಣುಗಳಿಂದ ಕೂಡಿದ ಮರಗಳನ್ನು, ನಾನಾ ವರ್ಣಗಳಿಂದ ಕೂಡಿದ, ಚಿತ್ರವಿಚಿತ್ರ ಸ್ವರಗಳನ್ನು ಹೊರಡಿಸುವ ಪಕ್ಷಿಗಳನ್ನು ಸೈನಿಕರು ಕಂಡರು. ಇಡೀ ಸೇನೆ ಹಗಲು-ರಾತ್ರಿ ಪ್ರಯಾಣ ಮಾಡಿ, ಕೊನೆಗೆ ವೆಸ್ಸಂತರ ಬೋಧಿಸತ್ವನಿದ್ದ ಕಾಡಿಗೆ ಬಂದು ಸೇರಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.