ADVERTISEMENT

ಬೆರಗಿನ ಬೆಳಕು: ಸುಖ ಸರ್ವರಲ್ಲಿ

ಡಾ. ಗುರುರಾಜ ಕರಜಗಿ
Published 30 ಮಾರ್ಚ್ 2023, 19:30 IST
Last Updated 30 ಮಾರ್ಚ್ 2023, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ - |
ಳರ‍್ಪನುಂ ಸುಖಿಯಲ್ತು, ದಿಟದಿ, ಪೂರ್ಣದಲಿ ||
ರ‍್ಪನುಬ್ಬಸದ ಬಿಸಿ ವಿಷಯವಾಯುವಾಗಿ ತಾ |
ನುರ್ವರೆಯ ಮುಸುಕೀತು – ಮಂಕುತಿಮ್ಮ || 853 ||

ಪದ-ಅರ್ಥ: ಸಾರ್ವಲೌಕಿಕಸೌಖ್ಯ=ಸಾರ್ವ(ಸರ್ವರ)+ ಲೌಕಿಕ+ಸೌಖ್ಯ, ನೆಲಸುವನ್ನೆಗಮಿಳೆಯೊಳೊ ರ‍್ಪನುಂ =ನೆಲಸುವನ್ನೆಗಂ(ನೆಲೆಸುವುದಾದರೆ)+ಇಳೆಯೊಳ್(ಭೂಮಿಯಲ್ಲಿ) +ರ‍್ಪನುಂ(ಒಬ್ಬನು), ಒರ್ವನುಬ್ಬಸದ-ಒರ್ವನ(ಒಬ್ಬನ)+ಉಬ್ಬಸದ, ತಾನುರ್ವರೆಯ=ತಾನು+ಉರ್ವರೆಯ(ಭೂಮಿಯ).

ವಾಚ್ಯಾರ್ಥ: ಪ್ರಪಂಚದಲ್ಲಿ ಸರ್ವರಿಗೂ ಲೌಕಿಕ ಸೌಖ್ಯ ದೊರಕಬೇಕಾದರೆ ಒಬ್ಬನೇ ಪೂರ್ಣವಾಗಿ, ನಿಜವಾಗಿ ಸುಖಿಯಾಗಿರಲಾರ. ಒಬ್ಬನ ಸಂಕಟದ ಬಿಸಿ ವಿಷಯವಾಯುವಿನಂತೆ ಜಗತ್ತನ್ನೇ ಮುಸುಕೀತು.

ADVERTISEMENT

ವಿವರಣೆ: ಒಂದು ಶಾಲೆಯಲ್ಲಿ ತರಗತಿ ನಡೆಯುತ್ತಿತ್ತು. ಶಿಕ್ಷಕಿ ‘ಸರ್ವೇ ಜನಾ: ಸುಖಿನೋ ಭವಂತು’ ಎಂಬ ಸೂಕ್ತದ ಅರ್ಥ ಹೇಳುತ್ತ ಪ್ರಪಂಚ ಸುಖಿಯಾಗಿರಬೇಕಾದರೆ ಎಲ್ಲರೂ ಶ್ರಮಿಸಬೇಕು. ಇಡೀ ಪ್ರಪಂಚದ ವಾತಾವರಣ ಎಲ್ಲರ ಪ್ರಯತ್ನದಿಂದ ಮಾತ್ರ ಸಾಧ್ಯ. ಒಬ್ಬನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ವಿವರಿಸುತ್ತಿದ್ದರು. ಆಗ ನಾಗೇಶ ಎದ್ದು ನಿಂತ.“ಮ್ಯಾಡಂ, ನೀವು ಹೇಳಿದ್ದು ಸ್ವಲ್ಪ ಮಟ್ಟಿಗೆ ಸರಿ. ಆದರೆ ಬಹುತೇಕ ಸಮಾಜದ ಸಂತೋಷ ಒಬ್ಬನನ್ನೇ ಅವಲಂಬಿಸಿರುತ್ತದೆ” ಎಂದ. “ಅದು ಹೇಗೆ?” ಎಂದು ಶಿಕ್ಷಕಿ ಕೇಳಿದಾಗ, ನಾಗೇಶ ಸರಸರನೆ ಮುಂದೆ ಬಂದು ಶಿಕ್ಷಕಿಯ ಪಕ್ಕ ನಿಂತ. ಅವನ ಮುಂದಿನ ಬೆಂಚಿನ ಮೇಲೆ ಇಬ್ಬರು ಹುಡುಗಿಯರು. ನಾಗೇಶ ಎಲ್ಲರೂ ನೋಡುತ್ತಿರುವಂತೆ ಒಂದು ಹೆಜ್ಜೆ ಮುಂದಿಟ್ಟು ಬೆಂಚಿನ ಮೇಲೆ ಕುಳಿತಿದ್ದ ಹುಡುಗಿಯೊಬ್ಬಳ ಕೆನ್ನೆಗೆ ಛಟೀರೆಂದು ಹೊಡೆದು ಬಿಟ್ಟ. ತರಗತಿ ಸ್ತಬ್ಧವಾಯಿತು. ಹುಡುಗಿ ಅಳತೊಡಗಿದಳು. ಶಿಕ್ಷಕಿ ಕೋಪದಿಂದ, “ನಾಗೇಶಾ, ಯಾಕೆ ಅವಳನ್ನು ಹೊಡೆದೆ?” ಎಂದು ಕಿರಿಚಿದರು. ಹುಡುಗರು ಹೋ ಎಂದು ಬೊಬ್ಬಿರಿದರು. ನಾಗೇಶ ಕೈ ಮುಗಿದು ಆ ಹುಡುಗಿಯ ಕ್ಷಮೆ ಕೇಳಿದ. ನಂತರ ಹೇಳಿದ, “ಮ್ಯಾಡಂ, ಮೊದಲು ಇಡೀ ಕ್ಲಾಸು ಸಂತೋಷವಾಗಿತ್ತು, ನಗು ತುಂಬಿತ್ತು. ನನ್ನ ಒಂದು ಕ್ರಿಯೆಯಿಂದ ಇಡೀ ತರಗತಿಯ ವಾತಾವರಣ ಕೆಟ್ಟು ಹೋಯಿತು. ಒಬ್ಬನಿಂದಲೇ ತಾನೇ ಇಡೀ ತರಗತಿಯ ವಾತಾವರಣ ಬದಲಾದದ್ದು?” ಕಗ್ಗ ಈ ಮಾತನ್ನು ಸುಂದರವಾಗಿ ಹೇಳುತ್ತದೆ. ಇಡೀ ಪ್ರಪಂಚ ಸುಖಿಯಾಗಿರಬೇಕಾದರೆ, ಕೇವಲ ಒಬ್ಬನೇ ಸುಖಿಯಾದರೆ ಸಾಲದು. ಎಲ್ಲರೂ ಸುಖಿಯಾಗಿರಬೇಕು. ಒಬ್ಬನೇ ಒಬ್ಬ ಅಸಂತೃಪ್ತನಾಗಿದ್ದರೆ, ದು:ಖಸಂತೋಷಿಯಾಗಿದ್ದರೆ ಅವನ ನಡತೆ ವಿಷವಾಯುವಿನಂತೆ ಪ್ರಪಂಚವನ್ನೇ ಆವರಿಸುತ್ತದೆ.
ಇತಿಹಾಸದಲ್ಲಿ ಕಂಡಿಲ್ಲವೇ? ಒಬ್ಬ ಅಲೆಗ್ಝಾಂಡರ್‌ನ ಅಧಿಕಾರ, ಸಾಮ್ರಾಜ್ಯ ದಾಹ ಅದೆಷ್ಟು ಜನರನ್ನು ಸಂಕಟಕ್ಕೆ ತಳ್ಳಿತು? ಒಬ್ಬ ಭಯೋತ್ಪಾದಕನ ರಕ್ತದಾಹ ವಿಮಾನದಲ್ಲಿದ್ದ ನೂರಾರು ಅಮಾಯಕರ ಪ್ರಾಣಕ್ಕೆ ಎರವಾಯಿತು. ಒಬ್ಬ ರಾಜಕಾರಣಿಯ ಅಧಿಕಾರ, ಧನದಾಹ ಸಾವಿರಾರು ಹಸಿದ ಬಾಯಿಗಳಿಗೆ ಹಾಕಬೇಕಾದದ್ದನ್ನು ನುಂಗಿಬಿಡುತ್ತದೆ. ಆದ್ದರಿಂದ ಲೋಕದಲ್ಲಿ ಬದುಕಿರುವ ಯಾರೂ ತಾನೇ ಸುಖಿ, ಸಂಪೂರ್ಣ ತನ್ನಿಂದಾಗಿಯೇ ಸುಖಿಯಾಗಿದ್ದೇನೆ ಎಂದು ಭಾವಿಸುವುದು ಸಾಧ್ಯವಿಲ್ಲ. ನನ್ನ ಸುಖಕ್ಕೆ ದು:ಖಕ್ಕೆ ನಾನು ಮಾತ್ರ ಕಾರಣನಲ್ಲ ಎಂಬ ಅರಿವು ತುಂಬ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.