ADVERTISEMENT

ಬೆರಗಿನ ಬೆಳಕು: ಮುಗಿವಿನ ಸಂತಸ

ಡಾ. ಗುರುರಾಜ ಕರಜಗಿ
Published 11 ಜುಲೈ 2022, 19:30 IST
Last Updated 11 ಜುಲೈ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ|
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ||
ಈಗಲೋ ಆಗಲೋ ಎಂದೊ ಮುಗಿವುಂಟೆಂಬ |
ಭಾಗ್ಯವನು ನೆನೆದು ನಲಿ - ಮಂಕುತಿಮ್ಮ || 669 ||

ಪದ-ಅರ್ಥ: ಮರೆವುದದೆ =ಮರೆವುದು+ಅದೆ, ಸುಕೃತ=ಪುಣ್ಯ, ಮುಗಿವುಂಟೆಂಬ=ಮುಗಿವು+ಉಂಟು+ಎಂಬ

ವಾಚ್ಯಾರ್ಥ: ಹಾಗೋ, ಹೀಗೋ, ಹೇಗೆಯೋ ಈ ಜನ್ಮ ನಡೆದು ಮುಗಿವುದು. ಅದು ಮುಗಿದು ಮರೆತು ಹೋಗುತ್ತದೆಂಬುದೇ ಪುಣ್ಯ. ಎಂದೋ ಒಮ್ಮೆ ಇದು ಮುಗಿದು ಹೋಗುತ್ತದಲ್ಲ ಎಂಬ ಭಾಗ್ಯವನ್ನು ನೆನೆದು ಸಂತೋಷಪಡು.

ADVERTISEMENT

ವಿವರಣೆ: ಅದಾವ ಕಾರಣಕ್ಕೋ, ಅದಾವ ಸಿದ್ಧಿಗೋ ಈ ದೇಹ ಭೂಮಿಗೆ ಬಂದಾಗಿದೆ. ಅದಕ್ಕೆ ಸಿಕ್ಕ ಪರಿಸರ, ಪ್ರೋತ್ಸಾಹ, ಅವಕಾಶಗಳಿಂದ ಅದು ಬೆಳೆಯುತ್ತ ಹೋಗುತ್ತದೆ.

ಜೀವಪಥ ಹೀಗೆಯೇ ಸಾಗೀತೆಂದು ಯಾರೂ ಹೇಳಲು ಸಾಧ್ಯವಿಲ್ಲ. ಚೆನ್ನಾಗಿ ನಡೆಯುತ್ತಿದೆ ಎನ್ನಿಸಿದ ಜೀವ ಥಟ್ಟನೇ ನಿಂತು ಹೋಗಬಹುದು. ಸಾಕು ಇನ್ನು ಎನ್ನಿಸಿದ ಬದುಕು ದೀರ್ಘ ಕಾಲ ಎಳೆಯಬಹುದು. ಹುಟ್ಟಿನಿಂದ ಸಾವಿನವರೆಗೆ ಪ್ರತಿಕ್ಷಣವೂ ಹೋರಾಟ ವೇ. ಮನೆಯಲ್ಲಿ ಮದುವೆಯೋ, ಮುಂಜಿಯೋ, ಸೀಮಂತವೋ ಎಂಬ ಒಂದು ಕಾರ್ಯಕ್ರಮವಿದ್ದರೆ, ಅದನ್ನು ಆಯೋಜಿಸಿ, ನಿರ್ವಹಿಸುವುದು ಶ್ರಮದಾಯಕ. ಅಪ್ಪಾ, ಈ ಕೆಲಸ ಸುಸೂತ್ರವಾಗಿ ಮುಗಿದರೆ ಸಾಕು ಎನ್ನಿಸುವುದಿಲ್ಲವೆ? ಬದುಕೊಂದು ಇಂತಹ ಸಹಸ್ರ ಸಹಸ್ರ ಕರ್ತವ್ಯಗಳ ಸರಮಾಲೆ.

ಅದೂ ಸಾಕು ಎನ್ನಿಸುವುದಿಲ್ಲವೆ? ಬದುಕಿದ ಮೇಲೆ ಅನಿವಾರ್ಯವಾಗಿ ಬರುವ ನೋವು, ನಲಿವು, ಸಂಕಟ, ಆತಂಕ, ಭರವಸೆಗಳು ಜೀವವನ್ನು ಕುಟ್ಟಿ ಹಣ್ಣು ಮಾಡುತ್ತವೆ. ಭವಬಂಧನ ದಾರಿ ತಪ್ಪಿಸಿ ಬಿಡುತ್ತದೆ. ಅದನ್ನು ರಾಘವೇಂದ್ರಸ್ವಾಮಿಗಳು ತಮ್ಮ ಒಂದೇ ಕೀರ್ತನೆಯಲ್ಲಿ ತೋಡಿಕೊಂಡಿದ್ದಾರೆ.

ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರವೇಣುಗೋಪಾಲ ಪಾರಗಾಣಿಸೊ ಹರಿಯೆ

ಭವಬಂಧನದಿಂದ ಪಾರುಗಾಣಿಸು ಎಂದು ಬೇಡುತ್ತಾರೆ. ಜೀವದ ಒಂದು ಸೊಗಸೆಂದರೆ ಬೇಡವೆಂದರೂ ಅದು ಮುಗಿಯುತ್ತದೆ. ಅದೇ ಒಂದು ಭಾಗ್ಯ. ನಾವೆಷ್ಟೇ ಕಾಪಿಟ್ಟು ಆರೈಕೆ ಮಾಡಿದರೂ ಈ ದೇಹಕ್ಕೆ ವೃದ್ಧಾಪ್ಯ, ಸಾವು ತಪ್ಪದು. ಅದು ಹಾಗೆ ಮುಗಿಯುತ್ತದಲ್ಲ, ಮುಗಿದ ಮೇಲೆ ಯಾವ ನೆನಪಿನ ನೆರಳೂ ಇಲ್ಲದಂತೆ ಮರೆತು ಹೋಗುತ್ತದೆಂಬುದೇ ಸಂತೋಷ.

ಈ ಮಾತನ್ನು ಕಗ್ಗ ಹೇಳುತ್ತದೆ. ಭೂಮಿಗೆ ಬಂದ ಈ ಜೀವ ಹೇಗೊ, ಹೇಗೆ ಹೇಗೆಯೋ ನಡೆದು ಮುಗಿಯುತ್ತದೆ. ಮುಗಿಯುವುದೇ ಒಂದು ಸಂತೋಷ.

ಅದರಲ್ಲೂ ಮುಗಿದ ಮೇಲೆ ಯಾವುದೂ ಸ್ಮರಣೆಯಲ್ಲಿರುವುದಿಲ್ಲವೆಂಬುದು ಪುಣ್ಯ ವಿಶೇಷ. ಈ ಜನ್ಮದ ನೆನಪುಗಳೇ ಭಾರ. ಇನ್ನು ಜನ್ಮಾಂತರದ ನೆನಪುಗಳು ನುಗ್ಗಿ ಬಂದರೆ ಅದನ್ನು ಹೊರುವುದು ಕಲ್ಪನಾತೀತವಾದ ಹೊರೆ. ಅದಾವುದೂ ಉಳಿಯುವುದಿಲ್ಲ ಎಂಬ ಭಾಗ್ಯವನ್ನು ನೆನೆದು ಸಂತೋಷಪಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.