ADVERTISEMENT

ಬೆರಗಿನ ಬೆಳಕು: ಅನಾವಶ್ಯಕವಾದ ತಲ್ಲಣ

ಡಾ. ಗುರುರಾಜ ಕರಜಗಿ
Published 2 ಡಿಸೆಂಬರ್ 2020, 18:52 IST
Last Updated 2 ಡಿಸೆಂಬರ್ 2020, 18:52 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ |
ನಿಲ್ಲದಾಡುತ್ತಿಹುವು ಯಂತ್ರ ಕೀಲುಗಳು ||
ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ |
ತಲ್ಲಣವು ನಿನಗೇಕೆ ? – ಮಂಕುತಿಮ್ಮ || 361 ||

ಪದ-ಅರ್ಥ: ಗೂಢದ=ರಹಸ್ಯದ, ನಿಲ್ಲದಾಡುತ್ತಿಹುವು=ನಿಲ್ಲದೆ+ಆಡುತ್ತಿಹುವು, ಎಲ್ಲಾಗುಹೋಗುಗಳು=ಎಲ್ಲ+ಆಗಹೋಗುಗಳು, ತಲ್ಲಣ=ದಿಗಿಲು

ವಾಚ್ಯಾರ್ಥ: ವಿಧಿ ರಹಸ್ಯವಾಗಿಟ್ಟಿರುವ ಕರ್ಮಶಾಲೆಯಲ್ಲಿ ಯಂತ್ರದ ಕೀಲುಗಳು ನಿಲ್ಲದೆ ಚಲಿಸುತ್ತವೆ. ಪ್ರಪಂಚದ ಎಲ್ಲ ಆಗು-ಹೋಗುಗಳು ಈ ಯಂತ್ರದ ಕೀಲುಗಳ ಚಕ್ರಗತಿಯಂತೆ ನಡೆಯುತ್ತವೆ. ಅದಕ್ಕಾಗಿ ನಿನಗೆ ತಲ್ಲಣ ಏಕೆ?

ADVERTISEMENT

ವಿವರಣೆ: ಇದೊಂದು ಮಹಾಭಾರತದ ಕಾಲ್ಪನಿಕ ಉಪಕಥೆ. ಕುರುಕ್ಷೇತ್ರ ಯುದ್ಧ ಮುಗಿದರೆ. ಮನೆಯುಲ್ಲಿ ತಾಯಿಯ ಮುಂದೆ ಅರ್ಜುನ ತನ್ನ ಸಾಧನೆಯನ್ನು ಹೇಳಿಕೊಳ್ಳುತ್ತ ಕೃಷ್ಣನ ಬಗ್ಗೆ ಹಗುರಾಗಿ ಮಾತನಾಡುತ್ತಾನೆ. ‘ಕೃಷ್ಣ ಯಾವಾಗಲೂ ಶ್ರೀಮಂತರ ಪಕ್ಷಪಾತಿ, ಸಾತ್ವಿಕರಿಗೆ ಬೆಲೆ ಕೊಡಲಾರ’ ಎನ್ನುತ್ತಾನೆ. ಅಲ್ಲಿಗೆ ಬಂದ ಕೃಷ್ಣ. ಈ ಮಾತು ಕೇಳಿದ. ಸಂಜೆಗೆ ಅರ್ಜುನನನ್ನು ನಗರ ಪ್ರದಕ್ಷಿಣೆಗೆ ಕರೆದೊಯ್ದ. ತನ್ನ ಶಕ್ತಿಯಿಂದ ಇಬ್ಬರನ್ನು ಹಣ್ಣು-ಹಣ್ಣು ಮುದುಕರನ್ನಾಗಿ ಮಾಡಿದ. ಮುಂದೆ ಒಂದು ಅರಮನೆಯಂಥ ಮನೆ. ನೂರಾರು ಜನಕ್ಕೆ ಊಟ ನಡೆದಿದೆ. ಇವರಿಬ್ಬರೂ ಹೋದರು. ದ್ವಾರಪಾಲಕರು ಬಿಡಲಿಲ್ಲ. ಇವರು ಕೇಳದೆ ಹಟ ಮಾಡಿದರು. ಮನೆಯ ಶ್ರೀಮಂತ ಯಜಮಾನ ಠೀವಿಯಿಂದ ಹೊರಗೆ ಬಂದ. ಇವರನ್ನು ಕಂಡು ಕೋಪದಿಂದ ರಸ್ತೆಗೆ ತಳ್ಳಿಸಿದ. ಇಬ್ಬರಿಗೂ ಮೈ-ಕೈ ಗಾಯ. ಕೃಷ್ಣ ಯಜಮಾನನನ್ನು ಹರಸಿದ, ‘ನಿನಗೆ ಮೂರು ಜನ್ಮ ಇದೇ ಭಾಗ್ಯ ದೊರಕಲಿ!’. ಮತ್ತೆ ಮುಂದೆ ನಡೆದಾಗ ಇವರಿಗೆ ನಿಜವಾಗಿಯೂ ಹಸಿವು, ಕಂಗಾಲಾಗಿದ್ದಾರೆ. ಅಲ್ಲೊಂದು ರೈತನ ಗುಡಿಸಲು. ಅವನಿಗೇ ಮೂರು ದಿನದಿಂದ ಊಟವಿಲ್ಲ. ಕೃಷ್ಣ ಆಹಾರಕ್ಕಾಗಿ ಬೇಡಿದ. ರೈತನ ಕಣ್ತುಂಬ ನೀರು, ‘ಸ್ವಾಮಿ, ನಮ್ಮಲ್ಲಿ ಏನೂ ಇಲ್ಲ. ಮಕ್ಕಳು ಸಹಿತ ನೀರು ಕುಡಿದು ಕುಳಿತಿದ್ದೇವೆ. ನಮ್ಮ ಈ ಆಕಳು ಕೂಡ ಬರಡಾಗಿ ಎರಡು ವರ್ಷವಾಗಿದೆ. ಏನು ಮಾಡಲಿ?’ ಎಂದ. ‘ನಾನು ಹಾಲು ಹಿಂಡಿಕೊಳ್ಳಲೇ?’ ಎಂದು ಕೇಳಿ ಕೃಷ್ಣ ಹಸುವಿನ ಕೆಚ್ಚಲಿಗೆ ಕೈ ಹಾಕಿದ. ಕೃಷ್ಣಸ್ಪರ್ಶದಿಂದ ಅದು ಕಾಮಧೇನುವಾಯಿತು. ಕೃಷ್ಣ ತಾನೊಬ್ಬನೇ ಹಾಲು ಕುಡಿದು ಹೊರಟ. ಅರ್ಜುನ, ‘ಕೃಷ್ಣಾ, ನಮ್ಮನ್ನು ರಸ್ತೆಗೆ ತಳ್ಳಿದ ಸೊಕ್ಕಿದ ಶ್ರೀಮಂತನಿಗೆ ಅವನು ಕೇಳದೆ ಆಶೀರ್ವಾದ ಕೊಟ್ಟೆ. ಆದರೆ ಈ ಬಡವನನ್ನು ಮರೆತೇಬಿಟ್ಟೆಯಲ್ಲ?’ ಎಂದು ಕೇಳಿದ. ಆಗ ಕೃಷ್ಣ ರೈತನಿಗೆ ಹೇಳಿದ, ‘ನೀನು, ನಿನ್ನ ಮನೆಯವರು ಮತ್ತು ಆಕಳು ಸತ್ತು ಹೋಗಲಿ’. ಅರ್ಜುನ ನುಡಿದ, ‘ನನಗೆ ಗೊತ್ತು, ನಿನ್ನ ಆಶೀರ್ವಾದವೆಲ್ಲ ಶ್ರೀಮಂತರಿಗೇ’. ಕೃಷ್ಣ, ‘ಅರ್ಜುನ ನನ್ನ ರೀತಿ ನಿನಗೆ ತಿಳಿಯದು. ನಾವು ರಸ್ತೆಯಲ್ಲಿ ಬಿದ್ದು ಮೈ-ಕೈ ಗಾಯವಾಗಿತ್ತಲ್ಲ, ಆ ಭಾಗ್ಯ ಅವನಿಗೆ ಮೂರು ಜನ್ಮ ಬರಲಿ ಎಂದಿದ್ದೆ. ಅದು ವರವಲ್ಲ, ಶಾಪ. ಈ ರೈತನಿಗೆ ಹೇಳಿದ್ದು ಶಾಪವಲ್ಲ, ವರ. ನಾನೂ, ನೀನು ಪ್ರವೇಶಿಸಿದ ಗುಡಿಸಲು, ನಮ್ಮನ್ನು ಆದರಿಸಿದ ಮನೆಯವರು, ನನಗೆ ಹಾಲು ಕೊಟ್ಟ ಹಸು ಪರಮಪವಿತ್ರರಾದರು. ಅವರಿನ್ನು ಇಲ್ಲಿ ಇರಲಾರರು. ಇನ್ನೊಂದು ಕ್ಷಣದಲ್ಲಿ ಸ್ವರ್ಗದಿಂದ ವಿಮಾನ ಬಂದು ಅವರನ್ನು ಕರೆದೊಯ್ಯುತ್ತದೆ’ ಹಾಗೆಯೇ ಆಯಿತು.

ದೈವದ ರೀತಿಗಳು ನಿಗೂಢ ಹಾಗೂ ವಿಚಿತ್ರ. ನಾವು ಅವುಗಳನ್ನು ಅರ್ಥೈಸಿಕೊಳ್ಳದೆ ಸಂಕಟ ಪಡುತ್ತೇವೆ. ಎಲ್ಲವೂ ಆ ವಿಧಿಯ ಚಕ್ರಗತಿಯಂತೆ ನಡೆಯುತ್ತದೆ. ನಮ್ಮ ತಲ್ಲಣದಿಂದ ಮತ್ತಷ್ಟು ಕಷ್ಟವೇ ಹೊರತು ಪರಿಹಾರವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.