ADVERTISEMENT

ಬೆರಗಿನ ಬೆಳಕು: ಬದುಕಿನ ಮೂಲಧನ

ಡಾ. ಗುರುರಾಜ ಕರಜಗಿ
Published 4 ಜನವರಿ 2021, 21:06 IST
Last Updated 4 ಜನವರಿ 2021, 21:06 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ವಿದೇಹ ರಾಷ್ಟ್ರದ ರಾಜಧಾನಿ ಮಿಥಿಲಾನಗರದಲ್ಲಿ ಮಖಾದೇವ ಎಂಬ ರಾಜ ಅಳುತ್ತಿದ್ದ. ಆತ ಎಂಭತ್ತನಾಲ್ಕು ಸಾವಿರ ವರ್ಷ ಬಾಲ್ಯಕ್ರೀಡೆಯಲ್ಲಿ ಕಳೆದ. ಎಂಭತ್ತನಾಲ್ಕು ಸಾವಿರ ವರ್ಷ ಉಪರಾಜಕುಮಾರನಾಗಿ ರಾಜ್ಯಭಾರ ಮಾಡಿದ. ನಂತರ ಎಂಭತ್ತನಾಲ್ಕು ಸಾವಿರ ವರ್ಷಗಳ ಕಾಲ ರಾಜನಾಗಿದ್ದ. ಆತ ಒಂದು ದಿನ ಕ್ಷೌರಿಕನಿಗೆ ಹೇಳಿದ, ‘ಮಿತ್ರ, ನನ್ನ ತಲೆಯಲ್ಲಿ ಬಿಳಿ ಕೂದಲು ಕಂಡ ತಕ್ಷಣ ಹೇಳು’. ಮುಂದೆ ಒಂದು ದಿನ ರಾಜನ ತಲೆಯಲ್ಲಿ ಬಿಳಿ ಕೂದಲು ಕಂಡಾಗ ಕ್ಷೌರಿಕ ಅದನ್ನು ಕಿತ್ತು ರಾಜನ ಕೈಗೆ ಕೊಟ್ಟ. ಅದನ್ನು ಕಂಡೊಡನೆ ರಾಜನಿಗೆ ಮೃತ್ಯುವನ್ನೇ ಕಂಡಂತಾಯಿತು. ತಕ್ಷಣ ಮಗನಿಗೆ ರಾಜ್ಯ ವಹಿಸಿ ಪ್ರವ್ರಜಿತನಾಗಿ ಕಾಡಿಗೆ ಹೋಗಿ ಎಂಭತ್ತನಾಲ್ಕು ಸಾವಿರ ವರ್ಷ ಬ್ರಹ್ಮವಿಹಾರಗಳ ಭಾವನೆ ಮಾಡಿ ಬ್ರಹ್ಮಲೋಕದಲ್ಲಿ ಹುಟ್ಟಿದ.

ಮುಂದೆ ಅವನ ವಂಶದಲ್ಲಿ ಎರಡು ಕಡಿಮೆ ಎಂಭತ್ತನಾಲ್ಕು ಸಾವಿರ ಜನ ಕ್ಷತ್ರಿಯರೂ ತಲೆಯಲ್ಲಿ ನರೆಯನ್ನು ಕಂಡೇ ಪ್ರವ್ರಜಿತರಾದರು. ತನ್ನ ವಂಶ ಮುಗಿಯಲು ಎರಡೇ ಕಡಿಮೆ ಇರುವುದರಿಂದ, ಅದನ್ನು ತಾನೇ ಮುಗಿಸಬೇಕೆಂದು ಬ್ರಹ್ಮಲೋಕದಿಂದ ಹೊರಟು ಪಟ್ಟದರಸಿಯ ಗರ್ಭದಲ್ಲಿ ಜನ್ಮಗ್ರಹಣ ಮಾಡಿದ ಮಖಾದೇವ ರಾಜ. ಜ್ಯೋತಿಷಿಗಳು ಹೇಳಿದರು, ‘ಈತ ನಿಮ್ಮ ವಂಶವನ್ನು ಸಮಾಪ್ತಿಗೊಳಿಸಲು ಬಂದಿದ್ದಾನೆ. ಇವನ ಮಗನೊಂದಿಗೇ ವಂಶ ಕೊನೆಯಾಗುತ್ತದೆ’. ಈ ಮಗುವಿಗೆ ನೇಮಿಕುಮಾರ ಎಂದು ಹೆಸರಿಟ್ಟರು. ಬಾಲ್ಯದಿಂದಲೂ ನೇಮಿಕುಮಾರನಿಗೆ ಧ್ಯಾನ, ಶೀಲ, ಉಪೋಸಥ ಕರ್ಮಗಳಲ್ಲಿ ಅತೀವ ಶ್ರದ್ಧೆ. ಆತ ದಾನಧರ್ಮಗಳಿಗಾಗಿಯೇ ತನ್ನ ಬದುಕನ್ನು ಮುಡಿಪಿಟ್ಟಂತೆ ಪ್ರತಿದಿನ ಐದು ಲಕ್ಷ ಕಹಾಪಣಗಳನ್ನು ದಾನ ಮಾಡಿದ. ತಾನು ಸಕಲ ವೃತಗಳನ್ನು ಮಾಡುತ್ತಲೇ ತನ್ನ ಪ್ರಜೆಗಳನ್ನು ಪ್ರೇರೇಪಿಸಿದ. ಹೀಗಾಗಿ ಅವನ ರಾಜ್ಯದಲ್ಲಿ ಅಧರ್ಮಿಗಳೇ ಉಳಿಯಲಿಲ್ಲ. ದೇವಲೋಕ ತುಂಬಿಹೋಯಿತು. ನರಕ ಖಾಲಿಯಾಗಿಬಿಟ್ಟಿತು.

ಇದನ್ನು ಕಂಡ ಇಂದ್ರ ನೇಮಿರಾಜನ ಅರಮನೆಗೆ ರಾತ್ರಿ ಬಂದು ಶಯನಾಗಾರದಲ್ಲಿ ಅವನನ್ನು ಕಂಡ. ಅವನೊಡನೆ ದಾನ ಮತ್ತು ಬ್ರಹ್ಮಚರ್ಯಗಳ ಬಗ್ಗೆ ಚಿಂತನೆ ಮಾಡಿ ದೇವಲೋಕಕ್ಕೆ ಮರಳಿ, ದೇವತೆಗಳಿಗೆಲ್ಲ ನೇಮಿರಾಜನ ಬಗ್ಗೆ ತಿಳಿಸಿ ಕೊಂಡಾಡಿದ. ದೇವತೆಗಳೆಲ್ಲ ಒಕ್ಕೊರಲಿನಿಂದ ನೇಮಿರಾಜನನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದರು. ಆಗ ಇಂದ್ರ ಮಾತಲಿಗೆ ಹೇಳಿ ನೇಮಿರಾಜನನ್ನು ದೇವಲೋಕಕ್ಕೆ ಕರೆತರಲು ಆಜ್ಞೆ ಮಾಡಿದ. ಮಾತಲಿ ನೇಮಿರಾಜನನ್ನು ದೇವರಥದಲ್ಲಿ ಕುಳ್ಳಿರಿಸಿಕೊಂಡು ಆಕಾಶಮಾರ್ಗವಾಗಿ ಹೊರಟ. ದಾರಿಯಲ್ಲಿ ಕೇಳಿದ, ‘ಮಿಥಿಲೇಶ, ನಿಮ್ಮನ್ನು ಪಾಪಿಗಳ ಮಾರ್ಗದಲ್ಲಿ ಕರೆದೊಯ್ಯಲೋ ಅಥವಾ ಪುಣ್ಯವಂತರ ದಾರಿಯಲ್ಲಿ ಕರೆದೊಯ್ಯಲೋ?’ ನೇಮಿರಾಜ ಹೇಳಿದ, ‘ಹೇಗಿದ್ದರೂ ನಾವು ದೇವಲೋಕಕ್ಕೇ ಹೋಗುತ್ತಿದ್ದೇವೆ. ಅದನ್ನು ಅಲ್ಲಿ ನೋಡಿಯೇ ನೋಡುತ್ತೇನೆ. ಆದ್ದರಿಂದ ನರಕಮಾರ್ಗವಾಗಿ ಹೋಗು’. ಇಪ್ಪತ್ತೊಂದು ನರಕಗಳಲ್ಲಿ ತಪ್ಪು ಮಾಡಿ ಬಂದವರು ಪಡುವ ಶಿಕ್ಷೆಯನ್ನು ಕಣ್ಣಾರೆ ಕಂಡ ನೇಮಿರಾಜ. ಇದನ್ನು ನೆನೆದಾದರೂ ಜನ ಭೂಮಿಯಲ್ಲಿ ಧರ್ಮಿಷ್ಠರಾಗಿ ಬದುಕಬಾರದೇ ಎಂದುಕೊಂಡ. ದೇವಲೋಕದಲ್ಲಿ ದೇವತೆಗಳೆಲ್ಲ ಅವನನ್ನು ಕಂಡು, ಮಾತನಾಡಿ ಆನಂದಿಸಿದರು. ಇಂದ್ರ ಹೇಳಿದ, ‘ರಾಜಾ, ನೀನು ಅನೇಕ ಕಾಲದವರೆಗೆ ಇಲ್ಲಿಯೇ ಸುಖವಾಗಿ ಭೋಗಭಾಗ್ಯಗಳೊಂದಿಗೆ ಇದ್ದುಬಿಡು’. ನೇಮಿರಾಜ, ‘ಅನ್ಯರಿಂದ ಪಡೆದ ದಾನ ನನಗೆ ಒಪ್ಪಿತವಲ್ಲ. ನಾನು ಮಾಡಿದ ಪುಣ್ಯವೇ ಪರಂಪರಾಗತವಾದ ಧನ. ನಾನು ಪರಿಶ್ರಮ ಪಟ್ಟು ಭೂಲೋಕದಲ್ಲಿ ಪುಣ್ಯಕರ್ಮ ಮಾಡುತ್ತೇನೆ’ ಎಂದು ಭೂಲೋಕಕ್ಕೆ ಮರಳಿ, ತನ್ನ ಮಗನಿಗೆ ತನ್ನ ಕಾರ್ಯವನ್ನು ಮುಂದುವರೆಸಿ, ಮದುವೆಯಾಗದೆ, ವಂಶವನ್ನು ಕೊನೆಗೊಳಿಸುವಂತೆ ಹೇಳಿ ಮತ್ತೆ ಬ್ರಹ್ಮಲೋಕಗಾಮಿಯಾದ.

ADVERTISEMENT

ನಮ್ಮ ಸುಂದರ ಬದುಕಿಗೆ ನಾವು ಮಾಡಿದ ಪುಣ್ಯ ಕಾರಣಗಳೇ ಮೂಲಧನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.