ADVERTISEMENT

ಪರಿವಾರದ ಒಗ್ಗಟ್ಟು

ಡಾ. ಗುರುರಾಜ ಕರಜಗಿ
Published 17 ಸೆಪ್ಟೆಂಬರ್ 2020, 19:31 IST
Last Updated 17 ಸೆಪ್ಟೆಂಬರ್ 2020, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಖೇಮ ಅವನ ಪಟ್ಟದ ರಾಣಿಯಾಗಿದ್ದಳು. ಆಗ ಬೋಧಿಸತ್ವ ಹಿಮಾಲಯದಲ್ಲಿ ಸುವರ್ಣ ಜಿಂಕೆಯಾಗಿ ಹುಟ್ಟಿದ್ದ. ಅವನ ತಮ್ಮ ಮತ್ತು ತಂಗಿಯರೂ ಅವನೊಂದಿಗೆ ಸ್ವರ್ಣ ಜಿಂಕೆಗಳಾಗಿಯೇ ಹುಟ್ಟಿದ್ದರು. ಬೋಧಿಸತ್ವ ಎಂಭತ್ತು ಸಾವಿರ ಜಿಂಕೆಗಳಿಗೆ ರಾಜನಾಗಿದ್ದ.

ವಾರಾಣಸಿಯ ಹೊರವಲಯದ ಗ್ರಾಮದಲ್ಲೊಬ್ಬ ಬೇಟೆಗಾರನಿದ್ದ. ಅವನು ಒಮ್ಮೆ ಹಿಮಾಲಯಕ್ಕೆ ಹೋದಾಗ ಬೋಧಿಸತ್ವ ಸ್ವರ್ಣಜಿಂಕೆಯನ್ನು ಕಂಡಿದ್ದ. ಆತ ಮನೆಗೆ ಬಂದು ತನ್ನ ಮಗನಿಗೆ ಈ ವಿಷಯವನ್ನು ತಿಳಿಸಿ, ಮುಂದೆ ರಾಜ ಕೇಳಿದರೆ ಈ ವಿಷಯವನ್ನು ತಿಳಿಸಬೇಕೆಂದು ಹೇಳಿದ.

ಮುಂದೊಂದು ದಿವಸ ಮಹಾರಾಣಿ ಖೇಮಳ ಕನಸಿನಲ್ಲಿ ಒಂದು ಸ್ವರ್ಣಜಿಂಕೆ ಬಂದು ಧರ್ಮೋಪದೇಶ ಮಾಡಿದಂತೆ ಕಂಡಿತು. ಆಕೆಗೆ ಅದರ ಆಸೆ ಬಲಿಯಿತು. ಮಹಾರಾಜನಿಗೆ ಹೇಳಿ ಆ ಜಿಂಕೆಯನ್ನು ಹಿಡಿದು ತರಿಸುವಂತೆ ಕೇಳಿಕೊಂಡಳು. ಮಹಾರಾಜ, ಯಾರಾದರೂ ಇಂತಹ ಜಿಂಕೆಯನ್ನು ಕಂಡಿದ್ದರೆ ತಿಳಿಸುವಂತೆ ಡಂಗುರ ಸಾರಿಸಿದ. ಬೇಟೆಗಾರನ ಮಗ ಅದನ್ನು ಕೇಳಿ ರಾಜಭವನಕ್ಕೆ ಹೋಗಿ ತಾನು ಅಂತಹ ಜಿಂಕೆ ಇರುವ ಸ್ಥಳವನ್ನು ತಿಳಿದಿದ್ದೇನೆ ಎಂದು ಹೇಳಿದ. ರಾಜ ಆ ಜಿಂಕೆಯನ್ನು ಹಿಡಿದು ತಂದರೆ ಭಾರೀ ಬಹುಮಾನವನ್ನು ಕೊಡುವುದಾಗಿ ಹೇಳಿದ.

ADVERTISEMENT

ಬೇಡ ಹಿಮಾಲಯಕ್ಕೆ ಹೋಗಿ ಆ ಜಿಂಕೆಗಳು ನೀರು ಕುಡಿಯಲು ಬರುವ ಸ್ಥಳದಲ್ಲಿ ತೆಳ್ಳಗಿನ ಬಲೆಯನ್ನು ಹಾಸಿದ. ಬೋಧಿಸತ್ವ ಜಿಂಕೆ ಬಂದು ಬಲೆಯಲ್ಲಿ ಸಿಲುಕಿತು. ಉಳಿದ ಜಿಂಕೆಗಳು ಹೆದರಿ ಓಡಿಹೋದವು. ಆದರೆ ಅದರ ಸೋದರ ಮತ್ತು ಸೋದರಿಯರು ಮಾತ್ರ ಅವನೊಡನೆಯೇ ನಿಂತವು. ಬೋಧಿಸತ್ವ ಅವರಿಗೆ ಪಾರಾಗಿ ಹೋಗುವಂತೆ ಎಷ್ಟು ಹೇಳಿದರೂ ಅವು ಕೇಳಲಿಲ್ಲ. ಬೇಡ ಜಿಂಕೆಯನ್ನು ಹಿಡಿಯಲು ಬಂದಾಗ ಮತ್ತೆರಡು ಸ್ವರ್ಣಜಿಂಕೆಗಳನ್ನು ಕಂಡು ಆಶ್ಚರ್ಯಪಟ್ಟ. ತಮ್ಮ ಜೀವಕ್ಕೆ ಹೆದರದೆ ತಮ್ಮ ಸಹೋದರನ ಮೇಲಿನ ಪ್ರೀತಿಯಿಂದ ನಿಂತದ್ದು ಅವನ ಮನಸ್ಸನ್ನು ಕಲಕಿತು. ಆಗ ಸಹೋದರಿ ಹೇಳಿತು, ‘ಅಣ್ಣಾ, ನಾವು ನಿನಗೆ ಯಾವ ಅನ್ಯಾಯವನ್ನು ಮಾಡಿಲ್ಲ. ನಮ್ಮನ್ನು ಏಕೆ ಬಂಧಿಸುತ್ತೀ?’. ಬೇಡ ರಾಣಿಯ ವಿಷಯವನ್ನು ಹೇಳಿದ. ಆಗ ಬೋಧಿಸತ್ವ, ‘ಅಯ್ಯಾ, ನಾನು ನಿನಗೆ ಧರ್ಮದ ಉಪದೇಶವನ್ನು ಮಾಡುತ್ತೇನೆ. ಅದನ್ನೇ ರಾಣಿಗೆ ಹೇಳು. ನನ್ನ ಮೈಮೇಲೆ ಕೈಯಾಡಿಸು, ಆಗ ನಿನಗೆ ಕೈತುಂಬ ಸುವರ್ಣದ ಕೂದಲುಗಳು ದೊರಕುತ್ತವೆ. ಅವುಗಳನ್ನು ರಾಣಿಗೆ ತೋರಿಸು’ ಎಂದ. ಆ ಪ್ರಾಣಿಗಳ ನಡುವಿರುವ ಪ್ರೀತಿಗೆ, ಅವುಗಳಿಗಿರುವ ಜ್ಞಾನಕ್ಕೆ ಬೇಡ ತಲೆ ಬಾಗಿದ. ಬೋಧಿಸತ್ವನ ಮೈಮೇಲೆ ಕೈಯಾಡಿಸಿದಾಗ ಕೈತುಂಬ ಬಂಗಾರದ ಕೂದಲುಗಳು ಬಂದವು. ಅವುಗಳನ್ನು ಹಿಡಿದುಕೊಂಡು ಆತ ವಾರಾಣಸಿಗೆ ಬಂದು ರಾಜ-ರಾಣಿಯರನ್ನು ಭೇಟಿಯಾದ. ಜಿಂಕೆಯನ್ನೇಕೆ ಹಿಡಿದು ತರಲಿಲ್ಲ ಎಂದು ಕೇಳಿದಾಗ, ಆ ಪ್ರಾಣಿಗಳ ನಡುವಿನ ಪ್ರೀತಿ, ಅವು ತಮ್ಮ ಅಣ್ಣನಿಗಾಗಿ ಮಾಡಲು ಸಿದ್ಧವಿದ್ದ ತ್ಯಾಗವನ್ನು ವರ್ಣಿಸಿ, ಮನುಷ್ಯರಲ್ಲೂ ಕಾಣದ ಮೈತ್ರಿ, ಅರ್ಪಣಾಭಾವ ಅವುಗಳಲ್ಲಿ ಕಂಡು ಅವುಗಳನ್ನು ಕೊಲ್ಲಲು ಮನಸ್ಸಾಗಲಿಲ್ಲವೆಂದು ಹೇಳಿದ. ತಾನೇ ಬೋಧಿಸತ್ವನಿಂದ ಪಡೆದ ಧರ್ಮಬೋಧೆಯನ್ನು ಮಾಡಿ ಅವರನ್ನು ಸಂತೋಷಪಡಿಸಿದ.

ಪರಿವಾರದಲ್ಲಿ ಒಬ್ಬರು ಮತ್ತೊಬ್ಬರಿಗಾಗಿ ಮಾಡಲಿರುವ ತ್ಯಾಗದ ಬುದ್ಧಿ ಪರಿವಾರವನ್ನು ಗಟ್ಟಿಯಾಗಿ, ಒಗ್ಗಟ್ಟಾಗುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.