ADVERTISEMENT

ಬೆರಗಿನ ಬೆಳಕು: ವಿಧಿಯ ಆಟ

ಡಾ. ಗುರುರಾಜ ಕರಜಗಿ
Published 9 ಮೇ 2021, 19:51 IST
Last Updated 9 ಮೇ 2021, 19:51 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಎಲ್ಲಿಯದನೋ ಅದೆಲ್ಲಿಯದಕೋ ಹೆಣೆಯುವನು |
ಒಲ್ಲೆವೆನೆ ನೀವೆ ಕಿತ್ತಾಡಿಕೊಳಿರೆನುವನ್ ||
ಬೆಲ್ಲದಡುಗೆಯಲಿ ಹಿಡಿ ಮರಳನೆರಚಿಸುವನು |
ಒಳ್ಳೆಯುಪಕಾರಿ ವಿಧಿ – ಮಂಕುತಿಮ್ಮ || 415 ||

ಪದ-ಅರ್ಥ: ಒಲ್ಲೆವೆನೆ=ಒಲ್ಲೆವು+ಎನೆ,
ಕಿತ್ತಾಡಿಕೊಳಿರೆನುವನ್=ಕಿತ್ತಾಡಿಕೊಳಿರಿ+
ಎನುವನ್ (ಎನ್ನುವನು), ಮರಳನೆರಚಿಸುವನು=ಮರಳನು+ಎರಚಿಸುವನು

ವಾಚ್ಯಾರ್ಥ: ಎಲ್ಲಿಯೋ ಇರುವುದನ್ನು ಮತ್ತೆಲ್ಲಿಯದಕೋ ಜೋಡಿಸುವನು. ಬೇಡವೆಂದರೆ, ನೀವೇ ಹೊಡೆದಾಡಿಕೊಳ್ಳಿ ಎನ್ನುವನು. ಬೆಲ್ಲದ ಅಡುಗೆಯಲ್ಲಿ ಹಿಡಿ ಮರಳನ್ನು ಹಾಕಿಸುವನು. ಹೀಗೆ ಒಳ್ಳೆಯ ಉಪಕಾರಿ ವಿಧಿ.

ADVERTISEMENT

ವಿವರಣೆ: ವಿಧಿ ಎಂಬುದೊಂದು ವಿಶೇಷ ಚಿಂತನೆ. ಅದನ್ನು ಅದೃಷ್ಟ, ನಿಯತಿ, ದೈವವೆಂದೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಇದೊಂದು ಪೂರ್ವನಿರ್ಧಾರಿತವಾದ ಪಥ. ಈ ನಂಬಿಕೆಯಲ್ಲಿ ಸಂಗತಿಗಳು ಪೂರ್ವನಿರ್ಧಾರದಂತೆ ನಡೆಯುತ್ತವೆ. ನಮಗೆ ಅವುಗಳ ಮುನ್ಸೂಚನೆ ಇಲ್ಲದಿರುವುದರಿಂದ ಅವು ವಿಚಿತ್ರ ಅಥವಾ ಅನೂಹ್ಯವಾದದ್ದು ಎನ್ನುತ್ತೇವೆ. ಯುರೋಪಿನಲ್ಲಿ ಮತ್ತು ಗ್ರೀಕ್ ಸಂಪ್ರದಾಯಗಳಲ್ಲಿ ಈ ವಿಧಿ ಎಂಬ ಅದೃಷ್ಟದ ನಂಬಿಕೆ ಇದೆ. ಅದು ಏನನ್ನಾದರೂ, ಯಾರಿಗಾದರೂ ಮಾಡಿಬಿಡಬಹುದು ಎಂದು ನಂಬಿದ್ದರು.

ಕೆಲವು ಘಟನೆಗಳು ನಡೆದಿರುವುದನ್ನು ಕಂಡರೆ ವಿಧಿಯ ಆಟ ಅತ್ಯಂತ ನಿಗೂಢವಾದದ್ದು ಎನಿಸುತ್ತದೆ. ಒಂದಷ್ಟು ಜನ ಹೆಣ್ಣು ಮಕ್ಕಳು, ಶಾಲೆಯಲ್ಲಿ ಜೊತೆಯಾಗಿದ್ದವರು, ತಮ್ಮ ಶಾಲಾ ಜೀವನದ ನೆನಪುಗಳನ್ನು ತಾಜಾ ಮಾಡಿಕೊಳ್ಳಲೆಂದು ಮೋಜಿನ ಪ್ರವಾಸವನ್ನು ಯೋಜಿಸಿದರು. ಅವರು ಈಗ ತುಂಬ ದೊಡ್ಡ ದೊಡ್ಡ ಸ್ಥಾನಗಳಲ್ಲಿರುವವರು. ಒಂದು ವಾಹನವನ್ನು ಗೊತ್ತು ಮಾಡಿಕೊಂಡು ಹೊರಟರು. ಹೊರಟದ್ದು ಸಂತೋಷದಾಯಕ ಪ್ರವಾಸಕ್ಕೆ. ಆದರೆ ಬೆಳಗಿನ ಹೊತ್ತಿಗೆ, ಅವರು ಹೊರಟ ವಾಹನ, ಮರಳು ತುಂಬಿದ ಲಾರಿಗೆ ಡಿಕ್ಕಿ ಹೊಡೆದು, ಈ ವಾಹನದಲ್ಲಿದ್ದ ಹತ್ತು-ಹನ್ನೊಂದು ಮಹಿಳೆಯರು ಪ್ರಾಣ ಕಳೆದುಕೊಂಡರು. ಅಪೇಕ್ಷಿಸಿದ್ದು ಸಂತೋಷ, ದೊರೆತದ್ದು ಸಾವು. ಇದನ್ನೇ ವಿಧಿಯ ಆಟ ಎಂದು ಜನ ಕರೆದರು.

ಒಬ್ಬ ತರುಣ ಪದವೀಧರ, ಬುದ್ಧಿವಂತ ಯಾವುದೋ ಕಾರಣಕ್ಕೆ ಅವನ ಕೆಲಸ ಹೋಯಿತು. ಮನೆಯಲ್ಲಿ ಒಲೆ ಹೊತ್ತುವುದು ಅವನ ಗಳಿಕೆಯಿಂದ. ತರುಣ ನಿರಾಶನಾದ, ಸಾಯಬೇಕೆಂದು ತೀರ್ಮಾನಿಸಿ ಊರ ಹೊರಗೆ ರೇಲ್ವೆ ಹಳಿಗುಂಟ ನಡೆದ. ರೈಲು ಬರುವಾಗ ಅದಕ್ಕೆ ತಲೆಕೊಡಬೇಕೆಂಬುದು ಅವನ ಉದ್ದೇಶ. ಅರೆ! ಅದೇನದು? ಹಳಿಯ ಪಕ್ಕದಲ್ಲಿ ಬಿದ್ದಿದ್ದ ಏನನ್ನೋ ಕಂಡು ಓಡಿದ. ಅಲ್ಲೊಬ್ಬ ತರುಣಿ ಬಿದ್ದು ಒದ್ದಾಡುತ್ತಿದ್ದಾಳೆ. ಆಗ ತಾನೇ ಹೋದ ರೈಲಿನಿಂದ ಹೊರಗೆ ಬಿದ್ದವಳು ಅವಳು. ಅವನಿಗೆ ತನ್ನ ಸಾವಿನ ವಿಚಾರ ಮರೆಯಿತು. ಆಕೆಯನ್ನು ಹೊತ್ತು ಆಸ್ಪತ್ರೆ ಸೇರಿಸಿದ. ಆಕೆಗೆ ಸ್ಮೃತಿ ಬಂದ ಮೇಲೆ ಅವಳ ಮನೆಮಂದಿಯನ್ನು ಕರೆಸಿದ. ಆಕೆಯ ತಂದೆ ಭೋಪಾಲದ ಬಹುದೊಡ್ಡ ವ್ಯಾಪಾರಸ್ಥರು. ಈಕೆ ಒಬ್ಬಳೇ ಮಗಳು, ಕಲಿಯಲು ಇಲ್ಲಿಗೆ ಬಂದಿದ್ದಾಳೆ. ಒಬ್ಬಳೇ ಪ್ರವಾಸಕ್ಕೆ ರೈಲಿನಲ್ಲಿ ಹೊರಟಾಗ ಜಾರಿ ಹೊರಗೆ ಬಿದ್ದಿದ್ದಾಳೆ. ತಂದೆಗೆ ತರುಣನ ಸೇವೆ ಇಷ್ಟವಾದರೆ, ಹುಡುಗಿಗೆ ಹುಡುಗನೇ ಇಷ್ಟವಾದ. ಇಂದು ಆತ ಆಕೆಯನ್ನು ಮದುವೆಯಾಗಿ ದೊಡ್ಡ ವ್ಯಾಪಾರಿಯಾಗಿದ್ದಾನೆ. ಅವನು ಅಪೇಕ್ಷೆ ಪಟ್ಟದ್ದು ಸಾವು, ದೊರೆತದ್ದು ಸಂತೋಷದ ಬದುಕು. ಅದಕ್ಕೇ ಕಗ್ಗ ಹೇಳುತ್ತದೆ, ವಿಧಿ ಎಲ್ಲಿಯದನ್ನು ಎಲ್ಲಿಯೋ ಹೆಣೆಯುತ್ತದೆ, ಜಗಳ ಹುಟ್ಟಿಸುತ್ತದೆ, ಸಂಭ್ರಮಕ್ಕೆ ತಣ್ಣೀರೆರೆಯುತ್ತದೆ, ದುಃಖಕ್ಕೆ ಸಂತೋಷವನ್ನು ಸಿಂಪಡಿಸುತ್ತದೆ. ಅದೊಂದು ಉಪಕಾರಿಯೇ ನಮಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.