ADVERTISEMENT

ಬೆರಗಿನ ಬೆಳಕು: ಸೃಷ್ಟಿಕಟ್ಟಡದಲ್ಲಿ ಇಟ್ಟಿಗೆ

ಡಾ. ಗುರುರಾಜ ಕರಜಗಿ
Published 2 ಜನವರಿ 2022, 19:30 IST
Last Updated 2 ಜನವರಿ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? |
ಗಟ್ಟಿ ನಿಲಲದು ಬೀಳೆ ಗೋಡೆ ಬಿರಿಯುವುದು ||
ಸೃಷ್ಟಿ ಕೋಟೆಯಲ್ಲಿ ನೀನೊಂದಿಟಿಕೆ, ಸೊಟ್ಟಾಗೆ |
ಪೆಟ್ಟು ತಿನ್ನುವೆ ಜೋಕೆ – ಮಂಕುತಿಮ್ಮ || 532 ||

ಪದ-ಅರ್ಥ: ಪರಿಯನಿಟ್ಟಿಗೆಯೆಂತು =ಪರಿಯನು(ರೀತಿಯ)+ಇಟ್ಟಿಗೆ+ಎಂತು, ಬೀಳೆ=ಬಿದ್ದರೆ, ನೀನೊಂದಿಟಿಕೆ=ನೀನು+ಒಂದು+
ಇಟಿಕೆ(ಇಟ್ಟಿಗೆ).

ವಾಚ್ಯಾರ್ಥ: ಒಂದು ಇಟ್ಟಿಗೆ ಕಟ್ಟಡದ ರೀತಿಯನ್ನು ಹೇಗೆ ಕಂಡೀತು? ಆದರೆ ಅದು ಗಟ್ಟಿ ನಿಲ್ಲದೆ ಬಿದ್ದರೆ ಗೋಡೆಯೇ ಬಿರಿಯುತ್ತದೆ. ಸೃಷ್ಟಿಯ ಕೋಟೆಯಲ್ಲಿ ನೀನೂ ಒಂದು ಇಟ್ಟಿಗೆ. ನೀನು ಸೊಟ್ಟಾದರೆ ಪೆಟ್ಟು ತಿನ್ನಬೇಕಾದೀತು. ಎಚ್ಚರ.

ADVERTISEMENT

ವಿವರಣೆ: ಈ ಕಗ್ಗದಲ್ಲಿ ಡಿವಿಜಿಯವರು ನಮ್ಮ ಕಣ್ಣ ಮುಂದೆ ಒಂದು ಸುಂದರವಾದ ಉಪಮಾನವನ್ನು ಕೊಡುತ್ತಾರೆ. ಅದು ಅತ್ಯಂತ ಸುಲಭದ, ಎಲ್ಲರೂ ಸಾಮಾನ್ಯವಾಗಿ ಗಮನಿಸಿದಂತಹ ಉದಾಹರಣೆ. ಒಂದು ದೊಡ್ಡ ಕಟ್ಟಡದ ಕೆಲಸ ನಡೆಯುತ್ತಿದೆ. ಅಲ್ಲಿ ಸಾವಿರಾರು ಇಟ್ಟಿಗೆಗಳನ್ನು ಪೇರಿಸಿ ಇಟ್ಟಿದ್ದಾರೆ. ಒಂದು ಇಟ್ಟಿಗೆ, ಇಡೀ ಕಟ್ಟಡದ ಒಂದು ಅತ್ಯಂತ ಚಿಕ್ಕ ಅಂಗ. ಗುಡ್ಡೆಯಲ್ಲಿದ್ದ ಇಟ್ಟಿಗೆಗೆ ತಾನು ಎಲ್ಲಿಗೆ ಹೋಗುತ್ತೇನೆ, ಹೇಗೆ ಬಳಕೆಯಾಗುತ್ತೇನೆ ಎಂಬುದರ ಅರಿವಿಲ್ಲ. ಆದರೆ ಅದನ್ನು ಬಳಸಿ ಗೋಡೆ ಕಟ್ಟಿದಾಗ, ಅದು ಗಟ್ಟಿಯಾಗಿ ತನ್ನ ಸ್ಥಳದಲ್ಲಿ ಕುಳಿತಿರುವುದು ಅವಶ್ಯ. ಅದು ತನ್ನನ್ನು ಬಂಧಿಸಿದ ಸಿಮೆಂಟಿನಿಂದ ಬೇರೆಯಾಗಿ ಅಲುಗಾಡಿದರೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇಡೀ ಗೋಡೆಯೇ ಅಭದ್ರವಾಗುತ್ತದೆ. ಒಂದು ಇಟ್ಟಿಗೆ ಇಡೀ ಕಟ್ಟಡದ ನಕ್ಷೆಯಲ್ಲಿ ಒಂದು ಬಿಂದುವೂ ಅಲ್ಲ. ಆದರೆ ಅದು ಅಮುಖ್ಯವೂ ಅಲ್ಲ.

ಈ ಉಪಮಾನವನ್ನು ಮನುಷ್ಯ ಜೀವನಕ್ಕೆ ಹೊಂದಿಸುತ್ತಾರೆ. ಪ್ರಪಂಚವೊಂದು ಬಹು ದೊಡ್ಡ ಕೋಟೆ ಇದ್ದಂತೆ. ಅದರಲ್ಲಿ ಮನುಷ್ಯ ಒಂದು ಇಟ್ಟಿಗೆ ಇದ್ದಂತೆ. ಅದು ಸರಿಯಾಗಿ ಕೋಟೆಯ ಗೋಡೆಗೆ, ಅವಶ್ಯವಿದ್ದಂತೆ ಹೊಂದಿಕೊಳ್ಳಬೇಕು. ತಾವು ಗಮನಿಸಿರಬೇಕು. ಗೋಡೆಯನ್ನು ಕಟ್ಟುವಾಗ ಗಾರೆಯವನು ಅವಶ್ಯವಿದ್ದ ಜಾಗೆಯಲ್ಲಿ ಇಟ್ಟಿಗೆ ಸರಿ ಹೊಂದುತ್ತದೆಯೇ ಎಂದು ನೋಡುತ್ತಾನೆ. ಸರಿ ಹೊಂದದಿದ್ದರೆ ಅದನ್ನು ಹೊಡೆದು ಕತ್ತರಿಸಿ, ಅರ್ಧವೋ ಮುಕ್ಕಾಲೋ ಮಾಡಿ ಕೂರಿಸುತ್ತಾನೆ. ಅಕಸ್ಮಾತ್ ಯಾವುದೋ ಇಟ್ಟಿಗೆ ಹೊರಗೆ ಚಾಚಿಕೊಂಡಿದ್ದರೆ, ಕರಣೆಯಿಂದ ಹೊಡೆದು ಕತ್ತರಿಸುತ್ತಾನೆ. ಕಟ್ಟಡದ ನಕ್ಷೆಗೆ ಇಟ್ಟಿಗೆ ಹೊಂದಿಕೊಳ್ಳುವುದು ಅವಶ್ಯ. ಅಂತೆಯೇ ವಿಶ್ವನಕ್ಷೆಯಲ್ಲಿ ಮನುಷ್ಯನದೊಂದು ಇಟ್ಟಿಗೆಯ ಪಾತ್ರ. ಸಮಾಜದ ಎಲ್ಲರೊಡನೆ ಸಮರಸವಾಗಿ ಬೆರೆಯುವುದು ವ್ಯವಸ್ಥೆಗೂ, ವೈಯಕ್ತಿಕ ಉನ್ನತಿಗೂ ಅವಶ್ಯಕ.

ಒಂದು ವ್ಯಕ್ತಿತ್ವಕ್ಕೆ ಅರ್ಥಬರುವುದು ಅದು ಇತರರೊಂದಿಗೆ ಸಂಬಂಧ ಪಡೆದಾಗಲೇ. ಒಂದು ವಸ್ತು ಅರ್ಥಪೂರ್ಣವಾಗುವುದು, ಮತ್ತೊಂದರ ಜೊತೆಗೆ ಸೇರಿದಾಗ. ಒಂದು ಪೆನ್ನು ಸರಿಯಾಗಿ ಬರೆಯುವುದು ಲೇಖಕನ ಕೈಯಲ್ಲಿ ಸಿಕ್ಕಾಗ ಮತ್ತು ಕಾಗದದ ಮೇಲೆ ಬರೆದಾಗ. ಲೇಖಕ ಮತ್ತು ಕಾಗದವಿಲ್ಲದಿದ್ದರೆ ಪೆನ್ನಿಗೆ ಅರ್ಥವಿಲ್ಲ. ನಾನೊಬ್ಬ ವಿಶಿಷ್ಟ ವ್ಯಕ್ತಿ ಎಂದು ಎಲ್ಲರಿಂದ ಬೇರೆಯಾಗಿ ನಿಂತರೆ, ಸೃಷ್ಟಿಯಂತ್ರದಲ್ಲಿ ಪೆಟ್ಟು ತಿನ್ನಬೇಕಾಗುತ್ತದೆ. ಆದ್ದರಿಂದ ವ್ಯಕ್ತಿ ತನ್ನ ಅಹಂಕಾರವನ್ನು ತೊರೆದು ಸಮಷ್ಟಿ ಜೀವನದಲ್ಲಿ ಹೊಂದಾಣಿಕೆಯಿಂದ ಬದುಕಿದರೆ ಅದು ಪ್ರಪಂಚಕ್ಕೂ ಕ್ಷೇಮ, ವ್ಯಕ್ತಿಯೂ ಸುರಕ್ಷಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.