ADVERTISEMENT

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ಸುಳ್ಳು ಹೇಳಿದ ಬ್ರಾಹ್ಮಣ

ಡಾ. ಗುರುರಾಜ ಕರಜಗಿ
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಮುದುಕ ಬ್ರಾಹ್ಮಣ ಪ್ರಯಾಸಪಟ್ಟು ಅರಣ್ಯದಲ್ಲಿ ನಡೆದು ಹೋಗಿ ಎರಡು ದಿನಗಳ ನಂತರ ಅಚ್ಚುತ ಋಷಿ ವಾಸವಾಗಿದ್ದ ಆಶ್ರಮಕ್ಕೆ ಬಂದ. ಆ ಋಷಿ ಬ್ರಾಹ್ಮಣನನ್ನು ಮರ್ಯಾದೆಯಿಂದ ಕರೆದು, ಕುಳ್ಳಿರಿಸಿ ಮಾತನಾಡಿದ. ಬ್ರಾಹ್ಮಣ ಋಷಿಯನ್ನು ಕೇಳಿದ, ‘ಋಷಿಗಳೇ, ಆಶ್ರಮದಲ್ಲಿ ತಮ್ಮ ಆರೋಗ್ಯ ಚೆನ್ನಾಗಿದೆಯೇ? ಗೆಡ್ಡೆ ಗೆಣಸುಗಳು, ಹಣ್ಣುಗಳು ಸಾಕಷ್ಟು ದೊರೆಯುತ್ತಿವೆಯೇ? ಪ್ರಾಣಿಗಳ ಕಾಟ ಹೆಚ್ಚಾಗಿದೆಯೇ?’ ಋಷಿ ನಕ್ಕುಬಿಟ್ಟು ಹೇಳಿದ, ‘ನಾನು ಇಲ್ಲಿ ತಪಸ್ಸಿಗೆ ಬಂದವನು. ಮನಸ್ಸಿಗೆ ಬೇಕೆನ್ನಿಸಿದ್ದನ್ನು ಪಡೆಯಬೇಕಾದರೆ ನಗರದಲ್ಲೇ ಇರಬಹುದಾಗಿತ್ತು. ಇಲ್ಲಿ ದೊರೆತದ್ದನ್ನು ಸಂತೋಷದಿಂದ ಸೇವಿಸುತ್ತೇನೆ. ನಾನು ತುಂಬ ನಿರೋಗಿಯಾಗಿದ್ದೇನೆ. ಇಲ್ಲಿ ಇದ್ದು ಎಷ್ಟೋ ವರ್ಷಗಳು ಕಳೆದುಹೋದರೂ ಒಮ್ಮೆಯೂ ನನಗೆ ಕಾಯಿಲೆಯಾಗಿಲ್ಲ. ಇಲ್ಲ ಫಲಮೂಲಗಳು ಹೇರಳವಾಗಿವೆ. ಕಚ್ಚುವ ಸೊಳ್ಳೆಗಳು, ರಕ್ತ ಹೀರುವ ಹುಳುಗಳು ಅಧಿಕವಾಗಿಲ್ಲ. ಕಾಡಿನಲ್ಲಿ ಬೇಕಾದಷ್ಟು ಉಗ್ರ ಮೃಗಗಳಿವೆ. ಆದರೆ ನನಗೆ ಯಾವ ಪ್ರಾಣಿಯಿಂದಲೂ ತೊಂದರೆಯಾಗಿಲ್ಲ. ಇಂದು ನೀವು ಇಲ್ಲಿಗೆ ಬಂದಿದ್ದೀರಿ. ಸ್ನಾನ ಮಾಡಿ ವಿರಮಿಸಿಕೊಂಡು ಇಲ್ಲಿರುವ ತಿಂದುಕ, ಪಿಯಾಲೆ, ಸಿಹಿ ಕಾಸುಮಾರಿ ಹಣ್ಣುಗಳನ್ನು ಹಾಗೂ ಮತ್ತೆ ದೊರೆಯುವ ಚಿಕ್ಕ ದೊಡ್ಡ ಹಣ್ಣುಗಳನ್ನು ತಿನ್ನಿರಿ. ಈ ಮಡಕೆಯಲ್ಲಿ ಗಿರಿ-ಗಹ್ಪರಗಳಿಂದ ತಂದ ತಂಪಾದ ನೀರಿದೆ. ಅದನ್ನು ಬಾಯಾರಿಕೆಯಾದಾಗ ಕುಡಿಯಿರಿ. ಇದೆಲ್ಲ ಸರಿಯಾಯಿತು. ಆದರೆ ನೀವು ಇಲ್ಲಿಗೆ ಬಂದ ಕಾರಣ ತಿಳಿಯಲಿಲ್ಲ’.

‘ಋಷಿಗಳೇ ತಾವು ನೀಡಿದ್ದನ್ನೆಲ್ಲ ಸ್ವೀಕರಿಸುತ್ತೇನೆ. ನಾನು ಬಂದ ಉದ್ದೇಶ ವೆಸ್ಸಂತರ ಬೋಧಿಸತ್ವನನ್ನು ನೋಡುವುದು. ಆತನೊಬ್ಬ ಮಹಾತ್ಮ, ಸಿವಿ ದೇಶದ ನಾಗರಿಕರು ಅವನ ಮಹಿಮೆಯನ್ನು ತಿಳಿಯದೇ ದೇಶದಿಂದ ಹೊರಗೆ ಹಾಕಿದ್ದಾರೆ. ಆ ಸಾಧಕನನ್ನು, ಅವನ ಪರಿವಾರವನ್ನು ನೋಡಲು ನಾನು ಕಾತುರನಾಗಿದ್ದೇನೆ. ದಯವಿಟ್ಟು ಅವನ ವಿಳಾಸವನ್ನು, ಅವನ ಆಶ್ರಮವನ್ನು ತಲುಪುವ ದಾರಿಯನ್ನು ತಿಳಿಸಿ’ ಎಂದ ಬ್ರಾಹ್ಮಣ. ಒಂದು ಕ್ಷಣ ಕಣ್ಣುಮುಚ್ಚಿ ಚಿಂತಿಸಿ, ನಂತರ ಈ ಬ್ರಾಹ್ಮಣನನ್ನು ದಿಟ್ಟಿಸಿ ನೋಡಿ ಋಷಿ ಹೇಳಿದ, ‘ಬ್ರಾಹ್ಮಣ, ನೀನು ವೆಸ್ಸಂತರ ಬೋಧಿಸತ್ವನನ್ನು ನೋಡಲು ಬಂದದ್ದು ಶುಭ-ಸಂಕಲ್ಪವೆಂದು ನನಗೆ ತೋರುವುದಿಲ್ಲ. ನಿನ್ನ ಆಸೆ ಮುಖದಲ್ಲಿ ಕೆಡೆದಿದೆ. ಅವನಿಂದ ಏನನ್ನೋ ಅಪೇಕ್ಷೆ ಮಾಡಿ ನೀನು ಬಂದಿದ್ದೀಯಾ. ಈಗ ಅವನು ಅಪ್ಪಟ ತಪಸ್ವಿ. ಅವನ ಹತ್ತಿರ ಕೊಡಲು ಏನೂ ಇಲ್ಲ. ಆದರೆ ನೀನು ಆಸೆಬುರುಕ. ವೆಸ್ಸಂತರನ ಪತಿವೃತಾ ಸ್ತ್ರೀಯನ್ನೇ ಅಪೇಕ್ಷಿಸುತ್ತೀಯೋ ಏನೋ? ಅಥವಾ ಅವನ ಮಗಳು ಕೃಷ್ಣಾಜಿನ ಮತ್ತು ಮಗ ಜಾಲಿಯನ್ನು ದಾಸರಾಗಿ ಪಡೆಯಲು ಬಂದಿದ್ದೀಯೋ?’

ತನ್ನ ಮನದ ಇಚ್ಛೆ ಈ ಸನ್ಯಾಸಿಗೆ ಹೇಗೆ ತಿಳಿಯಿತು ಎಂದು ಬ್ರಾಹ್ಮಣ ಆಶ್ಚರ್ಯಪಟ್ಟ. ತಕ್ಷಣವೇ ನುಡಿದ, ‘ಋಷಿಗಳೇ ನನ್ನ ಮೇಲೆ ಸಂಶಯಪಡಬೇಡಿ. ನಾನು ವೆಸ್ಸಂತರನಿಂದ ಏನನ್ನೂ ಯಾಚಿಸಲು ಬಂದಿಲ್ಲ. ಅವನ ದರ್ಶನ ಮಂಗಳಕರ, ಅವನ ಚಿಂತನೆಗಳು ಸುಖಕರ. ಅವನನ್ನು ನೋಡಿ ಗೌರವ ತೋರಿಸಿ ಹೋಗಲು ಬಂದಿದ್ದೇನೆ’. ಋಷಿಗೆ ಸಂಶಯವಿದ್ದರೂ ಬ್ರಾಹ್ಮಣನ ಮಾತನ್ನು ನಂಬಿ, ಅವನಿಗೆ ಎರಡು ದಿನ ಆದರ-ಸತ್ಕಾರ ಮಾಡಿ ಮುಂದಿನ ಪ್ರಯಾಣದ ದಾರಿಯನ್ನು ತಿಳಿಸಿದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.