ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಹೆಸರಿನ ಹಂಬಲ ಬೇಡ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 19:30 IST
Last Updated 22 ಜೂನ್ 2022, 19:30 IST
   

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ|
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ?||
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು|
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ||656||

ಪದ-ಅರ್ಥ: ಹೆಸರೆಂಬುದೇಂ?= ಹೆಸರು+ ಎಂಬುದು+ ಏಂ(ಏನು), ಕಸುರು= ಕೊಳಕು, ಅಪಕ್ವವಾದದ್ದು, ಬ್ರಹ್ಮಪುರಿ= ಪ್ರಪಂಚ, ಕಸಬೊರಕೆಯಾಗಿಳೆಗೆ= ಕಸಬೊರಕೆ (ಪೊರಕೆ)+ ಆಗು+ ಇಳೆಗೆ (ಭೂಮಿಗೆ)

ವಾಚ್ಯಾರ್ಥ: ಹೆಸರು, ಹೆಸರೆಂದರೇನು? ಅದು ಅಪಕ್ವತೆ ಬೀಸುವ ಗಾಳಿ. ಈ ಪ್ರಪಂಚದೊಳಗೆ ನಿನಗೆ ಪ್ರತಿಷ್ಠೆ ಏಕೆ? ಮನದಲ್ಲಿ ಮಗುವಾಗು, ಸಾಧುವಾಗು, ಬೆಳೆಯುವ ಸಸಿಯಂತಾಗು, ಕಸ ನಿವಾರಿಸುವ ಪೊರಕೆಯಂತಾಗು ಪ್ರಪಂಚಕ್ಕೆ.

ADVERTISEMENT

ವಿವರಣೆ: ಊರಲ್ಲೊಬ್ಬ ದಡ್ಡ ಮನುಷ್ಯ. ಅವನಿಗೊಂದು ಹುಚ್ಚು ಹತ್ತಿತು. ತಾನೂ ಪಂಡಿತನಾಗಬೇಕು, ಜನ ತನ್ನನ್ನು ಪಂಡಿತನೆಂದು ಕರೆಯಬೇಕು. ಅವನಿಗೋ ಏನೂ ಗೊತ್ತಿಲ್ಲ. ಜನ ಅವನನ್ನು ಹೇಗೆ ಪಂಡಿತ ಎಂದು ಕರೆದಾರು? ಆತ ಹೋಗಿ ಬೀರ್‍ಬಲ್‍ನ ಮುಂದೆ ಅತ್ತುಕೊಂಡು ತನ್ನ ಅಪೇಕ್ಷೆಯನ್ನು ಹೇಳಿದ. ಬೀರಬಲ್ ಅವನಿಗೊಂದು ಸಲಹೆ ಕೊಟ್ಟ. ‘ನೀನು ನಾಳೆ ರಸ್ತೆಯಲ್ಲಿ ಹೋಗುವಾಗ ಅನೇಕ ಮಕ್ಕಳು ನಿನ್ನನ್ನು ‘ಪಂಡಿತ, ಪಂಡಿತ’ ಎಂದು ಕೂಗುತ್ತಾರೆ. ಆಗ ನೀನು ಕೋಪ ಮಾಡಿಕೊಂಡವರಂತೆ ಅವರನ್ನು ಅಟ್ಟಿಸಿಕೊಂಡು ಹೋಗು’. ಅವನು ಹೇಳಿದಂತೆ ಇವನು ಹೋಗುವಾಗ ಮಕ್ಕಳು ಕೂಗುತ್ತ ಬಂದರು. ಅವರಿಗೆ ಹಾಗೆ ಮಾಡಲು ಹೇಳಿದವನೇ ಬೀರ್‍ಬಲ್. ಈ ಪೆದ್ದ ಅವರನ್ನು ಅಟ್ಟಿಸಿಕೊಂಡು ಹೋದಂತೆ ಮಾಡಿದ. ಮಕ್ಕಳಿಗೆ ತಮಾಷೆ. ಅಂದಿನಿಂದ ಅವನು ಎಲ್ಲಿಗೆ ಹೋದರೂ ಮಕ್ಕಳು ‘ಪಂಡಿತ ಬಂದ’ ಎನ್ನುತ್ತಿದ್ದರು. ಮುಂದೆ ಅದೇ ಹೆಸರು ಅವನಿಗೆ ಸ್ಥಿರವಾಗಿ, ಹಿರಿಯರು ಕೂಡ ಅವನನ್ನು ಪಂಡಿತ ಎಂದೇ ಕರೆದರಂತೆ. ಊರ ಜನ ಅವನನ್ನು ಗೌರವದಿಂದ ಪಂಡಿತ ಎಂದದ್ದಲ್ಲ, ಅವನ ಮೂರ್ಖತನಕ್ಕೆ, ತಮಾಷೆಗೆ ಹೇಳಿದ್ದು. ಹೆಸರು ಗಳಿಸುವ ಪ್ರಯತ್ನ, ಅವನ ಅಪಕ್ವತೆಯ ದ್ಯೋತಕ.

ಕಗ್ಗ ಆ ಮಾತನ್ನು ಹೇಳುತ್ತದೆ. ಹೆಸರು ಗಳಿಸಲು ಮಾಡುವ ಪ್ರಯತ್ನಗಳೆಲ್ಲ ‘ಕಸುರು ಬೀಸುವ ಗಾಳಿ’. ಕಸುರು ಎನ್ನುವ ಪದಕ್ಕೆ ಎರಡು ಅರ್ಥಗಳಿವೆ. ಒಂದು ಅರ್ಥ, ಕೊಳಕು ಅಥವಾ ಹೊಲಸು. ಹೆಸರನ್ನು ಪಸರಿಸುವ ಯತ್ನಗಳೆಂದರೆ ಅದು ಕೊಳಕಿನ ಮೇಲೆ ಹಾದು ಬಂದ ಗಾಳಿ ಇದ್ದಂತೆ. ಆ ಕೊಳಕು ಒಂದೆಡೆಗೆ ಇದ್ದರೂ ಗಾಳಿಯಿಂದಾಗಿ ಅದು ಕೊಳಕುತನವನ್ನು ಊರಲೆಲ್ಲ ಪಸರಿಸುತ್ತದೆ. ಇನ್ನೊಂದು ಅರ್ಥ ಅಪಕ್ವತೆ. ತನ್ನತನವನ್ನು ಹೇಳಿಕೊಳ್ಳುವುದು ಮನಸ್ಸಿನ ಅಪಕ್ವತೆ. ತನ್ನ ಹೆಸರನ್ನು ಹಬ್ಬಿಸುವ ವ್ಯರ್ಥಪ್ರಯತ್ನವೇ ಅಪಕ್ವತೆ.

ಅಸಂಮಾನೇ ತಪೋವೃದ್ಧಿಃ ಸಂಮಾನಾಚ್ಚ ತಪಃ ಕ್ಷಯಃ |
ಪೂಜಯಾ ಪುಣ್ಯಹಾನಿಃ ಸ್ಯಾನ್ನಿಂದಯಾ ಸದ್ಗತಿರ್ಭವೇತ್ ||

‘ಸಂಮಾನಕ್ಕೆ ಆಸೆ ಪಡದಿದ್ದಷ್ಟೂ ತಪಸ್ಸು ಹೆಚ್ಚುತ್ತದೆ. ಪ್ರಸಿದ್ಧಿಯನ್ನು ಬಯಸಿದಷ್ಟು ತಪಸ್ಸು ಕಡಿಮೆಯಾಗುತ್ತದೆ. ಜನ ಮರ್ಯಾದೆ ತೋರಿದಷ್ಟೂ ಪುಣ್ಯ ನಷ್ಟವಾಗುತ್ತದೆ. ಜನರ ನಿಂದೆಯ ಬಗ್ಗೆ ಉದಾಸೀನವಾಗಿದ್ದಷ್ಟೂ ಸದ್ಗತಿಯಾಗುತ್ತದೆ’.

ಸ್ವವಿಕಾಸದ ಎತ್ತರದ ಹಂತಗಳನ್ನು ಕಂಡವರು ಹೆಸರಿನ ತಹತಹಕ್ಕೆ ಹೋಗುವುದಿಲ್ಲ. ಕಗ್ಗ ಒಂದು ಉಪದೇಶವನ್ನು ನೀಡುತ್ತದೆ. ಹೆಸರಿನ ಬಯಕೆಗೆ ಹೋಗಬೇಡ. ಮನದಲ್ಲಿ ಶಿಶುವಿನಂತೆ ಮುಗ್ಧನಾಗು, ಹಸುವಿನಂತೆ ಸಾಧುವಾಗು, ಸದಾ ಬೆಳೆಯುವ ಸಸಿಯಂತೆ ಧನಾತ್ಮಕವಾಗಿರು. ಅದಷ್ಟೇ ಅಲ್ಲ, ಹೆಸರಿನ ಕಸ ಹರಡುವದಕ್ಕಿಂತ ಕಸವನ್ನುತೆಗೆದುಹಾಕುವ ಪೊರಕೆಯಂತಾಗು ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.