ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು | ಹೊಗಳಿಕೆಯ ಬೇಡಿ

ಡಾ. ಗುರುರಾಜ ಕರಜಗಿ
Published 19 ಜೂನ್ 2022, 19:30 IST
Last Updated 19 ಜೂನ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೊ |
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ||
ಗಣನೆಗೇರಲಿಕೆಂದು ಜನ ತಪಸಿ ತೊಳಲುವುದು |
ನೆನೆಯದಾತ್ಮದ ಸುಖವ – ಮಂಕುತಿಮ್ಮ || 653 ||

ಪದ-ಅರ್ಥ: ಗಣನೆಗೇರಲಿಕೆಂದು=ಗಣನೆಗೆ+ಏರಲಿಕೆ+ಎಂದು, ನೆನೆಯದಾತ್ಮದ=ನೆನೆಯದು+ಆತ್ಮದ.

ವಾಚ್ಯಾರ್ಥ: ಜನರು ಒದ್ದಾಡಿ ತೊಳಲುವುದು ಮತ್ತೊಬ್ಬರ ಮನ್ನಣೆಯನ್ನು ಪಡೆಯಲು ಅದು ಮನೆಯಲ್ಲೋ, ಮಠದಲ್ಲೋ, ಸಭೆಯಲ್ಲೋ, ಸಂತೆಯಲ್ಲೋ, ಕೊನೆಗೆ ಕಾಡು, ಸ್ಮಶಾನಗಳಲ್ಲೋ ಎಲ್ಲಿಯೂ ಆಗಬಹುದು. ಆದರೆ ಆತ್ಮದ ಸುಖವನ್ನು ನೆನೆಯುವುದಿಲ್ಲ.

ADVERTISEMENT

ವಿವರಣೆ: ಕನ್ನಡದ ಹಾಸ್ಯಬ್ರಹ್ಮ ಬೀಚಿಯವರ ಸುಂದರ ಕಥೆ ‘ಸತ್ತ ಸಾಚಾಸಾಹೇಬ’. ಅದೊಂದು ಊರು. ಊರಿಗೊಬ್ಬ ಪೋಲೀಸ್ ಸಾಹೇಬ ಬಂದ. ಅವನು ಬಹಳ ಖಡಕ್ ಅಧಿಕಾರಿ ಎಂದು ಹೆಸರು ಮಾಡಿದ್ದ. ಅವನು ಬೆಂಕಿ ನವಾಬ. ಕೋಪ ಬಂದರೆ ಆತ ಹಿಡಿದು ಒಳಗೆ ಹಾಕಿ ತದುಕಿ ಬಿಡುತ್ತಾನೆ. ಮುಖ್ಯವೆಂದರೆ ಆತ ಒಂದು ಪೈಸೆ ಲಂಚ ತೆಗೆದುಕೊಳ್ಳುವವನಲ್ಲ. ಪ್ರಾಮಾಣಿಕತೆಯ ಪ್ರತಿಮೂರ್ತಿ. ಊರ ಜನರಿಗೆ ಆಶ್ಚರ್ಯ! ಪೋಲೀಸ್ ಅಧಿಕಾರಿಯಾಗಿಯೂ ಲಂಚ ಮುಟ್ಟುವುದಿಲ್ಲವೆಂದರೆ ಹೇಗೆ? ಊರಿನ ವ್ಯಾಪಾರಸ್ಥರಿಗೆ ಫಜೀತಿಯಾಯಿತು. ಪೋಲೀಸ್ ಮುಖ್ಯಸ್ಥರ ಸಹಕಾರವಿಲ್ಲದೆ ವ್ಯಾಪಾರ ಚೆನ್ನಾಗಿ ನಡೆದೀತು ಹೇಗೆ? ಸಾಹೇಬನ ಹಿನ್ನಲೆಯನ್ನೆಲ್ಲ ಕೆದಕಿ ನೋಡಿದರು. ಊಹೂಂ ಎಲ್ಲಿಯೂ ಅವನ ಅಪ್ರಾಮಾಣಿಕತೆಯ ಚೆನ್ಹೆಯೇ ಇಲ್ಲ! ಮನೆಯಲ್ಲಿ ಇರುವವರೇ ಮೂರು ಜನ. ಸಾಹೇಬ, ಹೆಂಡತಿ ಮತ್ತು ಒಬ್ಬಳೇ ಮಗಳು. ಅದೂ ಪುಟ್ಟ ಹುಡುಗಿ, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಊರಲ್ಲಿ ಇದ್ದದ್ದು ಒಂದೇ ಶಾಲೆ. ಆಕೆ ಓದುವುದು ಅಲ್ಲಿಯೇ. ಆ ಶಾಲೆಯ ಅಧ್ಯಕ್ಷರು ದೊಡ್ಡ ವ್ಯಾಪಾರಸ್ಥರು.

ಮರುದಿನ ಅಧ್ಯಕ್ಷರಾದ ವ್ಯಾಪಾರಸ್ಥರು ಶಾಲೆಗೆ ಹೋಗಿ ಪ್ರಿನ್ಸಿಪಾಲ್‌ರಿಗೆ ಆದೇಶ ಕೊಟ್ಟರು. ಮುಂದಿನ ವಾರ ಎಲ್ಲ ಆಟಗಳ, ಭಾಷಣ ಸ್ಪರ್ಧೆಗಳ, ನಾಟಕಗಳ, ಪರೀಕ್ಷೆಗಳು ನಡೆಯಬೇಕು ಮತ್ತು ಸಾಹೇಬರ ಮಗಳಿಗೇ ಎಲ್ಲ ಪ್ರಥಮ ಬಹುಮಾನಗಳು ಬರಬೇಕು. ಅಂತೆಯೇ ಎಲ್ಲ ಸ್ಪರ್ಧೆಗಳು ನಡೆದವು. ಅಧ್ಯಕ್ಷರು ಹೋಗಿ ಸಾಹೇಬರನ್ನು ಕಂಡು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಬೇಕೆಂದು ಆಹ್ವಾನಿಸಿದರು. ಸಾಹೇಬರು, ‘ನೋಡಿ, ನನಗೆ ಯಾವ ಕಾಣಿಕೆಯನ್ನೂ ಕೊಡಕೂಡದು, ನನ್ನನ್ನು ಹೊಗಳಬಾರದು. ಎಂದು ಎಚ್ಚರಿಕೆ ಕೊಟ್ಟರು’ ಎಲ್ಲದಕ್ಕೂ ಒಪ್ಪಿದ್ದಾಯಿತು. ಕಾರ್ಯಕ್ರಮದಲ್ಲಿ ಸಾಹೇಬರಿಗೇ ಆಶ್ಚರ್ಯ! ಆಟ, ಓಟ, ನಾಟಕ, ಭಾಷಣ, ಪರೀಕ್ಷೆ ಎಲ್ಲದರಲ್ಲೂ ತನ್ನ ಮಗಳಿಗೆ ಪ್ರಥಮ ಪ್ರಶಸ್ತಿ. ದೊಡ್ಡ ದೊಡ್ಡ ಕಪ್‌ಗಳನ್ನು ಕೊಟ್ಟಾಗಲೆಲ್ಲ ನೂರಾರು ಫೋಟೋಗಳು! ಮರುದಿನ ನಗರದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಸಾಹೇಬರು ಮಗಳಿಗೆ ಪ್ರಶಸ್ತಿ ನೀಡುತ್ತಿರುವ ಫೋಟೋಗಳು. ಪತ್ರಿಕೆಗಳೂ ಅಲ್ಲಿಯ ಮತ್ತೊಬ್ಬ ವ್ಯಾಪಾರಸ್ಥರದೇ. ಮರುದಿನ ವ್ಯಾಪಾರಸ್ಥರೆಲ್ಲ ಸೇರಿ ನೂರಾರು ಫೋಟೋಗಳಿದ್ದ ಆಲ್ಬಂನ್ನು ತೆಗೆದುಕೊಂಡು ಸಾಹೇಬರ ಹತ್ತಿರ ಹೋದರು. ಅದನ್ನೆಲ್ಲ ನೋಡಿ, ಮಗಳ ಅದ್ಭುತ ಸಾಧನೆಯನ್ನು ಕಂಡು ಸಾಹೇಬರ ಮುಖ ಅರಳಿತು, ಹುಬ್ಬು ಸಡಲಿತು. ನಗುತ್ತ ಹೇಳಿದರು, ‘ನನ್ನಿಂದ ಏನಾದರೂ ಸಹಾಯ ಬೇಕಾದರೆ ಸಂಕೋಚ ಬೇಡ’. ಮುಂದೆ ವ್ಯಾಪಾರ ಸುಲಭವಾಯಿತು. ವ್ಯಾಪಾರಸ್ಥರು ಹೇಳಿದರು, ‘ಸತ್ತ ಸಾಚಾ ಸಾಹೇಬ’.

ಹಣಕ್ಕೆ, ಮಣಿಯದವ ಮಗಳ ಹೊಗಳಿಕೆಗೆ ಮಣಿದ. ಇದೇ ಕಗ್ಗದ ಮಾತು. ಜನ, ಮನ್ನಣೆಗೆ ಹಾತೊರೆಯುತ್ತಾರೆ. ಹಣಕ್ಕೊ, ಕೀರ್ತಿಗೋ, ಜನಪ್ರಿಯತೆಗೋ, ತೊಳಲುತ್ತಾರೆ. ಹೀಗೆ ಮನ್ನಣೆಗಾಗಿ ಬಾಯಿ ತೆರೆಯುವ, ಕೈಚಾಚುವ ಉದ್ಯೋಗದಲ್ಲಿ ತಮ್ಮ ಆತ್ಮದ ಸುಖವನ್ನು ಮರೆಯುತ್ತಾರೆ. ಆತ್ಮಸುಖ ದೊರಕುವುದು ಅಭಿಮಾನದಿಂದ ತಲೆಯೆತ್ತಿದಾಗ, ಕೈಚಾಚಿದಾಗಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.