ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಹತಾಶೆಗೆ ಸ್ಥಾನವಿಲ್ಲ

ಡಾ. ಗುರುರಾಜ ಕರಜಗಿ
Published 27 ಮಾರ್ಚ್ 2022, 19:30 IST
Last Updated 27 ಮಾರ್ಚ್ 2022, 19:30 IST
   

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ|| 593 ||

ಪದ-ಅರ್ಥ: ಸತ್ತೆನೆಂದೆನಬೇಡ=ಸತ್ತೆ+ಎಂದು+ಎನಬೇಡ, ಬತ್ತಿತೆನ್ನೊಳು=ಬತ್ತಿತು+ಎನ್ನೊಳು, ಸತ್ತ್ವದೂಟೆಯೆನಬೇಡ=ಸತ್ತ್ವದ+ಊಟೆ(ಚಿಲುಮೆ)+ಎನಬೇಡ, ತೋರ್ಪುದು=ತೋರುತ್ತದೆ.

ವಾಚ್ಯಾರ್ಥ: ಸತ್ತೆ ಎನಬೇಡ, ಸೋತೆ ಎಂದುಕೊಳ್ಳಬೇಡ, ನನ್ನಲ್ಲಿ ಸತ್ವದ ಚಿಲುಮೆ ಬತ್ತಿತು ಎನ್ನಬೇಡ. ಸಾವು ಕೂಡ ಸಾಗರದ ಅಲೆಗಳಂತೆ. ಒಮ್ಮೆ ಕೆಳಗೆ ಇಳಿಯುತ್ತದೆ ಮತ್ತೆ ಮೇಲೆದ್ದು ತೋರುತ್ತದೆ.

ADVERTISEMENT

ವಿವರಣೆ: ಅವನೊಬ್ಬ ರಷ್ಯನ್‌ ಸೈನಿಕ. ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಲು ಹೋಗಿದ್ದ. ಆತ ಮರಳಿ ಬಂದದ್ದೇ ಪವಾಡ. ಅಲ್ಲಿಯ ಸಾವು-ನೋವುಗಳಿಗೆ ಸಾಕ್ಷಿಯಾಗಿದ್ದ ಅವನ ಮನಸ್ಸು ಬೆಂದು ಹೋಗಿತ್ತು. ಮರಳಿ ಮಾಸ್ಕೋಗೆ ಒಂದು ಪುಟ್ಟ ವಿರಾಮಕ್ಕಾಗಿ ಬಂದಿದ್ದ. ತನ್ನ ಮನೆಯ ಹತ್ತಿರ ಹೋಗುತ್ತಿದ್ದಂತೆ ಅವನ ಎದೆಯೊಡೆಯಿತು. ಅಲ್ಲಿ ಫುಟ್‌ಪಾಥ್ ಮೇಲೆ ಹೆಣಗಳ ರಾಶಿ! ಕಾರ್ಯಕರ್ತರು ಅವುಗಳನ್ನು ನಿರ್ವಿಕಾರದಿಂದ ಎತ್ತಿ ಲಾರಿಯಲ್ಲಿ ಹಾಕುತ್ತಿದ್ದಾರೆ. ಸೈನಿಕನಿಗೆ ಆ ಹೆಣಗಳ ರಾಶಿಯಲ್ಲಿ ಒಬ್ಬ ಹೆಂಗಸಿನ ಕಾಲು ಕಾಣಿಸಿತು. ಆಕೆಯ ಬೂಟುಗಳನ್ನು ನೋಡಿದಾಗ ಆಕೆ ತನ್ನ ಹೆಂಡತಿ ಎಂದು ತಿಳಿಯಿತು. ದಿಕ್ಕು ತಪ್ಪಿದವನಂತೆ ಓಡಿ ಬೇರೆ ಹೆಣಗಳನ್ನು ಸರಿಸಿ ಆಕೆ ತನ್ನ ಹೆಂಡತಿಯೇ ಎಂದು ಖಾತ್ರಿ ಮಾಡಿಕೊಂಡ. ಅಧಿಕಾರಿಗಳಿಗೆ ಬೇಡಿ ಕಾಡಿ ಆಕೆಯ ಹೆಣವನ್ನು ಪಡೆದ. ಅವನಿಗೆ ಇನ್ನೊಂದು ಆಶ್ಚರ್ಯ! ಆಕೆ ಸತ್ತಿಲ್ಲ, ಬದುಕಿದ್ದಾಳೆ!! ಆಕೆಯನ್ನು ಎತ್ತಿಕೊಂಡು ಮನೆಗೆ ಹೋಗಿ ಉಪಚಾರ ಮಾಡಿದ. ಆಕೆಗೆ ಮೊದಲಿನ ಆರೋಗ್ಯ ಬರಲು ಒಂದು ವರ್ಷವೇ ಹಿಡಿಯಿತು. ಎಂಟು ವರ್ಷಗಳ ನಂತರ 1952 ರಲ್ಲಿ ಆಕೆಗೊಬ್ಬ ಮಗ ಹುಟ್ಟಿದ. ಮುಂದೆ ಆತ ವ್ಲಾಡಿಮಿರ್ ಪುಟಿನ್ ಎಂಬ ಹೆಸರಿನಿಂದ ಖ್ಯಾತನಾಗಿ ರಷ್ಯಾದ ರಾಷ್ಟ್ರಪತಿಯಾದ. ಇದೆಂಥ ಜೀವನದ ಜೋಕಾಲಿ! ಹೆಣಗಳ ರಾಶಿಯಲ್ಲಿ ಮತ್ತೊಂದು ಹೆಣದಂತೆಯೇ ಬಿದ್ದಿದ್ದ ಹೆಂಗಸನ್ನು ಆಕೆಯ ಗಂಡ ಆಗಲೇ ಬಂದು ಕಾಣುವುದು, ಗುರುತಿಸುವುದು, ಆಕೆಯನ್ನು ಬದುಕಿಸಿ ಚೇತರಿಸಿಕೊಳ್ಳುವಂತೆ ಮಾಡುವುದು ಒಂದು ಪವಾಡವೇ ಅಲ್ಲವೆ? ಬದುಕದಿರುವಂತೆ ಬಿದ್ದಿದ್ದ ಆ ಹೆಂಗಸಿನ ಹೊಟ್ಟೆಯಿಂದ ಮುಂದಿನ ರಾಷ್ಟ್ರಪತಿ ಜನಿಸುವುದು ಮತ್ತೊಂದು ಪವಾಡ!

ಕಗ್ಗ ಅದಕ್ಕೇ ಒತ್ತು ಕೊಟ್ಟು ಹೇಳುತ್ತದೆ. ಆಯ್ತು, ನನ್ನ ಬದುಕು ಮುಗಿಯಿತು, ನಾನು ಸೋತು ಹೋದೆ ಎನ್ನಬೇಡ. ನನ್ನಲ್ಲಿ ಇದ್ದ ಸತ್ವವೆಲ್ಲ ಬರಿದಾಗಿ ಹೋಯಿತು ಎಂದು ಕೊರಗಬೇಡ. ಯಾಕೆಂದರೆ ಯಾವಾಗ ಚೈತನ್ಯ ಚಿಗುರೀತು, ಯಾವ ಸಮಯದಲ್ಲಿ ಸಾಧನೆ ಬಲಿತೀತು ಎಂಬುದನ್ನು ಹೇಳುವುದು ಕಷ್ಟ. ಕ್ಯಾನ್ಸರ್‌ದಿಂದ ಬದುಕು ಮುಗಿಯಿತು ಎಂದೇ ಭಾವಿಸಿದ್ದ ಜನರಿಗೆ ಯುವರಾಜ್ ಸಿಂಗ್ ಮರಳಿ ರಾಷ್ಟ್ರೀಯ ಕ್ರಿಕೆಟ್‌ಗೆ ಬಂದದ್ದು, ಕಾಲು ಕತ್ತರಿಸಿ ಜೀವನಕ್ಕೇನೂ ಅರ್ಥವಿಲ್ಲವೆನ್ನಿಸಿದಾಗ, ಬೇರೊಂದು ದಿಕ್ಕಿನಲ್ಲಿ ಉತ್ಸಾಹ ಚಿಮ್ಮಿ ಅರುಣಿಮಾ ಸಿನ್ಹಾ ಎವರೆಸ್ಟ್ ಶಿಖರ ಏರಿದ್ದು, ಇವೆಲ್ಲ ಒಣಗಿದಂತೆ ಕಂಡ ಸತ್ವದೂಟೆ ಉಕ್ಕಿದ ದೃಷ್ಟಾಂತಗಳು.

ಹಾಗೆ ನೋಡಿದರೆ ಸಾವು ಕೂಡ ಕೊನೆಯಲ್ಲ. ಅದು ಮತ್ತೊಂದು ಹುಟ್ಟಿಗೆ ನಾಂದಿ. ಒಂದು ತೆರೆ ಇಳಿಯಿತು ಎಂದಾಗ ಮತ್ತೊಂದು ತೆರೆ ಏಳುತ್ತದೆ. ಆದ್ದರಿಂದ ಯಾವುದೇ ಪ್ರಸಂಗದಲ್ಲಿ ನಿರಾಸೆ, ಹತಾಶೆ ಬೇಡ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.