ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಹೆಸರೆಂಬ ಕಸ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 19:45 IST
Last Updated 20 ಜೂನ್ 2022, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?|
ಕಸದೊಳಗೆ ಕಸನಾಗಿ ಹೋಹನಲೆ ನೀನು?||
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು|
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||654||

ಪದ-ಅರ್ಥ: ಬಸವಳಿವುದೇಕಯ್ಯ= ಬಸವಳಿವುದು (ಬಸವಳಿಯುವುದು, ಆಯಾಸಗೊಳ್ಳುವುದು)+ ಏಕಯ್ಯ, ಹೋಹನೆಲೆ= ಹೋಗುವವನಲ್ಲವೆ, ಮರೆವೆನ್ನನ್= ಮರೆವು+ ಎನ್ನನ್, ಮಿಸುಕದಿರು= ಅಲುಗಾಡದಿರು.

ವಾಚ್ಯಾರ್ಥ: ಹೆಸರು, ಹೆಸರೆಂದು ಯಾಕೆ ಒದ್ದಾಡುತ್ತೀ? ನೀನು ಕಸದಲ್ಲಿ ಕಸವಾಗಿ ಹೋಗುವವನು. ಈ ಜಗತ್ತು ನನ್ನನ್ನು ಮರೆತುಬಿಡಲಿ ಎಂದು ಭಗವಂತನನ್ನು ಬೇಡು. ಮಣ್ಣಿನಲ್ಲಿ ಮಣ್ಣಾಗಿ ಇರು.

ADVERTISEMENT

ವಿವರಣೆ: ಎಲ್ಲರಿಗೂ ಹೆಸರನ್ನು ಶಾಶ್ವತವಾಗಿಸುವ ಹುಚ್ಚು. ಅದು ಶಾಶ್ವತವಾಗುವುದು ಸಾಧ್ಯವಿಲ್ಲವೆಂದು ತಿಳಿದೂ ಅದಕ್ಕೆ ಒದ್ದಾಡುವುದು ತಪ್ಪಿಲ್ಲ. ಪುಟ್ಟ ಕೆಲಸಮಾಡಿದರೂ ಅಲ್ಲಿ ತಮ್ಮ ಹೆಸರಿರಬೇಕು. ಅದಿಲ್ಲದಿದ್ದರೆ ಕೋಪ, ಅಸಹನೆ. ಪ್ರಪಂಚದಲ್ಲಿ ಎಷ್ಟು ದೊಡ್ಡ ದೊಡ್ಡ ಸಾಧನೆ ಮಾಡಿದವರು ಈಗಿಲ್ಲ, ಅವರ ಹೆಸರುಗಳೂ ನಮಗೆ ನೆನಪಿಲ್ಲ. ವ್ಯಕ್ತಿ ಹಾಗೂ ಕಾರ್ಯ ಶಾಶ್ವತವಾಗಿ ಉಳಿಯುವುದು ಕಷ್ಟ.

ಅವರು ಹಿರಿಯರು, ಸಮಾಜಕ್ಕೆ ಮಾದರಿಯಾದವರು. ಅವರನ್ನು ಒಬ್ಬ ತರುಣ ಕೇಳಿದ, “ಸರ್, ತಮಗೆ ಒಬ್ಬನೇ ಮಗ, ಅವನಿಗೂ ಮಕ್ಕಳಿಲ್ಲ. ಮುಂದೆ ತಮ್ಮ ಮನೆತನದ ಹೆಸರನ್ನು ಉಳಿಸುವವರು ಯಾರು ಸ್ವಾಮಿ? ತಮ್ಮದು ಅಷ್ಟು ಪ್ರಖ್ಯಾತವಾದ ಮನೆತನ”. ಹಿರಿಯರು ಅವನನ್ನು ತೀಕ್ಷ್ಣವಾಗಿ ನೋಡಿ ಕೇಳಿದರು, ‘ಅಯ್ಯಾ, ಶ್ರೀರಾಮನ ವಂಶದವರು ಇದ್ದಾರೇನಯ್ಯಾ?’.
‘ಯಾರೂ ಇಲ್ಲ ಸ್ವಾಮಿ’
‘ಶ್ರೀ ಕೃಷ್ಣನ ವಂಶದವರು?’
‘ಯಾರೂ ಇದ್ದಂಗಿಲ್ಲ ಸಾರ್’
‘ಸರಿ, ಬುದ್ಧ, ಮಹಾವೀರರ ವಂಶದವರು ಯಾರಿದ್ದಾರೆ?’
‘ಯಾರಿದ್ದಾರೋ ತಿಳಿಯದು ಸ್ವಾಮಿ’
‘ಅಲ್ಲಯ್ಯ ಅಂಥವರ ವಂಶದವರೇ ಉಳಿದಿಲ್ಲವಂತೆ, ಇನ್ನು ವಂಶದ ಹೆಸರು ಉಳಿಯುವ ಚಿಂತೆ ಏಕೆ?’ ತರುಣ ಸುಮ್ಮನಾದ.

ಈ ಮಾತು ಸತ್ಯವಲ್ಲವೇ? ಯಾರ ಹೆಸರು ಉಳಿದಿದೆ ಪ್ರಪಂಚದಲ್ಲಿ? ಅದರಲ್ಲೂ ಹೆಸರಿಗಾಗಿ ಒದ್ದಾಡಿದವರ ಹೆಸರು ಖಂಡಿತವಾಗಿಯೂ ಉಳಿದಿಲ್ಲ.

ಈ ಮಾತನ್ನು ಕಗ್ಗ ತುಂಬ ಒರಟಾಗಿ, ಎದೆಗೆ ತಟ್ಟುವಂತೆ ಹೇಳುತ್ತದೆ. ನೀನು ಕಸದಲ್ಲಿ ಕಸವಾಗಿ ಹೋಗುವವನು. ಸತ್ತ ನಂತರ ಮಣ್ಣೋ, ಬೂದಿಯೋ ಆಗಿ ಹೋಗುತ್ತೀ. ಹಿಂದೆ ಅದೆಷ್ಟು ಜನ ಹೀಗೆಯೇ ಮಣ್ಣು, ಕಸವಾಗಿ ಹೋದರೋ? ಅದರೊಳಗೆ ನೀನೊಬ್ಬ. ಆದರೆ ಭಗವಂತನನ್ನು ಬೇಡುವುದಾದರೆ ಒಂದನ್ನು ಮಾತ್ರ ಬೇಡು, ‘ಭಗವಂತಾ, ಈ ಪ್ರಪಂಚದ ಮರವೆಯೊಳಗೆ ನಾನೂ ಸೇರಿ ಹೋಗಲಿ, ನನ್ನ ಹೆಸರನ್ನು ಜಗತ್ತು ಮರೆತು ಬಿಡಲಿ’. ಕುತೂಹಲದ ವಿಷಯವೆಂದರೆ, ಯಾರು ಹೆಸರಿಗಾಗಿ ಒದ್ದಾಡಿದರೋ ಅವರೆಲ್ಲರನ್ನು ಪ್ರಪಂಚ ನಿಷ್ಕರುಣೆಯಿಂದ ಮರೆತು ಹಾಕಿದೆ. ಆದರೆ ಯಾರು ಹೆಸರು ಬೇಡವೆಂದು ಜಗತ್ತಿನ ಕಲ್ಯಾಣಕ್ಕೆ ದುಡಿದರೋ, ಅವರ ಹೆಸರು ಶಾಶ್ವತವಾಗಿ ನಿಂತಿವೆ. ಆದ್ದರಿಂದ ಮಣ್ಣಲ್ಲಿ ಮಣ್ಣಾಗಿ ಮಿಸುಕದೆ ಇರುವುದೇ ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.