ADVERTISEMENT

ಬೆರಗಿನ ಬೆಳಕು: ಜ್ಞಾನಿಯ ಸಲಗದ ನಡೆ

ಡಾ. ಗುರುರಾಜ ಕರಜಗಿ
Published 11 ಜನವರಿ 2023, 19:30 IST
Last Updated 11 ಜನವರಿ 2023, 19:30 IST
   

ನೈರಾಶ್ಯನಿರತಂಗೆ ದೇವತೆಗಳಿಂದೇನು ? |
ವೈರಾಗ್ಯಪಥಿಕಂಗೆ ನಷ್ಟಭಯವೇನು ? ||
ಪಾರಂಗತಂಗಂತರಾಳ ದೂರಗಳೇನು ?
ಸ್ಪೆರಪಥವಾತನದು – ಮಂಕುತಿಮ್ಮ || 798 ||

ಪದ-ಅರ್ಥ: ನೈರಾಶ್ಯನಿರತಂಗೆ = ನಿರಾಸೆಯಲ್ಲಿ ನಿಂತವನಿಗೆ, ದೇವತೆಗಳಿಂದೇನು=ದೇವತೆಗಳಿಂದ+ಏನು, ವೈರಾಗ್ಯಪಥಿಕಂಗೆ=ವೈರಾಗ್ಯದ ಹಾದಿಯಲ್ಲಿ ನಡೆದವನಿಗೆ, ಪಾರಂಗತಂಗಂತರಾಳ=ಪಾರಂಗತಂಗೆ(ಪಂಡಿತನಿಗೆ)+ಅಂತರಾಳ(ಹತ್ತಿರ), ಸ್ಪೆರಪಥವಾತನದು=ಸ್ಪೆರಪಥ(ಇಚ್ಛೆ ಬಂದ ದಾರಿ)+ಆತನದು

ವಾಚ್ಯಾರ್ಥ: ಆಸೆಗಳೇ ಇಲ್ಲದೆ ಹೋದರೆ ಅವನು ದೇವತೆಗಳಿಂದ ಏನು ಅಪೇಕ್ಷಿಸಿಯಾನು? ವೈರಾಗ್ಯದ ದಾರಿಯಲ್ಲಿ ನಡೆದವನಿಗೆ ನಷ್ಟ, ಭಯಗಳ ಯೋಚನೆ ಇದೆಯೆ? ನಿಜವಾದ ಪಂಡಿತನಿಗೆ ಹತ್ತಿರವಾವುದು, ದೂರವಾವುದು? ಅವನದು ಇಚ್ಛೆ ಬಂದ ದಾರಿ.
ವಿವರಣೆ: ಸಂತ ತುಕಾರಾಮ ಪಾಂಡುರಂಗನ ಅಂತರಂಗ ಭಕ್ತ. ಅವನಿಗೆ ಹಗಲು ರಾತ್ರಿ ಪಾಂಡುರಂಗನದೇ ಧ್ಯಾನ.ಅವನನ್ನೂ ಜಗತ್ತಿನ ವ್ಯವಹಾರಕ್ಕೆ ತರಲು ಅದೆಷ್ಟು ಜನ, ಅದೆಷ್ಟು ರೀತಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಸೋದರಮಾವ ಅಂಗಡಿ ಹಾಕಿಕೊಟ್ಟ. ಧ್ಯಾನದಲ್ಲಿ ಮೈಮರೆತ ತುಕಾರಾಮನಿಗೆ ಅಂಗಡಿಯ ಸಾಮಾನುಗಳನ್ನೆಲ್ಲ ಜನರು ತೆಗೆದುಕೊಂಡು ಹೋದದ್ದು ತಿಳಿಯಲಿಲ್ಲ. ತುಕಾರಾಮನ ಭಕ್ತಿಗೆ ಮೆಚ್ಚಿ ಪಾಂಡುರಂಗ ಅವನ ಕನಸಿನಲ್ಲಿ ಬಂದು ನಿನಗೆ
ಏನು ಬೇಕು ಕೇಳಿಕೋ ಎಂದನಂತೆ. ಆಗ ತುಕಾರಾಮ, “ವಿಠಲ, ನೀನೇ ನನ್ನವನಾದ ಬಳಿಕ ನನಗೇನು ಬೇಕು? ನಿನ್ನ ಸ್ಮರಣೆಯೊಂದು ಕೊನೆಯವರೆಗಿದ್ದರೆ ಸಾಕು” ಎಂದು ಭಗವಂತನ ವರವನ್ನು ನಿರಾಕರಿಸಿದನಂತೆ.

ADVERTISEMENT

ನಾವು ದೇವತೆಗಳನ್ನು ಪ್ರಾರ್ಥಿಸುವುದು ನಮ್ಮ ಆಸೆಗಳ ಪೂರ್ತಿಗಾಗಿ. ಅದಕ್ಕೇ ಪೂಜೆ, ಹೋಮ, ಹವನಗಳು. ನಮಗೆ ಆಸೆಗಳೇ ಇಲ್ಲದೇ ಹೋದಾಗ ದೇವತೆಗಳ ಹಂಗೇಕೆ? ಅದಕ್ಕೇ ದಾಸರು, “ನೀನ್ಯಾಕೋ, ನಿನ್ನ ಹಂಗ್ಯಾಕೋ?” ಎಂದು ಕೇಳಿದರು. ಅದೇ ರೀತಿ ಸಂಪೂರ್ಣ ವೈರಾಗ್ಯವನ್ನು ಸಾಧಿಸಿಕೊಂಡವನಿಗೆ ಯಾವುದರ ಅಂಟಿಲ್ಲ. ಅವನಿಗೆ ಯಾವ ವ್ಯವಹಾರವೂ ಇಲ್ಲವೆಂದ ಮೇಲೆ ಲಾಭ-ನಷ್ಟದ ಮಾತೆಲ್ಲಿ ಬಂತು? ಎಲ್ಲವನ್ನು ತೊರೆದು ನಿಂತವನಿಗೆ ಯಾವ ಭಯವೂ ಇರಲಾರದು. ಅವನಿಗೆ ಸಾವಿನ ಭಯವೂ ಇಲ್ಲ. ಅವನೊಬ್ಬ ಸಮರ್ಥ ಈಜುಗಾರನಿದ್ದಂತೆ. ಈಜು ಬರದವರಿಗೆ ನೀರಿನ ಆಳದ ಭಯ. ಚೆನ್ನಾಗಿ ಈಜು ಬಂದವನಿಗೆ ಆಳದ ಚಿಂತೆ ಏಕೆ? ಅವನು ನೀರಮೇಲೆ ಮೀನಿನಂತೆ ತೇಲಿ ಹೋಗುವವನು. ಕಗ್ಗದ ಮೂರನೆಯ ಸಾಲು ಈಶಾವಾಸ್ಯ ಉಪನಿಷತ್ತಿನ ಐದನೆಯ ಮಂತ್ರಕ್ಕೆ ವ್ಯಾಖ್ಯೆಯಂತಿದೆ.

ತದೇಜತಿ ತನ್ನೆಂಜತಿ ತದ್ದೂರೆ ತದ್ವಂತಿಕೆ |
ತದರಂತಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತ: ||


“ಅದು ಚಲಿಸುತ್ತದೆ, ಅದು ಚಲನ ರಹಿತವಾಗಿದೆ, ಅದು ದೂರದಲ್ಲಿದೆ, ಹತ್ತಿರದಲ್ಲಿದೆ. ಅದು ಎಲ್ಲರ ಒಳಗೂ, ಹೊರಗೂ ಇದೆ” ಬ್ರಹ್ಮವಸ್ತು ಅಜ್ಞಾನಿಗಳಿಂದ ದೂರವಿದೆ ಮತ್ತು ಜ್ಞಾನಿಗಳ ಹತ್ತಿರವೇ ಇದೆ. ನಿಜವಾದ ಜ್ಞಾನಿಗೆ ಕಾಶಿ ಅಂತರದಲ್ಲಿ ದೂರವಿದ್ದರೂ, ಆಂತರ್ಯದಲ್ಲಿ ಹೃದಯಸ್ಥವಾಗಿದೆ. ಅದಕ್ಕೆ ಅಂಥ ಮಹಾಜ್ಞಾನಿಯ ನಡಿಗೆ ಸ್ವಚ್ಛಂದವಾದದ್ದು, ಅನುಕರಣೆ ಮಾಡದ್ದು. ಅದು ಸಲಗದ ದಾರಿ. ಬೇರೆಯವರಿಗೆ ದಾರಿ ಬೇಕು. ಸಲಗಕ್ಕೆ ಹೋದದ್ದೇ ದಾರಿ. ಅದು ತನ್ನದೇ ದಾರಿಯನ್ನು ಸೃಷ್ಟಿಮಾಡಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.