ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಮಾದ್ರಿದೇವಿಯ ಸಿದ್ಧತೆ

ಡಾ. ಗುರುರಾಜ ಕರಜಗಿ
Published 26 ಸೆಪ್ಟೆಂಬರ್ 2021, 19:30 IST
Last Updated 26 ಸೆಪ್ಟೆಂಬರ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ವೆಸ್ಸಂತರ ಬೋಧಿಸತ್ವ ರಾಜ್ಯಾಭಿಷೇಕವನ್ನು ಮಾಡಿಸಿಕೊಳ್ಳುತ್ತಿರುವಾಗ ಮಾವುತರು ಪಟ್ಟದಾನೆಯನ್ನು ಅಲಂಕರಿಸಿ ಕರೆದು ತಂದರು. ಆತ ಖಡ್ಗರತ್ನವನ್ನು ಸೊಂಟಕ್ಕೆ ಕಟ್ಟಿಕೊಂಡು ಗಜರತ್ನವನ್ನೇರಿದ. ಆ ಆನೆ ಕೂಡ ಅವನು ಹುಟ್ಟಿದ ದಿನವೇ ಜನ್ಮತಾಳಿದ್ದು. ಅದೇ ಸಮಯಕ್ಕೆ ಜೊತೆಯಲ್ಲಿ ಜನಿಸಿದ್ದ ಅರವತ್ತು ಸಾವಿರ ಅಮಾತ್ಯರು ಅವನನ್ನು ಸುತ್ತುವರೆದು ನಿಂತರು. ಆಗ ಸಿವಿಕನ್ಯೆಯರು ಬಂದು ಮಾದ್ರಿದೇವಿಗೆ ಅಭ್ಯಂಜನ ಸ್ನಾನ ಮಾಡಿಸಿ, ಅಭಿಷೇಕ ಮಾಡಿದರು. ‘ಜಾಲಿಕುಮಾರ ಮತ್ತು ಕೃಷ್ಣಾಜಿನರನ್ನು, ಅವರೊಂದಿಗೆ ನಿನ್ನನ್ನು ವೆಸ್ಸಂತರ ರಕ್ಷಿಸಲಿ ಮತ್ತು ಸಂಜಯ ಮಹಾರಾಜ ತಮ್ಮೆಲ್ಲರನ್ನು ರಕ್ಷಿಸಲಿ’ ಎಂದು ಆಶೀರ್ವಚನ ಹೇಳಿದರು. ಈ ಪ್ರತಿಷ್ಠೆಯನ್ನು
ಪಡೆದು ಮಾದ್ರಿದೇವಿ ಪ್ರಸನ್ನಳಾದಳು. ತಾವು ಇದುವರೆಗೂ ಪಟ್ಟ ಕಷ್ಟಗಳನ್ನು ನೆನೆದು, ಅವು ಮುಗಿದು ವಲ್ಲ ಎಂದು ಮತ್ತಷ್ಟು ಸಂತೋಷಪಟ್ಟಳು. ಮಕ್ಕಳಿಗೆ ಹೇಳಿದಳು, ‘ಮಕ್ಕಳೇ ನಿಮ್ಮನ್ನು ಕಳೆದುಕೊಂಡಾಗಿನಿಂದ. ಒಂದೇ ಸಾರಿ ಊಟ ಮಾಡುವುದು ಮತ್ತು ನೆಲದ ಮೇಲೆ ಮಲಗುವುದು ನನ್ನ ವೃತವಾಗಿತ್ತು. ಮಕ್ಕಳೇ ನಿಮ್ಮನ್ನು ಮತ್ತೆ ಪಡೆದು ನನ್ನ ವೃತ ಸಂಪೂರ್ಣವಾಯಿತು. ನಿಮ್ಮ ತಂದೆ ತಾಯಿಗಳಿಬ್ಬರೂ ಸಂಪಾದಿಸಿದ ಪುಣ್ಯ ನಿಮ್ಮನ್ನು ರಕ್ಷಿಸಲಿ. ಸಂಜಯ ಮಹಾರಾಜ ನಮ್ಮೆಲ್ಲರನ್ನು ಕಾಪಾಡಲಿ, ನಿಮ್ಮ ತಂದೆ ತಪಸ್ಸಿನಿಂದ ಸಂಪಾದಿಸಿರುವ ಪುಣ್ಯದ ಪ್ರತಾಪ ನಿಮ್ಮನ್ನು ಅಮರರನ್ನಾಗಿಸಲಿ’.

ರಾಣಿ ಪುಸತಿದೇವಿ, ತನ್ನ ಸೊಸೆ ಇಂದಿನಿಂದ ಶ್ರೇಷ್ಠ ವಸ್ತ್ರ, ಆಭರಣಗಳನ್ನು ಧರಿಸಲಿ ಎಂದು ಅವುಗಳನ್ನು ಪೆಟ್ಟಿಗೆ ತುಂಬಿ ತುಂಬಿ ಕಳುಹಿಸಿದಳು. ಹತ್ತಿಬಟ್ಟೆ, ಕೌಷೇಯ ವಸ್ತ್ರ, ಖೋಮಕ ಮತ್ತು ಉದುಂಬರ ವಸ್ತ್ರಗಳನ್ನು ಕಳುಹಿಸಿದಳು. ಅವುಗಳನ್ನು ಧರಿಸಿದ ಮಾದ್ರಿದೇವಿ ಸೌಂದರ್ಯ ದಿಂದ ಹೊಳೆಯುತ್ತಿದ್ದಳು. ತಲೆಯ ಮೇಲೆ ಧರಿಸುವ, ಹಣೆಯ ಆಭರಣ, ರತ್ನಗಳಿಂದಾದ ಕೊರಳ ಮಾಲೆಗಳು ಇವನ್ನೆಲ್ಲ ಪುಸತಿದೇವಿ ಸೊಸೆಗೆ ಕಳುಹಿಸಿದಳು. ಉಗ್ಗತ್ಥನ, ಸಿಂಗಮಕ, ಮೇಖಲೆ ಹಾಗೂ ಪಾದದಲ್ಲಿ ಧರಿಸುವ ಆಭರಣಗಳನ್ನು ಅತ್ತೆ, ಸೊಸೆಗೆ ಕಳುಹಿಸಿದಳು. ದಾರದ ಮತ್ತು ದಾರವಿಲ್ಲದ ಆಭರಣಗಳು ಹೇರಳವಾಗಿದ್ದವು. ಅವುಗಳನ್ನು ಧರಿಸಿದ ಮಾದ್ರಿದೇವಿ ಸ್ವರ್ಗದ ದೇವಕನ್ನೆಯಂತೆ ಸುಶೋಭಿತಳಾದಳು. ಆಕೆ ತ್ರಯೋತ್ರಿಂಶ ಭವನದ ಅಪ್ಸರೆಯಂತೆ ಹೊಳೆಯುತ್ತಿದ್ದಳು. ಸ್ವರ್ಗದ ಅತ್ಯಂತ ಸುಂದರವಾದ ತೋಟದಲ್ಲಿ ಬೆಳೆದುನಿಂತ, ರಸತುಂಬಿದ ಬಂಗಾರದ ಪುಟ್ಟ ಬಾಳೆಹಣ್ಣು, ಗಾಳಿಯಲ್ಲಿ ತೊನೆದಂತೆ ತೋರುವ ತುಟಿಗಳುಳ್ಳ ಮಾದ್ರಿದೇವಿ ದೇವತೆಯಂತೆ ತೋರುತ್ತಿದ್ದಳು.

ಚೆನ್ನಾಗಿ ಮಾಗಿದ ನ್ಯಗ್ರೋಧಕ್ಕೆ ಸಮಾನವಾದ ತುಟಿಗಳನ್ನು ಹೊಂದಿದ್ದ ರಾಜಪುತ್ರಿ ಅಪಾರ ಸೌಂದರ್ಯದಿಂದ ಹೊಳೆಯುತ್ತಿದ್ದಳು. ನಂತರ ಮಾದ್ರಿದೇವಿಗೆ, ಅಪಾರ ಶಕ್ತಿಯ ಆಯುಧಗಳ ಆಘಾತವನ್ನು ತಡೆದುಕೊಳ್ಳಬಲ್ಲ ಮತ್ತು ತೀಕ್ಷ್ಣವಾದ ಬಾಣಗಳನ್ನು ಸಹಿಸಲು ಸಮರ್ಥವಾದ, ರಥದ ಅಚ್ಚಿನಂತೆ ಬಲಿಷ್ಠವಾದ ದಂತವುಳ್ಳ, ಪ್ರೌಢವಾದ, ದೊಡ್ಡ ಆನೆಯನ್ನು ತರಲಾಯಿತು. ಆಕೆ ಆ ಆನೆಯನ್ನೇರಿದಳು. ನಂತರ ವೆಸ್ಸಂತರ ಬೋಧಿಸತ್ವ ಮತ್ತು ಮಾದ್ರಿದೇವಿಯರು ತಮ್ಮ ತಮ್ಮ ಆನೆಗಳ ಮೇಲೆ ಕುಳಿತು ಅತ್ಯಂತ ವೈಭವದಿಂದ ಮಹಾರಾಜನಿದ್ದ ಡೇರೆಯ ಬಳಿಗೆ ಬಂದರು. ಅಲ್ಲಿಯವರೆಗೆ ತನ್ನ ಹನ್ನೆರಡು ಅಕ್ಷೋಹಿಣಿ ಸೇನೆಯೊಂದಿಗೆ, ವನಕ್ರೀಡೆಯನ್ನು ಅನುಭವಿಸಿದ ರಾಜ ಅವರಿಗಾಗಿ ಕಾದಿದ್ದ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.