ADVERTISEMENT

ಗುರುರಾಜ ಕರಜಗಿ ಅಂಕಣ| ಕುಮಾರನ ಸೂಕ್ಷ್ಮಜ್ಞತೆಯ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 15:11 IST
Last Updated 8 ಫೆಬ್ರುವರಿ 2021, 15:11 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಅಮಾತ್ಯರು ಯೋಜಿಸಿದ ಎರಡು ಪರೀಕ್ಷೆಗಳಲ್ಲೂ ಅನಾಯಾಸವಾಗಿ ತೇರ್ಗಡೆಯಾದ ಮಹೋಷಧಕುಮಾರನನ್ನು ಮತ್ತೂ ಪರೀಕ್ಷಿಸಲು ತೀರ್ಮಾನಿಸಿದರು. ಅದಕ್ಕೆ ಸೂಕ್ತವಾದ ಘಟನೆಗಳೂ ನಡೆದವು.

ದಕ್ಷಿಣ ನಿಗಮದ ನಿವಾಸಿಯಾದ ಬಡಹೆಂಗಸೊಬ್ಬಳು ಮಹೋಷಧಕುಮಾರ ಕಟ್ಟಿಸಿದ ಪುಷ್ಕರಿಣಿಯಲ್ಲಿ ಸ್ನಾನ ಮಾಡಲು ಇಳಿದಳು. ಆಕೆಯ ಕೊರಳಲ್ಲಿ ಕಡಿಮೆ ಬೆಲೆಯ ಆದರೆ ತುಂಬ ಆಕರ್ಷಕವಾದ, ನಾನಾ ಬಣ್ಣಗಳ ದಾರವನ್ನು ಗಂಟು ಹಾಕಿ ಮಾಡಿದ ದಾರದ ಕಂಠೀಹಾರವಿತ್ತು. ಅದು ಹಾಳಾಗಬಾರದೆಂದು ಆಕೆ ಅದನ್ನು ತೆಗೆದು ಉಳಿದ ಬಟ್ಟೆಗಳೊಂದಿಗೆ ಕಟ್ಟೆಯ ಮೇಲೆ ಇಟ್ಟಳು. ಆ ಸುಂದರವಾದ ಕಂಠೀಹಾರದಿಂದ ಆಕರ್ಷಿತಳಾದ ಮತ್ತೊಬ್ಬ ಮಹಿಳೆ ಅಲ್ಲಿಗೆ ಬಂದು, ‘ಕಂಠೀಹಾರ ಎಷ್ಟು ಚೆನ್ನಾಗಿದೆ! ಇದನ್ನು ಮಾಡಿಸಲು ಎಷ್ಟು ಖರ್ಚಾಯಿತು?’ ಎಂದು ಕೇಳುತ್ತ ಅದನ್ನು ತನ್ನ ಕೊರಳಿಗೆ ಹಾಕಿಕೊಂಡಳು. ‘ಅದನ್ನೇಕೆ ಕೊರಳಿಗೆ ಹಾಕಿಕೊಂಡಿರಿ? ಅದು ನನ್ನದು’ ಎಂದು ಆ ಬಡಹೆಂಗಸು ಪುಷ್ಕರಿಣಿಯಿಂದ ಹೊರಗೆ ಬಂದಳು. ಮತ್ತೊಬ್ಬ ಹೆಂಗಸು ಕಂಠೀಹಾರವನ್ನು ಹಾಕಿಕೊಂಡು, ಇದು ನನ್ನದೇ ಎನ್ನುತ್ತ ಹೊರಟೇ ಬಿಟ್ಟಳು.

ಇಬ್ಬರು ಮಹಿಳೆಯರ ನಡುವೆ ಜಗಳ ಪ್ರಾರಂಭವಾಯಿತು. ಇಬ್ಬರೂ ಅದು ತಮ್ಮದೇ ಎಂದು ವಾದಿಸುತ್ತಿದ್ದರು. ಸುತ್ತಲೂ ಜನ ಸೇರಿದರು. ಗಲಾಟೆಯನ್ನು ಕೇಳಿ ಮಹೋಷಧಕುಮಾರ ಅಲ್ಲಿಗೆ ಬಂದ. ಏನು ತಕರಾರು ಎಂದು ಕೇಳಿದ. ಇಬ್ಬರೂ ಕಂಠೀಹಾರ ತಮ್ಮದೇ ಎಂದು ಕೂಗಾಡುತ್ತಿದ್ದರು. ಆಗ ಕುಮಾರ ಎಲ್ಲರನ್ನು ಸುಮ್ಮನಿರಿಸಿ ಆ ಕಳ್ಳಿಯನ್ನು ಕೇಳಿದ, ‘ನೀನು ಕಂಠೀಹಾರವನ್ನು ಹಾಕಿಕೊಳ್ಳುವುದಕ್ಕಿಂತ ಮೊದಲು ದೇಹಕ್ಕೆ ಸುಗಂಧವನ್ನು ಹಾಕಿಕೊಳ್ಳುತ್ತೀಯಾ?’. ಆಕೆ, ‘ಹೌದು, ನಾನು ನಿತ್ಯ ಸರ್ವಸಂಹಾರಕ ಸುಗಂಧವನ್ನು ಹಾಕಿಕೊಂಡ ಮೇಲೆಯೇ ಕಂಠೀಹಾರವನ್ನು ಧರಿಸುತ್ತೇನೆ’ ಎಂದಳು. ಸರ್ವಸಂಹಾರಕ ಸುಗಂಧ ಅನೇಕ ಉತ್ತಮ ಪರಿಮಳಗಳ ಮಿಶ್ರಣ. ನಂತರ ಕುಮಾರ ಬಡಹೆಂಗಸಿಗೆ ಅದೇ ಪ್ರಶ್ನೆ ಕೇಳಿದ. ಆಕೆ, ‘ಸ್ವಾಮಿ, ನಾವು ಬಡವರು, ನಮಗೆಲ್ಲಿ ಸುಗಂಧ ದ್ರವ್ಯ ದೊರೆತೀತು? ನಾನು ಕೇವಲ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳುತ್ತೇನೆ’ ಎಂದಳು. ಕುಮಾರ ಒಂದು ನೀರಿನ ಚೆಂಬು ತರಿಸಿ ಅದರಲ್ಲಿ ಕಂಠೀಹಾರವನ್ನು ಮುಳುಗಿಸಿ, ಸುಗಂಧಕಾರರನ್ನು ಕರೆಯಿಸಿ, ‘ನೀರಿಗೆ ಯಾವ ವಾಸನೆ ಇದೆ ಎಂಬುದನ್ನು ನೋಡಿ’ ಎಂದು ಕೇಳಿದ. ಅವರು, ‘ನೀರಿಗೆ ಸಾಸಿವೆ ಎಣ್ಣೆಯ ವಾಸನೆ ಮಾತ್ರವಿದೆ’ ಎಂದರು.

ADVERTISEMENT

ಆಗ ಕುಮಾರ ಕಳ್ಳಿಯನ್ನು ದಬಾಯಿಸಿ ಶಿಕ್ಷೆ ಕೊಟ್ಟು ಕಳುಹಿಸಿದ.

ಮತ್ತೊಮ್ಮೆ ಅದೇ ಪುಷ್ಕರಣಿಯಲ್ಲಿ ಸ್ನಾನ ಮಾಡಲು ಬಂದ ಹತ್ತಿಯ ಹೊಲ ಕಾಯುವ ಹೆಂಗಸು ತಾನು ಚೆನ್ನಾಗಿ ನೂತು ತೆಗೆದ ದಾರದ ಉಂಡೆಯನ್ನು ಕಟ್ಟೆಯ ಮೇಲಿಟ್ಟಾಗ ಮತ್ತೊಬ್ಬ ಹೆಂಗಸು ಅದು ತನ್ನದೆಂದೇ ತೆಗೆದುಕೊಂಡಿದ್ದಳು. ಆಗಲೂ ಕುಮಾರ ಅದನ್ನು ಸೂಕ್ಷ್ಮಜ್ಞತೆಯಿಂದ ಬಗೆಹರಿಸಿದ್ದ. ಇಬ್ಬರಿಗೂ ಆತ ಕೇಳಿದ, ‘ದಾರದ ಉಂಡೆಯನ್ನು ಕಟ್ಟುವಾಗ ಒಳಗೆ ಏನು ಇಟ್ಟಿದ್ದೀರಿ?’ ಯಾಕೆಂದರೆ ಏನಾದರೂ ಒಂದನ್ನು ಇಟ್ಟೇ ದಾರವನ್ನು ಸುತ್ತುವುದು. ಹೊಲಕಾಯುವ ಹೆಂಗಸು ‘ಹುಣಿಸೆ ಬೀಜ’ ಎಂದಳು ಕಳ್ಳಿ, ‘ಹತ್ತೀಕಾಳು’ ಎಂದಳು. ಉಂಡೆ ಬಿಚ್ಚಿ ನೋಡಿದಾಗ ಒಳಗಿದ್ದ ಹುಣಿಸೇ ಬೀಜ ಸತ್ಯವನ್ನು ತಿಳಿಸಿತ್ತು. ಆಗ ಕಳ್ಳಿಗೆ ಶಿಕ್ಷೆ ನೀಡಿದ.

ಹೀಗೆ ಪ್ರತಿಯೊಂದು ಪರೀಕ್ಷೆಯಲ್ಲೂ ಕುಮಾರ ವಿಜಯಿಯಾಗುತ್ತ ಬಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.