ADVERTISEMENT

ಬೆರಗಿನ ಬೆಳಕು: ಉದಾತ್ತತೆಯ ಹೋರಾಟ

ಡಾ. ಗುರುರಾಜ ಕರಜಗಿ
Published 1 ಮಾರ್ಚ್ 2022, 17:07 IST
Last Updated 1 ಮಾರ್ಚ್ 2022, 17:07 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹೋರು ಧೀರತೆಯಿಂದ, ಮೊಂಡುತನದಿಂ ಬೇಡ |
ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ||
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |
ಹೋರುದಾತ್ತತೆಯಿಂದ – ಮಂಕುತಿಮ್ಮ || 574 ||

ಪದ-ಅರ್ಥ: ಹೋರು=ಹೋರಾಡು, ಮೇಳನವೆ=ಸೇರುವಿಕೆಯೆ, ಹೋರುದಾತ್ತತೆಯಿಂದ=ಹೋರು+ಉದಾತ್ತತೆಯಿಂದ (ಶ್ರೇಷ್ಠತೆಯಿಂದ).

ವಾಚ್ಯಾರ್ಥ: ಧೀರತೆಯಿಂದ ಹೋರಾಡು, ಮೊಂಡತನದಿಂದ ಬೇಡ. ವೈರತ್ವ, ದ್ವೇಷ ಬೇಡ. ಯಾವಾಗಲೂ ಹೋರಾಟದಲ್ಲಿ ಹಿರಿದಾದ ನಿಯಮವಿರಲಿ. ವೈರಾಗ್ಯ ಮತ್ತು ಕರುಣೆಗಳ ಸಮ್ಮೇಳನವೆ ಧೀರತನ. ಶ್ರೇಷ್ಠತೆಯಿಂದ ಹೋರಾಡು.

ADVERTISEMENT

ವಿವರಣೆ: ಮಹಾಭಾರತದ ಕಥೆ, ನಿತ್ಯ ಜೀವನದ ಬದುಕಿಗೆ ಒಂದು ಅದ್ಭುತ ಪಾಠ. ಅದರಲ್ಲಿಯ ಒಂದೊಂದು ಪ್ರಸಂಗ ನಮಗೆ ಮಾರ್ಗದರ್ಶಿಯಾಗಬಲ್ಲವು. ಅಲ್ಲಿ ಅನೇಕ ಪಾತ್ರಗಳು ಹೋರಾಟ ಮಾಡಿದವುಗಳೇ. ಭೀಷ್ಮರ ಹೋರಾಟಕ್ಕೊಂದು ಮುಖ, ದ್ರೋಣರ, ಅಶ್ವತ್ಥಾಮರ ಹೋರಾಟಕ್ಕೆ ಇನ್ನೊಂದು ಮುಖ. ನನಗೆ ಅಲ್ಲಿ ಮುಖ್ಯವಾಗಿ ಹೋರಾಟದ ಎರಡು ಮುಖಗಳು ಕಾಣುತ್ತವೆ. ಒಂದು ಮಾದರಿ ದುರ್ಯೋಧನನದು. ಅವನಿಗೆ ಛಲ, ಎಲ್ಲವೂ ತನಗೇ ದಕ್ಕಬೇಕೆಂಬ ಹಟ. ದಾಯಾದಿಗಳಿಗೆ ಅನ್ಯಾಯವಾದರೂ ಸರಿ, ತಾನು ಎಲ್ಲವನ್ನೂ ಪಡೆಯಬೇಕೆಂಬ ಅದಮ್ಯ ದುರಾಸೆ. ಗೆಲ್ಲಲು ಆತ ಯಾವ ಮಾರ್ಗವನ್ನಾದರೂ ಹಿಡಿಯಲು, ಯಾರನ್ನಾದರೂ ಒಲಿಸಿಕೊಳ್ಳಲು ಸಿದ್ಧ. ಅವನದು ಅಸಾಧ್ಯ ಮೊಂಡತನ. ಆತ ತಾತ ಭೀಷ್ಮರನ್ನು, ತಂದೆ-ತಾಯಿಯರನ್ನು, ಗುರುಗಳನ್ನು ಎದುರು ಹಾಕಿಕೊಂಡು ತನ್ನ ಛಲಕ್ಕೋಸ್ಕರವೇ ಹೋರಾಡುವಂಥವನು. ಅದು ಮೊಂಡುತನದ ಹೋರಾಟ. ಅದರಲ್ಲಿ ಪಾಂಡವರ ಬಗ್ಗೆ ಅಸಾಧ್ಯ ವೈರವಿದೆ, ದ್ವೇಷವಿದೆ.

ಇನ್ನೊಂದು ಮುಖ ಕೃಷ್ಣನದು. ಅವನಿಗೆ ದುರ್ಯೋಧನ ಮತ್ತು ಧರ್ಮರಾಜ ಇಬ್ಬರೂ ಸಂಬಂಧಿಗಳೇ. ಹಾಗೆ ನೋಡಿದರೆ ದುರ್ಯೋಧನನೊಡನೆ ಸಂಬಂಧ ಹತ್ತಿರದ್ದು. ಕೃಷ್ಣನ ಮಗ ಸಾಂಬ, ದುರ್ಯೋಧನನ ಮಗಳು ಲಕ್ಷಣೆಯನ್ನು ಮದುವೆಯಾಗಿದ್ದ. ಆದ್ದರಿಂದ ಅವರಿಬ್ಬರೂ ಬೀಗರು. ಕೃಷ್ಣ ಆಯುಧ ಹಿಡಿದು ಯುದ್ಧ ಮಾಡದೆ ಹೋದರೂ, ಒಂದು ರೀತಿಯಲ್ಲಿ ಆತನೇ ಯುದ್ಧಕ್ಕೆ ಕಾರಣ. ತಾನು ಯುದ್ಧ ಮಾಡುವುದಿಲ್ಲವೆಂದು ಶಸ್ತ್ರ ಚೆಲ್ಲಿ ಕುಳಿತ ಪಾರ್ಥನನ್ನು ಕಲಿಮಾಡಿ ಯುದ್ಧಕ್ಕೆ ಪ್ರೇರೇಪಿಸಿದವನೇ ಅವನು. ಆದರೆ ಅವನ ಹೋರಾಟದಲ್ಲಿ ವೈರತ್ವವಿಲ್ಲ. ದ್ವೇಷವಿಲ್ಲ. ಅವನ ಒಟ್ಟು ಧ್ಯೇಯ ಧರ್ಮರಕ್ಷಣೆ, ದುಷ್ಟ ಶಿಕ್ಷಣೆ ಮತ್ತು ನ್ಯಾಯಪಾಲನೆ. ಅವನಿಗೆ ಯಾರು ಯುದ್ಧ ಗೆದ್ದರೂ ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ, ಯಾವ ಹಾನಿಯೂ ಇಲ್ಲ. ಅವನು ಪಾಂಡವರನ್ನು ಆರಿಸಿಕೊಂಡದ್ದು ಸೋದರತ್ತೆಯ ಮಕ್ಕಳೆಂದಲ್ಲ. ಅವರು ಧರ್ಮಿಷ್ಠರು ಮತ್ತು ಸತ್ಯವಂತರು ಎಂದು. ಅವರ ರಕ್ಷಣೆ ಮತ್ತು ಜಯ, ಇದೇ ಹಿರಿದಾದ ನಿಯಮ ಕೃಷ್ಣನಿಗೆ. ಯುದ್ಧದ ಪರಿಣಾಮದ ಬಗ್ಗೆ ಅವನಿಗೆ ವೈರಾಗ್ಯವಿದೆ ಮತ್ತು ಪ್ರತಿಯೊಂದು ಜೀವದ ಬಗ್ಗೆ ಕರುಣೆ ಇದೆ. ಧೀರತನವೆಂದರೆ ಕೇವಲ ಖಡ್ಗದ ಶೌರ್ಯತನವಲ್ಲ. ಅದು ವೈರಾಗ್ಯ ಮತ್ತು ಕಾರುಣ್ಯಗಳ ಸೇರುವಿಕೆ.

ಅದಕ್ಕೆಂದೇ ಶ್ರೀ ಕೃಷ್ಣ ಜಗದೋದ್ಧಾರಕನಾದ, ದುರ್ಯೋಧನ ಖಳನಾಯಕನಾಗಿ ಉಳಿದ. ಕಗ್ಗ ಈ ವಿಷಯವನ್ನು ಒತ್ತಿ ಹೇಳುತ್ತದೆ. ಹೋರಾಟದಲ್ಲಿ ಮೊಂಡುತನ ಬೇಡ, ವೈರತ್ವ, ದ್ವೇಷಗಳು ಬೇಡ. ಅದರಲ್ಲೊಂದು ಹಿರಿದಾದ ಧ್ಯೇಯವಿರಲಿ. ವೈರಾಗ್ಯ ಮತ್ತು ಕಾರುಣ್ಯಗಳು ಮೇಳೈಸಿದಾಗ ಧೀರತನ ಪ್ರಕಟವಾಗುತ್ತದೆ. ಪ್ರತಿಯೊಂದು ಹೋರಾಟದಲ್ಲಿ ಒಂದು ಶ್ರೇಷ್ಠತೆ ಇರಲಿ. ಇದು ಸಾಧನೆಗೆ ಮಾರ್ಗದರ್ಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.