ADVERTISEMENT

ಬೆರಗಿನ ಬೆಳಕು: ಗುಣ ನಿರ್ಣಯ

ಡಾ. ಗುರುರಾಜ ಕರಜಗಿ
Published 24 ಸೆಪ್ಟೆಂಬರ್ 2020, 19:30 IST
Last Updated 24 ಸೆಪ್ಟೆಂಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಒರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ ? |
ನೂರ್ವರಣಗಿಹರು ನಿನ್ನಾತ್ಮಕೋಶದಲಿ ||
ಪೂರ್ವಿಕರು, ಜತೆಯವರು, ಬಂಧುಸಖಶತ್ರುಗಳು |
ಸರ್ವರಿಂ ನಿನ್ನ ಗುಣ – ಮಂಕುತಿಮ್ಮ || 338 ||

ಪದ-ಅರ್ಥ: ನೀನೆಂತು=ನೀನು+ಎಂತು, ನೂರ್ವರಣಗಿಹರು=ನೂರ್ವರು+ಅಣಗಿಹರು(ಅಡಗಿದ್ದಾರೆ), ನಿನ್ನಾತ್ಮಕೋಶದಲಿ=ನಿನ್ನ+
ಆತ್ಮ+ಕೋಶದಲಿ, ಸರ್ವರಿಂ=ಎಲ್ಲರಿಂದ.

ವಾಚ್ಯಾರ್ಥ: ಜಗತ್ತಿನಲ್ಲಿ ನಾನು ಒಬ್ಬನೇ ಎಂದು ಏಕೆ ತಿಳಿಯುತ್ತೀ? ನಿನ್ನ ಆತ್ಮಕೋಶದಲ್ಲಿ ನೂರಾರು ಜನ ಅಡಗಿದ್ದಾರೆ. ನಿನ್ನ ಪೂರ್ವಿಕರು, ಜೊತೆಗಾರರು, ಬಂಧುಗಳು, ಸ್ನೇಹಿತರು ಮತ್ತು ಶತ್ರುಗಳು. ಇವರೆಲ್ಲ ಸೇರಿ ನಿನ್ನ ಗುಣ ನಿರ್ಮಾಣವಾಗಿದೆ.

ADVERTISEMENT

ವಿವರಣೆ: ಮನುಷ್ಯನ ವ್ಯಕ್ತಿತ್ವವೆನ್ನುವುದು ಅತ್ಯಂತ ಸಂಕೀರ್ಣವಾದದ್ದು. ಅದು ಒಬ್ಬ ವ್ಯಕ್ತಿಯ ಭಾವನೆಗಳ, ಮನೋಧರ್ಮದ, ವರ್ತನೆಗಳ ನಿರ್ದಿಷ್ಟ ಸಂಯೋಜನೆ. ಈ ವ್ಯಕ್ತಿತ್ವದ ವಿಕಾಸ, ಹುಟ್ಟುವ ಮೊದಲೇ ಪ್ರಾರಂಭವಾಗಿ, ಮುಂದೆ ಹುಟ್ಟಿದ ಮೇಲೆ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಬೆಳೆಯುತ್ತ ಬರುತ್ತದೆ. ಅದನ್ನು ನಿರ್ಮಿಸುವುವು ಅನೇಕ ಅಂಶಗಳು. ಅದರಲ್ಲಿ ಅನುವಂಶೀಯತೆಯ ಪ್ರಭಾವವಿದೆ. ‘ನೋಡಿ ಅವನನ್ನು, ರೂಪ ಥೇಟ್ ಅಪ್ಪನದೇ ಆದರೆ ಸ್ವಭಾವ ಮಾತ್ರ ಅಮ್ಮನದೇ’ ಎಂದು ಉದ್ಗಾರವೆತ್ತಿದ್ದನ್ನು ಕೇಳಿದ್ದೇವೆ. ಕೆಲವು ತಂದೆ-ಮಕ್ಕಳ ಧ್ವನಿ ಒಂದೇ ರೀತಿ. ತಂದೆಗೆ ತಲೆ ತುಂಬ ಕೂದಲು ಆದರೆ ಮಗನದು ಬಕ್ಕ ತಲೆ ಯಾಕೆಂದರೆ ಅಜ್ಜನ ತಲೆ ಬೋಳಾಗಿತ್ತು. ಅಂದರೆ ವಂಶವಾಹಿನಿ ಕೇವಲ ತಂದೆ-ತಾಯಿಯರಿಂದ ಮಾತ್ರವಲ್ಲ, ಅದಕ್ಕೂ ಹಿಂದಿನ ತಲೆಮಾರಿನಿಂದಲೇ ಬಂದೀತು.

ನಂತರ ಮಗು ಹುಟ್ಟಿದ ಮೇಲೆ ಅದು ಬೆಳೆದ ಪರಿಸರ ಬಹುಮುಖ್ಯ ಪಾತ್ರ ವಹಿಸುತ್ತದೆ. ತಂದೆ-ತಾಯಿಯರ ಲಾಲನೆ-ಪಾಲನೆಯಲ್ಲಿ ಅತಿ ಮುದ್ದು ಆಗಿದ್ದರೆ ಅಥವಾ ಅತಿ ಶಿಕ್ಷೆ ಅಥವಾ ತಿರಸ್ಕಾರದಲ್ಲೇ ಬೆಳೆದರೆ ವ್ಯಕ್ತಿ ಬೆಳೆದಾಗ ಅವನ ಸ್ವಭಾವವೇ ಬೇರೆಯಾಗುತ್ತದೆ. ಅದರೊಂದಿಗೆ ಮನೆಮಂದಿಯ ನೈತಿಕ ಮೌಲ್ಯಗಳು ವ್ಯಕ್ತಿಯ ಬದುಕನ್ನು ರೂಪಿಸುವುದರಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ. ಮನೆಯ ಪರಿಸರದಲ್ಲಿ ಎಲ್ಲರೂ ನೀತಿ ಪಾಲಿಸುವವರಿದ್ದರೆ ಅದರ ಪರಿಣಾಮ ಮಗುವಿನ ಮೇಲೆ ಆಗುತ್ತದೆ. ಅದಕ್ಕೆ ವಿರುದ್ಧವಾಗಿ ಅನೈತಿಕ ಅಥವಾ ಅನ್ಯಾಯದ ಕಾರ್ಯಗಳನ್ನು ಗಮನಿಸುತ್ತ ಬೆಳೆದರೆ ಮನಸ್ಸು ಅಂಥ ಕಾರ್ಯಗಳಿಗೇ ಅನುವಾಗುತ್ತದೆ.

ನಮ್ಮ ಜೊತೆಗಾರರೂ ಮನಸ್ಸನ್ನು ನಿರ್ಮಿಸುತ್ತಾರೆ. ‘ಸಂಗತಿ ಸಂಗ ದೋಷ’ ಎನ್ನುತ್ತಾರೆ. ಜೊತೆಗಾರರು ಧನಾತ್ಮಕವಾಗಿದ್ದರೆ ನಮ್ಮ ಮನಸ್ಸೂ ಹಾಗೆಯೇ ಆಗುತ್ತದೆ. ‘ಯಾರು ಕಲಿಸಿದರೋ ನಿನಗೆ ಚಟ?’ ಎಂದು ಹಿರಿಯರು ಕೇಳಿಲ್ಲವೆ? ಸ್ನೇಹಿತರು ಒಳ್ಳೆಯ ಗುಣವನ್ನು ಕಲಿಸಬಹುದು ಅಥವಾ ಅವರಿಂದ ಕೆಟ್ಟದ್ದನ್ನೂ ಕಲಿಯಬಹುದು. ಬಂಧುಗಳೂ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತಾರೆ. ನಮ್ಮ ಶತ್ರುಗಳೂ ನಮ್ಮ ಮೇಲೆ ಪರಿಣಾಮ ಬೀರುತ್ತಾರೆ. ಅವರೆಲ್ಲರೊಡನೆಯ ಸಂಬಂಧಗಳು ನಮ್ಮ ಗುಣಗಳನ್ನು ನಿರ್ಧರಿಸುತ್ತವೆ. ಅದಕ್ಕಾಗಿ ಕಗ್ಗ ಹೇಳುತ್ತದೆ, ‘ನಿನ್ನಾತ್ಮಕೋಶದಲ್ಲಿ ನೂರ್ವರು ಅಣಗಿಹರು’. ಆ ನೂರಾರು ಜನರ, ಪ್ರಭಾವದಿಂದ ನನ್ನ ಗುಣ, ಆದ್ದರಿಂದ ಜಗತ್ತಿನಲ್ಲಿ ನಾನು ಒಬ್ಬನೇ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.