ADVERTISEMENT

ಬೆರಗಿನ ಬೆಳಕು | ದೃಷ್ಟಿವಿಶೇಷ

ಡಾ. ಗುರುರಾಜ ಕರಜಗಿ
Published 10 ಜೂನ್ 2020, 19:30 IST
Last Updated 10 ಜೂನ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ |
ಬಿಡಿಗಾಸು ಹೂವಳಗೆ – ಮಂಕುತಿಮ್ಮ || 300 ||

ಪದ-ಅರ್ಥ: ಪ್ರಕೃತಿಸಖ=ನಿಸರ್ಗಪ್ರೇಮಿ, ಹೂವಳ=ಹೂವು ಮಾರುವವ

ವಾಚ್ಯಾರ್ಥ: ಗಿಡದಲ್ಲಿ ಅರಳಿರುವ ಹೂವು ನಿಸರ್ಗಪ್ರೇಮಿಗೆ ಚೆಂದ. ಮಡದಿ ಮುಡಿದಿರುವ ಹೂವು ಯುವಕನಿಗೆ ತುಂಬ ಸಂತೋಷ ನೀಡುತ್ತದೆ. ಅದೇ ಹೂವು ಗುಡಿಯಲ್ಲಿ ಪ್ರಸಾದವೆಂದು ದೊರೆತರೆ ದೈವಭಕ್ತನಿಗೆ ತೃಪ್ತಿ. ಆದರೆ ಹೂವು ಮಾರುವವನಿಗೆ ಮಾರಿಗೆ ಅಷ್ಟು ದುಡ್ಡು.

ADVERTISEMENT

ವಿವರಣೆ: ಅದೇ ತಾನೆ ಮದುವೆ ಮುಗಿದಿದೆ. ಅಂದೇ ಸಾಯಂಕಾಲ ಮಗಳನ್ನು ತನ್ನ ಮನೆಯಿಂದ ಕಳುಹಿಸಬೇಕು. ಗಂಡಿನವರೆಲ್ಲ ಬಂದು ಸಿದ್ಧವಾಗಿದ್ದಾರೆ. ಆಗ ಹುಡುಗಿಯ ತಂದೆ ಒಂದು ಸಣ್ಣ ನಾಟಕದ ಪ್ರದರ್ಶನವನ್ನು ಆಯೋಜಿಸಿದ್ದರು. ಅದೊಂದು ಸಂತೋಷಕೂಟವಲ್ಲವೆ? ಹೆಣ್ಣು ಗಂಡಿನವರೆಲ್ಲ ಸಜ್ಜಾಗಿ ಕುಳಿತರು. ನಾಟಕ ಪ್ರಾರಂಭವಾಯಿತು. ಪ್ರಸಂಗ, ಶಕುಂತಲೆ ಕಣ್ವರ ಆಶ್ರಮವನ್ನು ಬಿಟ್ಟು ದುಶ್ಯಂತನೆಡೆಗೆ ಹೊರಡುವುದು. ನಟರು ತುಂಬ ನುರಿತವರು, ಭಾವವನ್ನು ತುಂಬ ಚೆಂದವಾಗಿ ಪ್ರಚುರಗೊಳಿಸುವವರು. ಆಶ್ರಮವನ್ನು ಬಿಟ್ಟು ತೆರಳುವ ಶಕುಂತಲೆಯ ದುಃಖ ಕಣ್ಣೀರಾಗಿ ಹರಿದಿದೆ. ಆಕೆಯ ಸಖಿಯರು ಕಂಗೆಟ್ಟಿದ್ದಾರೆ. ಪಶು, ಪಕ್ಷಿಗಳು ಮೂಕವಾಗಿ ನಿಂತಿವೆ. ಮಹರ್ಷಿಗಳಾದರೂ, ನಿರ್ಮಮತೆಯನ್ನು ರೂಢಿಸಿಕೊಂಡಿದ್ದರೂ ತಾವು ಸಾಕಿದ ಶಕುಂತಲೆ ಮೋಹದ ಕಂಠಾಭರಣವಾಗಿ ಅವರ ಕತ್ತಿಗೆ ನೇತು ಬಿದ್ದಿದ್ದಾಳೆ. ಕಣ್ವರ ದುಃಖದ ಕಟ್ಟೆ ಒಡೆದು, ಮಾತು ಮೂಕವಾಗಿ ಕಣ್ಣುಗಳು ಕಾರಂಜಿಗಳಾಗಿವೆ.

ಈ ಸನ್ನಿವೇಶವನ್ನು ನೋಡುತ್ತಿದ್ದ ಹುಡುಗಿಯ ತಾಯಿ-ತಂದೆಯರು, ಅಕ್ಕ, ತಂಗಿ, ಬಳಗದವರು ದುಃಖಪಡುತ್ತಿದ್ದಾರೆ. ಮದುಮಗ ಹೊಸಹೆಂಡತಿಯನ್ನು ಕಣ್ಣಂಚಿನಲ್ಲಿಯೇ ನೋಡುತ್ತ ತುಟಿಯಲ್ಲಿಯೇ ನಗುತ್ತಿದ್ದಾನೆ. ಇನ್ನೂ ಸ್ವಲ್ಪವೇ ಸಮಯದಲ್ಲಿ ಹುಡುಗಿ ತನ್ನ ಮನೆ ಸೇರುತ್ತಾಳೆ ಎಂಬ ಸಂಭ್ರಮ ನೆಲೆಯಾಗಿದೆ. ಅತ್ತೆ ಸೊಸೆಯನ್ನು ಕೊಂಚ ದೀರ್ಘವಾಗಿಯೇ ಗಮನಿಸುತ್ತಾರೆ. ನೋಡುವುದಕ್ಕೆ ಲಕ್ಷಣವಾಗಿದ್ದಾಳೆ. ಮುಂದೆ ಹೇಗೋ? ಮನೆಯಲ್ಲಿ ಮುಂದೆ ಶಾಂತಿಯೋ, ಪಾಣಿಪತ್ ಕಾಳಗವೋ? ಮಾವನಿಗೆ ಸಂತೋಷ. ಮನೆಗೆ ಒಬ್ಬ ಹೆಣ್ಣುಮಗಳು ಬಂದಳು. ಮಗ-ಸೊಸೆ ಸಂತೋಷವಾಗಿರುತ್ತಾರೆ. ಒಂದೇ ಸನ್ನಿವೇಶ ಬೇರೆ ಬೇರೆ ಜನರ ಮನದಲ್ಲಿ ಬೇರೆ ಬೇರೆ ಭಾವನೆಗಳನ್ನು ಪ್ರಚೋದಿಸಿದೆ. ಅಂತೆಯೇ ಒಂದೇ ವಸ್ತು ಕೂಡ ಬೇರೆ ಜನರಲ್ಲಿ ಬೇರೆ ಪ್ರೇರಣೆಗಳನ್ನು ನೀಡುತ್ತದೆ.

ಗಿಡದಲ್ಲಿ ಅರಳಿನಿಂತ ಹೂವನ್ನು ಕಂಡಾಗ ಪರಿಸರ ಪ್ರೇಮಿ ಅದನ್ನು ನೋಡಿ ಸಂತೋಷಪಡುತ್ತಾನೆಯೇ ವಿನಃ ಅದನ್ನು ಕಿತ್ತುಕೊಳ್ಳಲು ಬಯಸುವುದಿಲ್ಲ. ಆದರೆ ಹೊಸದಾಗಿ ಮದುವೆಯಾದ ತರುಣನಿಗೆ ಹೂವು ಗಿಡದಲ್ಲಿದ್ದರೆ ಸಂತೋಷವಾಗುತ್ತದೆಯೆ? ಇಂತಹ ಸುಂದರವಾದ ಹೂವು ತನ್ನ ಸುಂದರವಾದ ಮಡದಿಯ ತುರುಬಿನಲ್ಲಿದ್ದರೆ ಮಾತ್ರ ಚೆಂದ ಎಂದುಕೊಳ್ಳುತ್ತಾನೆ. ವಯಸ್ಸಾದ, ದೈವಭಕ್ತನಿಗೆ ಆ ಹೂವು ಕಂಡರೆ, ಇಷ್ಟು ಸುಂದರವಾದ ಹೂವನ್ನು ದೇವರಿಗೆ ಅರ್ಪಿಸಿ ಅದನ್ನು ಪ್ರಸಾದವೆಂದು ಪಡೆದಾಗಲೇ ಅವನಿಗೆ ತೃಪ್ತಿ. ಆದರೆ ಹೂವು ಮಾರುವವನಿಗೆ ಒಂದು ಮೊಳಕ್ಕೆ ಎಷ್ಟು ದುಡ್ಡು ಬಂದೀತು ಎನ್ನುವುದೇ ಮುಖ್ಯ. ಹೂವನ್ನು ಕೊಡುವರು ಅದನ್ನು ಎಲ್ಲಿಯಾದರೂ ಬಳಸಿಕೊಳ್ಳಲಿ, ತನಗೆ ಬರಬೇಕಾದ ಹಣ ಬಂದರೆ ಸಾಕು.

ಪ್ರಪಂಚವೇ ಹಾಗೆ, ಜನರ ರುಚಿಗಳು ಬೇರೆ, ಅಪೇಕ್ಷೆಗಳು ಬೇರೆ. ಯಾವ ವಸ್ತು, ಮಾತು, ಚಿಂತನೆ, ಘಟನೆ ಯಾರನ್ನು ಹೇಗೆ ಪ್ರಚೋದಿಸಿತು ಎಂಬುದನ್ನು ಹೇಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.