ADVERTISEMENT

ಗುರುರಾಜ ಕರಜಗಿ ಅಂಕಣ| ವಾಸನೆಗಳ ಕರಗುವಿಕೆ

ಡಾ. ಗುರುರಾಜ ಕರಜಗಿ
Published 9 ಫೆಬ್ರುವರಿ 2021, 19:30 IST
Last Updated 9 ಫೆಬ್ರುವರಿ 2021, 19:30 IST
   

ದಾಸರೋ ನಾವೆಲ್ಲ ಶುನಕನಂದದಿ ಜಗದ |
ವಾಸನೆಗಳೆಳೆತಕ್ಕೆ ದಿಕ್ಕು ದಿಕ್ಕಿನಲಿ ||
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು |
ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ || 385 ||

ಪದ-ಅರ್ಥ: ಶುನಕ=ನಾಯಿ, ವಾಸನೆಗಳೆಳೆತಕ್ಕೆ=ವಾಸನೆಗಳು+ಎಳೆತಕ್ಕೆ, ಪಾಶಗಳು=ಹಗ್ಗಗಳು, ವಾಸನಾಕ್ಷಯ=ವಾಸನೆಗಳ ನಾಶ.

ವಾಚ್ಯಾರ್ಥ: ನಾವು ನಾಯಿಯಂತೆ, ಈ ಪ್ರಪಂಚದ ಸಕಲ ದಿಕ್ಕುಗಳ ವಾಸನೆಗಳ ಎಳೆತಕ್ಕೆ ಸಿಕ್ಕು ದಾಸರಾಗಿ
ದ್ದೇವೆ. ನಮ್ಮ ಎಳೆಯುವ ಹಗ್ಗಗಳು ಹೊರಗಿವೆ. ಆದರೆ ಅದನ್ನು ಸಿಕ್ಕಿಸಿಕೊಳ್ಳುವ ಕೊಂಡಿಗಳು ನಮ್ಮೊಳಗೇ ಇವೆ. ಈ ವಾಸನೆಗಳ ನಾಶವೇ ಮೋಕ್ಷ.

ADVERTISEMENT

ವಿವರಣೆ: ಆರು ಜನ ಗೆಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪಟ್ಟಣಕ್ಕೆ ನಡೆದರು. ದಾರಿಯಲ್ಲೊಂದು ದಟ್ಟಕಾಡು. ಅಲ್ಲಿ ಯಕ್ಷಿಣಿಯರಿದ್ದಾರೆಂಬ ಪ್ರತೀತಿ. ಹಿರಿಯರು ಮಾರ್ಗದರ್ಶನ ಮಾಡಿದರು. ಯಾವ ಆಕರ್ಷಣೆ ಬಂದರೂ ನಿಲ್ಲದೆ ರಾತ್ರಿಯಾಗುವುದರೊಳಗೆ ಕಾಡನ್ನು ದಾಟಬೇಕು. ರಾತ್ರಿ ಯಕ್ಷಿಣಿಯರನ್ನು ತಡೆಯುವುದು ಕಷ್ಟ. ಗಟ್ಟಿ ಮನಸ್ಸು ಮಾಡಿ ಆರೂ ಜನ ಹೊರಟರು. ಸ್ವಲ್ಪ ಮುಂದೆ ಹೋದಾಗ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ತರುಣಿಯರ ರೂಪ ಸೆಳೆಯುತ್ತಿತ್ತು. ಒಬ್ಬ ತರುಣ ಅಲ್ಲಿಯೇ ನಿಂತ. ಉಳಿದವರು ಮುಂದೆ ನಡೆದರು. ಅಲ್ಲಿ ಸಮಾರಾಧನೆ ಆಗುತ್ತಿತ್ತು. ಸಮೀಚೀನ ಭೋಜನ. ಮತ್ತೊಬ್ಬ ನಿಂತುಕೊಂಡ. ಉಳಿದ ನಾಲ್ವರು ಸಾಗಿದರು. ಮತ್ತಷ್ಟು ಮುಂದೆ ತರುಣಿಯರು ಮನಸ್ಸನ್ನು ಸೆಳೆಯುವ ಪರಿಮಳ ದ್ರವ್ಯಗಳನ್ನು ಬಂದವರಿಗೆಲ್ಲ ಪೂಸುತ್ತಿದ್ದರು. ಪರಿಮಳವನ್ನು ಹಚ್ಚಿಸಿಕೊಂಡವರು ಮೈಮರೆಯುತ್ತಿದ್ದರು. ಇನ್ನೊಬ್ಬ ತರುಣ ಮರುಳಾಗಿ ಅಲ್ಲಿಯೇ ಉಳಿದ. ಉಳಿದ ಮೂವರು ಮುಂದೆ ನಡೆದರು. ಸ್ವಲ್ಪ ದೂರದಲ್ಲಿ ಬಂದು ದೊಡ್ಡ ವೇದಿಕೆ ಕಂಡಿತು. ಅಲ್ಲಿ ನಾಲ್ಕಾರು ತರುಣಿಯರು ಅತ್ಯಂತ ಮಧುರವಾಗಿ ಹಾಡುತ್ತಿದ್ದರು. ಅದೊಂದು ಗಂಧರ್ವಗಾನ. ಮತ್ತೊಬ್ಬ ತರುಣ ಮೈಯೆಲ್ಲ ಕಿವಿಯಾಗಿ ನಿಂತ. ಉಳಿದ ಇಬ್ಬರು ಬೇಗಬೇಗನೆ ಹೆಜ್ಜೆ ಹಾಕಿದರು. ಆಗ ಬಂದು ವಿಚಿತ್ರವಾಯಿತು. ಒಬ್ಬ ಅತ್ಯಂತ ಸುಂದರವಾದ ತರುಣಿ, ಆಕೆಯ ಬಟ್ಟೆಯೆಲ್ಲ ಹರಿದು ಹೋಗಿ ಮೈಯೆಲ್ಲ ಕಾಣುತ್ತಿದೆ. ನೀರಿನಲ್ಲಿ ನೆನೆದು ಬಂದಂತಿದೆ. ಆಕೆ ಓಡಿ ಇವರ ಬಳಿಗೆ ಬಂದಳು. ಅವಳ ಮಾದಕ ನಗೆ, ಮನಸೆಳೆವ ರೂಪಕ್ಕೆ ಇನ್ನೊಬ್ಬ ತರುಣ ಸಿಲುಕಿ ನಿಂತ. ಉಳಿದ ಒಬ್ಬ ಮಾತ್ರ ಕಾಡಿನಲ್ಲಿ ವೇಗವಾಗಿ ನಡೆದ. ಕತ್ತಲೆಯಾಗುವುದರೊಳಗೆ ಕಾಡನ್ನು ದಾಟಿ ನಗರ ಸೇರಿದ. ಕಾಡಿನಲ್ಲೇ ಉಳಿದ ಐವರು ಯಕ್ಷಿಣಿಯರಿಗೆ ಆಹಾರವಾಗಿದ್ದರು. ಇದು ಇಂದ್ರಿಯಗಳ ಸೆಳೆತದ ತೀವ್ರತೆ.

ಈ ಅದ್ಭುತವಾದ ಪ್ರಪಂಚದಲ್ಲಿ ವಿಧವಿಧವಾದ ಆಕರ್ಷಣೆಗಳು ನಮ್ಮನ್ನು ಸದಾಕಾಲ ಸೆಳೆಯುತ್ತಲೇ ಇರುತ್ತವೆ. ನಾಯಿ ಹೇಗೆ ವಾಸನೆಯನ್ನು ಹುಡುಕುತ್ತ ಆಹಾರಕ್ಕಾಗಿ ಅಲೆಯುವಂತೆ, ನಾವೂ ಆಕರ್ಷಣೆಗಳ ಬೆನ್ನು ಹತ್ತಿ, ದಿಕ್ಕುದಿಕ್ಕುಗಳಲ್ಲಿ ಅಲೆಯುತ್ತೇವೆ. ಆಕರ್ಷಣೆಗಳು ಹಗ್ಗ ಇದ್ದಂತೆ, ನಮ್ಮನ್ನು ಬಲವಾಗಿ ಎಳೆಯುತ್ತವಲ್ಲ, ಅವುಗಳಿಂದ ಪಾರಾಗುವುದು ಸಾಧ್ಯವಿಲ್ಲ ಎಂಬ ಪೊಳ್ಳು ಅಸಹಾಯಕತೆಯನ್ನು ನಟಿಸುತ್ತೇವೆ. ಹಗ್ಗ ಹೊರಗಿದ್ದರೇನಾಯಿತು, ನಮ್ಮಲ್ಲಿ ಕೊಂಡಿಗಳು ಇಲ್ಲದಿದ್ದರೆ ಅವು ಹೇಗೆ ಸೆಳೆದಾವು? ನಾವು ಆಸೆಗಳೆಂಬ ಕೊಂಡಿಗಳನ್ನು ತೆರೆದುಕೊಂಡೇ ಇದ್ದರೆ ಅವುಗಳಿಗೆ ಹಗ್ಗಗಳು ಸಿಕ್ಕಿ ಹಾಕಿಕೊಳ್ಳುತ್ತವೆ, ನಮ್ಮನ್ನು ಎಳೆಯುತ್ತವೆ. ಕಗ್ಗ ಈ ವಿಷಯವನ್ನೇ ಒತ್ತಿ ಹೇಳುತ್ತದೆ. ಹೊರಗಿನ ಆಕರ್ಷಣೆಗಳು ಎಷ್ಟಾದರೂ ಇರಲಿ, ನಮ್ಮೊಳಗಿನ ಆಸೆಗಳ ಕೊಂಡಿಗಳನ್ನು ತೆಗೆದೊಗೆದರೆ, ಅಥವಾ ಕಡಿಮೆ ಮಾಡಿಕೊಂಡರೆ ವಾಸನೆಗಳು ನಮ್ಮನ್ನು ಹೆಚ್ಚು ಸೆಳೆಯಲಾರವು.

ವಾಸನೆಗಳ ಕರಗುವಿಕೆಯೇ ಮೋಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.