ADVERTISEMENT

ಸ್ವತಂತ್ರತೆಯ ಪರಮಸಿದ್ಧಿ

ಡಾ. ಗುರುರಾಜ ಕರಜಗಿ
Published 19 ಜುಲೈ 2018, 4:27 IST
Last Updated 19 ಜುಲೈ 2018, 4:27 IST

ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು? |
ಧರಣಿಗನುದಿನದ ರಕ್ತಾಭಿಷೇಚನೆಯೆ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವುದೆ ? – ಮಂಕುತಿಮ್ಮ ||13||

ಪುರುಷಸ್ವತಂತ್ರತೆಯ = ಪುರುಷ + ಸ್ವತಂತ್ರತೆಯ, ಪರಮಸಿದ್ಧಿಯದೇನು = ಪರಮ (ಶ್ರೇಷ್ಠ) + ಸಿದ್ಧಿ (ಸಾಧನೆ) +ಅದೇನು, ಧರಣಿಗನುದಿನದ = ಧರಣಿಗೆ + ಅನುದಿನದ, ರಕ್ತಾಭಿಷೇಚನೆಯೆ = ರಕ್ತ + ಅಭಿಷೇಚನೆ, ಕರವಾಲ = ಕತ್ತಿ, ಸೂಸು = ಹರಡು.

ಮನುಷ್ಯನ ಸ್ವಾತಂತ್ರ್ಯದ ಶ್ರೇಷ್ಠ ಸಾಧನೆ ಯಾವುದು? ಭೂಮಿಗೆ ರಕ್ತದ ಅಭಿಷೇಕ ಮಾಡುವುದೇ? ಹರಿತವಾದ ಕತ್ತಿಯನ್ನು ಹಿಡಿದು ಹೂವಿನ ಮಾಲೆಯೆಂದು ಎಳೆದಾಡಿದರೆ ಅದು ಸುಗಂಧವನ್ನು ಹರಡುತ್ತದೆಯೇ?

ADVERTISEMENT

ತೈಮೂರ ಲಂಗ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ಕ್ರೂರ ಚಕ್ರವರ್ತಿ. ಆತ ಪರದುಃಖ ಸಂತೋಷಿ. ಪರರ ದುಃಖದಲ್ಲೇ ಸಂತೋಷ ಕಾಣುವವನು. ಅವನ ದರ್ಪಕ್ಕೆ ಮಿತಿ ಇರಲಿಲ್ಲ. ಅವನ ಪ್ರೀತಿಯ ಆಟವೆಂದರೆ ಗುಲಾಮರನ್ನು ಕೊಂಡು, ದರ್ಬಾರಿಗೆ ಕರೆತಂದು ಎಲ್ಲರ ಮುಂದೆ ಅವರ ಶಿರಚ್ಛೇದ ಮಾಡಿಸುವುದು. ಸಾಯುವ ಮೊದಲು, ಸಾಯುವ ಕ್ಷಣದಲ್ಲಿ ಅವರ ಒದ್ದಾಟವನ್ನು ನೋಡಿ ಆನಂದಿಸುತ್ತಿದ್ದ. ಒಂದು ಬಾರಿ ಹೀಗೆ ತುಂಬಿದ ಸಭೆಯಲ್ಲಿ ಹತ್ತು ಜನ ಗುಲಾಮರನ್ನು ಕೊಲ್ಲಿಸುವಾಗ ಅವನ ಸ್ನೇಹಿತ ಹಾಗೂ ಮಾರ್ಗದರ್ಶಿ ಅಹ್ಮದೀ ಅಲ್ಲಿಗೆ ಬಂದ. ತೈಮೂರ ಸಂಭ್ರಮದಲ್ಲಿ ಕೇಳಿದ ‘ಅಹ್ಮದೀ, ಈ ಹತ್ತು ಜನರನ್ನು ಕೊಲ್ಲಿಸಿದರೆ ನೂರು ಗುಲಾಮರನ್ನು ಕೊಂದಂತೆ ಆಯಿತು. ಒಬ್ಬೊಬ್ಬರಿಗೂ ಎಷ್ಟೊಂದು ಹಣ ಕೊಟ್ಟಿದ್ದೇನೆ. ನನ್ನ ಐಶ್ವರ್ಯ ನಿನಗೆ ಗೊತ್ತು. ಈಗ ಹೇಳು, ನನ್ನ ಬೆಲೆ ಎಷ್ಟು?’

ಶಾಂತವಾಗಿ ಅಹ್ಮದೀ ಹೇಳಿದ, ‘ತೈಮೂರ್, ನಿನ್ನ ಬೆಲೆ ಕೇವಲ ಇಪ್ಪತ್ತು ದಿನಾರುಗಳು’. ‘ಹೇ, ನಾನು ಹಾಕಿಕೊಂಡ ಬಟ್ಟೆಯ ಬೆಲೆಯೇ ಇಪ್ಪತ್ತು ದಿನಾರು. ನನ್ನ ಬೆಲೆ ಎಷ್ಟು?’ ಕೂಗಿದ ತೈಮೂರ್. ಅಹ್ಮದಿ, ‘ನಾನು ಹೇಳಿದ್ದು ನಿನ್ನ ಬಟ್ಟೆಯ ಬೆಲೆ ಮಾತ್ರ. ನಿನಗೆ ಯಾವ ಬೆಲೆಯೂ ಇಲ್ಲ. ನಿನಗಿರುವ ಅಧಿಕಾರದ ಸ್ವತಂತ್ರತೆಯನ್ನು ಕ್ರೂರತೆಯ ಪರವಾನಗಿ ಎಂದು ಭಾವಿಸಿದ್ದು ದುರ್ದೈವ’. ಅಂದಿನಿಂದ ತೈಮೂರ ಗುಲಾಮರ ಹತ್ಯೆಯನ್ನು ನಿಲ್ಲಿಸಿದನಂತೆ. ಸ್ವಾತಂತ್ರ್ಯ ಅಧಿಕಾರವಲ್ಲ, ಅದೊಂದು ಬಹುದೊಡ್ಡ ಜವಾಬ್ದಾರಿ. ಅದು ಕೇವಲ ದರ್ಪದ, ಅಹಂಕಾರದ ಲಕ್ಷಣ ಎಂದು ಭಾವಿಸಿದಾಗಲೆಲ್ಲ ಹಿಂಸೆಯಾಗಿದೆ, ಭೂಮಿಗೆ ರಕ್ತತರ್ಪಣವಾಗಿದೆ, ನಿರಪರಾಧಿಗಳ ಮಾರಣಹೋಮವಾಗಿದೆ.

ಅಂತೆಯೇ ರಾಜ ಮಹಾರಾಜರ ಕಥೆಗಳನ್ನು ರಂಜಿತವಾಗಿ ಹೇಳುವ ಇತಿಹಾಸದ ಪುಟಗಳೆಲ್ಲ ರಕ್ತದಲ್ಲಿ ನೆನೆದುಹೋಗಿವೆ. ಹಿಂಸೆಯಿಂದ ಎಂದಾದರೂ ಒಳಿತಾಗಿದೆಯೇ? ಹಿಂಸೆ ಒಂದು ಹರಿತವಾದ ಖಡ್ಗ. ಅದನ್ನು ಹೂವಿನ ಸರದಂತೆ ಹಿಡಿದು ಎಳೆದಾಡಿದರೆ ಕೈಯನ್ನು ಕತ್ತರಿಸುತ್ತದೆಯೇ ಹೊರತು ಸುವಾಸನೆ ನೀಡಲಾರದು. ನಮ್ಮ ಸ್ವಾತಂತ್ರ್ಯದ ಶ್ರೇಷ್ಠತೆಯನ್ನು ಕಂಡು ಕೊಳ್ಳಬೇಕಾದದ್ದು ಶಾಂತಿಯ ಸ್ಥಾಪನೆಯಲ್ಲಿ, ಹಿಂಸೆಯ ಧ್ವಜವನ್ನು ಹಾರಿಸುವುದರಲ್ಲಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.