ADVERTISEMENT

ಬೆರಗಿನ ಬೆಳಕು: ಕುದುರೆ–ರಾವುತರ ತಿಳಿವಳಿಕೆ

ಡಾ. ಗುರುರಾಜ ಕರಜಗಿ
Published 15 ಮಾರ್ಚ್ 2021, 19:30 IST
Last Updated 15 ಮಾರ್ಚ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ದೇಹವೆಂಬುದು ಕುದುರೆಯಾತ್ಮನದರಾರೋಹಿ |
ವಾಹನವನುಪವಾಸವಿರಿಸೆ ನಡೆದೀತೆ ? ||
ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ ? |
ಸ್ನೇಹವೆರಡಕಮುಚಿತ – ಮಂಕುತಿಮ್ಮ || 397 ||

ಪದ-ಅರ್ಥ: ಕುದುರೆಯಾತ್ಮನದರಾರೋಹಿ=ಕುದುರೆ+ಆತ್ಮ+ಅದರ+ಆರೋಹಿ (ಸವಾರ), ವಾಹನವನುಪವಾಸವಿರಿಸೆ=ವಾಹನವನು+
ಉಪವಾಸ+ಇರಿಸೆ, ರೋಹಿ=ಸವಾರ, ಜಾಗ್ರತೆದಪ್ಪೆ=ಜಾಗ್ರತೆ+ತಪ್ಪೆ, ಸ್ನೇಹವೆರಡಕಮುಚಿತ=ಸ್ನೇಹ+ಎರಡಕ್ಕೂ+ ಉಚಿತ(ಸರಿಯಾದದ್ದು)

ವಾಚ್ಯಾರ್ಥ: ದೇಹವೆಂಬುದು ಕುದುರೆ ಇದ್ದ ಹಾಗೆ. ಆತ್ಮ ಅದರ ಸವಾರ. ವಾಹನವನ್ನು ಉಪವಾಸ ಇರಿಸಿದರೆ ನಡೆಯುತ್ತದೆಯೆ? ಸವಾರ ಎಚ್ಚರ ತಪ್ಪಿದರೆ ಯಾತ್ರೆ ಸುಖಕರವಾದೀತೆ? ವಾಹನ ಮತ್ತು ಸವಾರರ ನಡುವೆ ಸ್ನೇಹವಿರುವುದು ಅವಶ್ಯಕ.

ADVERTISEMENT

ವಿವರಣೆ: ಕಗ್ಗದ ಈ ಚೌಪದಿ ಕಠೋಪನಿಷತ್ತಿನ ಒಂದು ಮುಖ್ಯ ಜ್ಞಾನಭಾಗವನ್ನು ವಿವರಿಸುತ್ತದೆ.

ಆತ್ಮಾನಾಂ ರಥಿನಂ ವಿದ್ಧಿ ಶರೀರಂ ರಥಮೇವ ಚ |
ಬುದ್ಧಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವತು ||
ಇಂದ್ರಿಯಾಣಿ ಹಯಾನಾಹುಃ ವಿಷಯಾಂಸ್ತೇಷು ಗೋಚರಾನ್ |
ಆತ್ಮೇಂದ್ರಿಯಂ ಮನೋಯುಕ್ತಂ ಭೋಕ್ತೇತ್ಯಾಹರ್ ಮನೀಷಿಣಃ ||

‘ದೇಹವೆಂಬ ವಾಹನದಲ್ಲಿ ವ್ಯಕ್ತಿ ಪ್ರಯಾಣಿಕ. ಬುದ್ಧಿ ಚಾಲಕ. ಮನಸ್ಸು ಚಲನೆಯನ್ನು ನಿಯಂತ್ರಿಸುವ ಸಾಧನ. ಇಂದ್ರಿಯಗಳು ಕುದುರೆಗಳು. ಈ ರೀತಿಯಲ್ಲಿ ಆತ್ಮನು ಮನಸ್ಸು ಮತ್ತು ಇಂದ್ರಿಯಗಳ ಸಹವಾಸದಲ್ಲಿ ಸುಖಪಡುತ್ತಾನೆ ಇಲ್ಲವೆ ಕಷ್ಟಪಡುತ್ತಾನೆ’.

ದೇಹ ಎಂಬುದು ಒಂದು ವಾಹನ. ಮನಸ್ಸು ಅದರ ಚಲನೆಯನ್ನು ನಿಯಂತ್ರಿಸುತ್ತದೆ. ಎಲ್ಲೆಂದರಲ್ಲಿ ಎಳೆದು ಹೋಗುವ ಇಂದ್ರಿಯಗಳೇ ಕುದುರೆಗಳು. ಆತ್ಮ ಈ ರಥದ ಚಾಲಕ. ಕುದುರೆಗಳು ಮೂಲತಃ ಸ್ವಚ್ಛಂದ ಪ್ರವೃತ್ತಿಯವು. ಅವು ನಿಗ್ರಹವನ್ನು ಇಷ್ಟಪಡುವುದಿಲ್ಲ. ಸ್ವಲ್ಪ ಸಡಿಲ ಬಿಟ್ಟರೆ ಸಾಕು ದಿಕ್ಕು ದಿಕ್ಕಿಗೆ ಓಡಿ ಬಿಡುತ್ತವೆ. ಅವುಗಳನ್ನು ನಿಗ್ರಹಿಸುವುದು ಕಷ್ಟ ಎಂದು ಬಿಡುವುದು ಸರಿಯಲ್ಲ ಅಥವಾ ಅವುಗಳನ್ನು ಬಿಟ್ಟು ಇಳಿದು ಹೊಗುವುದೂ ಸರಿಯಾದದ್ದಲ್ಲ.

ದೇಹವನ್ನು ಕುದುರೆಯೆಂದೂ, ಆತ್ಮವನ್ನು ಅದರ ಸವಾರನೆಂದೂ ಭಾವಿಸಿದರೆ, ನಮ್ಮ ಯಾತ್ರೆ ಸುಖಕರವಾಗಬೇಕಾದರೆ ಎರಡನ್ನೂ ಸರಿಯಾಗಿ ಇಟ್ಟುಕೊಳ್ಳಬೇಕು. ಮೊದಲನೆಯದಾಗಿ ಕುದುರೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕೆ ಸರಿಯಾದ ಆಹಾರ, ನೀರು, ನೀಡಿ ಸ್ವಚ್ಛವಾಗಿಟ್ಟುಕೊಂಡಾಗ ಅದು ಶಕ್ತಿಶಾಲಿಯಾಗುತ್ತದೆ. ಅದನ್ನು ಉಪವಾಸವಿಟ್ಟು ನಿರ್ಲಕ್ಷಿಸಿದರೆ, ಅದು ಪ್ರಯಾಣ ಮಾಡಲು ಅಶಕ್ತವಾಗುತ್ತದೆ. ಎರಡನೆಯದು ರಾವುತನ ಎಚ್ಚರ. ಹೇಗೆಂದರೆ ಹಾಗೆ ಹಾರುವ ಕುದುರೆಯನ್ನು ನಿಯಂತ್ರಣದಲ್ಲಿ ತೆಗೆದುಕೊಂಡು, ಸದಾಕಾಲದ ಎಚ್ಚರಿಕೆಯಿಂದ ನಡೆಸಬೇಕು. ಸ್ವಲ್ಪ ಮೈಮರೆತರೆ ಅಪಘಾತ ತಪ್ಪಿದ್ದಲ್ಲ.

ಆದ್ದರಿಂದ ಜಾಗರೂಕನಾದ ರಾವುತ, ಆರೋಗ್ಯಪೂರ್ಣವಾದ, ಶಕ್ತಿಶಾಲಿಯಾದ ಕುದುರೆ ಇವುಗಳ ನಡುವೆ ಸ್ನೇಹ, ತಿಳಿವಳಿಕೆ ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.