ADVERTISEMENT

ಬೆರಗಿನ ಬೆಳಕು | ಚಿನ್ಮಯವೆ ಸತ್ಯ

ಡಾ. ಗುರುರಾಜ ಕರಜಗಿ
Published 1 ಜೂನ್ 2023, 21:14 IST
Last Updated 1 ಜೂನ್ 2023, 21:14 IST
ಬೆರಗಿನ ಬೆಳಕು
ಬೆರಗಿನ ಬೆಳಕು   

ಶೂನ್ಯವೆಲ್ಲವುಮೆಂಬೊಡಂತೆನಿಸುವುದೇನು ? |
ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ ? ||
ಚಿನ್ಮಯವನದನೆ ನೀಂ ಸತ್ಯವೆಂದಾಶ್ರಯಿಸು |
ಶೂನ್ಯವಾದವೆ ಶೂನ್ಯ – ಮಂಕುತಿಮ್ಮ || 897 ||

ಪದ-ಅರ್ಥ: ಶೂನ್ಯವೆಲ್ಲವುಮೆಂಬೊಡಂತೆನಿಸುವುದೇನು=ಶೂನ್ಯ+ಎಲ್ಲವೂ +ಎಂಬೊಡಂತೆ(ಎನ್ನುವಂತೆ)
+ಎನಿಸುವುದೇನು, ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ=ಅನ್ಯವಿಲ್ಲ+ಎನುವ+ಅರಿವು+ ಅದೊಂದು+ಇರ್ಪುದು (ಇರುವುದು)+ಅಲ್ತ್ತೆ, ಚಿನ್ಮಯವನದನೆ=ಚಿನ್ಮಯವನ್+ಅದನೆ, ಸತ್ಯವೆಂದಾಶ್ರಯಿಸು=ಸತ್ಯವೆಂದು+ಆಶ್ರಯಿಸು.

ವಾಚ್ಯಾರ್ಥ: ಎಲ್ಲವೂ ಶೂನ್ಯ ಎಂದು ಅನ್ನಿಸುವುದೇನು? ಏನೂ ಇಲ್ಲ ಎಂಬ ಅರಿವಾದರೂ ಇದೆಯಲ್ಲವೆ? ಅದಕ್ಕೆ ಜ್ಞಾನಸ್ವರೂಪವಾದ ಚಿನ್ಮಯನನ್ನೇ ಸತ್ಯ ಎಂದು ಆಶ್ರಯಿಸು. ಆದ್ದರಿಂದ ಶೂನ್ಯವಾದವೇ ಶೂನ್ಯ.

ADVERTISEMENT

ವಿವರಣೆ: ಬೌದ್ಧದರ್ಶನದ ನಾಲ್ಕು ಸಂಪ್ರದಾಯಗಳಲ್ಲಿ ಕೊನೆಯದು ಮಾಧ್ಯಮಿಕ ಪಂಥ. ಇದನ್ನು ಶೂನ್ಯವಾದ ಎಂದೂ ಕರೆಯುತ್ತಾರೆ.

ಇದನ್ನು ವಿಶೇಷವಾಗಿ ವಿವರಿಸಿದವನು ನಾಗಾರ್ಜುನ. ಅವನು ನಾಲ್ಕೂನೂರು ಕಾರಿಕೆಗಳಲ್ಲಿ ಇದನ್ನು ವರ್ಣಿಸಿದ್ದಾನೆ. ಮಾಧ್ಯಮಿಕ ಪಂಥವನ್ನು ನಾಸ್ತಿಕವಾದವೆಂದು ವೈದಿಕವಾದಿಗಳು ದೂಷಿಸಿದರು. ಆದರೆ ಅದು ನಾಸ್ತಿಕವಾದವಾಗಲೀ, ಚಾರ್ವಾಕವಾದವಾಗಲಿ ಅಲ್ಲವೆಂದು ನಾಗಾರ್ಜುನನ ಶಿಷ್ಯ ಚಂದ್ರಕೀರ್ತಿ ಸಾಧಿಸಿದ್ದಾನೆ. ಶೂನ್ಯತೆಯಲ್ಲಿ ಎರಡು ನೆಲೆಗಳು. ಒಂದು ಸಂಸಾರದಲ್ಲಿ, ವ್ಯವಹಾರದಲ್ಲಿ ಪ್ರಕಟವಾಗುವ ಶೂನ್ಯತೆ. ಇನ್ನೊಂದು ಪರಮಾರ್ಥದ ನೆಲೆಯಲ್ಲಿ ಅಭಿವ್ಯಕ್ತವಾಗುವ ಶೂನ್ಯತೆ. ವ್ಯವಹಾರದಲ್ಲಿ ಬರುವ ಪ್ರತಿಯೊಂದು ವಸ್ತುವು ಬರುವ ಮೊದಲು ಏನೂ ಆಗಿರಲಿಲ್ಲ. ಬಂದು, ಮರೆಯಾಗಿ ಹೋದ ಮೇಲೆ ಏನೂ ಉಳಿಯಲಿಲ್ಲ. ಆದ್ದರಿಂದ ಅದೆಲ್ಲ ಶೂನ್ಯವೇ.

ಆದರೆ ಪರಮಾರ್ಥದಲ್ಲಿ ರೂಪ, ಆಕಾರಗಳಿಲ್ಲದಿದ್ದರೂ, ಯಾರ ಕಣ್ಣಿಗೂ ಕಾಣದಿದ್ದರೂ, ಎಲ್ಲವನ್ನು ನಿಯಾಮಕ ಮಾಡಿರುವ ಶುದ್ಧಸತ್ವವೊಂದಿದೆ. ಸ್ಥೂಲ ರೂಪದಲ್ಲಿ ಅದು ಶೂನ್ಯ ಆದರೆ ಅಂತರ್‌ದೃಷ್ಟಿಗೆ ಅದು ಅನಂತ, ಅಪಾರ. ಈ ಮಾಧ್ಯಮಿಕ ಪಂಥದ ನ್ಯಾಯ, ತರ್ಕಗಳ ಪ್ರಭಾವ ವೇದಾಂತದ ಮೇಲೆ ಸ್ಪಷ್ಟವಾಗಿ ಬಿದ್ದಿತು. ಅದ್ವೈತವಾದದ ವ್ಯವಹಾರ-ಸತ್ತಾ, ಪರಮಾರ್ಥಸತ್ತಾಗಳು ನಾಗರ್ಜುನನ ಸಂವೃತಿ ಸತ್ಯ ಮತ್ತು ಪರಮಾರ್ಥ ಸತ್ಯಗಳನ್ನೇ ಅನುಸರಿಸಿದವು. ಮಾಧ್ಯಮಿಕರ ಶೂನ್ಯವೇ ವೇದಾಂತದ ಪ್ರಜ್ಞಾನಘನ, ಅವರ ಬುದ್ಧಿಕಾಯವೇ ಇವರ ಬ್ರಹ್ಮ, ಆ ಶೂನ್ಯವೇ ವಚನಕಾರರ ಬಯಲು.

ಕಗ್ಗ ಕೇಳುತ್ತದೆ, ನಿಮಗೆ ಎಲ್ಲವೂ ಶೂನ್ಯ ಎಂದು ಎನ್ನಿಸುತ್ತಿದೆಯೆ? ಎಲ್ಲಿಯೂ ಏನೂ ಇಲ್ಲ ಎಂದು ಎನ್ನಿಸುವುದಾದರೆ, ಏನೂ ಇಲ್ಲ ಎಂಬ ಅರಿವಾದರೂ ಇದೆಯಲ್ಲವೆ? ಆ ಅರಿವು ಇದೆಯಲ್ಲ, ಅದೇ ಚಿನ್ಮಯವಾದದ್ದು. ಚಿನ್ಮಯವೆಂದರೆ ಜ್ಞಾನವನ್ನು, ಅರಿವನ್ನು ಹೊಂದಿರುವ, ಜಡವಲ್ಲದ, ಅಚೇತನವಲ್ಲದ ಶಾಶ್ವತ ಸತ್ಯ. ಅದನ್ನೇ ನಾವು ಆಶ್ರಯಿಸಬೇಕು. ಎಲ್ಲವೂ ಈ ಪರಸತ್ವವೇ ಆಗಿರುವಾಗ ಶೂನ್ಯ ಹೇಗಾದೀತು. ಅದಕ್ಕೇ ಶೂನ್ಯವಾದವೆ ಶೂನ್ಯ ಎನ್ನುತ್ತದೆ ಕಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.