ADVERTISEMENT

ಮೌಲ್ಯಯುತ ಶಿಕ್ಷಣ ಸಮಾಜದ ಉನ್ನತಿಗೆ ದಾರಿ‌: ಗುರುರಾಜ ಕರಜಗಿ ಉಪನ್ಯಾಸ -6ನೇ ದಿನ

ಡಾ. ಗುರುರಾಜ ಕರಜಗಿ
Published 29 ಏಪ್ರಿಲ್ 2020, 12:01 IST
Last Updated 29 ಏಪ್ರಿಲ್ 2020, 12:01 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪ್ರಜಾವಾಣಿ ಯೂಟ್ಯೂಬ್ ಚಾನೆಲ್‌ನಲ್ಲಿಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರ ಉಪನ್ಯಾಸ ಮಾಲಿಕೆಯ 6ನೇ ದಿನದ ಸ್ಪೂರ್ತಿದಾಯಕ ಮಾತುಗಳ ಆಯ್ದ ಭಾಗಗಳು...

ಯಾರು ತಮಗಾಗಿ ಬದುಕುತ್ತಾರೊ ಅವರನ್ನು ಯಾರು ನೆನೆಯುವುದಿಲ್ಲ, ಯಾರೂ ಮತ್ತೊಬ್ಬರಿಗಾಗಿ ಈ ಪ್ರಪಂಚಕ್ಕಾಗಿ ಬದುಕುತ್ತಾರೋ ಅವರನ್ನು ಜಗತ್ತು ಸದಾ ನೆನೆಯುತ್ತದೆ. ಸಾಧನೆಗಳನ್ನು ಮಾಡಿದವರಿಗಾಗಿ ಜನರು ಗೌರವ ನೀಡುತ್ತಾರೆ. ಇಂದಿನ ಯುವ ಪೀಳಿಗೆ ಪ್ರಪಂಚದಿಂದ ಗೌರವ ಪಡೆಯಬೇಕಾದರೆ ಇತರರಿಗಾಗಿ ಬದುಕಬೇಕು ಎಂದು ಗುರುರಾಜ ಕರಜಗಿ ಹೇಳಿದರು.

ಜಗತ್ತಿನ ಜನರಿಂದ ಗೌರವ ಮರ್ಯಾದೆ ಪಡೆಯಬೇಕಾದರೆ ಮೊದಲು ವಿನಯಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ವಿನಯ ಇದ್ದರೆ ಮಾತ್ರ ಸಕಲವು ನಿಮ್ಮ ಬಳಿಗೆ ಬರುತ್ತದೆ. ಇದಕ್ಕೆ ಉದಾಹರಣೆ ಅಬ್ದುಲ್‌ ಕಲಾಂ ಅವರು. ದೊಡ್ಡ ಹುದ್ದೆಯಲ್ಲಿ ಇದ್ದರೂ ಅವರ ವಿನಯವನ್ನು ಮರೆತಿರಲಿಲ್ಲ...

ADVERTISEMENT

ಕಲಾಂ ಸಾಹೇಬರ ಒಂದು ಘಟನೆ...
ಕಾರ್ಯಕ್ರಮವೊಂದಕ್ಕೆ ಕಲಾಂ ಅವರು ಬಂದಿದ್ದರು. ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅವರ ಭಾಷಣವನ್ನು ನಾನು ಅನುವಾದ ಮಾಡಿದ್ದೆ. ಕಲಾಂ ಭಾಷಣಕ್ಕೂ ಮುನ್ನ ಪುಟ್ಟ ಬಾಲಕಿಯೊಬ್ಬಳು ವೇದಿಕೆಯ ಬಳಿ ಅಳುತ್ತಿರುವುದನ್ನು ನೋಡಿದೆ. ಅಲ್ಲಿಗೆ ತೆರಳಿ ಬಾಲಕಿಯ ಪೋಷಕರಲ್ಲಿ ವಿಚಾರಿಸಿದಾಗ, ಕಲಾಂ ಅವರಿಗೆ ಇವಳು ಶೇಕ್‌ ಹ್ಯಾಂಡ್‌ ಮಾಡಬೇಕಂತೆ, ಆದರೆ ಸೆಕ್ಯೂರಿಟಿಯವರು ಬಿಡಲಿಲ್ಲ ಎಂದರು.

ಕಲಾಂ ಅವರ ಭಾಷಣ ಮುಗಿದ ಮೇಲೆ ನಾನು ಅವರ ಬಳಿ ಹೋಗಿ ನಡೆದ ಘಟನೆಯನ್ನು ವಿವರಿಸಿದೆ, ಕೂಡಲೇ ಅವರು ಸೆಕ್ಯೂರಿಟಿ ಗಾರ್ಡ್‌ಗೆ ಹೇಳಿ ಆ ಬಾಲಕಿಯನ್ನು ಕರೆಸಿಕೊಂಡು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡರು. ಬಳಿಕ ದ್ರಾಕ್ಷಿ, ಗೊಡಂಬಿ ಹಾಗೂ ಆಟೋಗ್ರಾಫ್ ಕೊಟ್ಟು ಕಳುಹಿಸಿಕೊಟ್ಟರು. ಈ ಘಟನೆ ಆ ದೊಡ್ಡ ವ್ಯಕ್ತಿಗೆ ಎಷ್ಟು ವಿನಯ ಇತ್ತು ಎಂಬುದನ್ನು ತೋರಿಸುತ್ತದೆ ಎಂದರು. ನಾವೂ ಕೂಡ ವಿನಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಇಂತಹ ವಿನಯ ಬರಬೇಕಾದರೆ ನಾವು ಮಕ್ಕಳಿಗೆ ಮೂರು ಮೌಲ್ಯಗಳನ್ನು ಕಲಿಸಿಕೊಡಬೇಕು.
1) ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು
2) ಪರಿವಾರದ ಮೇಲೆ ಪ್ರೀತಿ ತೋರುವುದನ್ನು ಕಲಿಸಬೇಕು
3) ದೇಶಪ್ರೇಮವನ್ನು ಬೆಳೆಸಬೇಕು

ಮಕ್ಕಳಿಗೆ ಈ ಮೂರು ಮೌಲ್ಯಗಳನ್ನು ತುಂಬಿ, ಶಿಕ್ಷಣ ನೀಡಿದರೆ ಅವರು ಮತ್ತು ದೇಶ ಉತ್ತಮ ಬೆಳವಣಿಗೆ ಕಾಣುತ್ತದೆ ಎಂದು ಕರಜಗಿ ವಿವರಿಸಿದರು. ಶಿಕ್ಷಣ, ಪದವಿ ಪತ್ರಗಳು ಮತ್ತು ಮಾನವೀಯತೆ ಕುರಿತಂತೆ ಎರಡು ಉಪ ಕಥೆಗಳನ್ನು ಹೇಳಿದರು. ಮೌಲ್ಯಯುತ ಶಿಕ್ಷಣ ಸಮಾಜದ ಉನ್ನತಿಗೆ ದಾರಿಯಾಗುತ್ತದೆ ಎಂಬುದು ಇಂದಿನ ಉಪನ್ಯಾಸದ ಸಾರವಾಗಿತ್ತು.

( ಉಪನ್ಯಾಸದ ಪೂರ್ಣ ಪಾಠಕ್ಕಾಗಿ ಪ್ರಜಾವಾಣಿ ಯುಟ್ಯೂಬ್ ಚಾನೆಲ್‌ಗೆ ಭೇಟಿ ಕೊಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.