ADVERTISEMENT

ಕೃತಘ್ನತೆಯ ಅಪಾಯ

ಡಾ. ಗುರುರಾಜ ಕರಜಗಿ
Published 11 ಅಕ್ಟೋಬರ್ 2018, 19:27 IST
Last Updated 11 ಅಕ್ಟೋಬರ್ 2018, 19:27 IST
.
.   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಹಿಮಾಲಯದಲ್ಲಿ ಒಂದು ವಿಶೇಷವಾದ ಆನೆಯಾಗಿ ಜನಿಸಿದ. ಅದು ಹುಟ್ಟುವಾಗಲೇ ದೊಡ್ಡ ಬೆಳ್ಳಿಯ ರಾಶಿಯಂತೆ ಬೆಳ್ಳಗೆ ಫಳಫಳನೆ ಹೊಳೆಯುತ್ತಿತ್ತು. ಅದರ ಕಣ್ಣುಗಳು ವಜ್ರದಂತೆ ಮಿನುಗುತ್ತಿದ್ದವು. ತಲೆ ಮತ್ತು ಮುಖದ ಪ್ರದೇಶ ರಕ್ತವರ್ಣದ ಕಂಬಳಿಯನ್ನು ಹೊದಿಸಿದಂತಿತ್ತು.

ನಾಲ್ಕು ಕಾಲುಗಳು ಅರಗಿನಲ್ಲಿ ಹೊಯ್ದಂತೆ ಲಕಲಕಿಸುತ್ತಿದ್ದವು. ಅದು ದೊಡ್ಡದಾಗಿ ಬೆಳೆದಂತೆ ಗಂಭೀರತೆಯಿಂದ, ಗುಣಶೀಲತೆಯಿಂದ ಎಂಭತ್ತು ಸಾವಿರ ಆನೆಗಳ ಗೌರವವನ್ನು ಪಡೆದು ನಾಯಕನಾಯಿತು. ಕೆಲದಿನಗಳ ನಂತರ ಗುಂಪಿನಲ್ಲಿರುವುದು ತನ್ನ ಸ್ವಭಾವಕ್ಕೆ ಹೊಂದದೆಂಬುದನ್ನು ತಿಳಿದು ಗುಂಪಿನಿಂದ ಬೇರೆಯಾಗಿ ಮತ್ತೊಂದು ಪರ್ವತ ಪ್ರದೇಶದಲ್ಲಿ ಏಕಾಂಗಿಯಾಗಿ ವಾಸಮಾಡತೊಡಗಿತು. ಅದು ಅತ್ಯಂತ ಸದಾಚಾರಿಯೂ, ಶೀಲವಂತನೂ ಆಗಿದ್ದರಿಂದ ಅದಕ್ಕೆ ಸೀಲವ ನಾಗರಾಜ ಎಂಬ ಹೆಸರು ಬಂತು.

ಆಗ ವಾರಾಣಸಿಯ ಮನುಷ್ಯನೊಬ್ಬ ಈ ಹಿಮಾಲಯದ ಕಾಡಿನಲ್ಲಿ ಬಂದು ದಾರಿ ತಪ್ಪಿಸಿಕೊಂಡು ತಿರುಗಾಡುತ್ತ ಮರಣ ಭಯದಿಂದ ಆಳುತ್ತಿದ್ದ. ಬೋಧಿಸತ್ವ ಆನೆ ಅವನ ರೋದನವನ್ನು ಕೇಳಿ ಕರುಣೆಯಿಂದ ಅವನ ಸಹಾಯಕ್ಕಾಗಿ ಬಂದಿತು. ಮನುಷ್ಯ ಈ ಭಾರಿ ಆನೆಯನ್ನು ಕಾಣುತ್ತಲೇ ಹೆದರಿಕೆಯಿಂದ ಓಡಿದ. ಅವನು ನಿಂತ ಮೇಲೆ ಆನೆ ಮತ್ತೆ ಅವನ ಸನಿಹ ಹೋಯಿತು. ಆನೆ ತನ್ನನ್ನೇ ಅಟ್ಟಿಸಿಕೊಂಡು ಬರುತ್ತಿದೆ ಎಂದು ಗಾಬರಿಯಾಗಿ ಹೋ ಎಂದು ಕಿರುಚುತ್ತ ಆತ ಓಡತೊಡಗಿದ.

ADVERTISEMENT

ಆಗ ಆನೆ ಮಾನವರ ಧ್ವನಿಯಲ್ಲಿ ಮಾತನಾಡಿತು. “ಯಾಕಪ್ಪಾ, ಹೀಗೆ ಅಳುತ್ತ ಓಡಾಡುತ್ತಿದ್ದೀಯಾ?” ಆತನಿಗೆ ಧೈರ್ಯ ಬಂದು, “ಸ್ವಾಮೀ, ಕಾಡಿನಲ್ಲಿ ನನಗೆ ದಿಕ್ಕು ತಪ್ಪಿ ಹೋಗಿದೆ. ಮರಳಿ ವಾರಾಣಸಿಗೆ ಹೋಗುವ ದಾರಿ ತಿಳಿಯುತ್ತಿಲ್ಲ. ಇಲ್ಲಿ ಕಾಡುಪ್ರಾಣಿಗಳ ಭಯ ಕಾಡುತ್ತಿದೆ” ಎಂದ. ಆನೆ ಅವನನ್ನು ತಾನು ಇರುವ ಸ್ಥಳಕ್ಕೆ ಕರೆದೊಯ್ದು ಹಣ್ಣು ಹಂಪಲುಗಳನ್ನು ನೀಡಿ ಉಪಚಾರ ಮಾಡಿತು. ನಂತರ ಆತನನ್ನು ತನ್ನ ಬೆನ್ನ ಮೇಲೆ ಕೂಡ್ರಿಸಿಕೊಂಡು ವಾರಾಣಸಿಯ ದಾರಿಯವರೆಗೂ ಬಂದು, “ಅಯ್ಯಾ, ಇದೇ ದಾರಿಯಲ್ಲಿ ಹೋದರೆ ವಾರಾಣಸಿ ಬರುತ್ತದೆ. ಆದರೆ ನನ್ನ ಬಗ್ಗೆ, ನನ್ನ ನಿವಾಸದ ಬಗ್ಗೆ ಯಾರಿಗೂ ಹೇಳಬೇಡ” ಎಂದಿತು ಆನೆ.

ಆದರೆ ಆ ಕೃತಘ್ನ ಮನುಷ್ಯ ದಾರಿಯನ್ನು ಮನದಲ್ಲಿಯೇ ಗೊತ್ತು ಮಾಡಿಕೊಂಡಿದ್ದ. ನಗರ ಸೇರಿದ ತಕ್ಷಣ ದಂತದ ಕೆತ್ತನೆ ಮಾಡುವವರಲ್ಲಿ ಹೋಗಿ ತಾನು ಕಂಡ ಆ ಸುಂದರ, ಭವ್ಯ ಆನೆಯ ಬಗ್ಗೆ ಹೇಳಿ “ಜೀವಂತ ಆನೆಯ ದಂತವನ್ನು ಕೊಳ್ಳುತ್ತೀಯಾ?” ಎಂದು ಕೇಳಿದ. ಆತ ಇಂತಹ ಆನೆಯ ದಂತಕ್ಕೆ ತುಂಬ ಬೆಲೆ ಕೊಡುವುದಾಗಿ ಹೇಳಿದಾಗ ಈತ ಮರಳಿ ಕಾಡಿಗೆ ಬಂದು ತನ್ನ ಬಡತನವನ್ನು ವರ್ಣಿಸಿ, ಅಳುತ್ತಾ, ದಂತವನ್ನು ನೀಡಿದರೆ ತನ್ನ ದಾರಿದ್ರ್ಯ ನಿವಾರಣೆ ಆಗುವುದಾಗಿ ಹೇಳಿದ.

ಆನೆ ಕರುಣೆಯಿಂದ ಎರಡು ದಂತವನ್ನು ಕತ್ತರಿಸಲು ಒಪ್ಪಿ ನೋವನ್ನು ತಡೆದುಕೊಂಡು ದಾನಮಾಡಿತು. ಈ ನಿಷ್ಕರುಣಿ ಮನುಷ್ಯ ಕೆಲದಿನಗಳಲ್ಲಿ ಮರಳಿ ಬಂದು ದಂತದ ಹಣದಿಂದ ಸಾಲಮುಕ್ತಿಯಾಯಿತೇ ವಿನ: ಬದುಕು ಸುಧಾರಿಸಲಿಲ್ಲ ಎಂದು ಅತ್ತ. ನಿನ್ನ ಬಾಯಿಯಲ್ಲಿಯ ದವಡೆ ಹಲ್ಲುಗಳನ್ನು ಕೊಟ್ಟರೆ ಬದುಕಿಕೊಳ್ಳುತ್ತೇನೆ ಎಂದು ಅಲವತ್ತುಕೊಂಡ. ಆನೆ ಹಸುವಿನಂತೆ ಬಾಗಿ ಕುಳಿತು ಹಲ್ಲು ಕೀಳಿಸಿಕೊಂಡಿತು. ಈ ನೀಚ ಮನುಷ್ಯ ಸೊಂಡಿಲನ್ನು ತುಳಿಯುತ್ತ ಗರಗಸದಿಂದ ದವಡೆಯನ್ನು ಕೊರೆಯುವಾಗ ರಕ್ತದ ಧಾರೆ ಹರಿದುಬಂದಿತು. ರಕ್ತ ನೆಲಕ್ಕೆ ಬೀಳುತ್ತಲೇ ನೆಲ ಬಿರಿದು ಹೋಳಾಗಿ ಈ ಪಾಪಿಯನ್ನು ಬಳಿಗೆಳೆದುಕೊಂಡು ಮುಚ್ಚಿಬಿಟ್ಟಿತು.

ಅದಕ್ಕೇ ಬುದ್ಧ ಹೇಳುತ್ತಾನೆ, “ಕೃತಘ್ನರೊಂದಿಗೆ ಹುಷಾರಾಗಿರಿ. ಯಾವಾಗಲೂ ಸಮಯ ಸಾಧಿಸುವ ಈ ಮನುಷ್ಯನನ್ನು ಸಮಸ್ತ ಭೂಮಿಯನ್ನು ಕೊಟ್ಟೂ ಸಂತೋಷಪಡಿಸುವುದು ಸಾಧ್ಯವಿಲ್ಲ”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.