ADVERTISEMENT

ಬೆರಗಿನ ಬೆಳಕು | ಸಿಸಿಫಸ್‌ನ ಬಂಡೆ

ಡಾ. ಗುರುರಾಜ ಕರಜಗಿ
Published 22 ಜೂನ್ 2020, 19:30 IST
Last Updated 22 ಜೂನ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು|
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ||
ಸರಿದು ಕೆಳಕದೆಂತೊ ಜಾರುವುದು ಮರಮರಳಿ |
ಪುರುಷಪ್ರಗತಿಯಂತು– ಮಂಕುತಿಮ್ಮ || 304 ||

ಪದ-ಅರ್ಥ: ಸಿಸಿಫಸ್=ಗ್ರೀಸ್ ದೇಶದ ದೊರೆ, ಉರುಳಿಸಿರಲೊಂದೆರಡು=ಉರುಳಿಸಿರಲು+
ಒಂದೆರಡು, ಘಾಸಿ=ಕಷ್ಟ, ಕೆಳಕದೆಂತೊ=ಕೆಳಕೆ+ಅದೆಂತೊ.

ವಾಚ್ಯಾರ್ಥ: ಸಿಸಿಫಸ್‌ನು ದೊಡ್ಡ ಬಂಡೆಯನ್ನು ಕಷ್ಟಪಟ್ಟು ಬೆಟ್ಟದ ಮೇಲಕ್ಕೆ ಎರಡು ಮೂರು ಬಾರಿ ಹೊತ್ತು ಕೊಂಡೊಯ್ದು ಹೋದರೂ ಅದು ಎಂತೋ ಸರಿದು ಕೆಳಗೆ ಉರುಳಿ ಹೋಗುತ್ತಿತ್ತಂತೆ. ಇದರಂತೆಯೇ ಪುರುಷ ಪ್ರಗತಿ.

ADVERTISEMENT

ವಿವರಣೆ: ಕಾರಿಂಥದ ದೊರೆ ಸಿಸಿಫಸ್ ಅತ್ಯಂತ ಮೇಧಾವಿ ಮತ್ತು ಚತುರ ಎಂದು ಹೆಸರು ಮಾಡಿದ್ದ. ಒಮ್ಮೆ ಆತ ಸ್ಯೂಸ್ ದೇವತೆಯ ಅವಕೃಪೆಗೆ ಒಳಗಾದ. ದೇವತೆ, ತನ್ನ ಸಹೋದರ ಮತ್ತು ಅಧೋಲೋಕದ ಅಧಿಪತಿ ಹೇಡಿಸ್‌ನಿಗೆ, ಸಿಸಿಫಸ್‌ನನ್ನು ಅಧೋಲೋಕಕ್ಕೆ ಕರೆದೊಯ್ಯುವಂತೆ ಆಜ್ಞೆ ಮಾಡಿದ. ಆಧೋಲೋಕವೆಂದರೆ ಮೃತ್ಯುಲೋಕ. ಬುದ್ಧಿವಂತ ಸಿಸಿಫಸ್ ಹೇಗೋ ಹೇಡಿಸ್‌ನನ್ನೇ ಬಂದಿ ಮಾಡಿ ಭೂಲೋಕಕ್ಕೆ ಕರೆತಂದುಬಿಟ್ಟ. ಮೃತ್ಯಲೋಕದ ದೊರೆಯೇ ಜೈಲಿನಲ್ಲಿದ್ದಾಗ ಒಂದು ಸಾವೂ ಸಂಭವಿಸಲಿಲ್ಲ. ಕೊನೆಗೆ ದೇವತೆಯೇ ಬಂದು ಹೇಡಿಸ್‌ನನ್ನು ಬಿಡಿಸಿಕೊಂಡು ಹೋದ. ಇದೇ ರೀತಿ ಬುದ್ಧಿವಂತಿಕೆಯಿಂದ ಎರಡು ಮೂರು ಬಾರಿ ಸಾವನ್ನು ತಪ್ಪಿಸಿಕೊಂಡ ಸಿಸಿಫಸ್. ಕೊನೆಗೊಮ್ಮೆ ಆತನನ್ನು ಹಿಡಿದು ಅಧೋಲೋಕಕ್ಕೆ ಕರೆದೊಯ್ದು ವಿಚಿತ್ರವಾದ ಶಿಕ್ಷೆ ಕೊಟ್ಟರು. ಆ ಶಿಕ್ಷೆಯೆಂದರೆ ಒಂದು ದೊಡ್ಡ ಬಂಡೆಗಲ್ಲನ್ನು ಕೆಳಗಿನಿಂದ ತಳ್ಳಿಕೊಂಡು ಬೆಟ್ಟದ ಮೇಲಕ್ಕೊಯ್ದು ಇರಿಸುವುದು. ಅವನು ಕಷ್ಟಪಟ್ಟು ಎತ್ತಿಕೊಂಡು ಮೇಲಿರಿಸಿದ ತಕ್ಷಣ ಅದು ಉರುಳಿ ಮತ್ತೆ ಕೆಳಗೆ ಬರುತ್ತಿತ್ತು. ಪುನಃ ಸಿಸಿಫಸ್ ಅದನ್ನು ಬೆಟ್ಟದ ಮೇಲಕ್ಕೆ ಒಯ್ಯಬೇಕು. ಈ ಕಾರ್ಯದಿಂದ ಅವನಿಗೆ ಮುಕ್ತಿಯಿಲ್ಲ. ವಿಶ್ರಾಂತಿ ಪಡೆಯದೆ ಮಾಡುತ್ತಲೇ ಇರಬೇಕು. ಗ್ರೀಸ್ ದೇಶದ ಪುರಾಣ ಕಥೆಗಳ ಪ್ರಕಾರ ಈಗಲೂ ಸಿಸಿಫಸ್ ಆ ಕೆಲಸವನ್ನು ಮಾಡುತ್ತಲೇ ಇದ್ದಾನೆ. ಅದಕ್ಕೆಂದೇ ಪೂರ್ತಿಯಾಗದ ವ್ಯರ್ಥ ಪ್ರಯತ್ನಕ್ಕೆ ‘ಸಿಸಿಫಸ್ ಟಾಸ್ಕ್’ ಎಂದು ಕರೆಯುತ್ತಾರೆ. ಏಕತಾನತೆಯಿಂದ ಮಾಡಿದ್ದನ್ನೇ ಮಾಡುತ್ತ ಇರುವ ಕಾರ್ಯ ಇದು. ಅದಕ್ಕೆ ಕೊನೆ ಮೊದಲು ಎನ್ನುವುದು ಇಲ್ಲ. ಕಗ್ಗ ಸೂಕ್ಷ್ಮವಾಗಿ ಈ ಕಥೆಯನ್ನು ಪ್ರಸ್ತಾಪಿಸಿ, ಪ್ರಪಂಚದ ಸ್ಥಿತಿ ಮತ್ತು ಪುರುಷ ಪ್ರಗತಿಯೂ ಈ ಸಿಸಿಫಸ್‌ನ ಕಾರ್ಯದಂತೆ ಕೊನೆ ಮೊದಲು ಇಲ್ಲದ್ದಾಗಿದೆ ಎನ್ನುತ್ತದೆ. ಗುಹೆಯಲ್ಲಿದ್ದ ಮನುಷ್ಯ ಶತಶತಮಾನಗಳ ಪ್ರಯತ್ನದಿಂದ, ಬುದ್ಧಿಶಕ್ತಿಯಿಂದ ವ್ಯವಸ್ಥೆಯನ್ನು ಕಟ್ಟಿ ಬೆಳೆಸಿ ಒಂದು ಹಂತಕ್ಕೆ ಬಂದಿತು ಎನ್ನುವಾಗ ಯಾವುದೋ ಪ್ರಚಂಡವಾದ ಅನಾಹುತ ಜರುಗಿ ಮತ್ತೆ ವ್ಯವಸ್ಥೆ ಮುಕ್ಕಾಗಿ ಹೋಯಿತು. ಮತ್ತೆ ಕಟ್ಟುವ ಕೆಲಸ, ಮತ್ತೆ ಶತಮಾನಗಳ ಪರಿಶ್ರಮ. ನಂತರ ಮತ್ತೊಂದು ಮಹಾಯುದ್ಧ, ಮಾರಣ ಹೋಮ, ಜಗತ್ತಿನಲ್ಲಿ ತಲ್ಲಣ.

ಮತ್ತೆ ಮನುಷ್ಯ ಪ್ರಯತ್ನ ದಿಟ್ಟತನದಿಂದ ಮುಂದುವರೆಯಿತು. ಆಗ ಬಂದದು ಯಾವುದೋ ಮಹಾರೋಗ. ಅದು ಪ್ಲೇಗ್ ಆಗಿರಬಹುದು. ಕಾಲರಾ ಆಗಿರಬಹುದು. ಒಂದು ಕಾಲಕ್ಕೆ ಇನ್‌ಫ್ಲುಯೆಂಝಾ ಮಾರಿ, ಔಷಧವಿಲ್ಲದೆ ಹೋದಾಗ, ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ತಾಂತ್ರಿಕತೆಯಲ್ಲಿ, ವಿಜ್ಞಾನದಲ್ಲಿ ನಮ್ಮಷ್ಟು ಮುಂದುವರೆದವರು ಯಾರೂ ಇಲ್ಲ ಎಂದು, ಸಿಸಿಫಸ್‌ನ ಬಂಡೆ ಬೆಟ್ಟದ ಮೇಲೆ ಏರಿದೆಯೆಂಬಂತೆ, ಎದೆತಟ್ಟಿಕೊಂಡು ಸಂಭ್ರಮಿಸುವಾಗ, ಒಂದೇ ಗ್ರಾಮಿನಷ್ಟು ತೂಕದ ಕೊರೋನಾ ವೈರಾಣು ಇಡೀ ಮಾನವ ಪ್ರಪಂಚವನ್ನು ಮೊಣಕಾಲೂರಿ ಕೂಡುವ ಹಾಗೆ ಮಾಡಿದೆ. ಮತ್ತೆ ಮುಂದೆ ಕಟ್ಟುವ ಕೆಲಸ. ಇದು ಸಿಸಿಫಸ್‌ನು ಬಂಡೆ ಎತ್ತುವ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.