ADVERTISEMENT

ತೆರೆಗಳು ಸಮುದ್ರವಿರುವುದರ ಲಕ್ಷಣ

ಡಾ. ಗುರುರಾಜ ಕರಜಗಿ
Published 4 ಡಿಸೆಂಬರ್ 2019, 18:07 IST
Last Updated 4 ಡಿಸೆಂಬರ್ 2019, 18:07 IST

ಅರೆಯರೆಯ ನಮಗೆ ತೋರ್ಪೊಲವು ಚೆಲುವುಗಳೆಲ್ಲ |
ಪರಿಪೂರ್ಣ ಸುಖಸತ್ವ ಸಾಗರದ ತೆರೆಗಳ್ ||
ತರಣಿ ದೂರದೊಳಿಹನು, ಕಿರಣ ನಮಗೆಟಕುವುದು |
ತೆರೆಯು ನೆರೆತದಕುರುಹೊ– ಮಂಕುತಿಮ್ಮ || 219 ||

ಪದ-ಅರ್ಥ: ಅರೆಯರೆಯ=ಅರೆ(ಅರ್ಧ)+ಅರೆಯ(ಅರಿವಿನ, ತಿಳಿವಿನ), ತೋರ್ಪೊಲವು=ತೋರ್ಪ(ಕಾಣಿಸುವ)+ಒಲವು, ತರಣಿ=ಸೂರ್ಯ, ನಮಗೆಟಕುವುದು=ನಮಗೆ+ಎಟಕುವುದು(ನಿಲುಕುವುದು), ನೆರೆತ=ಪೂರ್ಣ ವಿಕಸನ, ಪ್ರೌಢತೆ, ಪರಿಪಕ್ವತೆ

ವಾಚ್ಯಾರ್ಥ: ಅರ್ಧತಿಳಿವಿನ ನಮಗೆ ಕಾಣುವ ಒಲವು, ಸೌಂದರ್ಯಗಳೆಲ್ಲವೂ ಪರಿಪೂರ್ಣವಾದ, ಸುಖ ಮತ್ತು ಸತ್ತ್ವದ ಸಮುದ್ರದ ತೆರೆಗಳು. ಸೂರ್ಯ ಅಷ್ಟು ದೂರವಿದ್ದರೂ ಅವನ ಕಿರಣಗಳು ಬಂದು ನಮ್ಮನ್ನು ಸೋಕುತ್ತವೆ. ತೆರೆಗಳಿರುವುದು ಮೂಲ ಪರಿಪೂರ್ಣವಾಗಿರುವುದರ ಸಂಕೇತ.

ADVERTISEMENT

ವಿವರಣೆ: ನಮಗೆ ಆರುಕುರುಡರು ಆನೆಯನ್ನು ಅರಿಯಲು ಹೊರಟ ಕಥೆ ಗೊತ್ತಿದೆ. ತಮ್ಮ ಅನುಭವದಿಂದಲೇ ಅದನ್ನು ತಿಳಿಯಲು ಹೊರಟ ಅವರಲ್ಲಿ ಒಬ್ಬ ಸೊಂಡಿಲನ್ನು ಮುಟ್ಟಿ ಅದು ಒಂದು ದೊಡ್ಡ ಸರ್ಪವಿದ್ದ ಹಾಗಿದೆ ಎಂದ. ಮತ್ತೊಬ್ಬ ಕಿವಿಯನ್ನು ಮುಟ್ಟಿ ಆನೆ ಒಂದು ಮೊರದ ಹಾಗಿದೆ ಎಂದು ಹೇಳಿದ. ಮೂರನೆಯಾತ ಆನೆಯ ಹೊಟ್ಟೆಯ ಮೇಲೆ ಕೈಯಾಡಿಸಿ ಆನೆ ಎಂದರೆ ಗೋಡೆ ಇದ್ದಂತೆ ಎಂದು ತೀರ್ಮಾನಿಸಿದ. ನಾಲ್ಕನೆಯವನು ಕಾಲುಗಳನ್ನು ಮುಟ್ಟಿ ಛೇ ಆನೆಯೆಂದರೆ ಒಂದು ಕಂಬವಿದ್ದಂತೆ ಎಂದು ವಾದಿಸಿದ. ಐದನೆಯ ಕುರುಡ ಬಾಲವನ್ನು ಹಿಡಿದುಕೊಂಡು ನೀವೆಲ್ಲ ಹೇಳಿದ್ದು ತಪ್ಪು, ಆನೆ ಒಂದು ಹಗ್ಗದಂತಿದೆ ಎಂದ. ಕೊನೆಯವನು ಆನೆಯ ಕೋರೆದಾಡಿಗಳನ್ನು ಮುಟ್ಟಿ, ಆನೆ ಅಪಾಯಕಾರಿಯಾದ ಭಲ್ಲೆಯಂತಿದೆ ಎಂದು ಅಭಿಪ್ರಾಯ ಪಟ್ಟ. ಇದೊಂದು ಮಕ್ಕಳ ಕಥೆ ಎನ್ನಿಸಿದರೂ ಇದು ನಿಜವಾದ ಅಧ್ಯಾತ್ಮವನ್ನು ತಿಳಿಸುವ ಕಥೆ. ಈ ಕುರುಡರಲ್ಲಿ ಯಾರು ಸತ್ಯ ಹೇಳಿದರು? ಒಂದು ರೀತಿಯಲ್ಲಿ ಎಲ್ಲರೂ ತಮತಮಗೆ ತಿಳಿದಂತೆ, ತಮ್ಮ ಅರಿವಿಗೆ ನಿಲುಕಿದಂತೆ ಸತ್ಯವನ್ನೇ ಹೇಳಿದ್ದರು. ಆದರೆ ಅದಾವುದೂ ನಿಜವಾದ ಸತ್ಯವಾಗಿರಲಿಲ್ಲ, ಅವರೆಲ್ಲ ಅನೂಹ್ಯವಾದ ಸತ್ಯವನ್ನು ತಮ್ಮ ಅರಿವಿನ ಮಿತಿಗಳಲ್ಲಿ ಕಾಣಲು ಪ್ರಯತ್ನಿಸಿದ್ದರು.

ಈ ಕಗ್ಗ ನಮಗೆ ಹೇಳುವುದು ಇದೇ ಅಧ್ಯಾತ್ಮಿಕ ಸತ್ಯವನ್ನು, ನಮಗಿರುವುದು ಸ್ಪಷ್ಟದೃಷ್ಟಿಯಲ್ಲ. ಅದು ಅರ್ಧ ತಿಳಿವು. ಈ ಅರೆತಿಳಿವಿನಲ್ಲಿ ನಮಗೆ ಕಾಣುವ ಒಲವು, ಸೌಂದರ್ಯಗಳೆಲ್ಲ ಅತ್ಯಂತ ಪರಿಪೂರ್ಣವಾದ, ನಿರುಪಾಧಿಕವಾದ ಪರಸತ್ವವೆಂಬ ಮಹಾಸಾಗರದ ತೆರೆಗಳು. ಕುರುಡರಿಗೆ ಹೇಗೆ ನಿಜವಾದ ಆನೆಯ ದರ್ಶನವಾಗಲಿಲ್ಲವೋ ಹಾಗೆಯೇ ನಮಗೆ ವ್ಯಕ್ತಿಗತವಾದ, ನನಸಲ್ಲದ, ಮಿತಿಯಾದ ಅರಿವಿನಿಂದ ಆ ಸಂಪೂರ್ಣವಾದ, ಸ್ವಯಂಸಿದ್ಧವಾದ ಪರಸತ್ವವೆಂಬ ಸಾಗರದ ದರ್ಶನವಾಗುವುದಿಲ್ಲ. ನಮಗೆ ಆ ಸಾಗರದ ಅರಿವಾಗುವುದುದಂಡೆಗೆ ಬಂದು ತಲುಪುವ, ನಮ್ಮ ಅನುಭವಗಳಿಗೆ ದೊರಕುವ ಈ ಪುಟ್ಟ ಪುಟ್ಟದಾದ ಒಲವು, ಸೌಂದರ್ಯಗಳಿಂದ. ಆದರೆ ಅವೇ ಸಾಗರವಲ್ಲ, ಅವು ಸಾಗರದ, ತೀರ ಕೊಂಚವೇ ಆದ ಶಕ್ತಿಯ ಉತ್ಪನ್ನಗಳು. ನಾವು ಸೂರ್ಯನನ್ನು ದಿಟ್ಟಿಸಿನೋಡಲಾರೆವು. ಆದರೆ ಅವನ ಕಿರಣಗಳು ನಮ್ಮನ್ನು ತಲುಪುವುದರಿಂದ ಅವನ ಇರುವಿನ ಅನುಭವವನ್ನು ಪಡೆಯುತ್ತೇವೆ. ಸೂರ್ಯಸಮುದ್ರ, ಕಿರಣಗಳು,ತೆರೆಗಳು ಕಾಣುವುದು, ಅನುಭವಕ್ಕೆ ಸಿಗುವುದು ಪ್ರಚಂಡವಾದ ಸಾಗರವಿದ್ದಾಗ ಮಾತ್ರ. ಈ ತೆರೆಗಳು ಸಮುದ್ರದ ವಿಶಾಲತೆಯ ಲಕ್ಷಣಗಳು. ಅಂತೆಯೇ ನಮ್ಮ ಬದುಕಿನಲ್ಲಿ ಕಾಣುವ ಎಲ್ಲ ಅನುಭವಗಳು ಮೂಲದಲ್ಲಿ, ಆಳದಲ್ಲಿ ಪರಸತ್ವವೆಂಬ ಅನೂಹ್ಯವಾದ, ಅಪರಂಪಾರವಾದ ಶಕ್ತಿಯುಳ್ಳ ಮಹಾಸಮುದ್ರದ ತೆರೆಗಳಿದ್ದಂತೆ. ಈ ತೆರೆಗಳು, ಹಿಂದೆಕಲ್ಪನಾತೀತವಾದ ಬೃಹತ್ ಸಾಗರವಿದೆಎನ್ನುವುದಕ್ಕೆಕುರುಹು, ಲಕ್ಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.