ADVERTISEMENT

ಬೆರಗಿನ ಬೆಳಕು: ಶಾಂತಿಯ ಅರಸುವಿಕೆ

ಡಾ. ಗುರುರಾಜ ಕರಜಗಿ
Published 13 ಜನವರಿ 2021, 19:30 IST
Last Updated 13 ಜನವರಿ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬೆರಗಿನ ಬೆಳಕು: ಶಾಂತಿಯ ಅರಸುವಿಕೆ
ಅಂತಾನುಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನೆ ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು – ಮಂಕುತಿಮ್ಮ || 376 ||

ಪದ-ಅರ್ಥ: ಅಂತಾನುಮಿಂತಾನುಮೆಂತೊ= ಅಂತಾನುಂ=ಹಾಗಾದರೂ, ಇಂತಾನುಂ=ಹೀಗಾದರೂ, ಎಂತೊ=ಹೇಗೋ, ನೀನರಸು=
ನೀನು+ಅರಸು (ಹುಡುಕು), ಸಂತವಿಡುತೊಮ್ಮೆ=ಸಂತವ(ಸಮಾಧಾನವ)+ಇಡುತ+ಒಮ್ಮೆ, ಸ್ವಾಂತಮಂ=ಸ್ವ+ಅಂತಮುಂ(ಮನಸ್ಸನ್ನು)

ವಾಚ್ಯಾರ್ಥ: ಹಾಗೋ, ಹೀಗೋ, ಎಂತೋ, ನಿನಗೆ ಆದಂತೆ ಮನಸ್ಸು ಕೆರಳಿದಾಗ, ಶಾಂತಿಯನ್ನೇ ನೀನು ಹುಡುಕಾಡು. ಒಮ್ಮೆ ಸಮಾಧಾನ ಮಾಡುತ್ತ, ಒಮ್ಮೆ ಶಿಕ್ಷೆ ನೀಡುತ್ತ ಮಗುವನ್ನು ನೋಡಿಕೊಳ್ಳುವ ಹಾಗೆ ನಿನ್ನ ಮನಸ್ಸನ್ನು ತಿದ್ದುತಿರು.

ADVERTISEMENT

ವಿವರಣೆ: ಅದೊಂದು ದೊಡ್ಡ ವ್ಯಾಪಾರಿ ಮಳಿಗೆ. ಅಜ್ಜ ತಮ್ಮ ಮೊಮ್ಮಗನನ್ನು ಕರೆದು ತಂದಿದ್ದರು. ಆತ ಮಹಾ ಉಪದ್ವ್ಯಾಪಿ. ಒಂದು ಕ್ಷಣ ಸುಮ್ಮನಿರುವವನಲ್ಲ. ಹುಡುಗ ಓಡಿದ, ಯಾವುದೋ ಪ್ಲಾಸ್ಟಿಕ್ ಡಬ್ಬಿಯನ್ನು ಹಿಡಿದೆಳೆದ. ಧಡಧಡನೇ ಹತ್ತಾರು ಡಬ್ಬಿಗಳು ಉರುಳಿದವು, ಭಾರೀ ಸಪ್ಪಳವಾಯ್ತು. ಮಳಿಗೆಯ ಸೇವಕರು ಓಡಿ ಬಂದರು. ಅಜ್ಜ ಓಡಿ ಬಂದರು, ‘ಗುಂಡಪ್ಪ, ಶಾಂತನಾಗಪ್ಪಾ, ಕೋಪ ಬೇಡಪ್ಪಾ’ ಎನ್ನುತ್ತಾ ನಿಧಾನವಾಗಿ ಮೊಮ್ಮಗನನ್ನು ಕರೆದು ಮುಂದೆ ನಡೆದರು. ಅವರು ಏನನ್ನೋ ತೆಗೆದುಕೊಳ್ಳಲು ಒಂದೆಡೆಗೆ ಹೋದಾಗ ಮೊಮ್ಮಗ ಮತ್ತೊಂದೆಡೆಗೆ ನುಗ್ಗಿದ. ನೇತಾಡುತ್ತಿದ್ದ ಬಟ್ಟೆಯನ್ನು ಹಿಡಿದು ಎಳೆದ. ಅಯ್ಯೋ, ಆ ಬಟ್ಟೆಯೊಂದಿಗೆ ನೂರಾರು ಬಟ್ಟೆಯ ಸುರುಳಿಗಳು ಉರುಳುರುಳಿ ಬಂದವು. ಜನ ಹೋ ಎಂದು ಕಿರಿಚಿದರು. ಮ್ಯಾನೇಜರ್ ಕೂಗುತ್ತಾ ಬಂದ. ಎಲ್ಲರಿಗೂ ಹುಡುಗನ ಮೇಲೆ ಕೋಪ. ಅಜ್ಜ ಮತ್ತೆ ಬಂದರು. ಮಗುವನ್ನು ರಟ್ಟೆ ಹಿಡಿದು ಬದಿಗೆ ಕರೆತಂದರು. ‘ಗುಂಡಪ್ಪ, ಕೋಪ ಬೇಡಪ್ಪಾ, ಇನ್ನೊಂದು ಹತ್ತು ನಿಮಿಷ ಹೇಗಾದರೂ ತಡೆದುಕೋ. ಹತ್ತೇ ನಿಮಿಷ. ಎಲ್ಲ ಮುಗಿದುಹೋಗುತ್ತದೆ’.

ಅಂಗಡಿಯ ಕೆಲಸ ಬೇಗ ಮುಗಿಸೋಣವೆಂದು ಅಜ್ಜ ಕೊನೆಗೆ ತರಕಾರಿಯ ಅಂಗಡಿಗೆ ಬಂದು ಬೇಕಾದ ತರಕಾರಿಯನ್ನು ಕೊಳ್ಳುತ್ತಿದ್ದರು. ಆಗ ಹಿಂದೆ ಯಾರೋ ಹೋ ಹೋ ಎಂದು ಕೂಗಿದಂತಾಯಿತು. ತಿರುಗಿ ನೋಡಿದರೆ ಇಬ್ಬರು ಹೆಣ್ಣುಮಕ್ಕಳು ನೀರಿನಲ್ಲಿ ಜಾರಿ ದೊಪ್ಪನೆ ಬಿದ್ದರು. ತರಕಾರಿಯವನಿಗೆ ಈ ನೀರು ಹೇಗೆ ಬಂತು ಎಂಬ ಆಶ್ಚರ್ಯ. ನೋಡಿದರೆ ಈ ಹುಡುಗ ಅಲ್ಲಿದ್ದ ಕುಡಿಯುವ ನೀರಿನ ನಲ್ಲಿಯನ್ನು ತಿರುಗಿಸಿ ಬಿಟ್ಟಿದ್ದಾನೆ. ನೀರು ಹರಿದು, ಮೊದಲೇ ನುಣುಪಾದ ನೆಲ ಜಾರಿಕೆಯಾಗಿದೆ. ಒಂದಿಬ್ಬರು ಆ ಹುಡುಗನನ್ನು ಹೊಡೆಯಲೇ ಹೋದರು. ಅಜ್ಜ ಮುನ್ನುಗ್ಗಿ ಹೋಗಿ ಮೊಮ್ಮಗನನ್ನು ದೂರ ಎಳೆದುಕೊಂಡು ಹೋಗುತ್ತ, ‘ಗುಂಡಣ್ಣಾ, ಯಾಕಪ್ಪಾ ಕೋಪ? ಸ್ವಲ್ಪ ತಡೆದುಕೋ. ಇನ್ನು ಮುಗಿದೇ ಹೋಯಿತಲ್ಲ. ಶಾಂತನಾಗು’ ಎನ್ನುತ್ತಿದ್ದರು. ಇವರನ್ನು ಗಮನಿಸುತ್ತಿದ್ದ ಮಹಿಳೆಯೊಬ್ಬಳು ಹತ್ತಿರ ಬಂದು, ‘ಸರ್, ನಿಮ್ಮ ತಾಳ್ಮೆಗೆ ಸಲಾಂ. ನಿಮ್ಮ ಮೊಮ್ಮಗ ಗುಂಡಣ್ಣ ಇಷ್ಟು ಕೀಟಲೆ ಮಾಡುತ್ತಿದ್ದರೂ ನೀವು ಕೋಪ ಮಾಡಿಕೊಳ್ಳದೇ ಅವನನ್ನು ಸಂತೈಸುತ್ತಿದ್ದೀರಲ್ಲ ಅದು ಆಶ್ಚರ್ಯ’ ಎಂದರು. ಆಗ ಅಜ್ಜ, ‘ಅಮ್ಮ, ಅವನ ಹೆಸರು ಕಿಟ್ಟಣ್ಣ’ ಎಂದರು. ‘ಹಾಗಾದರೆ ಗುಂಡಣ್ಣ ಶಾಂತನಾಗು ಎಂದು ಹೇಳುತ್ತಿದ್ದಿರಲ್ಲ?’ ಎಂದು ಕೇಳಿದಾಗ ಅಜ್ಜ ಹೇಳಿದರು, ‘ಅಮ್ಮಾ, ನಾನೇ ಗುಂಡಣ್ಣ. ಆ ಮಾತನ್ನು ನನಗೇ ಹೇಳಿಕೊಳ್ಳುತ್ತಿದ್ದೆ’ ಎಂದರು!

ನಮಗೆ ಮನಸ್ಸು ಕುದಿದಾಗ, ಹಾಗೋ, ಹೀಗೋ ಅದನ್ನ ಸಂತೈಸಿಕೊಳ್ಳಬೇಕು. ಕೆಲವೊಮ್ಮೆ ಅದನ್ನು ಪ್ರೀತಿಯಿಂದ, ಕೆಲವೊಮ್ಮೆ ಬಿಗಿಯಿಂದ ಶಿಕ್ಷಿಸುತ್ತ, ತಿದ್ದುತ್ತ, ಶಾಂತಿಯನ್ನು ಅರಸಬೇಕು. ನಮ್ಮ ಬದುಕಿನಲ್ಲಿ ಶಾಂತಿಗೆ ಸಕಲ ಪ್ರಯತ್ನಗಳನ್ನು ಮಾಡುತ್ತಿರಬೇಕು. ಅದರ ವಿಧಾನಗಳನ್ನು ನಾವೇ ಕಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.