ADVERTISEMENT

ಬೆರಗಿನ ಬೆಳಕು: ಆಕರ್ಷಣೆಯ ನಿಗ್ರಹ

ಡಾ. ಗುರುರಾಜ ಕರಜಗಿ
Published 17 ನವೆಂಬರ್ 2020, 19:30 IST
Last Updated 17 ನವೆಂಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಸಿವಿ ರಾಷ್ಟ್ರದ ಅರಿಟ್ಟಪುರವೆಂಬ ನಗರದಲ್ಲಿ ಸಿವಿ ರಾಜನಿದ್ದ. ಬೋಧಿಸತ್ವ ಅವನ ಮಗನಾಗಿ ಹುಟ್ಟಿದ್ದ. ಅವನ ಹೆಸರು ಸಿವಿಕುಮಾರ ಎಂದಾಗಿತ್ತು. ಇದೇ ಸಮಯಕ್ಕೆ ಸೇನಾಪತಿಗೂ ಒಬ್ಬ ಮಗನಾಗಿದ್ದ. ಅವನ ಹೆಸರು ಅಹಿಪಾರಕ. ಇಬ್ಬರೂ ಜೊತೆಯಾಗಿಯೇ ಬೆಳೆದು, ಕಲಿತು ದೊಡ್ಡವರಾದರು. ಮುಂದೆ ಸಿವಿಕುಮಾರ ರಾಜನಾಗಿ ಅಹಿಪಾರಕ ಸೇನಾಪತಿಯಾದ.

ಆ ನಗರದಲ್ಲಿ ಕಿರೀಟವಚ್ಚ ಎಂಬ ಶ್ರೇಷ್ಠಿಗೆ ಉಮ್ಮದಂತಿ ಎಂಬ ಮಗಳಿದ್ದಳು. ಆಕೆಗೆ ಹದಿನಾರು ವರ್ಷ ವಯಸ್ಸಾದಾಗ ಆಕೆಯ ಸೌಂದರ್ಯ ಮನುಷ್ಯ ದೇಹವನ್ನು ಮೀರಿತ್ತು. ಆಕೆಯನ್ನು ನೋಡಿದವರಿಗೆ ಸುರಾಪಾನದಿಂದಾದಂತೆ ಪ್ರಜ್ಞಾಹೀನತೆ ಬಂದು ಎಚ್ಚರ ತಪ್ಪಿ ಬೀಳುತ್ತಿದ್ದರು. ಕಿರೀಟವಚ್ಚ ಅರಮನೆಗೆ ಹೋಗಿ ರಾಜನ ತಂದೆಗೆ ತನ್ನ ಮಗಳ ಬಗ್ಗೆ ಹೇಳಿ, ಆಕೆ ನಿಜವಾಗಿಯೂ ರಾಜ ಸಿವಿಕುಮಾರನಿಗೆ ಸರಿಯಾದವಳು, ತಕ್ಷಣ ತಜ್ಞರನ್ನು ಕಳುಹಿಸಿ ಪರೀಕ್ಷಿಸಬಹುದು ಎಂದು ಹೇಳಿದ. ರಾಜ ಇಬ್ಬರು ಹಿರಿಯ ಬ್ರಾಹ್ಮಣರನ್ನು ವಧುಪರೀಕ್ಷೆಗೆ ಕಳುಹಿಸಿದ. ಅವರು ಬಂದು ಆಕೆಯನ್ನು ನೋಡಿದಾಕ್ಷಣ ಕಾಮವಾಸನೆಗೆ ಪರವಶರಾಗಿ ಮೂಢರಂತೆ ವರ್ತಿಸತೊಡಗಿದರು. ಅದನ್ನು ನೋಡಿ ಶ್ರೇಷ್ಠಿ ಅವರನ್ನು ಮನೆಯಿಂದ ಹೊರಗೆ ತಳ್ಳಿಸಿಬಿಟ್ಟ. ಅವರು ಕೋಪದಿಂದ ಕುದಿದು ರಾಜಭವನಕ್ಕೆ ಹೋಗಿ ಆ ಹುಡುಗಿ ಅಮಂಗಳ, ಆಕೆ ರಾಜಮನೆತನಕ್ಕೆ ಯೋಗ್ಯಳಲ್ಲ ಎಂದು ಹೇಳಿದರು.

ಆಗ ಕಿರೀಟವಚ್ಚ ಉಮ್ಮದಂತಿಯನ್ನು ಸೇನಾಪತಿ ಅಹಿಪಾರಕನಿಗೆ ಮದುವೆ ಮಾಡಿಕೊಟ್ಟ. ರಾಜ ತನ್ನನ್ನು ಅಮಂಗಳೆ ಎಂದು ಕರೆದರೆಂದು ಭಾವಿಸಿ ಅವನ ಬಗ್ಗೆ ಉಮ್ಮದಂತಿಗೆ ವೈರಭಾವ ಮೂಡಿತು. ಆಕೆಯ ಗಂಡ ನಿನ್ನ ಈ ಅಪರೂಪದ ಸೌಂದರ್ಯದ ಕಾರಣ ತಿಳಿಯುತ್ತಿಲ್ಲ ಎಂದಾಗ ಆಕೆ ತನ್ನ ಹಿಂದಿನ ಜನ್ಮದ ವೃತ್ತಾಂತ ತಿಳಿಸಿದಳು. ಆಕೆ ಒಂದು ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದ್ದಳು. ಶ್ರೀಮಂತ ಸ್ತ್ರೀಯರು ಹೊಳೆಯುವ ಕೆಂಪು ಬಟ್ಟೆಯನ್ನು ಧರಿಸಿದಾಗ ತನಗೂ ಅಂತಹ ಬಟ್ಟೆ ಬೇಕೆಂದು ಹಂಬಲಿಸಿದ್ದಳು. ಒಬ್ಬ ಶ್ರೀಮಂತರ ಮನೆಯಲ್ಲಿ ಮೂರು ವರ್ಷ ಅತ್ಯಂತ ಪ್ರಾಮಾಣಿಕವಾಗಿ ದುಡಿದಾಗ ಅವರು ಆಕೆಗೆ ರಕ್ತವರ್ಣದ ಬಟ್ಟೆಗಳನ್ನು ಕೊಟ್ಟರು. ಆಕೆ ಸ್ನಾನ ಮಾಡಿ ಅದನ್ನು ಧರಿಸಲು ಕೊಳಕ್ಕೆ ಹೋಗಿ ಬಟ್ಟೆಗಳನ್ನು ದಂಡೆಯ ಮೇಲಿಟ್ಟು ನೀರಿಗಿಳಿದಳು. ಆಗ ಬುದ್ಧನ ಶಿಷ್ಯನೊಬ್ಬ ಅಲ್ಲಿಂದ ಹೋಗುತ್ತಿದ್ದ. ಅವನ ಚೀವರವೆಲ್ಲ ಹರಿದು ಹೋಗಿತ್ತು. ಆತ ಮಾನ ಮುಚ್ಚಿಕೊಳ್ಳಲು ಎಲೆಗಳನ್ನು ಹಿಡಿದುಕೊಂಡಿದ್ದ. ಆಗ ಈಕೆ ಅವನನ್ನು ಕೂಗಿ ನಿಲ್ಲಿಸಿ ತನ್ನ ಬಟ್ಟೆಯಲ್ಲೇ ಅರ್ಧವನ್ನು ಹರಿದು ಆತನಿಗೆ ಕೊಟ್ಟಳು. ಆತನ ದೇಹ ಬಂಗಾರದಂತೆ ಹೊಳೆಯತೊಡಗಿತು. ಈಕೆ, ‘ಭಂತೆ, ಮುಂದೆ ನಾನು ಪ್ರಪಂಚದಲ್ಲಿ ಹುಟ್ಟಿದಾಗ ಅತ್ಯಂತ ರೂಪಿಸಿಯಾಗಬೇಕು. ನನ್ನನ್ನು ಕಂಡ ಮನುಷ್ಯನಿಗೆ ಸ್ವಾಧೀನ ತಪ್ಪಬೇಕು’ ಎಂದು ಬೇಡಿಕೊಂಡಳು. ಆತ ಹರಸಿದ. ಅದರ ಫ್ರತಿಫಲ ಈ ರೂಪ ಎಂದು ತಿಳಿಸಿದಳು.

ADVERTISEMENT

ಒಂದು ದಿನ ನಗರ ಪ್ರವಾಸದಲ್ಲಿ ರಾಜ ಅಹಿಪಾರಕನ ಮನೆಯ ಬಳಿಗೆ ಬಂದಾಗ ಕಿಟಕಿಯಲ್ಲಿ ಉಮ್ಮದಂತಿಯನ್ನು ಕಂಡು ಎಚ್ಚರ ತಪ್ಪಿದ. ಎಲ್ಲ ರಾಜಕಾರ್ಯಗಳನ್ನು ತೊರೆದು ಅರಮನೆಯಲ್ಲಿ ಉಳಿದ. ಸೇನಾಪತಿ ಅಹಿಪಾರಕನಿಗೆ ಸ್ನೇಹಿತ ಮತ್ತು ರಾಜನ ಪರಿಸ್ಥಿತಿ ಅರ್ಥವಾಗಿ ಉಮ್ಮದಂತಿಯನ್ನು ರಾಜನಿಗೆ ಒಪ್ಪಿಸಲು ಸಿದ್ಧನಾದ. ಅವನ ತ್ಯಾಗ ರಾಜನ ಕಾಮವನ್ನು ಮರೆಸಿತು. ಆತ ಸ್ನೇಹಿತನ ಮತ್ತು ಉಮ್ಮದಂತಿಯ ಕ್ಷಮೆ ಕೇಳಿ ಕಾಮವಾಸನೆಯನ್ನು ಕಳೆದುಕೊಂಡ.

ಪ್ರಪಂಚದ ಆಕರ್ಷಣೆಗಳು ನಮ್ಮನ್ನು ಸೆಳೆಯಬಹುದು. ಆದರೆ ಅದನ್ನು ನಿಗ್ರಹಿಸಿ ಬದುಕು ಸಾಗಿಸುವುದು ಸಾತ್ವಿಕ ಕಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.