ADVERTISEMENT

ಇಬ್ಬರು ಸಮವರ್ತಿಗಳು

ಡಾ. ಗುರುರಾಜ ಕರಜಗಿ
Published 29 ಜನವರಿ 2020, 19:45 IST
Last Updated 29 ಜನವರಿ 2020, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ |

ಯಮರಾಜನೊಬ್ಬ ಜಾಠರರಾಜನೊಬ್ಬ ||

ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು |

ADVERTISEMENT

ಶಮಿಸಿ ಮುಗಿಸುವನೊಬ್ಬ ಮಂಕುತಿಮ್ಮ || 243 ||

ಪದ-ಅರ್ಥ: ಸಮವರ್ತಿ=ಎಲ್ಲವನ್ನೂ ಸಮನಾಗಿ ನೋಡುವವನು, ದಿಟವರಿಯೆ=ದಿಟ(ಸತ್ಯ)+ಅರಿಯೆ(ತಿಳಿಯೆ), ಜಾಠರರಾಜ=ಜಾಠರ(ಹೊಟ್ಟೆಗೆ ಸಂಬಂಧಿಸಿದ)+ರಾಜ, ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು=ಶ್ರಮವನು+ಅನುದಿನಂ(ಪ್ರತಿದಿನ)+ಆಗಿಪನು (ಮಾಡುವನು)+ಒಬ್ಬನು+ಎಲ್ಲವನು, ಶಮಿಸಿ=ಶಾಂತವಾಗಿ ಮಾಡಿ.

ವಾಚ್ಯಾರ್ಥ: ಸತ್ಯವಾಗಿ ತಿಳಿದರೆ, ಜಗತ್ತಿನಲ್ಲಿ ಇಬ್ಬರೇ ಎಲ್ಲರನ್ನೂ ಸಮವಾಗಿ ನೋಡುವವರು. ಒಬ್ಬ ಯಮರಾಜ, ಮತ್ತೊಬ್ಬ ಹೊಟ್ಟೆಯ ಹಸಿವಿನ ರಾಜ. ಹಸಿವು ಎಂಬ ಹೊಟ್ಟೆಯರಾಜ ನಮ್ಮನ್ನು ಪ್ರತಿದಿನ ಸತತವಾಗಿ ದುಡಿಸುತ್ತಾನೆ ಆದರೆ ಮತ್ತೊಬ್ಬ ಯಮರಾಜ ಎಲ್ಲರನ್ನೂ ಶಾಂತವಾಗಿಸಿ ಜೀವನ ಮುಗಿಸಿ ಬಿಡುತ್ತಾನೆ.

ವಿವರಣೆ: ಜಗತ್ತಿನಲ್ಲಿ ಎಲ್ಲವೂ ಬೇರೆಬೇರೆಯಾಗಿದೆ. ಅವರ ಅಪೇಕ್ಷೆಗಳೂ ಬೇರೆ. ಅವರು ಮತ್ತೊಬ್ಬರನ್ನು ಕಾಣುವ, ಆದರಿಸುವ ರೀತಿಗಳೂ ಬೇರೆ. ಎಲ್ಲರನ್ನೂ ಒಂದೇ ರೀತಿಯಾಗಿ ನೋಡುವುದು ಬಹಳ ಕಷ್ಟ. ಒಬ್ಬ ತಾಯಿಗೆ ನಾಲ್ಕು ಮಕ್ಕಳಿದ್ದರೆ, ಆಕೆಗೆ ಎಲ್ಲರ ಬಗ್ಗೆಯೂ ಸಮಾನ ಪ್ರೀತಿ ಇದ್ದರೂ ಅವರವರ ಸ್ವಭಾವಗಳಿಗೆ, ಅವಶ್ಯಕತೆಗಳಿಗೆ ಅನುಸಾರವಾಗಿ ಆಕೆ ಅವರನ್ನು ಭಿನ್ನವಾಗಿಯೇ ಪೋಷಿಸುತ್ತಾಳೆ. ಆದರೆ ಒಂದು ಸತ್ಯವನ್ನು ಹಾಸ್ಯದ ಮುಖವಾಡದೊಂದಿಗೆ ಡಿ.ವಿ.ಜಿ ಹೇಳುತ್ತಾರೆ, ಪ್ರಪಂಚದಲ್ಲಿ ನಿಜವಾಗಿಯೂ ಹೇಳುವುದಾದರೆ ಇಬ್ಬರೇ ಸಮವರ್ತಿಗಳು. ಅವರಿಬ್ಬರೂ ಯಾವ ಜೀವಿಯಲ್ಲೂ ವ್ಯತ್ಯಾಸ ಮಾಡದೆ, ಒಂದೇ ರೀತಿಯಲ್ಲಿ, ಎಲ್ಲರೊಂದಿಗೆ ವ್ಯವಹರಿಸುತ್ತಾರೆ. ಅವರಲ್ಲೊಬ್ಬ ಯಮರಾಜ ಹಾಗೂ ಮತ್ತೊಬ್ಬ ಹೊಟ್ಟೆಗೆ ಸಂಬಂಧಿಸಿದ ರಾಜ.

ಈ ಹೊಟ್ಟೆಯ ರಾಜ ಹಸಿವು. ಅದು ಏನೆಲ್ಲ ಕೆಲಸಗಳನ್ನು ಮಾಡಿಸುತ್ತದೆ. ಹಸಿವು ಎನ್ನುವುದು ಇಲ್ಲದೆ ಹೋಗಿದ್ದರೆ ಏನಾಗುತ್ತಿತ್ತು? ಬಹುಶಃ ಸಂಬಂಧಗಳೇ ಇರುತ್ತಿರಲಿಲ್ಲವೇನೋ? ಕೃಷಿ ಸಂಬಂಧಿತವಾದ ಯಾವ ಚಟುವಟಿಕೆಗಳೂ ಬೇಕಿರಲಿಲ್ಲ. ಎಂಥ ಮನುಷ್ಯನೇ ಆಗಲಿ, ಅವನು ರಾಜನಾಗಲಿ, ಭಿಕಾರಿಯಾಗಲಿ ಇಬ್ಬರನ್ನೂ ಹಸಿವು ಕಾಡುತ್ತದೆ. ಅದಕ್ಕೇ ದಾಸರು, ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಎಂದರು. ಹೊಟ್ಟೆಯನ್ನು ತುಂಬಿಸಲು ಏನೆಲ್ಲ ಹಾರಾಟ, ಒದ್ದಾಟ! ಹೊಟ್ಟೆ ಹಸಿದಾಗ ಯಾವ ಕೆಲಸವೂ ಸಾಗದು. ಮರಾಠಿ ಭಾಷೆಯಲ್ಲಿ ಒಂದು ಮಾತಿದೆ. ‘ಪೆಹಲೆ ಪೋಟೋಬಾ ನಂತರ ವಿಠೋಬಾ’ ಅಂದರೆ ಮೊದಲು ಹೊಟ್ಟೆರಾಯ ನಂತರ ವಿಠ್ಠಲ. ಹಸಿದು ಕಂಗಾಲಾದಾಗ ವಿಠ್ಠಲ ಕಣ್ಣ ಮುಂದೆ ಬಂದಾನೆಯೇ. ಇದನ್ನು ತಿಳಿದೇ ಸ್ವಾಮಿ ವಿವೇಕಾನಂದರು ಹೊಟ್ಟೆ ಹಸಿದಾಗ ಅಧ್ಯಾತ್ಮದ ಬಗ್ಗೆ ಹೇಳಬೇಡ ಎಂದರು. ಇದು ಎಲ್ಲರನ್ನೂ ಸಮಾನವಾಗಿ ಕಾಣುವ ಹಾಗೂ ಕಾಡುವ ಸಮವರ್ತಿ ಹೊಟ್ಟೆಯ ರಾಜ.

ಇನ್ನೊಬ್ಬ ಯಮರಾಜ. ಅವನು ತನ್ನ ಧರ್ಮವನ್ನು ಬಿಗಿಯಾಗಿ ಪಾಲಿಸುವುದರಿಂದಲೇ ಅವನ ಹೆಸರು ಯಮಧರ್ಮ. ಅವರವರ ಸಮಯ ಬಂದಾಗ ಯಾವ ಕರುಣೆ ಇಲ್ಲದೆ ಅವರ ಸ್ಥಾನ, ಗೌರವ, ಸಾಧನೆ, ವಯಸ್ಸು, ಲಿಂಗಗಳನ್ನು ಗಣಿಸದೆ ಪ್ರಾಣವನ್ನು ಹೀರಿಬಿಡುತ್ತಾನೆ. ಆದ್ದರಿಂದ ಅವನೂ ಸಮವರ್ತಿಯೇ.

ಮೊದಲನೆಯ ಸಮವರ್ತಿ ಹೊಟ್ಟೆರಾಯ ತನ್ನನ್ನುತೃಪ್ತಿಪಡಿಸಿಕೊಳ್ಳಲು ಮನುಷ್ಯರನ್ನು ಸದಾಕಾಲ ದುಡಿಯುವಂತೆ ಮಾಡುತ್ತಾನೆ. ಆದರೆ ಎರಡನೆಯ ಸಮವರ್ತಿ ಯಮರಾಜ ಎಲ್ಲ
ಚಟುವಟಿಕೆಗಳನ್ನು ಶಾಂತಮಾಡಿ ಜೀವನವನ್ನು ಮುಗಿಸಿಬಿಡುತ್ತಾನೆ.

ಎಲ್ಲರನ್ನೂ ಸಮನಾಗಿ ನೋಡುವ ಇಬ್ಬರೂ ಸಮವರ್ತಿಗಳು ಬದುಕಿಗೆ ಗುರಿಯನ್ನು ಹಾಗೂ ಅಂತ್ಯವನ್ನು ಕರುಣಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.