ADVERTISEMENT

ಬೆರಗಿನ ಬೆಳಕು: ಅನ್ಯಾಯಕ್ಕೆ ಪ್ರಾಯಶ್ಚಿತ್ತ

ಡಾ. ಗುರುರಾಜ ಕರಜಗಿ
Published 10 ನವೆಂಬರ್ 2020, 19:30 IST
Last Updated 10 ನವೆಂಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ತಪಸ್ಸು ಮಾಡುತ್ತ ಗೋದಾವರಿ ತೀರದಲ್ಲಿದ್ದ. ಅವನಿರುವ ಸ್ಥಳವನ್ನು ತಿಳಿದುಕೊಂಡು ಅನೇಕ ಜನ ಅಲ್ಲಿಗೆ ಬಂದು ನೆಲೆಸತೊಡಗಿದರು ಆಶ್ರಮ ತುಂಬಿ ಹೋದಾಗ ಬೋಧಿಸತ್ವ ಅದನ್ನು ತೊರೆದು ಮತ್ತೊಂದು ಸ್ಥಳಕ್ಕೆ ಬಂದ. ಅಲ್ಲಿ ಮತ್ತೊಂದು ಆಶ್ರಮ ಕಟ್ಟಿದ. ಅಲ್ಲಿಯೂ ನೂರು ಜನ ಹಿಂಬಾಲಕರು ಬಂದು ನೆಲೆಸಿದರು. ಬೋಧಿಸತ್ವ ನಿತ್ಯ ಆಕಾಶದಲ್ಲಿ ಕುಳಿತು ಎಲ್ಲರಿಗೂ ಧರ್ಮಬೋಧೆ ಮಾಡುತ್ತಿದ್ದ. ಅವನ ಅನೇಕ ಶಿಷ್ಯರಲ್ಲಿ ಏಳು ಶಿಷ್ಯರು ಪ್ರಮುಖರಾಗಿದ್ದರು. ಅವರೆಲ್ಲ ಒಂದು ಸಿದ್ಧಿಯ ಹಂತಕ್ಕೆ ಬಂದಾಗ ಬೋಧಿಸತ್ವ ಅವರನ್ನೆಲ್ಲ ಒಂದೆಡೆಗೆ ಕರೆದು ಧರ್ಮಪ್ರಸಾರಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವಂತೆ ತಿಳಿಸಿದ. ಶಿಷ್ಯರಲ್ಲಿ ಅತ್ಯಂತ ತಾಳ್ಮೆಯುಳ್ಳ, ತುಂಬ ಅಂತ:ಕರುಣೆಯಾದ ಕಿಸವಚ್ಚನನ್ನು ದಂಡಕೀ ದೇಶದ ಕುಂಭವತೀ ನಗರಕ್ಕೆ ಕಳುಹಿಸಿದ. ಕಿಸವಚ್ಚ ಗುರುವಿನ ಆಜ್ಞೆಯಂತೆ ಅಲ್ಲಿಗೇ ಹೋಗಿ ಸೇನಾಪತಿಯ ಆಶ್ರಯದಲ್ಲಿದ್ದ ಉದ್ಯಾನವನದಲ್ಲಿ ವಾಸ ಮಾಡಿದ. ಅಲ್ಲಿಯೇ ಬಂದವರಿಗೆ ಧರ್ಮಬೋಧೆ ಮಾಡುತ್ತಿದ್ದ.

ಒಂದು ದಿನ ಧ್ಯಾನದಲ್ಲಿ ಕುಳಿತಾಗ ಅಲ್ಲೊಬ್ಬ ಹೆಂಗಸು ಬಂದಳು. ಆಕೆ ರಾಜನಿಂದ ಮರ್ಯಾದೆ ಪಡೆದ ವೇಶ್ಯೆ. ಅವಳನ್ನು ರಾಜ ಪದಚ್ಯುತಳನ್ನಾಗಿ ಮಾಡಿದ್ದ. ಆಕೆ ಕೋಪದಿಂದ ಉದ್ಯಾನವನಕ್ಕೆ ಬಂದಿದ್ದಳು. ಧ್ಯಾನದಲ್ಲಿ ಕುಳಿತ ಈ ಜಟಾಧಾರಿಯನ್ನು ಕಂಡು ಆಕೆ ಈತ ಅಮಂಗಳ. ಅಮಂಗಳನ ಮೇಲೆ ಉಗಿದರೆ ಒಳಿತಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಪರೀಕ್ಷಿಸಿ ನೋಡುತ್ತೇನೆಂದು ಅವನ ತಲೆಯ ಮೇಲೆ ಉಗಿದಳು. ಮರುದಿನ ರಾಜನಿಗೆ ಆಕೆಯನ್ನು ಪದಚ್ಯುತಿ ಮಾಡಿದ್ದು ತಪ್ಪೆಂದು ತಿಳಿದು ಮತ್ತೆ ಆಕೆಯನ್ನು ನೇಮಿಸಿದ. ಆಕೆಗೆ ತಾನು ಅಮಂಗಳನ ಮೇಲೆ ಉಗಿದಿದ್ದರಿಂದಲೇ ತನಗೆ ಪದವಿ ದೊರಕಿತು ಎಂದು ಖಾತ್ರಿಯಾಯಿತು. ಮುಂದೆ ರಾಜಪುರೋಹಿತ ರಾಜನ ಕೋಪಕ್ಕೆ ತುತ್ತಾದ. ಅವನಿಗೂ ಆ ವೇಶ್ಯೆ ಅಮಂಗಳನ ಮೇಲೆ ಉಗುಳುವ ಸಲಹೆ ನೀಡಿದಳು. ಅದೇನು ಆಕಸ್ಮಿಕವೊ, ರಾಜ ಪುರೋಹಿತನನ್ನು ಮರುದಿನ ಮನ್ನಿಸಿದ. ಪುರೋಹಿತನಿಗೂ ಆ ನಂಬಿಕೆಯೇ ಖಚಿತವಾಯಿತು.

ಕೆಲದಿನಗಳ ನಂತರ ದೇಶದ ಗಡಿಭಾಗಗಳಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಯಿತು. ಆಗ ಸೇನಾಪತಿ ತನ್ನ ಸಾವಿರ ಜನ ಸೈನಿಕರನ್ನು ಕರೆದುಕೊಂಡು ಹೊರಟ. ಈಗಾಗಲೇ ಜನಜನಿತವಾದ ನಂಬಿಕೆಯಂತೆ ಸಾವಿರ ಸೈನಿಕರು ಹಾಗೂ ಸೇನಾಪತಿ ಉದ್ಯಾನವನಕ್ಕೆ ಬಂದು, ಶಿಷ್ಯರು ಎಷ್ಟೇ ತಡೆದರೂ ಕೇಳದೆ ಕಿಸವಚ್ಚ ಮುನಿಯ ತಲೆಯ ಮೇಲೆ, ಮುಖದ ಮೇಲೆ ಉಗಿದರು. ಕಿಸವಚ್ಚ ಒಂದಿನಿತೂ ಅಲುಗಲಿಲ್ಲ, ಯಾರನ್ನೂ ತೆಗಳಲಿಲ್ಲ.

ADVERTISEMENT

ಆದರೆ ಮೇಲಿನಿಂದ ದೇವತೆಗಳು ಒಂದೇ ಸಮನೆ ಮಳೆಗರೆದು ಮುನಿಯನ್ನು ಸ್ವಚ್ಛಮಾಡಿದರು. ಅವನನ್ನು ಎತ್ತಿ ಆಕಾಶಕ್ಕೆ ಕರೆದೊಯ್ದರು. ನಂತರ ಆಕಾಶದಿಂದ ಹೂವಿನ ಮಳೆಯಾಯಿತು. ಸ್ವಲ್ಪ ಹೊತ್ತಿನ ನಂತರ ಬಂಗಾರದ ನಾಣ್ಯಗಳ ಮಳೆ ಸುರಿಯಿತು. ಊರಜನವೆಲ್ಲ ಸಂಭ್ರಮದಿಂದ ಬಂದು ಉದ್ಯಾನದಲ್ಲಿ ನೆರೆದರು. ಆಗ ಬಂಗಾರದ, ವಜ್ರಗಳ ಆಭರಣಗಳ ಮಳೆಯಾಯಿತು. ಜನ ಹುಚ್ಚೆದ್ದು ಅವುಗಳನ್ನು ಆಯ್ದುಕೊಳ್ಳತೊಡಗಿದರು. ನಂತರ ಆಕಾಶದಿಂದ ಸುರಿದದ್ದು ಹರಿತವಾದ ಆಯುಧಗಳ ಮಳೆ. ಎಲ್ಲ ಮನುಷ್ಯರ ದೇಹಗಳು ಚೂರು ಚೂರಾದವು. ಆಮೇಲೆ ಮರಳಿನ, ಮಣ್ಣಿನ ಮಳೆ ಸುರಿದು ಯಾವ ಚಿನ್ಹೆಯೂ ಇಲ್ಲದಂತೆ ಎಲ್ಲವು ಮುಚ್ಚಿಹೋಯಿತು.

ಮುಗ್ಧರ, ಜ್ಞಾನಿಗಳ ಅಪಮಾನ ಮಾಡಿದ ಸಮಾಜ ಎಂದಿಗೂ ಸುಖವಾಗಿ ಇರಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.