ADVERTISEMENT

ಗತಿಬಿಂಬ ಅಂಕಣ: ಕಲ್ಯಾಣವಲ್ಲ, ಕಲಹ ‘ಗ್ಯಾರಂಟಿ’

ಹಸ್ತಾಂತರ: ಬಗೆಹರಿಯದ ಒಗಟು . . .

ವೈ.ಗ.ಜಗದೀಶ್‌
Published 15 ಫೆಬ್ರುವರಿ 2026, 23:30 IST
Last Updated 15 ಫೆಬ್ರುವರಿ 2026, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿ ಸಾವಿರ ದಿನ ಕಳೆದಿದೆ. ಆದರೆ, ನಾಯಕತ್ವಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ‘ಸಾವಿ’ರದ ಜಗಳಕ್ಕೆ ಕೊನೆಯೇ ಇಲ್ಲವಾಗಿದೆ. ‌ಗ್ಯಾರಂಟಿಗಳು ನಾಯಕರ ಮಾತುಗಳಲ್ಲಿ, ಜಾಹೀರಾತುಗಳಲ್ಲಿ ಅನುರಣಿಸುತ್ತಿದ್ದರೆ, ನಾಯಕರ
ನಡುವಿನ ಕಲಹದ ‘ಗ್ಯಾರಂಟಿ’ ಸದ್ದೇ ಜೋರಾಗಿದೆ. ನಾಯಕತ್ವ ಬದಲಾವಣೆಯ ವಿಷಯ ನಿತ್ಯದ ರಗಳೆ
ಯಾದರೆ, ಸರ್ಕಾರ ಅಸ್ಥಿರತೆಯತ್ತ ಸಾಗತೊಡಗುತ್ತದೆ. ತಮ್ಮ ಲಾಭಕ್ಕಾಗಿ ಅಸ್ಥಿರ ಸರ್ಕಾರವನ್ನೇಬಯಸುವ ಅಧಿಕಾರಿಗಳು ಹಣ ಮಾಡುವುದ ರಲ್ಲಿ ತಲ್ಲೀನರಾಗುತ್ತಾರೆ. ಇದರಿಂದ ಸಂಕಷ್ಟಕ್ಕೆ ಒಳಗಾಗುವ ಜನ ಆಳುವವರಿಗೆ ಹಿಡಿಶಾಪ ಹಾಕಲು ಶುರು ಮಾಡುತ್ತಾರೆ. ಅಲ್ಲಿಗೆ, ಸರ್ಕಾರದ ವರ್ಚಸ್ಸು ಕುಸಿಯತೊಡಗಿ, ಜನರ ವಿಶ್ವಾಸವನ್ನು ಕಳೆದುಕೊಳ್ಳಲಾರಂಭಿಸುತ್ತದೆ. ಈಗ ಆಗಿರುವುದು ಅದೇ.

ಇಂತಹ ‍‍ಪರಿಸ್ಥಿತಿಯಲ್ಲಿ ಅಧಿಕಾರಿಗಳ ಪಾತ್ರ ಬದಲಾಗುತ್ತದೆ. ಜನರನ್ನು ಕಾಪಾಡಬೇಕಾದ ಪೊಲೀಸರು ಕಳ್ಳರಾಗುತ್ತಾರೆ, ಭೂಮಿ ರಕ್ಷಿಸಬೇಕಾದ ಕಂದಾಯ ಅಧಿಕಾರಿಗಳು ಭಕ್ಷಕರಾಗುತ್ತಾರೆ, ಎಲ್ಲ
ಇಲಾಖೆಗಳಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟುತ್ತದೆ.ಪೊಲೀಸ್‌, ಅಬಕಾರಿ, ಕಂದಾಯ, ಲೋಕೋಪ ಯೋಗಿ, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸುವ ಲೋಕಾಯುಕ್ತ ಪೊಲೀಸರು, ನೂರಾರು ಕೋಟಿ ಆಸ್ತಿ–ನಗದು ವಶಕ್ಕೆ ಪಡೆಯುತ್ತಾರೆ. ‘ಕಲ್ಯಾಣ’ ರಾಜ್ಯದಲ್ಲಿ ಸಂಪತ್ತು ಯಾರ ತಿಜೋರಿ ತುಂಬುತ್ತಿದೆ ಎಂಬುದು ಜನರ ಅರಿವಿಗೆ ಬರುತ್ತಾ ಹೋಗುತ್ತದೆ. ಆಳುವವರ ಮೇಲೆ ಜನ ನಂಬುಗೆಯನ್ನು ಕಳೆದುಕೊಳ್ಳುತ್ತಾರೆ. ಅಲ್ಲಿಗೆ, ಸರ್ಕಾರದ ಪತನದ ಹಾದಿ ಶುರುವಾಗುತ್ತದೆ.

ಸರ್ಕಾರ ಎರಡೂವರೆ ವರ್ಷ ಪೂರೈಸುವ ಹೊತ್ತಿಗೆ ನಾಯಕತ್ವದ ಕಿತ್ತಾಟ ರಾಜ್ಯದಲ್ಲಿ ಬಿರುಸು ಗೊಂಡಿತು. ಶಿವಕುಮಾರ್ ಪಟ್ಟಾಭಿಷೇಕದ ಮುಹೂರ್ತವನ್ನು ಅವರ ಆಪ್ತ ಶಾಸಕರೇ ಇಟ್ಟರು. ಸಿದ್ದರಾಮಯ್ಯನವರ
ಬಣವೂ ಚುರುಕಾಯಿತು. ಇಬ್ಬಣಗಳ ಘರ್ಷಣೆ ತಾರಕಕ್ಕೇರುವುದನ್ನು ಕಂಡ ಕಾಂಗ್ರೆಸ್
ಹೈಕಮಾಂಡ್, ಉಪಾಹಾರ ಕೂಟ ನಡೆಸಿ ಎಲ್ಲವನ್ನೂ ಇತ್ಯರ್ಥಪಡಿಸಿಕೊಳ್ಳಿ ಎಂದು ಸಂದೇಶ ರವಾನಿಸಿತು. ಇಬ್ಬರೂ ಕೂಡಿ ಇಡ್ಲಿ–ಕೋಳಿ ಸಾರು ತಿಂದರು. ತಾವಿಬ್ಬರೂ ಒಂದೇ ಎಂದು ಹೊರಗೆ ಸಾರಿದರು. ಒಳಗಿನ ಕುದಿ ಆರಲೇ ಇಲ್ಲ. ಮತ್ತೆ ಮತ್ತೆ ಬುಸು ಗುಡುತ್ತಾ ಕೆಲವೊಮ್ಮೆ ಬಿಗಡಾಯಿಸುತ್ತಲೇ ಇದೆ. 

ADVERTISEMENT

ಮುಖ್ಯಮಂತ್ರಿ ಆಗಲೇಬೇಕೆಂದು ಛಲ ತೊಟ್ಟಿರುವ ಶಿವಕುಮಾರ್‌ ಮೇಲಿಂದ ಮೇಲೆ ಪಟ್ಟು ಹಾಕುತ್ತಲೇ ಇದ್ದಾರೆ. ಅವಧಿ ಪೂರೈಸುವ ಉಮೇದಿನಲ್ಲಿರುವ ಸಿದ್ದರಾಮಯ್ಯ ಕಾಲಕ್ಕೆ ತಕ್ಕ ಪ್ರತಿಪಟ್ಟು ಹಾಕುತ್ತಿದ್ದಾರೆ. ಅಧಿಕಾರ ಹಸ್ತಾಂತರವೆಂಬುದು ಬಗೆಹರಿಯದ ಒಗಟಾಗಿಯೇ ಉಳಿದಿದೆ. ‘ಹೈಕಮಾಂಡ್ ಆಶೀರ್ವಾದದ ಜತೆಗೆ ನಾಯಕತ್ವದ ಆಯ್ಕೆ ಶಾಸಕರ ತೀರ್ಮಾನ, ಶಿವಕುಮಾರ್‌ಗೆ ಶಾಸಕರ ಬೆಂಬಲವಿಲ್ಲ’ ಎನ್ನುತ್ತಿದ್ದ ಸಿದ್ದರಾಮಯ್ಯ, ಇತ್ತೀಚೆಗೆ ‘ಹೈಕಮಾಂಡ್ ತೀರ್ಮಾನವೇ ಅಂತಿಮ’ ಎನ್ನುತ್ತಿದ್ದಾರೆ. ‘ಕೆಲಸ ಮಾಡಿದ್ದೇನೆ, ಕೂಲಿ ಕೇಳುತ್ತಿದ್ದೇನೆ. ಶಾಸಕರಲ್ಲ, ಹೈಕಮಾಂಡ್ ಮುಖ್ಯ’ ಎಂದು ಹೇಳುತ್ತಿದ್ದ ಶಿವಕುಮಾರ್‌, ‘ಧೈರ್ಯವಂತ ಒಬ್ಬನೇ ಇದ್ದರೂ ಬಹುಮತ ಸಾಧಿಸಲು ಸಾಧ್ಯ’ ಎಂದು ಹೇಳಲು ಶುರು ಮಾಡಿದ್ದಾರೆ. 

ಕರ್ನಾಟಕದ ರಾಜಕೀಯ ಇತಿಹಾಸ ನೋಡಿದರೆ ಈ ರೀತಿಯ ಕಚ್ಚಾಟ ಹೊಸತೇನ‌ಲ್ಲ. 1990ರಲ್ಲಿ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಆಗ, ವೀರೇಂದ್ರ ಪಾಟೀಲರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿತ್ತು. ಒಳಜಗಳಗಳು ಆಗಲೂ ಇದ್ದವು. ದೆಹಲಿಗೆ ವಿಮಾನ ಏರುವ ಹೊತ್ತಿನಲ್ಲಿ ರಾಜೀವ್‌ ಅವರು, ನಾಯಕತ್ವ ಬದಲಾವಣೆಯ ಸುಳಿವು ನೀಡಿದ್ದರು. ಪಾಟೀಲರನ್ನು ಇಳಿಸಿ ಎಸ್. ಬಂಗಾರಪ್ಪ ಅವರನ್ನು ಆಗ ಮುಖ್ಯಮಂತ್ರಿ ಮಾಡಲಾಗಿತ್ತು.

ಇದೇ ವರ್ಷದ ಜನವರಿಯಲ್ಲಿ ತಮಿಳುನಾಡಿನ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ರಾಹುಲ್ ಗಾಂಧಿ ಮಾರ್ಗಮಧ್ಯೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ರನ್‌ವೇಯಲ್ಲಿಯೇ ಸಿದ್ದರಾಮಯ್ಯ, ಶಿವಕುಮಾರ್‌ ಜತೆ ಪ್ರತ್ಯೇಕವಾಗಿ ಮಾತನಾಡಿದ್ದರು. ನಾಯಕತ್ವ ಬದಲಾವಣೆಗೆ ಹಸಿರುನಿಶಾನೆ ಸಿಕ್ಕಿದೆ ಎಂಬ ಸುದ್ದಿಯನ್ನು ಹಬ್ಬಿಸಲಾಯಿತು. ಅದಾಗಿ ತಿಂಗಳು ಕಳೆದಿದೆ; ಶಿವಕುಮಾರ್ ತಮ್ಮ ಪ್ರಯತ್ನ ಮುಂದುವರಿಸಿಯೇ ಇದ್ದಾರೆ. 

‘ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟುಕೊಡಬೇಕೆಂಬ ಒಪ್ಪಂದದಂತೆ ಸಿದ್ದರಾಮಯ್ಯ
ನಡೆದುಕೊಳ್ಳಬೇಕು’ ಎಂದು ಶಿವಕುಮಾರ್ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ‘ಯಾವುದೇ ಒಪ್ಪಂದ ಆಗಿಲ್ಲ,
ಅವಧಿ ಪೂರ್ಣಗೊಳಿಸುವೆ’ ಎಂದು ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ. ಆದರೆ, ಒಪ್ಪಂದದ ಗುಟ್ಟಿನ ಬಗ್ಗೆ ಹೈಕಮಾಂಡ್ ಬಾಯಿ ಬಿಟ್ಟಿಲ್ಲ. 

ಅಧಿಕಾರ ಹಸ್ತಾಂತರದ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ರಾಹುಲ್ ಗಾಂಧಿ ಮನವೊಲಿಸಲು ಸೆಪ್ಟೆಂಬರ್‌ನಿಂದೀಚೆಗೆ ಶಿವಕುಮಾರ್‌ ಯತ್ನ ನಡೆಸುತ್ತಲೇ ಇದ್ದಾರೆ. ಭೇಟಿಗೆ ಸಮಯವನ್ನೇ ರಾಹುಲ್ ಕೊಟ್ಟಿಲ್ಲ. ‘ಫೆಬ್ರುವರಿ 12ರಂದು ಪ್ರಿಯಾಂಕಾಗಾಂಧಿ ಮನೆಯಲ್ಲಿ ರಾಹುಲ್ ಭೇಟಿ ಆದಾಗ ಭರವಸೆ ಸಿಕ್ಕಿದೆ’ ಎಂದು ಶಿವಕುಮಾರ್ ಆಪ್ತರು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಈಗ ಅಧಿಕಾರ
ಬಿಟ್ಟುಕೊಡಬೇಕಾದರೆ ಇಬ್ಬರನ್ನೂ ಜತೆಗೆ ಕೂರಿಸಿ ಚರ್ಚೆ ನಡೆಸಬೇಕು. ಅದನ್ನು ಸಿದ್ದರಾಮಯ್ಯ ಒಪ್ಪಬೇಕು. ಆಗ ಮಾತ್ರ ಅಧಿಕಾರ ಹಸ್ತಾಂತರ ಸಾಧ್ಯ. ರಾಜೀವ್‌ ಗಾಂಧಿ ಸಂದೇಶದಂತೆ ಅಧಿಕಾರ ಬಿಟ್ಟುಕೊಟ್ಟ ಕಾಲ ಯಾವಾಗಲೋ ಮುಗಿಯಿತು. ಕಾಂಗ್ರೆಸ್ ಆ ಮಟ್ಟಿಗೆ ಬಲಿಷ್ಠವಾಗಿ ಉಳಿದಿಲ್ಲ. ರಾಜಕಾರಣದಲ್ಲಿ ಪಳಗಿರುವ ಸಿದ್ದರಾಮಯ್ಯ ಕೂಡ ಸುಲಭದಲ್ಲಿ ಅಧಿಕಾರ ಬಿಟ್ಟುಕೊಡುವವರಲ್ಲ.

ಶಿವಕುಮಾರ್‌ಗೆ 100ಕ್ಕೂ ಹೆಚ್ಚು ಶಾಸಕರ ಬಲ ಇದೆ ಎಂದು ಅವರ ಆಪ್ತರು ಹೇಳುವುದುಂಟು. ಹಾಗಿದ್ದರೆ ಇನ್ನೂ 13 ಶಾಸಕರ ಬಲ ಕೂಡಿಸುವುದು ಕಷ್ಟವೇನಲ್ಲ. ಗಮನಿಸಲೇಬೇಕಾದ ಸೂಕ್ಷ್ಮವೆಂದರೆ, ಶಿವಕುಮಾರ್‌ ಮುಖ್ಯಮಂತ್ರಿ ಆಗಲೇಬೇಕು ಎಂದು ಧ್ವನಿ ಎತ್ತಿದವರಿಗೆ ನೋಟಿಸ್ ನೀಡಲಾಗುತ್ತಿದೆ.
‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಎಚ್ಚರಿಕೆ ಕೊಟ್ಟ ಮೇಲೂ, ‘ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ; ಕೆಲವರು ಯತ್ನಿಸಿದರೂ ಅವರಿಗೆ ಹೈಕಮಾಂಡ್‌ನಿಂದ ಸಂದೇಶ ಸಿಕ್ಕಿಲ್ಲ’ ಎಂದು ಯತೀಂದ್ರ ಹೇಳುವುದು ಬಿಟ್ಟಿಲ್ಲ. ನೂರು ಶಾಸಕರ ಬಲ ಇರುವ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್‌ ಅವರಿಗೆ, ಯತೀಂದ್ರಗೆ ನೋಟಿಸ್ ಕೊಡಿಸುವ ಶಕ್ತಿ ಹೋಗಲಿ, ಮೌಖಿಕ ವಿವರಣೆ ಕೇಳಿಸಲೂ ಸಾಧ್ಯವಾಗಿಲ್ಲ. ಇದನ್ನು ಗಮನಿಸಿದರೆ, ಹೈಕಮಾಂಡ್ ಶಿವಕುಮಾರ್‌ ವಿರುದ್ಧ ಇದೆಯೇ ಎಂಬ ಅನುಮಾನ ಕಾಡುತ್ತದೆ.

‘ಕೆಲಸ ಮಾಡಿದ್ದೇನೆ, ಕೂಲಿ ಕೊಡಿ’ ಎಂಬ ವಾದವನ್ನು ಶಿವಕುಮಾರ್ ಮುಂದಿಡುವುದುಂಟು. ಅಧಿಕಾರ ರಾಜಕಾರಣ ಬೇರೆ, ಲಾಭಕ್ಕಾಗಿಯೇ ಮಾಡುವ ಉದ್ಯಮ ಬೇರೆ. ರಾಜಕಾರಣದಲ್ಲಿ ಜನರ ಮನಸ್ಸು ಗೆಲ್ಲುವುದು, ವರ್ಚಸ್ಸು ಕಾಯ್ದುಕೊಳ್ಳುವುದು ಅನಿವಾರ್ಯ. ಉದ್ಯಮ ಕೌಶಲ ಶಿವಕುಮಾರ್‌ಗೆ ಇದೆ. ಹಾಗಂತ, ರಾಜಕಾರಣ ಉದ್ಯಮವಲ್ಲ. ಅದೂ ಹೈಕಮಾಂಡ್ ಓಲೈಸಬೇಕಾದ, ಶಾಸಕರನ್ನು ವಿಶ್ವಾಸ
ದಲ್ಲಿ ಇಟ್ಟುಕೊಳ್ಳಲೇಬೇಕಾದ ಜಾಣತನ. ರಾಹುಲ್ ಗಾಂಧಿ ಕೈ ಹಿಡಿದು ನಡೆಸದೇ ಇದ್ದರೆ, ಶಿವಕುಮಾರ್ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗುವುದಿಲ್ಲ. ಅಂಬಾನಿ, ಅದಾನಿ, ಆರ್‌ಎಸ್‌ಎಸ್‌, ಹಿಂದುತ್ವದ ಕುರಿತು ನೇರ, ನಿಷ್ಠುರ ನಿಲುವು ಹೊಂದಿರುವ ರಾಹುಲ್‌, ಹಿಂದುಳಿದವರು, ದಲಿತರ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಈ ವಿಷಯಗಳಲ್ಲಿ ಶಿವಕುಮಾರ್ ಮತ್ತು ರಾಹುಲ್‌ಗೆ ಸಾಮ್ಯತೆಯೇ ಇಲ್ಲ. ಸಿದ್ದರಾಮಯ್ಯ ಅವರಿಗೆ ಅಹಿಂದ ಮತಬ್ಯಾಂಕ್‌ ಜತೆಗೆ, ರಾಹುಲ್ ಬಯಸುವ ಸಿದ್ಧಾಂತದ ಬಗ್ಗೆ ನಂಬಿಕೆಯೂ ಇದೆ. 

ತುರ್ತು ನಿರ್ಧಾರ ತೆಗೆದುಕೊಂಡು ಒಡಕನ್ನು ಸರಿಪಡಿಸಬೇಕಾದ ನಿರ್ಣಾಯಕ ಘಟ್ಟದಲ್ಲಿ ರಾಹುಲ್ ಮೌನ ಅಥವಾ ವಿಳಂಬನೀತಿ ಅನುಸರಿಸಿದ್ದೇ ಹೆಚ್ಚು. ಅಸ್ಸಾಂನಲ್ಲಿ ತರುಣ್‌ ಗೊಗೊಯ್‌ ವಿರುದ್ಧ ಹಿಮಂತ ಬಿಸ್ವಾ ಶರ್ಮಾ ತಿರುಗಿ ಬಿದ್ದಾಗ, ರಾಹುಲ್‌ ಅವರು ಗೊಗೊಯ್ ಪರ ನಿಂತರು. ಬಿಜೆಪಿ ಸೇರಿದ ಹಿಮಂತ್‌ ಈಶಾನ್ಯ ಭಾಗದಲ್ಲಿ ಪಕ್ಷಕ್ಕೆ ಕೋಟೆಯನ್ನೇ ಕಟ್ಟಿದರು. ಮಧ್ಯಪ್ರದೇಶದಲ್ಲಿ ಕಮಲನಾಥ್‌ ಹಾಗೂ ಸಿಂಧಿಯಾ ನಡುವೆ ಭಿನ್ನಮತ ಕಾಣಿಸಿಕೊಂಡಾಗ ತಮ್ಮ ಒಡನಾಡಿ ಸಿಂಧಿಯಾ ಕೈ ಹಿಡಿಯಲಿಲ್ಲ. ಅವರು ಬಿಜೆಪಿ ಸೇರಿದರು. ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್ ಇಳಿಸಿ, ಚರಣಜಿತ್ ಸಿಂಗ್ ಚನ್ನಿ ಅವರಿಗೆ ಅಧಿಕಾರ ನೀಡುವಾಗಲೂ ಸೂಕ್ತ ತೀರ್ಮಾನ ತೆಗೆದು ಕೊಳ್ಳಲಿಲ್ಲ. ಛತ್ತೀಸಗಢದಲ್ಲಿ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಎಂದು ಭೂಪೇಶ್ ಬಘೆಲ್ ಹಾಗೂ ಟಿ.ಎಸ್‌. ಸಿಂಗ್ ದೇವ್‌ ಮಧ್ಯೆ ಲಿಖಿತ ಒಪ್ಪಂದ ಆಗಿತ್ತು. ಬಘೆಲ್‌ ಅಧಿಕಾರ ಬಿಟ್ಟುಕೊಡಲೇ ಇಲ್ಲ. ಅಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಲಿಲ್ಲ. ರಾಜಸ್ಥಾನದಲ್ಲಿ ಅಶೋಕ ಗೆಹತೋತ್‌ ಹಾಗೂ ಸಚಿನ್ ಪೈಲಟ್ ಮಧ್ಯೆ ತೀವ್ರ ಕಚ್ಚಾಟ ನಡೆದಿತ್ತು. ತಮ್ಮ ಆಪ್ತ ಸಚಿನ್ ಪರ ನಿಲ್ಲುವ ನಿರ್ಧಾರವನ್ನು ರಾಹುಲ್ ಮಾಡಲಿಲ್ಲ. ಅಲ್ಲಿಯೂ ಪಕ್ಷ ನೆಲಕಚ್ಚಿತು. 

ಅಧಿಕಾರ ಹಂಚಿಕೆ ಅಥವಾ ನಾಯಕತ್ವ ಬದಲಾವಣೆ ವಿಷಯ ಬಂದಾಗಲೆಲ್ಲ ರಾಹುಲ್ ಮೌನ
ಪಕ್ಷಕ್ಕೆ ನಷ್ಟವನ್ನೇ ತಂದಿದೆ. ಕರ್ನಾಟಕದ ವಿಷಯ ದಲ್ಲೂ ಅದೇ ನಿಲುವನ್ನು ರಾಹುಲ್‌ ತೆಗೆದುಕೊಳ್ಳುತ್ತಿ
ದ್ದಾರೆ. ಇಬ್ಬರನ್ನು ಕೂರಿಸಿ, ಇತ್ಯರ್ಥ ಮಾಡಬಹು ದಾದ ವಿಷಯವನ್ನು ಲಂಬಿಸಲು ಬಿಟ್ಟಿದ್ದಾರೆ. ಅವರ
ಪಕ್ಷಕ್ಕೆ ನಷ್ಟವಾದರೆ ನಾಡಿನ ಜನರಿಗೇನೂ ತೊಂದರೆ ಇಲ್ಲ. ಆದರೆ, ನಾಯಕರ ಕಿತ್ತಾಟದಿಂದ ಸರ್ಕಾರ ಅಸ್ಥಿರಗೊಂಡರೆ ನಾಡಿನ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ; ಜನರು ಸಂಕಷ್ಟದಲ್ಲೇ ದಿನ ದೂಡಬೇಕಾಗುತ್ತದೆ. ನಂಬಿ ಮತ ಹಾಕಿದ ಜನರಿಗೆ ಉತ್ತರದಾಯಿ ಆಗಬೇಕಾದ ಕಾಂಗ್ರೆಸ್‌ ನಾಯಕರು, ಮೌನಕ್ಕೆ ಶರಣಾಗುವುದು ಮತದಾರರಿಗೆ ಮಾಡಿದ ವಂಚನೆಯಷ್ಟೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.