ವಿಧಾನಸೌಧ ಹಾಗೂ ವಿಧಾನಸೌಧದ ಆವರಣದಲ್ಲಿ ನಾಯಿಗಳು
– ಪ್ರಜಾವಾಣಿ ಚಿತ್ರ
ರಾಜ್ಯವನ್ನು ಮುನ್ನಡೆಸುವ, ಕೆಲವೊಮ್ಮೆ ದಿಕ್ಕು ತಪ್ಪಿಸುವ ಶಕ್ತಿಯನ್ನೂ ಹೊಂದಿರುವ ‘ವಿಧಾನಸೌಧ’ದೊಳಗೆ ರಾತ್ರಿ ಒಂಬತ್ತು ಗಂಟೆ ಕಳೆದ ಬಳಿಕ ಹೋಗಲು ಪ್ರವೇಶ ದ್ವಾರದ ಭದ್ರತಾ ಸಿಬ್ಬಂದಿಯಾದರೂ ಬಿಟ್ಟಾರು. ಆದರೆ, ವಿಧಾನಸೌಧದ ನೆಲಮಹಡಿಯಲ್ಲಿ ಬಿಡುಬೀಸಾಗಿ ಓಡಾಡಿಕೊಂಡಿರುವ ನಾಯಿಗಳ ಪಡೆ ಯಾರನ್ನೂ ಒಳ ಬಿಡದು. ಅಷ್ಟರಮಟ್ಟಿಗೆ ನೆಲಮಹಡಿಯನ್ನು ನಾಯಿಗಳೇ ಆವರಿಸಿಕೊಂಡಿರುತ್ತವೆ.
ಹಗಲೆಲ್ಲ ಕಣ್ಣಿಗೆ ಕಾಣದಂತಿರುವ ಈ ನಾಯಿಗಳು ಶಕ್ತಿಸೌಧದ ರಕ್ಷಣೆಗಾಗಿ ರಾತ್ರಿವೇಳೆ ಎಲ್ಲಿಂದ ದೌಡಾಯಿಸುತ್ತವೆ ಎಂಬ ಕುತೂಹಲ ಎಲ್ಲರಿಗೂ ಇದ್ದೀತು. ವಿಧಾನಸೌಧ–ವಿಕಾಸಸೌಧದ ಮಧ್ಯೆ ದೊಡ್ಡದಾದ ನೀರಿನ ಚರಂಡಿಯೊಂದಿದೆ. ಹಗಲೆಲ್ಲ ಅಲ್ಲಿ ಮೊಕ್ಕಾಂ ಮಾಡುವ ನಾಯಿ ಪಡೆ ರಾತ್ರಿಯಾಗುತ್ತಿದ್ದಂತೆ ವಿಧಾನಸೌಧದ ಕಾವಲುಗಾರ ಪಡೆಯಾಗುತ್ತದೆ. ಇವುಗಳಿಗೆ ಆಹಾರವಾದರೂ ಎಲ್ಲಿ ಸಿಕ್ಕೀತು. ಅದನ್ನು ಪತ್ತೆ ಮಾಡಬೇಕಾದರೆ ಮುಂಜಾನೆ ಆರು–ಆರೂವರೆ ಸುಮಾರಿಗೆ ವಿಧಾನಸೌಧದ ಪ್ರವೇಶದ್ವಾರದ ಸಮೀಪ ನಿಲ್ಲಬೇಕಾಗುತ್ತದೆ. ಎಲ್ಲಿಂದಲೋ ಕೋಳಿ, ಕುರಿ ಕಾಲಿನ ಮೂಳೆಗಳು, ಕೊಳೆತ ಮಾಂಸವನ್ನು ತನ್ನ ಹಳೆಯ ಚೀಲಗಳಲ್ಲಿ ತುಂಬಿ, ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಹೇರಿಕೊಂಡು ಬರುವ ಹಿರಿಯ ಮಹಿಳೆಯೊಬ್ಬರು, ಸುರಿದು ಹೋಗುತ್ತಾರೆ. ಗುಂಪು ಕಟ್ಟಿಕೊಂಡು ಬರುವ ನಾಯಿಗಳು ಅದನ್ನು ತಿಂದು ಕೃತಾರ್ಥ ಭಾವದಲ್ಲಿ ತಮ್ಮ ಹಗಲಿನ ನೆಲೆಗೆ ಮರಳುತ್ತವೆ.
ರಾತ್ರಿ ಕಾವಲಿನ ಈ ನಾಯಿಗಳು ಯಾರಿಗೂ ಉಪದ್ರ ಕೊಟ್ಟ ನಿದರ್ಶನಗಳಿಲ್ಲ. ಆದರೆ, ವಿಧಾನಸೌಧದೊಳಗೆ ರಾತ್ರಿ ವೇಳೆ ಕಾಲಿಡಲು ಬಿಡುವುದಿಲ್ಲ ಎನ್ನುತ್ತಾರೆ ಅಲ್ಲಿನ ಭದ್ರತಾ ಸಿಬ್ಬಂದಿ.
ವಿಧಾನಸೌಧದಲ್ಲಿರುವ ನಾಯಿಗಳು ಯಾವತ್ತೂ ಸುದ್ದಿಯಾಗಿದ್ದಿಲ್ಲ. ನಾಯಿಯ ವಿಷಯ ಈಗ ಸದ್ದು ಮಾಡಿರುವುದಕ್ಕೆ ಬೇರೆಯದೇ ಆದ ಕಾರಣಗಳಿವೆ.
‘ಶಾಲೆ, ಆಸ್ಪತ್ರೆ, ಬಸ್‌ನಿಲ್ದಾಣಗಳಲ್ಲಿ ಆಶ್ರಯ ಪಡೆದಿರುವ ಬೀದಿ ನಾಯಿಗಳನ್ನು ತೆರವುಗೊಳಿಸಿ, ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿ’ ಎಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ ದೇಶವ್ಯಾಪಿ ದೊಡ್ಡ ಮಟ್ಟದ ಸದ್ದು ಮಾಡಿತು. ಮನೆ ಮಕ್ಕಳಿಗಿಂತ ಶ್ವಾನಗಳನ್ನು ಪ್ರೀತಿಸುವ ಮಂದಿ ಇದರ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ಹೊರಹಾಕಿದರು. ಬೀದಿ ನಾಯಿಗಳ ಕಾಟದಿಂದ ರೋಸಿಹೋಗಿದ್ದ ಜನ, ಇದರ ಪರ ನಿಂತರು. ಮನುಷ್ಯರ ಸಂಗ ಬಿಟ್ಟಿರದ ನಿಯತ್ತಿಗೆ ಹೆಸರಾದ ನಾಯಿಗಳ ವಿಷಯ ಚರ್ಚೆಯಲ್ಲಿರುವಾಗಲೇ ‘ನಾಯಿ ಜಗಳ’ ಮತ್ತೊಂದು ಮಜಲಿಗೆ ತಲುಪಿತು.
ಕರ್ನಾಟಕದಲ್ಲಿ ಕಳೆದ ಆರು ತಿಂಗಳಿನಿಂದ ಸರ್ಕಾರದ ನಾಯಕತ್ವದ ಕಚ್ಚಾಟ ಜೋರಾಗಿಯೇ ಇದೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿ.ಕೆ. ಶಿವಕುಮಾರ್ ‘ನೀ ಕೊಡೆ ನಾ ಬಿಡೆ’ ಎಂಬಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ರಚ್ಚೆ ಹಿಡಿದಿದ್ದಾರೆ. ಪಕ್ಷದ ಹೈಕಮಾಂಡ್‌ವರೆಗೂ ತಮ್ಮ ಅಹವಾಲನ್ನು ಕೊಂಡೊಯ್ದರೂ ಶಿವಕುಮಾರ್ ಅವರಿನ್ನೂ ದಾರಿ ಕಾಣದ ಸ್ಥಿತಿಯಲ್ಲಿಯೇ ಇದ್ದಾರೆ. ‘ದಾರಿ ಕಾಣದಾಗಿದೆ ರಾಹುಲೇಂದ್ರನೇ’ ಎಂದು ಜಪಿಸುವುದೊಂದು ಬಾಕಿ ಇದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ತನ್ನ ಅಣ್ಣನನ್ನು ಮುಖ್ಯಮಂತ್ರಿಯಾಗಿ ನೋಡಬೇಕೆಂಬ ಆಸೆಗಣ್ಣಿನಲ್ಲಿರುವ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು, ಪ್ರಾಸಂಗಿಕವಾಗಿ ಮಾತನಾಡುವಾಗ ‘ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದ ಅತಿಥಿಗಳಿಗೇ ಆದ್ಯತೆ. ಎಲ್ಲ ಪಕ್ಷದವರಿಗೂ ಕಾಂಗ್ರೆಸ್ ಮಣೆ ಹಾಕುತ್ತಲೇ ಬಂದಿದೆ’ ಎಂದು ಹೇಳಿದ್ದರು. ಅಂದರೆ, ಶಿವಕುಮಾರ್ ಅವರು ಪಕ್ಷಕ್ಕಾಗಿ ಎಷ್ಟೇ ದುಡಿದಿದ್ದರೂ ಅಧಿಕಾರ ಮಾತ್ರ ಅನ್ಯಪಕ್ಷದಿಂದ ಬಂದವರಿಗೆ ಎಂಬರ್ಥದಲ್ಲಿ ಅವರ ಮಾತುಗಳಿದ್ದವು. ಅದನ್ನು ಯಾರು ಹೇಗೆ ಅರ್ಥೈಸಿಕೊಂಡರೋ ಗೊತ್ತಿಲ್ಲ.
‘ನಾಯಕತ್ವ ಬದಲಾವಣೆಯ ಬಗ್ಗೆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಆಗುತ್ತಿದೆಯಲ್ಲವೇ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಸುದ್ದಿಗಾರರು ಪ್ರಶ್ನಿಸಿದರು. ಅದಕ್ಕೆ ಜಾರು ಹೇಳಿಕೆ ನೀಡಿ ಜಾರಿಕೊಳ್ಳಬಹುದಾದ ಎಲ್ಲ ಅವಕಾಶಗಳೂ ಮಹದೇವಪ್ಪ ಅವರಿಗೆ ಇತ್ತು. ಆದರೆ, ಅವರು ಹಾಗೆ ಮಾಡದೇ, ‘ನಾಯಕತ್ವದ ಚರ್ಚೆ ಎಲ್ಲಿದೆ? ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಎಂದು ಪದೇ ಪದೇ ಕೋರ್ಟ್ ಹೇಳುತ್ತಲೇ ಇದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ’ ಎಂದು ಅವರು ಬಿಡುಬೀಸಿನ ಹೇಳಿಕೆ ಕೊಟ್ಟು ಬಿಟ್ಟರು.
‘ಹೈಕಮಾಂಡ್ ಮಧ್ಯಪ್ರವೇಶಿಸಬೇಕು’ ಎಂದು ಶಾಸಕರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಹೈಕಮಾಂಡ್‌ಗೆ ನಿರ್ದೇಶನ ನೀಡುವವರು ಯಾರು? ನಾನೂ, ನೀವೂ ಕೊಡಲು ಆಗುವುದಿಲ್ಲ. ಹೈಕಮಾಂಡ್‌ನವರೇ ಹೇಳಬೇಕು. ಬಾಲವೇ ನಾಯಿಯನ್ನು ಅಲುಗಾಡಿಸಿದರೆ? ಹೈಕಮಾಂಡ್ ಅನ್ನು ಅಲುಗಾಡಿಸಲು ಸಾಧ್ಯವೇ’ ಎಂದು ಮರು ಪ್ರಶ್ನೆ ಹಾಕಿದರು. ‘ಹೈಕೋರ್ಟ್ ಹೇಳಿರುವುದಕ್ಕೂ ರಾಜ್ಯ ನಾಯಕರಿಗೂ ಏನು ಸಂಬಂಧ? ಹಾದಿಬೀದಿಯಲ್ಲಿ ಮಾತನಾಡುವವರ ಬಾಯಿ ಮುಚ್ಚಿಸಬೇಕು ಎಂಬುದು ನಿಮ್ಮ ಮಾತಿನ ಅರ್ಥವೇ’ ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲಪ್ಪ. ನೀವೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಏನೂ ಹೇಳಿಲ್ಲ’ ಎಂದು ಜಾರಿಕೊಳ್ಳುವ ಯತ್ನವನ್ನೂ ಮಾಡಿದರು.
ನಾಯಕತ್ವ ಬದಲಾವಣೆಯಾಗಬೇಕೆಂದು ಪ್ರಸ್ತಾಪಿಸುವ ಶಾಸಕರನ್ನು ನಾಯಿಗೆ ಹೋಲಿಸಿದ್ದಾರೆ ಎಂಬ ಅಪಾರ್ಥಕ್ಕೂ ಮಹದೇವಪ್ಪ ಮಾತು ಎಡೆ ಮಾಡಿಕೊಟ್ಟಿತು. ಶಿವಕುಮಾರ್ ಬೆಂಬಲಕ್ಕೆ ನಿಂತಿರುವ ಕೆಲವು ಶಾಸಕರು, ಇದನ್ನು ಹಾಗೆಯೇ ಅರ್ಥ ಮಾಡಿಕೊಂಡು ಮಹದೇವಪ್ಪನವರ ವಿರುದ್ಧ ತಿರುಗಿಬಿದ್ದರು.
‘ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ. ನಿಯತ್ತಿನ ನಾಯಿಗಳು’ ಎಂದು ಗರ್ಜಿಸಿದ ಡಿ.ಕೆ. ಸುರೇಶ್, ಮಹದೇವಪ್ಪ ಅವರಿಗೆ ತಿರುಗೇಟು ಕೊಟ್ಟರು.
ಮಾತು ಮುಂದುವರಿಸಿದ ಸುರೇಶ್, ‘ಅವರು ಯಾರನ್ನು ಉಲ್ಲೇಖಿಸಿ ಈ ರೀತಿ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ, ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ಸ್ಮರಣೆ ಮಾಡಿಕೊಂಡು, ಅದನ್ನು ತೀರಿಸುವ ನಾಯಿಗಳು’ ಎಂದರು.
‘ಹಾಗಾದರೆ ಹೊರಗಡೆಯಿಂದ ಬಂದವರು ಬೀದಿ ನಾಯಿಗಳೇ’ ಎಂದು ಕೇಳಿದಾಗ, ‘ನಾನು ಹಾಗೆಂದು ಹೇಳಿಲ್ಲ. ಕಟ್ಟಾ ಕಾಂಗ್ರೆಸಿಗರು ಋಣ ತೀರಿಸುವ ವ್ಯಕ್ತಿತ್ವ ಹೊಂದಿರುವವರು. ಈ ನಾಯಿಗಳು ಬೀದಿ ನಾಯಿಗಳೇ ಆಗಿರಲಿ, ಸಾಕಿದ ನಾಯಿಗಳೇ ಆಗಿರಲಿ, ಯಜಮಾನನ ಋಣ ತೀರಿಸುತ್ತವೆಯೇ ಹೊರತು, ಬೇರೆ ರೀತಿ ಮಾಡುವುದಿಲ್ಲ. ಅದು ನಿಯತ್ತಿನ ನಾಯಿಗಳ ಸ್ವಭಾವ’ ಎಂದೂ ತಮ್ಮ ಮಾತು ಮುಗಿಸಿದರು.
ಬಾಯಿತಪ್ಪಿ ಆಡಿದ ಮಾತೊಂದು ಮೂಲ ನಿವಾಸಿಗಳು ಹಾಗೂ ವಲಸಿಗರು ಎಂಬ ಭೇದವನ್ನೂ ಹುಟ್ಟು ಹಾಕಿತು. ಹಾಗೆ ನೋಡಿದರೆ, ಈಗ ಯಾವ ಪಕ್ಷದಲ್ಲೂ ಮೂಲ ನಿವಾಸಿಗಳು ಹಾಗೂ ವಲಸಿಗರು ಎಂಬ ಭಿನ್ನ ಭೇದವೂ ಇಲ್ಲ. ಕರ್ನಾಟಕದ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು 2008ರಲ್ಲಿ ಬಹುಮತ ಬಾರದೇ ಇದ್ದಾಗ ಆರಂಭದಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಆದರೆ, ಅವರನ್ನು ಸಂಭಾಳಿಸುವುದು ಕಷ್ಟವೆಂದು ಗೊತ್ತಾದಾಗ ತಮ್ಮ ಅಧಿಕಾರ ಉಳಿಸಿಕೊಳ್ಳಲು ‘ಆಪರೇಷನ್ ಕಮಲ’ ಎಂಬ ಹೊಸ ಅಸ್ತ್ರವನ್ನು ಹೂಡಿದರು. ಅದಕ್ಕೂ ಮೊದಲೇ, ಎಸ್.ಎಂ. ಕೃಷ್ಣ ಅನ್ಯ ಪಕ್ಷದವರನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದರು. ಆದರೆ, ಚುನಾವಣೆ ಬಳಿಕ ಅಧಿಕಾರ ಹಿಡಿಯುವುದಕ್ಕೆ ಅಲ್ಲ, ಚುನಾವಣೆ ಘೋಷಣೆಯಾದ ಹೊತ್ತಿನೊಳಗೆ ಬಿಜೆಪಿಯಿಂದ ಹಲವರನ್ನು ತಮ್ಮ ಪಕ್ಷಕ್ಕೆ ಕರೆತಂದಿದ್ದರು. ಅದು ‘ಆಪರೇಶನ್ ಹಸ್ತ’ದ ಮಾದರಿಯಲ್ಲಿರಲಿಲ್ಲ. ಚುನಾವಣೆಗೆ ಮುನ್ನ ಟಿಕೆಟ್ ಸಿಗದವರು, ಟಿಕೆಟ್ ಸಿಗುವ ಖಾತ್ರಿ ಇಲ್ಲದವರು ಅವಕಾಶ ಅರಸಿ ಮತ್ತೊಂದು ಪಕ್ಷಕ್ಕೆ ನೆಗೆದಾಟ ಮಾಡುವ ಮಾದರಿಯದು. ಅದು ಎಲ್ಲ ಕಾಲಕ್ಕೂ ಇತ್ತು.
ಆದರೆ, ಯಡಿಯೂರಪ್ಪ ಹೂಡಿದ ‘ಆಪರೇಷನ್ ಕಮಲ’ ಅಧಿಕಾರ ಹಾಗೂ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಆಮಿಷವೊಡ್ಡಿ, ಅನ್ಯಪಕ್ಷದ ಚಿಹ್ನೆಯಡಿ ಗೆದ್ದ ಶಾಸಕರ ರಾಜೀನಾಮೆ ಕೊಡಿಸುವುದು; ಬಳಿಕ ಅವರನ್ನು ಸಚಿವರನ್ನಾಗಿ ಮಾಡುವುದು, ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ‘ಗಳಿಕೆ–ಹೂಡಿಕೆ’ಯ ಅಡ್ಡಹಾದಿ. 2008ರಲ್ಲಿ ಯಶಸ್ವಿಯಾಗಿ ಮಾಡಿದರೂ ಪೂರ್ಣಾವಧಿ ಅಧಿಕಾರ ನಡೆಸಲಾಗದ ಯಡಿಯೂರಪ್ಪ, 2018ರಲ್ಲಿಯೂ ಬಹುಮತ ಪಡೆಯಲು ಆಗಲಿಲ್ಲ. 2019ರಲ್ಲಿ ಮತ್ತೆ ‘ಆಪರೇಷನ್ ಕಮಲ’ಕ್ಕೆ ಕೈಯಿಕ್ಕಿದ ಯಡಿಯೂರಪ್ಪ, ಮತ್ತೆ ಮುಖ್ಯಮಂತ್ರಿಯೂ ಆದರು. ಪ್ರಜಾಪ್ರಭುತ್ವದ ಆಶಯಗಳಿಗೆ ಭಂಗ ತರುವ ಈ ಕೊಳಕು ಮಾದರಿಯನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ, ಇಡೀ ದೇಶಕ್ಕೆ ವ್ಯಾಪಿಸಿತು. 2014ರ ನಂತರ ದೇಶದ ಅನೇಕ ರಾಜ್ಯಗಳಲ್ಲಿ, ಮೋದಿ– ಶಾ ಜೋಡಿ ಇದನ್ನೇ ಮಾಡಿ, ದೇಶವನ್ನು ಕೇಸರಿಮಯಗೊಳಿಸಿದ್ದಾಗಿ ಬೀಗಿತು. ಅನ್ಯ ಪಕ್ಷದವರನ್ನು ಆಸೆ–ಆಮಿಷ, ಬೆದರಿಕೆಯ ಮೂಲಕ ಸೆಳೆದು, ತಮ್ಮದೇ ಸರ್ಕಾರ ದೇಶವ್ಯಾಪಿ ಇದೆ ಎಂದು ಬಣ್ಣಿಸಿಕೊಳ್ಳುವುದು ಹೆಗ್ಗಳಿಕೆಯಂತೂ ಅಲ್ಲ.
ಕರ್ನಾಟಕದಲ್ಲಿ ಈಚೆಗಿನ ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರಗಳಲ್ಲಿ ಮೂಲನಿವಾಸಿಗಳು–ಪರಕೀಯರು ಎಂಬ ಭೇದವೇ ಕಾಣಿಸದಷ್ಟು ಬೆರಕೆಯಾಗಿದೆ. ಯಡಿಯೂರಪ್ಪ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ಕೆಲವು ಮಾಧ್ಯಮಗಳು ಈ ರೀತಿಯ ಭೇದವೆಣಿಸಿ, ಲೆಕ್ಕ ಕೊಟ್ಟ ನಿದರ್ಶನಗಳೂ ಉಂಟು. ಒಂದು ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದು, ಅದನ್ನು ತಮ್ಮ ನಡೆ–ನುಡಿಗಳಲ್ಲಿ ಪಾಲಿಸುತ್ತಿರುವವರನ್ನು ಅನ್ಯರು ಎಂದು ಬಿಂಬಿಸಿ, ಹೀಗಳೆಯುವುದು ಸರಿಯಲ್ಲ. ಯಡಿಯೂರಪ್ಪನವರು ಮೂಲ ಬಿಜೆಪಿಯವರೇ ಆದರೂ ಮಧ್ಯೆ ಹೊರನಡೆದು ತಮ್ಮದೇ ಆದ ಕೆಜೆಪಿ ಕಟ್ಟಿದ್ದರು. ಅವರ ನೇತೃತ್ವದ ಸರ್ಕಾರ 2008ರಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ ಕಾಂಗ್ರೆಸ್‌ನಿಂದ ಬಂಡಾಯವೆದ್ದು, ಪಕ್ಷೇತರರಾಗಿ ಗೆದ್ದವರ ಬೆಂಬಲದಿಂದ. ಅವರ ಸರ್ಕಾರದಲ್ಲಿದ್ದ ಅನೇಕ ಸಚಿವರು ಕೆಲವು ವರ್ಷ, ದಶಕಗಳ ಹಿಂದೆಯೇ ಜನತಾಪಕ್ಷ, ಜನತಾದಳ ಎಸ್, ಜನತಾದಳ ಸಂಯುಕ್ತ ಪಕ್ಷದಲ್ಲಿದ್ದು, ಅಲ್ಲಿಂದ ಹೊರಬಂದವರೇ ಆಗಿದ್ದರು. ಆ ಬಳಿಕ ಉಳಿದುಕೊಂಡಿದ್ದು ಕಾಂಗ್ರೆಸ್, ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿ, ಬಳಿಕ ಬಿಜೆಪಿ ಸೇರಿದವರಿಂದಲೇ. ಅಧಿಕೃತವಾಗಿ ಎರಡನೇ ಬಾರಿ 2019ರಲ್ಲಿ ಮುಖ್ಯಮಂತ್ರಿಯಾದಾಗಲೂ ಕಾಂಗ್ರೆಸ್, ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದವರಿಂದಲೇ ವಿನಃ ಮೂಲ ಬಿಜೆಪಿಯವರ ಸ್ವಯಂಬಲದಿಂದಲ್ಲ.
ಹಾಗೆ ನೋಡಿದರೆ, ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿ 20 ವರ್ಷ ಕಳೆದಿದೆ. ಜೆಡಿಎಸ್‌ನಲ್ಲಿ ಪ್ರಭಾವಿ ನಾಯಕರಾಗಿದ್ದ ಸಿದ್ದರಾಮಯ್ಯನವರನ್ನು 2005ರಲ್ಲಿ ಆ ಪಕ್ಷದ ವರಿಷ್ಠರಾಗಿದ್ದ ಎಚ್.ಡಿ. ದೇವೇಗೌಡರು ಉಚ್ಚಾಟಿಸಿದ್ದರು. ಆಗ, ಎಬಿಪಿಜೆಡಿ ಕಟ್ಟಿದ್ದ ಸಿದ್ದರಾಮಯ್ಯ ಅವರು, 2006ರಲ್ಲಿ ಕಾಂಗ್ರೆಸ್ ಸೇರಿದರು. ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿರುವ ಅನೇಕ ಸಚಿವರ ಪೈಕಿ ಕೆಲವರು ಅವರ ಜತೆಗೆ, ಕೆಲವರು ಅದಕ್ಕಿಂತ ಮೊದಲೇ ಕಾಂಗ್ರೆಸ್ ಸೇರಿದ್ದರು. ಮೂಲ ಕಾಂಗ್ರೆಸಿಗರು ಎಂದು ಹೇಳಿಕೊಳ್ಳುತ್ತಾ, ಅಧಿಕಾರವೆಲ್ಲ ಹೊರಗಿನವರಿಗೆ ಸಿಕ್ಕಿದೆ ಎಂದು ಜರಿಯುತ್ತಿರುವವರ ಪೈಕಿ ಅನೇಕರು, ಮೃದು ಹಿಂದುತ್ವವನ್ನು ಪಾಲಿಸುತ್ತಲೇ ಬಂದಿದ್ದಾರೆ. ಕೆಲವರಂತೂ ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಲೇ ಇದ್ದಾರೆ. ಸಿದ್ದರಾಮಯ್ಯ ಸೇರಿದಂತೆ, ಅವರ ಜತೆಗೆ ಬಂದ ಬಹುತೇಕರು ರಾಹುಲ್ ಗಾಂಧಿ ಪ್ರತಿಪಾದಿಸುವ ಸಿದ್ಧಾಂತಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಾ, ಸಂವಿಧಾನದ ಆಶಯಗಳನ್ನು ಪಾಲಿಸುತ್ತಿದ್ದಾರೆ. ಒಂದರ್ಥದಲ್ಲಿ ಕಾಂಗ್ರೆಸ್‌ನಲ್ಲಿಯೇ ಕರಗಿ ಹೋಗಿದ್ದಾರೆ.
ಇಷ್ಟರಮಟ್ಟಿಗೆ ಪಕ್ಷದ ತತ್ತ್ವ ಸಿದ್ಧಾಂತಕ್ಕೆ ಬದ್ದರಾಗಿರುವವರನ್ನು ಹೊರಗಿನವರು ಎಂದು ಹೀಗಳೆಯುವುದು ಸರಿಯಾದುದಲ್ಲ. ಹಾಗೆಯೇ, ನಾಯಕತ್ವ ಬದಲಾವಣೆಯ ಪ್ರಶ್ನೆ ಮುಂದಿಡುವವರನ್ನು ಬೀದಿ ನಾಯಗಳಿಗೆ ಹೋಲಿಸುವುದೂ ಸರಿಯಲ್ಲ. ನಿಯತ್ತಿಗೆ, ನಿಷ್ಠೆಗೆ ಹೆಸರಾದ ನಾಯಿಯನ್ನು ಯಾರನ್ನೋ ಕೀಳುಗಳೆಯಲು, ದೂಷಿಸಲು ಅಥವಾ ತಮ್ಮನ್ನು ಬಣ್ಣಿಸಿಕೊಳ್ಳಲು ಬಳಸುವುದು ಕೂಡ ಅಕ್ಷಮ್ಯ. ಅದು ನಾಯಿಗೆ ಮಾಡುವ ಅವಮಾನವೂ ಹೌದು.
ತಮ್ಮನ್ನು ನಿಂದಿಸುವವರನ್ನು ಶ್ವಾನಕ್ಕೂ, ತಮ್ಮನ್ನು ಆನೆಗೂ ಅನೇಕರು ಹೋಲಿಸಿಕೊಳ್ಳುವುದುಂಟು. ಯಾರದರೂ ತಮ್ಮನ್ನು ಟೀಕಿಸಿದರೆ, ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೊಳ್ಳಲು ‘ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೇ ಅಯ್ಯಾ’ ಎಂದು ಸಮರ್ಥಿಸಿಕೊಳ್ಳುವುದುಂಟು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಸವಣ್ಣನವರ ಆಶ್ರಯವನ್ನು ರಾಜಕಾರಣಿಗಳು, ಅಧಿಕಾರಸ್ಥರು ಪಡೆಯುತ್ತಲೇ ಬಂದಿದ್ದಾರೆ. ಸದಾಶಯದ ವಚನವೊಂದನ್ನು ತಮ್ಮ ದುರಾಚಾರದ ಸಮರ್ಥನೆಗೆ ಬಳಸಿಕೊಳ್ಳುವುದು ದುಷ್ಕೃತ್ಯವಲ್ಲದೇ ಮತ್ತೇನಲ್ಲ.
ಬಸವಣ್ಣನವರ ವಚನ ಹೀಗಿದೆ:
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವರು ?
ನಮ್ಮ ಕುನ್ನಿಗೆ ಕೂಸ ಕೊಡಬೇಡ!
ನಮ್ಮ ಸೊಣಗಂಗೆ ತಣಿಗೆಯಲ್ಲಿಕ್ಕಬೇಡ!
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ ?
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ ?
ಮೇಲಿನ ವಚನವನ್ನು ತಮ್ಮ ಸಮರ್ಥನೆಗೆ, ಅನ್ಯರಿಗೆ ಹೀಗಳಿಕೆಗೆ ಬಳಸುವವರಿಗೆ ಅದರ ಆಶಯ ಮತ್ತು ಅದು ಹೊರಸೂಸುವ ಅರ್ಥವೇ ಗೊತ್ತಿಲ್ಲ. ‘ಯಾರು ಮುನಿದರೂ, ನಮ್ಮನ್ನು ಏನೂ ಮಾಡಲಾಗದು. ಸತ್ಯ ಶುದ್ಧ ಕಾಯಕವನ್ನು ಮಾಡುತ್ತ, ಅದರಿಂದ ಬಂದ ಹಣದಲ್ಲಿ ದಾಸೋಹ ಮಾಡುತ್ತ ಜೀವಿಸುತ್ತಿರುವ ಲೋಕೋಪಕಾರಿಗಳಾದ ಶರಣರನ್ನು ಕಂಡು, ಊರಿನಲ್ಲಿ ಕುಳಿತು ತಿನ್ನುವ ಜಡದೇಹಿಗಳು ಕೊಂಕು ಮಾತನಾಡುವುದು ಸಹಜ. ಅಂತಹ ಜನರಿರುವ ಊರಿಗೆ ಊರೇ ಮುನಿದರೂ ನಮ್ಮನ್ನು ಎಂತೂ ಮಾಡಲಾಗದು, ನಮ್ಮನ್ನು ಅಡ್ಡಿಪಡಿಸಲಾಗದು’ ಎಂಬುದು ವಚನದ ಭಾವಾರ್ಥ.
ವಚನದ ಸಾಲಿನಲ್ಲಿರುವ ‘ನಮ್ಮ ಕುನ್ನಿಗೆ ಕೂಸ ಕೊಡಬೇಡ’ ಹಾಗೂ ‘ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ’ ಎಂಬುದರ ಅರ್ಥವನ್ನೂ ಹೀಗೆ ಗ್ರಹಿಸಬಹುದು.
ಕೊಂಕು ನುಡಿಯುವವರು ಹೆಚ್ಚೆಂದರೆ ಏನು ಮಾಡಬಹುದು; ‘ನಮ್ಮ ಮನೆಯ ಮಗನಿಗೆ ತಮ್ಮ ಮಗಳನ್ನು ಕೊಡದಿರಬಹುದು. ಅಷ್ಟೆ ತಾನೇ ಅಂತಹ ಸೋಮಾರಿಗಳ ಸಂಗ ನಮಗೆ ಮೊದಲೇ ಬೇಡ. ನಮ್ಮ ಮನೆಯ ನಾಯಿಗೆ ಅನ್ನವನ್ನು ನೀಡದಿರಬಹುದು ಅಷ್ಟೆ. ಶರಣರ ಮನೆಯ ನಾಯಿ ಕೂಡ, ಸತ್ಯ, ಶುದ್ಧವಾಗಿ ದುಡಿಯದ, ಸೋಮಾರಿಗಳು ನೀಡುವ ಅನ್ನವನ್ನೂ ಮೂಸಿ ನೋಡದು’ ಎಂಬ ನಿರಾಕರಣೆಯ ಧ್ವನಿ ಇಲ್ಲಿದೆ.
ಇಂತಹ ಮಹತ್ವದ ವಚನದಲ್ಲಿ ನಾಯಿ ಕೂಡ ಶರಣರ ತತ್ತ್ವ, ಸತ್ಯ, ಕಾಯಕ ನಿಷ್ಠೆಯ ಅನುಯಾಯಿ ಎಂಬ ಭಾವವಿದೆಯೇ ವಿನಾ, ನಾಯಿಯನ್ನು ಕ್ಷುಲ್ಲಕ, ಹೀನಾಯವಾಗಿ ಕಾಣುವ ಉದ್ದೇಶವಿಲ್ಲ. ನಾಯಿಯನ್ನು ತಮ್ಮ ವ್ಯಕ್ತಿತ್ವ ಬಣ್ಣಿಸಿಕೊಳ್ಳಲು, ಅನ್ಯರ ಕೀಳುಗಳೆಯಲು ಬಳಸುವ ಕೆಟ್ಟತನ ಇನ್ನಾದರೂ ನಿಲ್ಲಲಿ. ಅನ್ನವಿಕ್ಕಿದವರ ರಕ್ಷಣೆಗೆ ತನ್ನ ಪ್ರಾಣವನ್ನೇ ಕೊಡುವ ನಾಯಿಯ ನಿಯತ್ತನ್ನೂ, ಪ್ರಾಮಾಣಿಕತೆಯನ್ನು ಪ್ರತಿಯೊಬ್ಬರೂ ಪಾಲಿಸಿದರೆ, ಸಮಾಜದಲ್ಲಿ ಕೊಂಚವಾದರೂ ಪರಿವರ್ತನೆಯಾದೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.