ADVERTISEMENT

ವೈ.ಗ ಜಗದೀಶ್ ಅವರ ಗತಿಬಿಂಬ ಅಂಕಣ | ಅಧ್ಯಕ್ಷಗಿರಿಯತ್ತಲೇ ಲಕ್ಷ್ಯ: ಜನಹಿತ ಅಲಕ್ಷ್ಯ

ವೈ.ಗ.ಜಗದೀಶ್‌
Published 17 ಫೆಬ್ರುವರಿ 2025, 0:00 IST
Last Updated 17 ಫೆಬ್ರುವರಿ 2025, 0:00 IST
   

ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ಘಟಕಗಳಲ್ಲಿ ನಡೆಯುತ್ತಿರುವ ಕಾಲೆಳೆಯುವ ಆಟ, ಅಧ್ಯಕ್ಷ ಸ್ಥಾನವನ್ನೇ ವಿದೂಷಕನ ಮಟ್ಟಕ್ಕೆ ತಂದು ನಿಲ್ಲಿಸಿದೆ. ನಾಯಕರು ನಿತ್ಯವೂ ಬೈದಾಡಿಕೊಂಡು ನಡೆಸುತ್ತಿರುವ ಪ್ರಹಸನ, ನಾಡಿನ ರಾಜಕಾರಣ ತಲುಪಿರುವ ದುರಂತಕ್ಕೆ ನಿದರ್ಶನ.

ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರವನ್ನು ಉಳಿಸಿಕೊಂಡು, ಬಿಜೆಪಿ, ಜೆಡಿಎಸ್‌ ಪ್ರತಿನಿಧಿಸಿದ್ದ ಎರಡು ಕ್ಷೇತ್ರಗಳನ್ನೂ ಕಾಂಗ್ರೆಸ್ ಕಿತ್ತುಕೊಂಡಿತು. ಈ ಕ್ಷೇತ್ರಗಳನ್ನು ಮುಖ್ಯಮಂತ್ರಿಗಳಾಗಿದ್ದವರು ಪ್ರತಿನಿಧಿಸಿ ದ್ದರು. ಅಲ್ಪಸಂಖ್ಯಾತ– ಹಿಂದುಳಿದವರ ಮತಗಳ ಕ್ರೋಡೀಕರಣವೇ ಗೆಲುವಿಗೆ ಕಾರಣ ಎಂಬ ಲೆಕ್ಕಾಚಾರ ಸಿದ್ದರಾಮಯ್ಯನವರ ನಾಯಕತ್ವವನ್ನು ಮತ್ತಷ್ಟು ಬಲಗೊಳಿಸಿತು. ಜೆಡಿಎಸ್‌ನ ಭದ್ರಕೋಟೆಯಂತಿದ್ದ

ಚನ್ನಪಟ್ಟಣದಲ್ಲಿ ಅಹಿಂದ ಮತಗಳೇ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿರೋಧಿಗಳಿಗೆ ಹಬ್ಬದಂತಾಯಿತು. ಪಕ್ಷದ ಅ‌ಧ್ಯಕ್ಷರಾಗಿ ಚುನಾವಣೆಯನ್ನು ಮುನ್ನಡೆಸಿದ ಶಿವಕುಮಾರ್ ಅವರಿಗೆ ವಿಜಯದಲ್ಲಿ ಪಾಲು ಕೊಡಲು ಒಪ್ಪದ ಅವರ ಎದುರಾಳಿ ಪಡೆ, ಗೆಲುವಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಿಂಬಿಸಿತು.

ADVERTISEMENT

ಅಹಿಂದ ಮತಗಳಷ್ಟೇ ಲಿಂಗಾಯತ ಮತಗಳೂ ನಿರ್ಣಾಯಕವಾಗಿರುವ ಸಂಡೂರು ಮತ್ತು ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುಂಡರು. ಇದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವಕ್ಕೆ ಆದ ಹಿನ್ನಡೆ ಎಂದೇ ಅವರ ವಿರೋಧಿಗಳು ಬಿಂಬಿಸತೊಡಗಿದರು. ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಅವರ ಸೋಲಿಗೆ ವಿಜಯೇಂದ್ರ ಅವರೇ ಕಾರಣ ಎಂಬ ಆರೋಪ ಬಲವಾದ ಸದ್ದು ಮಾಡತೊಡಗಿತು.

ಉಪಚುನಾವಣೆ ಫಲಿತಾಂಶವು ಕಾಂಗ್ರೆಸ್‌ ಹಾಗೂ ಬಿಜೆಪಿಯ ರಾಜ್ಯ ಘಟಕಗಳ ಅಧ್ಯಕ್ಷರನ್ನು ಪದಚ್ಯುತ ಗೊಳಿಸಬೇಕೆಂಬ ಕೂಗಿಗೆ ಬಲ ತುಂಬಿತು. ಹಾಲಿ ಅಧ್ಯಕ್ಷರ ವಿರೋಧಿ ಬಣದ ಶಕ್ತಿ ಬಲವಾಗತೊಡಗಿದ್ದಲ್ಲದೆ, ವಿರೋಧದ ಕೂಗು ವರಿಷ್ಠರ ಮನೆಯ ಕದ ತಟ್ಟುವವರೆಗೂ ಬೆಳೆಯಿತು.

‘ಈ ಅವಧಿಯಲ್ಲಿಯೇ ಮುಖ್ಯಮಂತ್ರಿ ಆಗಲಿದ್ದೀರಿ’ ಎಂಬ ಜ್ಯೋತಿಷಿ ಮಾತನ್ನು ನಂಬಿದಂತಿರುವ ಶಿವಕುಮಾರ್, ಅಧಿಕಾರ ಹಂಚಿಕೆ ಸೂತ್ರದಂತೆ ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯನವರು ಅಧಿಕಾರ ಬಿಟ್ಟುಕೊಡಬೇಕಾಗುತ್ತದೆ ಎಂಬ ಸುದ್ದಿಯನ್ನು ತಮ್ಮ ಹಿತೈಷಿಗಳ ಮೂಲಕ ಹರಿಯಬಿಡುತ್ತಿದ್ದಾರೆ. ಪಟ್ಟಕ್ಕೆ ಏರುವ ಮುನ್ನ ಅಧ್ಯಕ್ಷಗಿರಿ ಬಿಟ್ಟುಕೊಟ್ಟರೆ, ಪಕ್ಷದ ಮೇಲಿನ ಹಿಡಿತ ತಪ್ಪುತ್ತದೆ ಎಂಬ ಆತಂಕದಿಂದ ಶಿವಕುಮಾರ್‌ ಅವರು ಹುದ್ದೆ ಬಿಡಲು ತಯಾರಿಲ್ಲ.

ಬಹುಸಂಖ್ಯಾತ ಶಾಸಕರು ತಮ್ಮ ಬೆನ್ನಿಗೆ ನಿಂತಿರುವುದರ ಅರಿವಿರುವ ಸಿದ್ದರಾಮಯ್ಯ, ‘ಅಧಿಕಾರ ಹಂಚಿಕೆಯ ಸೂತ್ರವೂ ಇಲ್ಲ, ಒಪ್ಪಂದವೂ ಇಲ್ಲ’ ಎಂಬ ಸ್ಪಷ್ಟ ನುಡಿಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ತನ್ನ ನಾಯಕನನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದೆ. ಅಧಿಕಾರ ಬಿಡಬೇಕಾದರೆ ಈ ಸಭೆಯೇ ತನ್ನ ನಾಯಕನ ಬಗ್ಗೆ ಅವಿಶ್ವಾಸ ತೋರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನ 136 ಮತ್ತು ಇಬ್ಬರು ಸಹ ಸದಸ್ಯರ ಒಟ್ಟು ಬಲದಲ್ಲಿ ಶೇ 90ಕ್ಕಿಂತ ಹೆಚ್ಚು ಶಾಸಕರು ಸಿದ್ದರಾಮಯ್ಯನವರ ಪರವಾಗಿದ್ದಾರೆ. ಅಧ್ಯಕ್ಷ–ಮುಖ್ಯಮಂತ್ರಿ ಬದಲಾವಣೆಯ ಪ್ರಹಸನ ಇಷ್ಟು ಜೋರಾಗಿ ನಡೆಯುತ್ತಿದ್ದರೂ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಬಿಟ್ಟರೆ ಬೇರೆ ಯಾರೂ ಶಿವಕುಮಾರ್ ಪರ ಧ್ವನಿ ಎತ್ತಿಲ್ಲ.

ಇದು ಗೊತ್ತಿದ್ದೇ ಸಿದ್ದರಾಮಯ್ಯ ಅವರು ತಮ್ಮ ಆಪ್ತರನ್ನು ಹುರಿದುಂಬಿಸುತ್ತಿದ್ದಾರೆ. ಐದು ವರ್ಷ ಪೂರ್ಣಗೊಳಿಸುವ ಜತೆಗೆ, 2028ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ನಿಶ್ಚಯಕ್ಕೆ ಅವರು ಬಂದಿದ್ದಾರೆ. ತನಗೆ ಪೈಪೋಟಿ ನೀಡಲು ಅಣಿಯಾಗುತ್ತಿರುವ ಶಿವಕುಮಾರ್ ಅವರನ್ನು ಕಟ್ಟಿಹಾಕುವ ತಂತ್ರವನ್ನು ಹೆಣೆಯುತ್ತಿದ್ದಾರೆ.

ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಕಾಂಗ್ರೆಸ್‌ನ ಹಿರಿಯ ತಲೆಗಳಿಗೆ ಒಲ್ಲದ ಸಂಗತಿ. ಒಂದು ವೇಳೆ ಸಿದ್ದರಾಮಯ್ಯ ಅವರು ಬಿಟ್ಟುಕೊಟ್ಟರೆ ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕೊಡಿ ಎಂಬ ಪಟ್ಟು ಹಾಕುತ್ತಲೇ ಇದ್ದಾರೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದನ್ನು ತಪ್ಪಿಸಲು ಹಲವು ದಾಳಗಳನ್ನು ಸಿದ್ದರಾಮಯ್ಯ ಆಪ್ತ ಸಚಿವರು ಉರುಳಿಸುತ್ತಿದ್ದಾರೆ.

ಒಬ್ಬರಿಗೆ ಒಂದೇ ಹುದ್ದೆ ನೀತಿಯನ್ನು ಶಿವಕುಮಾರ್ ವಿಷಯದಲ್ಲೂ ಪಾಲನೆ ಮಾಡಬೇಕು, ಇಲ್ಲವೆಂದರೆ ತಮಗೂ ಎರಡು ಹುದ್ದೆ ನೀಡಬೇಕು, ಲೋಕಸಭೆ ಚುನಾವಣೆ ಮುಗಿಯುವವರೆಗಷ್ಟೇ ಶಿವಕುಮಾರ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ವರಿಷ್ಠರು ನೀಡಿದ್ದ ವಾಗ್ದಾನ ಯಾಕೆ ಪಾಲನೆಯಾಗಿಲ್ಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಉಪಮುಖ್ಯಮಂತ್ರಿ ಸ್ಥಾನದ ಜತೆಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲದಂತಹ ನಿರ್ಣಾಯಕ ವಾಗಿರುವ ಎರಡು ಖಾತೆಗಳು ಶಿವಕುಮಾರ್ ಬಳಿ ಇವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಾಭಿವೃದ್ಧಿಪ್ರಾಧಿಕಾರದ ಜತೆ, ಜಲಸಂಪನ್ಮೂಲ ಇಲಾಖೆಯ ನಾಲ್ಕು ನಿಗಮಗಳ ನಿರ್ವಹಣೆ ಮಾಡಬೇಕಿದೆ. ಇವೆಲ್ಲದರ ಜತೆಗೆ ಪಕ್ಷ ಕಟ್ಟುವ ಕೆಲಸವನ್ನು ಅವರು ಮಾಡಲಾಗದು, ಅದನ್ನು ಬಿಟ್ಟುಕೊಡಲಿ ಎಂಬ ಪಟ್ಟನ್ನು ಎದುರಾಳಿಗಳು ಹಾಕುತ್ತಿದ್ದಾರೆ.

ಪಕ್ಷ ಕಟ್ಟುವಲ್ಲಿನ ಪರಿಶ್ರಮ ಹಾಗೂ ಪಕ್ಷ ನಿಷ್ಠೆಯಲ್ಲಿ ಶಿವಕುಮಾರ್‌ ಅಪ್ರತಿಮರು. ತಮ್ಮ ಅಪಾರ ಸಂಪತ್ತಿಗೆ ತಕ್ಕಂತೆ ಕಾರ್ಪೊರೇಟ್ ಶೈಲಿಯ ರಾಜಕಾರಣ ಅವರದ್ದು. ಜನರನ್ನು ಬಡಿದೆಬ್ಬಿಸಿ ಹುಯಿಲೆಬ್ಬಿಸುವುದು ಗೊತ್ತು, ಹಣದ ಆಟದ ರಾಜಕೀಯವೂ ಕರಗತ. ಇದೇ ಅವರ ಶಕ್ತಿ ಹಾಗೂ ಮಿತಿ. ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸಲು ಸಂಪತ್ತೊಂದೇ ಮಾನದಂಡವಲ್ಲ, ಅದಕ್ಕೆ ಅಂಟಿಕೊಂಡೇ ಬರುವ ದರ್ಪ ಇರಬಾರದು. ಜನಮಾನಸದಲ್ಲಿ ನೆಲೆ ನಿಂತು, ಅವರ ಒಳಗಿನಿಂದಲೇ ನಾಯಕನಾಗಿ ಹೊರಹೊಮ್ಮಬೇಕೇ ವಿನಾ ಅದನ್ನು ಮೇಲಿನಿಂದ ಹೇರಲಾಗದು. ಶಿವಕುಮಾರ್ ವಿರೋಧಿ ಪಡೆ ಬಲವಾಗಲು ಅವರ ಈ ಮಿತಿಗಳೇ ಕಾರಣ.

ಅತ್ತ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಕತೆಯೂ ಹೀಗೆಯೇ. ಸಂಪತ್ತು ತಂದ ಗರ್ವ, ತಾನು ಹೇಳಿದ್ದೇ ನಡೆಯಬೇಕೆಂಬ ಉದ್ಧಟತನವೇ ಅವರ ಸಮಸ್ಯೆ ಎಂಬುದು ಎದುರಾಳಿಗಳ ಟೀಕೆ. ಕಿರಿಯ ವಯಸ್ಸಿನಲ್ಲಿ ಅಧಿಕಾರ ಸಿಕ್ಕಾಗ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುವ ಛಾತಿಯನ್ನು ಅವರು ತೋರಬೇಕಾಗಿತ್ತು. ಆ ವಿನಯ ಮತ್ತು ನೈಪುಣ್ಯ ಇಲ್ಲದಿರು ವುದಕ್ಕೆ ಎದುರಾಳಿ ಗುಂಪು ಬಲವಾಗುತ್ತಿದೆ. ‌ಬೀದಿಯಲ್ಲಿ ನಿಂತು ಗುಟುರು ಹಾಕುತ್ತಿದ್ದ ಬಸನಗೌಡ ಪಾಟೀಲ ಯತ್ನಾಳ ಜತೆ ಈಗ ಕೆಲವು ಶಾಸಕರೂ ಸೇರಿದ್ದಾರೆ. ವಿಜಯೇಂದ್ರ ಅವರ ಹಿಂದೆ ಪಕ್ಷದ ಮುಖಂಡರ ದೊಡ್ಡ ಗುಂಪು ಇದೆಯಾದರೂ ಅವರ ಪರ ಬಹಿರಂಗವಾಗಿ ಧ್ವನಿ ಎತ್ತುತ್ತಿರುವ ಶಾಸಕರ ಸಂಖ್ಯೆ ಕಡಿಮೆ ಇದ್ದಂತಿದೆ. ಸಂಸದರಲ್ಲಿ ಒಬ್ಬರೂ ಅವರ ಪರ ಧ್ವನಿಯೆತ್ತಿಲ್ಲ.

ಕಾಂಗ್ರೆಸ್‌ನಲ್ಲಿ ಅಧ್ಯಕ್ಷರನ್ನು ಇಳಿಸುವ ಆತುರದಲ್ಲಿರುವ ಸಚಿವರಿಗೆ ತಮ್ಮ ಇಲಾಖೆಯ ಕೆಲಸದ ಮೇಲೆ ಲಕ್ಷ್ಯವಿಲ್ಲ. ಸಿದ್ದರಾಮಯ್ಯ ಇಳಿದರೆ ತಾವು ಆ ಪಟ್ಟಕ್ಕೆ ಏರ ಬೇಕೆಂಬ ತವಕದಲ್ಲಿ, ಸಮಾವೇಶಗಳನ್ನು ಆಯೋಜಿಸಲು ಮುಂದಾಗಿದ್ದಾರೆ. ದಲಿತರ ಸಮಾವೇಶವೀಗ ಶೋಷಿತರ ಸಮಾವೇಶವಾಗಿ ಬದಲಾಗಿದೆ. ಇದರ ಹಿಂದೆ ಶೋಷಿತ ಸಮುದಾಯಗಳ ಉದ್ಧಾರಕ್ಕಿಂತ ರಾಜಕೀಯ ಮೇಲಾಟವೇ ಢಾಳಾಗಿ ಕಾಣಿಸುತ್ತಿದೆ.

ಸರ್ಕಾರದ ಅನೇಕ ವೈಫಲ್ಯಗಳು ಜನರನ್ನು ಸಂಕ‌ಷ್ಟಕ್ಕೆ ದೂಡಿವೆ. ಅವನ್ನೆಲ್ಲ ಮುಂದಿಟ್ಟು ಹೋರಾಟ ರೂಪಿಸುವ ವಿಪುಲ ಅವಕಾಶ ಬಿಜೆಪಿಗೆ ಇದೆ. ಅಧ್ಯಕ್ಷ ಸ್ಥಾನ ಕಿತ್ತುಕೊಳ್ಳುವ ಉಮೇದು ಕಾಣಿಸುತ್ತಿದೆಯೇವಿನಾ ಸಮರೋತ್ಸಾಹವೇ ಕಾಣಿಸುತ್ತಿಲ್ಲ. ಮಹಿಳಾ ಅಧಿಕಾರಿಗೆ ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಪುತ್ರ ಹೀನಾಮಾನ ಬೈದ ಪ್ರಕರಣ ವರದಿಯಾಗಿದೆ. ವಿಜಯೇಂದ್ರ ಅವರು ತಮ್ಮ ತವರು ಜಿಲ್ಲೆಯಲ್ಲಿ ನಡೆದ ಇಂತಹ ಹೀನ ಕೃತ್ಯದ ವಿರುದ್ಧ ಹೋರಾಟ ಕಟ್ಟುವುದು ಹೋಗಲಿ, ಅತ್ತ ಮುಖ ಹಾಕಲೂ ಇಲ್ಲ. ವಿರೋಧ ಪಕ್ಷದ ನಾಯಕರಿಬ್ಬರೇ ಪ್ರತಿಭಟನೆ ನಡೆಸುವ ದುಃಸ್ಥಿತಿಗೆ ಬಿಜೆಪಿ ತಲುಪಿದೆ.

ಅಧಿಕಾರದ ಸುತ್ತ ಹೆಣೆದ ಬಲೆಯೊಳಗೆ ಸಿಲುಕಿ ಒದ್ದಾಡುತ್ತಿರುವ ರಾಜಕಾರಣಿಗಳಿಗೆ ಜನಹಿತ ಬೇಕಿಲ್ಲ. ಸಂಪತ್ತಿನಿಂದ ಜಗತ್ತನ್ನೇ ಗೆಲ್ಲಬಲ್ಲೆ ಎಂದು ನಂಬಿ ಕೂತ ನೇತಾರರನ್ನು ಜನ ಎಂದೂ ಒಪ್ಪಿಲ್ಲ, ಒಪ್ಪುವುದೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.