ಕಾಂಗ್ರೆಸ್ ಪಕ್ಷವು ರಾಜಕೀಯವಾಗಿ, ಸಂಘಟನಾತ್ಮಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪಕ್ಷವು ನಿರ್ಣಾಯಕವಾದ ಒಂದು ಹೆಜ್ಜೆಯನ್ನು ಮುಂದಕ್ಕೆ ಇರಿಸುವಂತೆ ಕಂಡಾಗಲೆಲ್ಲ, ನಿರ್ಣಯ ಕೈಗೊಳ್ಳಲಾಗದ ಸ್ಥಿತಿಯಲ್ಲಿ, ಆಂತರಿಕ ಕಚ್ಚಾಟದಲ್ಲಿ ಸಿಲುಕುತ್ತದೆ ಹಾಗೂ ಅನಗತ್ಯ ಬಡಾಯಿಯಲ್ಲಿ ತೊಡಗಿಸಿಕೊಳ್ಳುತ್ತದೆ. ಕೇಂದ್ರದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಪಕ್ಷವು ಅಧಿಕಾರದಿಂದ ಹೊರಗಿರುವುದು ಹಾಗೂ ರಾಜ್ಯಗಳಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಪಕ್ಷದ ಸ್ಥಿತಿಯನ್ನು ಇನ್ನಷ್ಟು ಸಂಕೀರ್ಣವಾಗಿಸುತ್ತಿದೆ.
ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ಸವಾಲಿನ ಸಂದರ್ಭಗಳನ್ನೂ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಕಾಂಗ್ರೆಸ್ಸಿನ ಸಂಕೀರ್ಣ ಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ. ಬಿಜೆಪಿಯ ನಾಯಕರು ಪ್ರತಿ ಅವಕಾಶವನ್ನೂ ಕಾಂಗ್ರೆಸ್ಸಿನ ಮೇಲೆ ನಿರಂತರ ದಾಳಿ ನಡೆಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿನ ನಾಯಕತ್ವವು ಈ ದಾಳಿಗಳಿಗೆ ಬಹುತೇಕ ಸಂದರ್ಭಗಳಲ್ಲಿ ಅರೆಮನಸ್ಸಿನಿಂದ ಹಾಗೂ ಸಮರ್ಪಕವಲ್ಲದ ಬಗೆಯಲ್ಲಿ ಪ್ರತಿಕ್ರಿಯೆ ನೀಡುತ್ತದೆ.
ಕಾಂಗ್ರೆಸ್ ಪಕ್ಷವು ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋಲು ಕಂಡಿದೆ. 2024ರಲ್ಲಿ ಬಿಜೆಪಿ ಕೂಡ ಲೋಕಸಭೆಯಲ್ಲಿ ಕಳಪೆ ಸಾಧನೆ ತೋರಿದೆ. ಹೀಗಿದ್ದರೂ ‘ಪಕ್ಷ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ’ ಎಂದಿದ್ದ ಸಂಕಥನವನ್ನು ಅದು ‘ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ’ ಎಂದು ಯಶಸ್ವಿಯಾಗಿ ಬದಲಾಯಿಸಿದೆ.
ಸಂಕಥನವನ್ನು ಬದಲಾಯಿಸಲು ಕಾಂಗ್ರೆಸ್ ಮಾಡಿರುವ ಪ್ರಯತ್ನಗಳು ಅಲ್ಪ. ಹರಿಯಾಣದಲ್ಲಿ ತನ್ನ ಹೆಜ್ಜೆಯ ಬಗ್ಗೆ ಪರಾಮರ್ಶೆ ನಡೆಸಿದ ಬಿಜೆಪಿಯು ಬಹಳ ಬೇಗ ಬದಲಾವಣೆ ತಂದುಕೊಂಡಿತು. ಆದರೆ ಅತಿಯಾದ ವಿಶ್ವಾಸವನ್ನು ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷ, ಆಂತರಿಕ ಕಚ್ಚಾಟವನ್ನು ಕೊನೆಗೊಳಿಸಲು ಏನೂ ಮಾಡಲಿಲ್ಲ. ಇದರ ಪರಿಣಾಮವಾಗಿ ಪಕ್ಷವು ಸೋಲು ಕಾಣಬೇಕಾಯಿತು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಆಘಾಡಿ ಮೈತ್ರಿಕೂಟಕ್ಕೆ ನಾಯಕನೇ ಇರಲಿಲ್ಲ. ಆದರೆ ಮಹಾಯುತಿ ಮೈತ್ರಿಕೂಟದ ಕಾರ್ಯಸೂಚಿ ಏನಿರಬೇಕು ಎಂಬುದನ್ನು ನಿರ್ಧರಿಸಿದ ಬಿಜೆಪಿ, ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿತು. ಮತದಾರರ ಪಟ್ಟಿಯಲ್ಲಿ ಲೋಪ ಇದೆ ಎಂಬ ವಿಚಾರವನ್ನು ಕಾಂಗ್ರೆಸ್ ಪಕ್ಷವು ಫಲಿತಾಂಶ ಬಂದ ನಂತರ ಪ್ರಸ್ತಾಪಿಸಿತು. ಇದು, ಮತದಾನಕ್ಕೆ ಮೊದಲೇ ಇಂತಹ ಲೋಪಗಳನ್ನು ಪ್ರಸ್ತಾಪ ಮಾಡುವಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿನ
ದೌರ್ಬಲ್ಯವನ್ನು ತೋರಿಸುತ್ತದೆ.
ಸಂಘಟನೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹಾಗೂ ರಾಜಕೀಯ ಸಂಕಥನಗಳನ್ನು ತನ್ನ ಪರವಾಗಿ ತಿರುಗಿಸಲು ಆಗದೇ ಇರುವುದರ ಬಗ್ಗೆ ಕಾಂಗ್ರೆಸ್ ಗಮನ ಹರಿಸುವುದು ಒಳ್ಳೆಯ ಕೆಲಸ ಆಗಬಹುದು. ಕಾಂಗ್ರೆಸ್ ಪಕ್ಷವು ಸಂಘಟನಾತ್ಮಕವಾಗಿ ಎದುರಿಸುತ್ತಿರುವ ಸಮಸ್ಯೆಗಳು ಎದ್ದು ಕಾಣುವಂತೆ ಇವೆ. 2014ರಲ್ಲಿ ಪಕ್ಷ ಅನುಭವಿಸಿದ ಭಾರಿ ಸೋಲು ಹಾಗೂ 2019ರಲ್ಲಿ ಕಂಡ ಸಣ್ಣ ಪ್ರಮಾಣದ ಚೇತರಿಕೆಯು ಪಕ್ಷವು ಸ್ಪಷ್ಟವಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬುದನ್ನು ತೋರಿಸುವಂತೆ ಇದ್ದವು. 2024ರಲ್ಲಿ ಬಿಜೆಪಿಯು ಕಡಿಮೆ ಸ್ಥಾನಗಳನ್ನು ಪಡೆದಾಗಲೂ, ಮೂರಂಕಿ ಸ್ಥಾನ ಪಡೆಯಲು ಕಾಂಗ್ರೆಸ್ಸಿಗೆ ಆಗಿಲ್ಲದಿರು
ವುದು ತಳಮಟ್ಟದಲ್ಲಿ ಸಂಘಟನೆಯು ಪರಿಣಾಮಕಾರಿ ಆಗಿಲ್ಲದಿರುವುದನ್ನು ತೋರಿಸುತ್ತಿದೆ.
ರಾಷ್ಟ್ರಮಟ್ಟದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರಿಗೆ ವರ್ಗಾಯಿಸಿದ ನಂತರವೂ ಸಂಘಟನೆಗೆ ಹೆಚ್ಚಿನ ಬಲ ಸಿಗಲಿಲ್ಲ. 2019ರ ಸೋಲಿನ ನಂತರ ರಾಹುಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆಗ ಪಕ್ಷದ ಸಂಘಟನೆಯಲ್ಲಿ ಸುಧಾರಣೆ ತರುವ ಬಗ್ಗೆ ಮರು ಅವಲೋಕನ ನಡೆಸುವ ಯತ್ನ ನಡೆಯಿತು. ಆದರೆ ಅನಗತ್ಯ ವಿಳಂಬ ಹಾಗೂ ಕೆಲವು ಸಂದರ್ಭಗಳಲ್ಲಿ ತೀರ್ಮಾನಗಳನ್ನೇ ತೆಗೆದುಕೊಳ್ಳದೆ, ಪಕ್ಷವು ಗಾಂಧಿ ಕುಟುಂಬದ ಹೊರಗಿನ ನಾಯಕರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ರಾಜಕೀಯ ನೆಲೆಯಲ್ಲಿ
ಒಂದಿಷ್ಟು ನಾಟಕೀಯತೆಗಳೂ ಇದ್ದವು. ಆರಂಭದಲ್ಲಿ, ಖರ್ಗೆ ಅವರು ನಿರ್ಣಯಗಳನ್ನು ಕೈಗೊಳ್ಳುವಾಗ
ಸರ್ವಸಮ್ಮತಿಯ ವಿಧಾನವನ್ನು ಜಾರಿಗೆ ತರುತ್ತಿರುವಂತೆ ಕಂಡಿತು. ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಗಾಂಧಿ ಕುಟುಂಬದ ಸದಸ್ಯರ ಉಪಸ್ಥಿತಿಯು ತೀವ್ರ ಚರ್ಚೆಗಳಿಗೆ ಕಾರಣವಾಯಿತು. ಪಕ್ಷದಲ್ಲಿ ರಾಹುಲ್ ಅವರ ಪಾತ್ರ ಏನು ಎಂಬ ಬಗ್ಗೆ ಸ್ಪಷ್ಟತೆಯ ಕೊರತೆ ಕಾಣುತ್ತಿತ್ತು. ‘ಭಾರತ್ ಜೋಡೊ’ ಯಾತ್ರೆ ಮತ್ತು ‘ನ್ಯಾಯ ಯಾತ್ರೆ’ಯ ಯಶಸ್ಸು ರಾಹುಲ್ ಅವರ ರಾಜಕೀಯ ಬಂಡವಾಳವನ್ನು ಹೆಚ್ಚು ಮಾಡಿತಾದರೂ, ಪಕ್ಷದ ವಿಚಾರಗಳಲ್ಲಿ ರಾಹುಲ್ ಅವರು ನಿರಂತರವಾಗಿ ತೊಡಗಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳು ಉಳಿದವು.
2024ರ ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ಆಗುವುದರೊಂದಿಗೆ, ಅವರು ತೆರವು ಮಾಡಿದ ವಯನಾಡ್ ಕ್ಷೇತ್ರವನ್ನು ಸಹೋದರಿ ಪ್ರಿಯಾಂಕಾ ಅವರು ಗೆಲ್ಲುವುದರೊಂದಿಗೆ ಪಕ್ಷದ ರಾಜಕೀಯ ಕೇಂದ್ರಸ್ಥಾನಕ್ಕೆ ಗಾಂಧಿ ಕುಟುಂಬವು ಬಹಳ ಸ್ಪಷ್ಟವಾಗಿ ಮರಳಿ ಬಂದಂತೆ ಆಯಿತು. ದಶಕಕ್ಕೂ ಹೆಚ್ಚಿನ ಅವಧಿಯಿಂದ ವಿರೋಧ ಪಕ್ಷವಾಗಿದ್ದರೂ ಪಕ್ಷದ ಸಂಘಟನೆಗೆ ಉತ್ಸಾಹ ತುಂಬುವಲ್ಲಿ ಹೆಚ್ಚಿನ ಕೆಲಸ ಆಗಲಿಲ್ಲ. ಪಕ್ಷವು ಕೈಗೊಂಡ ತೀರ್ಮಾನಗಳ ಬಗ್ಗೆ ಬಂಡಾಯವು ಬಹಿರಂಗವಾಗಿ ವ್ಯಕ್ತವಾಗುವುದು ಸಹಜವಾಯಿತು. ಹಿಮಂತ ಬಿಸ್ವ ಶರ್ಮಾ ಪ್ರಕರಣ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಗುಲಾಂ ನಬಿ ಆಜಾದ್ ಅವರು ಪಕ್ಷ ತೊರೆದಿದ್ದು, ಅಶೋಕ್ ಗೆಹ್ಲೋಟ್ ಬಂಡಾಯ ಎದ್ದಿದ್ದು, ತೀರಾ ಈಚೆಗೆ ಶಶಿ ತರೂರ್ ತಳೆದ ನಿಲುವು ತೋರಿಸುತ್ತಿರುವುದು ಇದನ್ನೇ.
ಇನ್ನೊಂದೆಡೆ, ಪಕ್ಷದ ರಾಜ್ಯ ಘಟಕಗಳಲ್ಲಿ ಆಂತರಿಕ ಕಚ್ಚಾಟ ಸಹಜವಾಯಿತು. ಪಕ್ಷವು ಅಧಿಕಾರದಲ್ಲಿ ಇರುವ ರಾಜ್ಯದಲ್ಲಿಯೂ ಮುಖಂಡರ ನಡುವೆ ಒಗ್ಗಟ್ಟು ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಪಕ್ಷವು ಕೆಲವು ಮಹತ್ವದ ಹೆಜ್ಜೆಗಳನ್ನು ಇರಿಸುತ್ತದೆಯಾದರೂ, ನಂತರ ಅದು ಮೌನವಾಗಿಬಿಡುತ್ತದೆ. ಬಿಜೆಪಿಯು ಸಂಕಥನದ ಕೇಂದ್ರಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತದೆ. ‘ಆಪರೇಷನ್ ಸಿಂಧೂರ’ ಕುರಿತ ಭಾರತದ ನಿಲುವಿನ ಬಗ್ಗೆ ಮಾಹಿತಿ ಒದಗಿಸಲು ವಿದೇಶಗಳಿಗೆ ಸಂಸದರ ನಿಯೋಗ ಕಳುಹಿಸಿದ್ದು ಹಾಗೂ ಜಾತಿ ಜನಗಣತಿಗೆ ಸಂಬಂಧಿಸಿದ ಬೆಳವಣಿಗೆಗಳು ಈ ಮಾತಿಗೆ ತೀರಾ ಈಚಿನ ನಿದರ್ಶನ.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ‘ಇಂಡಿಯಾ’ ಮೈತ್ರಿಕೂಟ ಸೃಷ್ಟಿಸಿದ್ದ ಸಂಚಲನವನ್ನು ಇನ್ನಷ್ಟು ಮುಂದಕ್ಕೆ ಒಯ್ಯುವಲ್ಲಿನ ವೈಫಲ್ಯವು ಮೈತ್ರಿಕೂಟಕ್ಕೆ ಮುಂದಾಳತ್ವ ನೀಡುವಲ್ಲಿ ಕಾಂಗ್ರೆಸ್ಸಿಗೆ ಸಾಧ್ಯವಾಗದೇ ಇರುವುದನ್ನು ಹಾಗೂ ವಿರೋಧ ಪಕ್ಷಗಳ ಕಾರ್ಯಸೂಚಿ ಏನಿರಬೇಕು ಎಂಬುದನ್ನು ತೀರ್ಮಾನಿಸಲು ಆಗದೇ ಇರುವುದನ್ನು ತೋರಿಸುತ್ತಿರುವ ಇನ್ನೊಂದು ನಿದರ್ಶನ. ‘ಇಂಡಿಯಾ’ ಮೈತ್ರಿಕೂಟವು ಎಷ್ಟರಮಟ್ಟಿಗೆ ಪ್ರಸ್ತುತ ಎಂಬ ಪ್ರಶ್ನೆಯನ್ನು ಮೈತ್ರಿಕೂಟದ ಪಾಲುದಾರ ಪಕ್ಷಗಳಷ್ಟೇ ಅಲ್ಲದೆ, ಕಾಂಗ್ರೆಸ್ಸಿನ ಕೆಲವು ಮುಖಂಡರು ಕೂಡ ಕೇಳುತ್ತಿರುವುದು ಪರಿಸ್ಥಿತಿಯ ಪ್ರತಿಬಿಂಬದಂತೆ ಇದೆ. ಇದರಿಂದಾಗಿ ವಿರೋಧ ಪಕ್ಷಗಳ ನಡುವೆ ಕಾಂಗ್ರೆಸ್ಸನ್ನು ಏಕಾಂಗಿಯಾಗಿಸುವ ಪ್ರಯತ್ನವನ್ನು ಮುಂದುವರಿಸುವುದು, ಆ ಪಕ್ಷದ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುವುದು ಬಿಜೆಪಿಗೆ ಸುಲಭವಾಗಿದೆ.
ಮುಂದಿನ ನಡೆ ಏನು ಎಂಬ ಬಗ್ಗೆ ಕಾಂಗ್ರೆಸ್ಸಿನಲ್ಲಿ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಪಕ್ಷವು ಸಂಘಟನಾತ್ಮಕವಾಗಿ
ದುರ್ಬಲವಾಗಿರುವುದನ್ನು ವಿರೋಧಿ ಬಿಜೆಪಿಯು ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ಪ್ರಧಾನ ವಿರೋಧ ಪಕ್ಷ ಎನ್ನುವ ಪಾತ್ರವನ್ನು ಕಾಂಗ್ರೆಸ್ ಪಕ್ಷವು ಇತರ ಪಕ್ಷಗಳಿಗೆ ಬಹಳ ಬೇಗನೆ ಬಿಟ್ಟುಕೊಡುತ್ತಿದೆ. ವಿರೋಧ ಪಕ್ಷಗಳ ನಡುವೆ ತನಗೆ ಪ್ರಾಧಾನ್ಯ ಇರಬೇಕು ಎಂಬ ಸಂದೇಶವನ್ನು ಗಟ್ಟಿಯಾಗಿ ರವಾನಿಸುವ ಇರಾದೆ ಕಾಂಗ್ರೆಸ್ಸಿನ ನಾಯಕತ್ವಕ್ಕೆ ಇದೆ ಎಂದಾದರೆ, ದಿಕ್ಕುಗಾಣದೆ ಸಾಗುವ ಸ್ಥಿತಿಯಿಂದ ಪಕ್ಷವನ್ನು ಹೊರತರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.