
ಕರ್ನಾಟಕದ ರಾಜಕಾರಣದ ಮಟ್ಟಿಗೆ ನಾವು ಬಹಳ ಗಮನ ಸೆಳೆಯುವ, ಆಸಕ್ತಿ ಕೆರಳಿಸುವ ಕಾಲಘಟ್ಟವೊಂದರಲ್ಲಿ ಇದ್ದೇವೆ. ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ಬೆಳವಣಿಗೆಗಳು ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಈ ಬೆಳವಣಿಗೆಗಳು ಸಂಬಂಧಪಟ್ಟ ರಾಜಕೀಯ ಪಕ್ಷಗಳ ವರಿಷ್ಠರ ಕೆಲವು ಕ್ರಮಗಳು ಹಾಗೂ ನಿಷ್ಕ್ರಿಯತೆ ಜೊತೆ ನೇರ ಸಂಬಂಧ ಹೊಂದಿವೆ. ಇಲ್ಲಿ ಜೆಡಿಎಸ್ ಬಗ್ಗೆ ಚರ್ಚೆ ಮಾಡುತ್ತಿಲ್ಲ, ಈ ಪಕ್ಷವು ಕಾಂಗ್ರೆಸ್ ಅಥವಾ ಬಿಜೆಪಿಯಂತಹ ಹೈಕಮಾಂಡ್ ವ್ಯವಸ್ಥೆ ಹೊಂದಿಲ್ಲ.
ಮೊದಲು ಕಾಂಗ್ರೆಸ್ಸಿನ ಬೆಳವಣಿಗೆಗಳ ಬಗ್ಗೆ ಅವಲೋಕನ ನಡೆಸೋಣ. ಸುಮಾರು ಎರಡೂವರೆ ವರ್ಷಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ, ಇಲ್ಲಿನ ನಾಯಕತ್ವದ ಹೊಣೆಯನ್ನು ಯಾರಿಗೆ ವಹಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಬೇಕಾಗಿತ್ತು. ಹೈಕಮಾಂಡ್ ನಡೆಸಿದ ಮನವೊಲಿಕೆಯ ಕಾರಣದಿಂದಾಗಿ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಒಪ್ಪಿದರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡನೆಯ ಅವಧಿಯನ್ನು ಆರಂಭಿಸಿದರು. ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಬ್ಬರಿಗೆ ಮಾತ್ರ ನೀಡಬೇಕು (ಅವರಿಗೆ ತಮ್ಮ ಆಯ್ಕೆಯ ಒಂದು ಖಾತೆ ಪಡೆಯಲು ಅವಕಾಶ ನೀಡಲಾಯಿತು) ಎಂದು ಹೈಕಮಾಂಡ್ ಸ್ಪಷ್ಟಪಡಿಸಿತು. ಅಲ್ಲದೆ, ಉಪ ಮುಖ್ಯಮಂತ್ರಿ ಹುದ್ದೆ ಪಡೆದವರಿಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲು ಅವಕಾಶ ನೀಡಲಾಯಿತು. ವಿಧಾನಸಭೆಯ ಅರ್ಧ ಅವಧಿ ಪೂರ್ಣಗೊಂಡ ನಂತರದಲ್ಲಿ, ಉಪ ಮುಖ್ಯಮಂತ್ರಿ ಹುದ್ದೆಯಲ್ಲಿರುವವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂಬ ಭರವಸೆಯನ್ನು ನೀಡಲಾಗಿದೆ ಎಂಬ ಗುಸುಗುಸು ಕೂಡ ಇತ್ತು.
ಹಲವು ಸಂಗತಿಗಳ ವಿಚಾರವಾಗಿ ರಾಜ್ಯದ ನಾಯಕತ್ವದಲ್ಲಿ ಅಸಮಾಧಾನ ಯಾವಾಗ ಮೂಡುತ್ತದೆ ಎಂಬ ಪ್ರಶ್ನೆಯಷ್ಟೇ ಉಳಿದಿತ್ತು. ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದಾಗ ಸರ್ಕಾರದ ನಾಯಕತ್ವ ಬದಲಾವಣೆ ಮಾಡುವ ಭರವಸೆ ನೀಡಲಾಗಿತ್ತೇ ಎಂಬ ಕುರಿತು ಎರಡೂ ಗುಂಪುಗಳ ನಡುವೆ ಮಾತು ಬೆಳೆದಾಗ ಅಸಮಾಧಾನವೂ ಶುರುವಾಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 2019ರ ಫಲಿತಾಂಶಕ್ಕಿಂತ ಉತ್ತಮ ಸಾಧನೆ ತೋರಿದರೂ, ಎದುರಾಳಿಗಿಂತ ಹಿಂದೆಬಿದ್ದಾಗ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಅಗತ್ಯದ ಬಗ್ಗೆ ಪಿಸುಮಾತುಗಳು ಆರಂಭವಾದವು.
ಇದಾದ ನಂತರದಲ್ಲಿ, ಕಾಂಗ್ರೆಸ್ ಪಕ್ಷದ ಕೆಲವು ಹಿರಿಯರು ಕೂಡ ಸರ್ಕಾರದಲ್ಲಿ ಒಂದೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದ್ದರ ಬಗ್ಗೆ ಪ್ರಶ್ನಿಸಲು ಆರಂಭಿಸಿದರು. ಸಾಮಾಜಿಕ ಪ್ರಾತಿನಿಧ್ಯವು ಇನ್ನಷ್ಟು ಉತ್ತಮವಾಗಬೇಕು ಎಂದಾದರೆ ಇನ್ನಷ್ಟು ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ವಾದಿಸಿದರು. ಸಂಪುಟದ ಸದಸ್ಯರು ಭಿನ್ನ ರೀತಿಯಲ್ಲಿ ಮಾತನಾಡುವುದು ನಿತ್ಯದ ದೃಶ್ಯವಾಯಿತು. ವಿಧಾನಸಭೆಯ ಅರ್ಧ ಅವಧಿ ಹತ್ತಿರವಾದಂತೆಲ್ಲ, ಸರ್ಕಾರದ ನಾಯಕತ್ವದ ಬದಲಾವಣೆಯ ಪರವಾಗಿ ಹಾಗೂ ಅದರ ವಿರುದ್ಧವಾಗಿ ಮಾತನಾಡುವುದು ಇನ್ನಷ್ಟು ಗಟ್ಟಿಯಾಯಿತು. ಮುಖ್ಯಮಂತ್ರಿ ಹುದ್ದೆಯನ್ನು ಬಯಸುವ ಹೊಸ ನಾಯಕರು ಮುನ್ನೆಲೆಗೆ ಬಂದರು, ರಾಜ್ಯ ರಾಜಕಾರಣದ ಸಂಕೀರ್ಣ ಜಾತಿ ಲೆಕ್ಕಾಚಾರ ಕೂಡ ತೆರೆಯ ಮೇಲೆಯೇ ಕಾಣಿಸಿಕೊಂಡಿತು. ವಿಭಿನ್ನ ಜಾತಿ ಗುಂಪುಗಳಿಗೆ ಸೂಕ್ತವಾದ ಹಾಗೂ ಸಮರ್ಪಕವಾದ ಪ್ರಾತಿನಿಧ್ಯವು ಸಿಗಬೇಕು ಎಂಬ ಆಧಾರದಲ್ಲಿ ವಾದ–ಪ್ರತಿವಾದ ಜೋರಾದವು. ಈ ಬಗೆಯ ಮಾತುಗಳನ್ನು ಯಾವ ನಿಯಂತ್ರಣವೂ ಇಲ್ಲದೆ ಆಡುತ್ತಿದ್ದಾಗ ಪಕ್ಷದ ಕೇಂದ್ರ ನಾಯಕತ್ವವು ಉದ್ದೇಶಪೂರ್ವಕವಾಗಿ ಮೌನವಾಗಿತ್ತು. ಬಹುಶಃ ಈ ಮೌನವು ಪಕ್ಷದ ಭಿನ್ನ ಬಣಗಳು ತಮ್ಮ ಬೇಡಿಕೆಗಳನ್ನು ಇನ್ನಷ್ಟು ಗಟ್ಟಿಯಾಗಿ ಮಂಡಿಸಲು ಅನುವು ಮಾಡಿಕೊಟ್ಟಿತು.
ಎದ್ದು ಕಾಣುವ ಅಪಸ್ವರ ಹಾಗೂ ಆಂತರಿಕ ಕಚ್ಚಾಟವು ತೀವ್ರವಾಗುತ್ತಿದ್ದಾಗ ಪಕ್ಷದ ಹೈಕಮಾಂಡ್ ಬಹಳ ಉದ್ವೇಗರಹಿತವಾಗಿ ಇತ್ತು, ಮೌನ ವಹಿಸಿತ್ತು. ಸೂಕ್ತವಾದ ಸಂದರ್ಭದಲ್ಲಿ ತಾನು ಮಧ್ಯಪ್ರವೇಶಿಸುವುದಾಗಿ ಆಗಾಗ ಹೇಳುವುದನ್ನು ಹೊರತುಪಡಿಸಿದರೆ ಹೈಕಮಾಂಡ್ ಇನ್ನೇನನ್ನೂ ಮಾಡಲಿಲ್ಲ. ‘ಸೂಕ್ತವಾದ ಸಮಯ’ ಅಂದರೆ ನಿರ್ದಿಷ್ಟವಾಗಿ ಏನು ಎಂಬ ಪ್ರಶ್ನೆಯು ಹಲವರಲ್ಲಿ ಮೂಡಿತ್ತು. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ ಎಂಬ ಹೇಳಿಕೆಗಳು ಮತ್ತೆ ಮತ್ತೆ ಬಂದವು. ಆದರೆ, ಮೇಲ್ಪದರದ ಅಡಿಯಲ್ಲಿ ‘ಎಲ್ಲವೂ ಅಷ್ಟೇನೂ ಚೆನ್ನಾಗಿಲ್ಲ’ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡೂವರೆ ವರ್ಷ ಪೂರ್ಣ
ಗೊಳ್ಳುವುದರ ಮೊದಲು ಬಿಹಾರ ವಿಧಾನ ಸಭಾ ಚುನಾವಣೆಯ ಫಲಿತಾಂಶವು ಪ್ರಕಟವಾಗಿ
ದ್ದುದು, ಅದು ಪ್ರಕಟವಾದ ಸಂದರ್ಭದ ಕಾರಣ ದಿಂದಾಗಿಯೂ ಮಹತ್ವ ಪಡೆದುಕೊಂಡಿತು. ಬಿಹಾರ ದಲ್ಲಿ ಕಾಂಗ್ರೆಸ್ ಪಕ್ಷ ಅನುಭವಿಸಿದ ಹಿನ್ನಡೆಯು, ಕರ್ನಾಟಕದಲ್ಲಿ ಆಂತರಿಕ ಸಂಘರ್ಷವನ್ನು ಶಮನಗೊಳಿಸುವುದು ಕಷ್ಟವಾಗುವ ಬಗೆಯಲ್ಲಿ ಹೈಕಮಾಂಡ್ ಅನ್ನು ದುರ್ಬಲಗೊಳಿಸುತ್ತದೆ ಎಂದು ಕೆಲವರು ವಿಶ್ಲೇಷಿಸಿದರು. ಈ ಸಂದರ್ಭದಲ್ಲಿ ತಮ್ಮ ದನಿ ಎತ್ತರಿಸಿದ ಉಪ ಮುಖ್ಯಮಂತ್ರಿಯ ಬೆಂಬಲಿಗರು, ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡುವ ಅಗತ್ಯ ಇದೆ ಎಂದು ವಾದಿಸಲು ಆರಂಭಿಸಿದರು.
ಸರ್ಕಾರದ ಇಬ್ಬರು ಪ್ರಮುಖರ ನಡುವಿನ ‘ಮಾತಿನ ಸಮರ’ವು ಆಡಳಿತ ಯಂತ್ರವನ್ನು ಸ್ಥಗಿತದ ಸ್ಥಿತಿಗೆ ತಂದಂತೆ ಕಾಣಿಸಿತು. ತಾವು ಹೈಕಮಾಂಡ್ ಸೂಚನೆಯನ್ನು ಪಾಲಿಸುವುದಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿರುವ ಕಾರಣದಿಂದಾಗಿ, ಆ ಪಕ್ಷದ ಹೈಕಮಾಂಡ್ ದುರ್ಬಲ ಸ್ಥಿತಿಯಲ್ಲಿದೆ ಎಂಬುದು ಈಗ ಸ್ಪಷ್ಟವಾಗಿದೆ. ರಾಜ್ಯದ ನಾಯಕರ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವ ಶಕ್ತಿ ಅದಕ್ಕೆ ಈಗ ಇಲ್ಲ. ಇದು ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ಸ್ಪಷ್ಟವಾಗಿ ಕಂಡಿದೆ. ಈಗ ಕರ್ನಾಟಕದಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಂಸತ್ತಿನ ಹಾಗೂ ವಿಧಾನಸಭೆಯ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಈಚೆಗೆ ನಡೆದ ಉಪಾಹಾರ ಸಭೆ ಕೂಡ ತಾತ್ಕಾಲಿಕ ಕದನ ವಿರಾಮದಂತೆ ಕಾಣಿಸುತ್ತಿದೆ.
ಈಗ ನಾವು ರಾಜ್ಯ ಬಿಜೆಪಿಯ ನಾಯಕತ್ವದ ಬಗ್ಗೆ, ಆ ಪಕ್ಷದ ವರಿಷ್ಠರ ಬಗ್ಗೆ ಗಮನ ಹರಿಸೋಣ. ಪಕ್ಷದ ರಾಜ್ಯ ಘಟಕವು ಬಣಗಳಾಗಿ ಒಡೆದಿದೆ. ಅದರಲ್ಲೂ, 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತ ನಂತರ ಅದು ಹೆಚ್ಚಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿ ಜಯ ಕಂಡಿದ್ದಕ್ಕೆ ಕಾರಣ ಪಕ್ಷದ ರಾಷ್ಟ್ರೀಯ ನಾಯಕತ್ವ ಹೊಂದಿದ್ದ ಒಳ್ಳೆಯ ಹೆಸರು ಎನ್ನಲಾಗಿದೆ. ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯ ಘಟಕದ ಅಧ್ಯಕ್ಷರನ್ನು ಅನುಮೋದಿಸಿದ್ದರಾದರೂ, ರಾಜ್ಯದ ನಾಯಕತ್ವಕ್ಕೆ ಸವಾಲು ಹಾಕಿದ ಹಲವು ಬಣಗಳು ಇಲ್ಲಿವೆ. ಕೆಲವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತಾದರೂ (ಅದು ಬಹಳ ತಡವಾಗಿ ತೆಗೆದುಕೊಂಡ ಸಣ್ಣ ಕ್ರಮ ಎಂದು ವಾದಿಸಬಹುದು), ಆ ಹೊತ್ತಿಗೆ ಪಕ್ಷದ ರಾಜ್ಯ ಘಟಕದಲ್ಲಿನ ಮೇಲಾಟವು ಬಹಿರಂಗ ಆಗಿತ್ತು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಕಾರ್ಯಕರ್ತರನ್ನು ಹುರಿದುಂಬಿಸಲು ಯತ್ನಿಸಿ, ಒಂದಿಷ್ಟು ಯಶಸ್ಸು ಸಾಧಿಸಿದರು. ಆದರೆ, ಪಕ್ಷದ ಇತರ ನಾಯಕರಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗದೆ ಇದ್ದುದು ಪ್ರತಿಸ್ಪಂದನೆಯು ಅಷ್ಟೊಂದು ಉತ್ತಮವಾಗಿರದಂತೆ ಮಾಡಿತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ರಾಜ್ಯದ ಹಲವು ಸಮಸ್ಯೆಗಳಿಗೆ ಹೊಣೆಗಾರನನ್ನಾಗಿ ಮಾಡಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ನಡೆಸಿದ ಯತ್ನಗಳಲ್ಲಿ ಬೆಂಬಲದ ಕೊರತೆಯು ಎದ್ದುಕಾಣುತ್ತಿತ್ತು. ರಾಜ್ಯ ಘಟಕದ ಅಧ್ಯಕ್ಷರ ವಿಚಾರವಾಗಿ ಬಿಜೆಪಿಯ ವರಿಷ್ಠರು ಅಧಿಕೃತ ತೀರ್ಮಾನವೊಂದನ್ನು ಇನ್ನೂ ತೆಗೆದುಕೊಂಡಂತಿಲ್ಲ. ಬಿಜೆಪಿಯ ಈಗಿನ ರಾಜ್ಯ ಘಟಕದ ಅಧ್ಯಕ್ಷರನ್ನು 2023ರ ನವೆಂಬರ್‌ನಲ್ಲಿ ಆ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಅವರು ತಮ್ಮ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಎರಡು ವರ್ಷಗಳನ್ನು ಪೂರೈಸಿದ್ದಾರೆ. ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ನಡೆದಿರುವ ಆಂತರಿಕ ಚುನಾವಣೆಗಳ ಭಾಗವಾಗಿ ಬಿಜೆಪಿಯ ಕೇಂದ್ರ ನಾಯಕತ್ವವು ರಾಜ್ಯದಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬಹುದೇ (ಇದನ್ನು ದೇಶದ ಇತರೆಡೆಗಳಲ್ಲಿ ಮಾಡಲಾಗುತ್ತಿದೆ) ಅಥವಾ ಮೂರು ವರ್ಷಗಳ ಅವಧಿ ಪೂರ್ಣಗೊಳ್ಳಲಿ ಎಂದು ಕಾಯಲಿದೆಯೇ? ಈ ವಿಚಾರವಾಗಿ ಪಕ್ಷ ಕೈಗೊಳ್ಳುವ ತೀರ್ಮಾನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಪಕ್ಷವು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಒಂದು ಅನುಕೂಲಕರ ಸ್ಥಿತಿ.
ರಾಜ್ಯದ ನಾಯಕತ್ವದ ಸ್ಥಿತಿಯನ್ನು ಬಿಜೆಪಿಯ ಕೇಂದ್ರ ನಾಯಕತ್ವವು ಈಗಲೂ ಪರೀಕ್ಷಿಸುತ್ತಿದೆಯೇ, ಅದು ಮಧ್ಯಪ್ರವೇಶ ಮಾಡಲು ಹಾಗೂ ರಾಜ್ಯದ ನಾಯಕರ ನಡುವೆ ಹೆಚ್ಚಿನ ಒಗ್ಗಟ್ಟು ಮೂಡುವಂತೆ ಮಾಡಲು ಸರಿಯಾದ ಸಮಯಕ್ಕಾಗಿ ಕಾದಿದೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿಯು ಕೆಲವು ಸವಾಲುಗಳನ್ನೂ ಬಿಜೆಪಿಯಲ್ಲಿ ಸೃಷ್ಟಿಸಿದೆ.
2028ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ ಎಂಬುದು ಬಿಜೆಪಿಗೂ ಗೊತ್ತಿದೆ, ಕಾಂಗ್ರೆಸ್ಸಿಗೂ ಗೊತ್ತಿದೆ. ಚುನಾವಣೆ ಎದುರಿಸಲು ಮಾರ್ಗದರ್ಶನಕ್ಕಾಗಿ ಈ ಎರಡೂ ಪಕ್ಷಗಳ ರಾಜ್ಯ ಘಟಕಗಳು ವರಿಷ್ಠರತ್ತ ಮುಖ ಮಾಡಿವೆ. ಇಲ್ಲಿ ಎಡವಿದರೆ ರಾಜಕೀಯ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.