ADVERTISEMENT

ಜನರಾಜಕಾರಣ ಅಂಕಣ: ಪಕ್ಷಗಳಲ್ಲಿ ಆಂತರಿಕ ಬೇಗುದಿಗೆ ಅಂತ್ಯವಿಲ್ಲ

ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಅಸ್ಥಿರತೆಯನ್ನು ಎದುರಿಸುತ್ತಿವೆ

ಪ್ರೊ. ಸಂದೀಪ್ ಶಾಸ್ತ್ರಿ
Published 29 ಏಪ್ರಿಲ್ 2025, 23:34 IST
Last Updated 29 ಏಪ್ರಿಲ್ 2025, 23:34 IST
   

ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳು ಗಂಭೀರ ಸ್ವರೂಪದ ಆಂತರಿಕ ದ್ವಂದ್ವಗಳನ್ನು ಎದುರಿಸುತ್ತಿವೆ. ರಾಜಕೀಯ ನಾಯಕರು ತಮ್ಮದೇ ಪಕ್ಷದೊಳಗೆ ಎದುರಿಸುವ ರಾಜಕೀಯ ಸ್ಪರ್ಧೆಯ ಪರಿಣಾಮ ಇದು. ವೈಯಕ್ತಿಕ ಮಟ್ಟದಲ್ಲಿ ರಾಜಕೀಯ ಹಗೆ ತೀರಿಸಿಕೊಳ್ಳುವುದು, ಅವಕಾಶಗಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದು, ವೈಯಕ್ತಿಕ ಲಾಭ ಮಾಡಿಕೊಳ್ಳುವುದು... ಇವೆಲ್ಲ ಸಾಮಾನ್ಯವಾಗಿ ಪಕ್ಷದ ಒಗ್ಗಟ್ಟಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇವೆಲ್ಲ ಕರ್ನಾಟಕದ ಎಲ್ಲ ಪ್ರಮುಖ ಪಕ್ಷಗಳ ಪಾಲಿಗೆ ಶಾಪವಾಗಿ ಪರಿಣಮಿಸಿರುವಂತಿವೆ.

ಕಾಂಗ್ರೆಸ್ಸಿನ ಸ್ಥಿತಿಯನ್ನು ನೋಡೋಣ. ಪಕ್ಷದ ಹೈಕಮಾಂಡ್‌ ಗಟ್ಟಿಯಾಗಿ ಮಾತನಾಡುತ್ತಿಲ್ಲವಾದ ಕಾರಣಕ್ಕೆ, ರಾಜ್ಯ ಘಟಕಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಿದೆ, ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲಾಗುತ್ತಿದೆ. ಇದಕ್ಕೆ ಕರ್ನಾಟಕದ ಕಾಂಗ್ರೆಸ್ ಕೂಡ ಹೊರತಲ್ಲ. 

ರಾಜ್ಯದಲ್ಲಿ ಸರ್ಕಾರ ರಚಿಸಿದ ನಂತರದಲ್ಲಿ ಎಲ್ಲರ ಗಮನ ಇದ್ದಿದ್ದು ಸಚಿವ ಸ್ಥಾನ ಮತ್ತು ಖಾತೆಗಳ ಮೇಲೆ. ಹೀಗಾಗಿ ಪಕ್ಷದ ಕೆಲಸಗಳು ಆದ್ಯತೆಯ ಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದವು. ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟವರ ಸಂಖ್ಯೆ ಹೆಚ್ಚಿದ್ದ ಕಾರಣದಿಂದಾಗಿ, ಪಕ್ಷದಲ್ಲಿ ಅತೃಪ್ತಿ, ಗೊಣಗಾಟ ಮತ್ತು ಗುಂಪುಗಾರಿಕೆ ಸಹಜವೇ ಆಗಿತ್ತು. ರಾಜ್ಯದಲ್ಲಿ ಸರ್ಕಾರ ರಚಿಸಿದ ಒಂದೇ ವರ್ಷದಲ್ಲಿ ಲೋಕಸಭಾ ಚುನಾವಣೆ ಇದ್ದಿದ್ದು, ಭಿನ್ನ ಗುಂಪುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇರಿಸಬೇಕು, ಪಕ್ಷವು ಒಂದಾಗಿ ಚುನಾವಣೆ ಎದುರಿಸಬೇಕು ಎಂಬ ಮನವಿ ಮಾಡುವುದಕ್ಕೆ ಒಳ್ಳೆಯ ಕಾರಣವಾಗಿ ಒದಗಿಬಂತು. ಲೋಕಸಭಾ ಚುನಾವಣೆಯ ಫಲಿತಾಂಶವು ರಾಜ್ಯದ ಕಾಂಗ್ರೆಸ್ ಪಾಲಿಗೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲವಾದರೂ, ಅದು 2019ರಂತೆ ಕಳಪೆ ಆಗಿರಲಿಲ್ಲ. ಹೀಗಿದ್ದರೂ, ಪರಸ್ಪರ ದೂಷಣೆಗಳು ಆರಂಭವಾದವು.

ADVERTISEMENT

ಸಾಧನೆ ಚೆನ್ನಾಗಿಲ್ಲದ ಸಚಿವರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಮಾತುಗಳು ಆರಂಭವಾದವು. ಇನ್ನೊಂದು ಕಡೆ, ಹಲವು ಉಪ ಮುಖ್ಯಮಂತ್ರಿಗಳು ಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರು ಬರಬೇಕು ಎಂಬ ಆಗ್ರಹಗಳು ಬಂದವು. ಈ ಎಲ್ಲ ಆಗ್ರಹಗಳನ್ನು ಮಂಡಿಸಿದವರು ತಮ್ಮ ನಾಯಕನ ಪರವಾಗಿ ಮಾತನಾಡುತ್ತಿದ್ದರು. ತಮ್ಮ ನಾಯಕನ ವಿರೋಧಿಗಳ ಮೇಲೆ ವಾಗ್ದಾಳಿ ನಡೆಸಿದರೆ ತಮಗೆ ರಾಜಕೀಯವಾಗಿ ಏನಾದರೂ ಪ್ರಯೋಜನ ಆದೀತು ಎಂಬ ನಿರೀಕ್ಷೆಯಲ್ಲಿ ಅವರೆಲ್ಲ ತೀಕ್ಷ್ಣವಾಗಿ ಮಾತನಾಡುತ್ತಿದ್ದರು. 

ಪರಸ್ಪರ ಸಂಬಂಧವಿರುವ ಎರಡು ಬೆಳವಣಿಗೆಗಳು ಈಚಿನ ದಿನಗಳಲ್ಲಿ ಕಾಣಿಸಿಕೊಂಡಿವೆ. ಮೊದಲನೆಯದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಆಗುವ ಸಂದರ್ಭದಲ್ಲಿ ಒಂದು ಒಪ್ಪಂದ ಆಗಿದೆ, ಅರ್ಧ ಅವಧಿ (ಅಥವಾ ಕೆಲವರ ಪ್ರಕಾರ ಲೋಕಸಭಾ ಚುನಾವಣೆ ನಂತರ) ಸರ್ಕಾರದ ಮುಖ್ಯಸ್ಥರ ಬದಲಾವಣೆ ಆಗುತ್ತದೆ, ಉಪ ಮುಖ್ಯಮಂತ್ರಿ ಆಗಿರುವವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿಬಂದವು. ಮುಖ್ಯಮಂತ್ರಿಯ ಬೆಂಬಲಕ್ಕೆ ಇರುವ ಹಿರಿಯ ಮುಖಂಡರು ಹಾಗೂ ಉಪ ಮುಖ್ಯಮಂತ್ರಿಯವರ ಬೆಂಬಲಕ್ಕೆ ನಿಂತ ಹಿರಿಯ ಮುಖಂಡರ ನಡುವೆ ಪ್ರಚ್ಛನ್ನ ಸಮರವೊಂದು ನಡೆದಿತ್ತು. ಈ ನಡುವೆ ಆಡಳಿತವು ಆದ್ಯತೆ ಪಡೆಯಲಿಲ್ಲ.

ಇದಕ್ಕೆ ಸಂಬಂಧಿಸಿದ ಒಂದು ಚರ್ಚೆ ಜಾತಿ ಜನಗಣತಿಗೆ ಸಂಬಂಧಿಸಿದ್ದು. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಹಿಂದೆ ನಡೆದ ಜಾತಿ ಜನಗಣತಿಯ ವರದಿಯನ್ನು ದಶಕದಿಂದ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಮುಖ್ಯಮಂತ್ರಿಯವರು ಇದನ್ನು ಎರಡು ದೃಷ್ಟಿಕೋನದಿಂದ ಮುನ್ನೆಲೆಗೆ ತಂದರು. ಮೊದಲನೆಯದು, ಇದು ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಇಷ್ಟವಾದ ವಿಚಾರ. ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವ ಪಕ್ಷದ ನಿಲುವಿಗೆ ಅನುಗುಣವಾಗಿ ಮುಖ್ಯಮಂತ್ರಿಯವರು ಇದನ್ನು ಮತ್ತೆ ಚರ್ಚೆಯ ಕೇಂದ್ರಕ್ಕೆ ತಂದರು. ಎರಡನೆಯದು, ಒಬಿಸಿ ಸಮುದಾಯಗಳಲ್ಲಿ ಪ್ರಭಾವಿ ಅಲ್ಲದ ಸಮುದಾಯಗಳ, ಪರಿಶಿಷ್ಟ ಜಾತಿಗಳ ಮತ್ತು ಮುಸ್ಲಿಮರ ಸಶಕ್ತೀಕರಣಕ್ಕೆ ವರದಿಯು ಒತ್ತು ನೀಡಿರುವಂತಿದೆ. ತಮ್ಮನ್ನು ‘ಅಹಿಂದ’ ನಾಯಕ ಎಂದು ಬಿಂಬಿಸಿಕೊಂಡಿರುವ ಮುಖ್ಯಮಂತ್ರಿಯವರ ನಿಲುವುಗಳಿಗೆ ಇದು ಪೂರಕವಾಗಿದೆ. ತಮ್ಮನ್ನು ಸುತ್ತುವರಿದಂತಿರುವ ಹಲವು ವಿವಾದಗಳ ಬಿಸಿ ತಗ್ಗಿಸುವ ಯತ್ನ ನಡೆಸುವುದಕ್ಕೆ ಈ ವರದಿಯು ಒಂದು ಅವಕಾಶ ನೀಡುತ್ತದೆ.

ಜಾತಿ ಜನಗಣತಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶವನ್ನು ಪರಿಶೀಲಿಸಿದರೆ, ಜಾತಿ ಜನಗಣತಿಯು ರಾಜ್ಯದ ಎರಡು ಪ್ರಮುಖ ಪ್ರಭಾವಿ ಸಮುದಾಯಗಳ – ಒಕ್ಕಲಿಗ ಮತ್ತು ಲಿಂಗಾಯತ – ಸಂಖ್ಯೆಯನ್ನು ಕಡಿಮೆ ತೋರಿಸಿರುವಂತಿದೆ. 1957ರಿಂದಲೂ ಈ ಎರಡು ಸಮುದಾಯಗಳ ಶಾಸಕ ಸಂಖ್ಯೆಯು ರಾಜ್ಯದಲ್ಲಿ ಇತರ ಸಮುದಾಯಗಳ ಶಾಸಕರ ಸಂಖ್ಯೆಗಿಂತ ಹೆಚ್ಚಾಗಿಯೇ ಇದೆ. ಹಾಲಿ ವಿಧಾನಸಭೆಯಲ್ಲಿಯೂ ಈ ಎರಡು ಸಮುದಾಯಗಳಿಗೆ ಸೇರಿದ ಶಾಸಕರ ಸಂಖ್ಯೆಯು ಇತರ ಸಮುದಾಯಗಳ ಶಾಸಕರ ಸಂಖ್ಯೆಗಿಂತ ಹೆಚ್ಚಾಗಿಯೇ ಇದೆ. ಈ ಮಾತು ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಅನ್ವಯವಾಗುವಂತೆ ಇದೆ. 

ಜಾತಿ ಜನಗಣತಿಯ ವರದಿಯನ್ನು ಸಂಪುಟದಲ್ಲಿ ಚರ್ಚೆಗೆ ತರಲು ಮುಖ್ಯಮಂತ್ರಿ ನಡೆಸಿದ ಯತ್ನದ ಫಲವಾಗಿ, ಪ್ರಭಾವಿ ಜಾತಿಗಳ ಶಾಸಕರಿಂದ ತಕ್ಷಣವೇ ಪ್ರತಿಕ್ರಿಯೆ ಎದುರಾಯಿತು. ಅವರು ಜಾತಿ ಜನಗಣತಿ ವರದಿಯಲ್ಲಿ ಉಲ್ಲೇಖವಾಗಿರುವ ಅಂಕಿ–ಅಂಶಗಳನ್ನು ಪ್ರಶ್ನಿಸಿದರು, ಸಮೀಕ್ಷೆಯು ಎಷ್ಟರಮಟ್ಟಿಗೆ ಸರಿಯಾಗಿ ನಡೆದಿದೆ ಎಂಬ ಪ್ರಶ್ನೆ ಎತ್ತಿದರು, ಸಮೀಕ್ಷೆಯು ನಡೆದು ಒಂದು ದಶಕ ಕಳೆದಿದೆ ಎಂಬ ವಿಷಯಕ್ಕೆ ಆದ್ಯತೆ ಕೊಟ್ಟರು. ಈ ಪ್ರಕ್ರಿಯೆಯಲ್ಲಿ ಪಕ್ಷದಲ್ಲಿನ ಒಡಕುಗಳು ಮತ್ತೆ ಬಹಿರಂಗವಾಗಿವೆ.

ಕರ್ನಾಟಕದ ಬಿಜೆಪಿಯಲ್ಲಿ ಅದರದೇ ಆದ ಸಮಸ್ಯೆಗಳು ಇವೆ. ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಕೂಡ ಮನಸ್ಸು ಮಾಡದ ಕೆಲವರು ಭಿನ್ನ ದನಿಗಳಲ್ಲಿ ಮಾತನಾಡುತ್ತಿದ್ದಾರೆ. ವಿಧಾನಸಭೆಯಲ್ಲಿಯೂ ಬಿಜೆಪಿಯು ಒಗ್ಗಟ್ಟಿನ ದನಿಯಲ್ಲಿ ಮಾತನಾಡಿದಂತೆ ಕಾಣಲಿಲ್ಲ, ಗುಂಪುಗಾರಿಕೆಯು ಎದ್ದು ಕಾಣುತ್ತಿತ್ತು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಕ್ರಮವು ಬಹಳ ತಡವಾಗಿ ಬಂತು, ಅವರನ್ನು ಉಚ್ಚಾಟಿಸುವ ವೇಳೆಗಾಗಲೇ ಪಕ್ಷಕ್ಕೆ ಬಹಳಷ್ಟು ಹಾನಿ ಆಗಿಹೋಗಿತ್ತು.

ಬಿಜೆಪಿಯ ಒಳಗಿನ ಜಗಳವು ಸರ್ಕಾರಕ್ಕೆ ಸವಾಲು ಹಾಕುವ ಶಕ್ತಿಯನ್ನು ಉಡುಗಿಸಿದೆ. ಬಿಜೆಪಿಯ ವರಿಷ್ಠರು ರಾಷ್ಟ್ರಮಟ್ಟದ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿರುವಂತೆ ಕಾಣುತ್ತಿದೆ, ಅದು ರಾಜ್ಯ ಘಟಕದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಗಮನ ನೀಡಲಿಲ್ಲ.

ಜೆಡಿಎಸ್ ಪಕ್ಷವು ಕೇಂದ್ರ ಸರ್ಕಾರದಲ್ಲಿ ತಾನು ಹೊಂದಿರುವ ಪಾತ್ರವನ್ನು ಅನುಭವಿಸುವುದರಲ್ಲಿ ಖುಷಿ ಕಾಣುತ್ತಿದೆ. ಆದರೆ ಇದಕ್ಕಾಗಿ ಪಕ್ಷವು ಒಂದಿಷ್ಟು ಬೆಲೆ ತೆರಬೇಕಾಗಿ ಬಂದಿದೆ. ಅಂದರೆ, ರಾಜ್ಯ ಮಟ್ಟದಲ್ಲಿ ಪಕ್ಷವನ್ನು ನಿರ್ಲಕ್ಷಿಸಲಾಗಿದೆ, ಪಕ್ಷದ ಬೆಂಬಲಿಗರ ಸಂಖ್ಯೆ ಕಡಿಮೆ ಆಗಿದೆ. ಮುಂದಿನ ವಿಧಾನಸಭಾ ಚುನಾವಣೆ ಹತ್ತಿರವಾಗುವ ಹೊತ್ತಿನಲ್ಲಿಯೂ ಬಿಜೆಪಿ–ಜೆಡಿಎಸ್ ಮೈತ್ರಿಯು ಮುಂದುವರಿದಿರುತ್ತದೆ ಎಂದು ಹೇಳಲು ಆಗುವುದಿಲ್ಲ. ಜೆಡಿಎಸ್‌ ನಾಯಕತ್ವವು ಪಕ್ಷದ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂಬ ಭಾವನೆ ಹಲವರಲ್ಲಿದೆ. 

ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಅಸ್ಥಿರತೆಯನ್ನು ಎದುರಿಸುತ್ತಿವೆ. ಆದರೆ ಹೀಗಾಗಿರುವುದಕ್ಕೆ ಮೂರೂ ಪಕ್ಷಗಳಲ್ಲಿನ ಕಾರಣಗಳು ಭಿನ್ನವಾಗಿವೆ. ತಕ್ಷಣಕ್ಕೆ ಯಾವುದೇ ಚುನಾವಣೆ ಇಲ್ಲವಾಗಿರುವ ಕಾರಣ ಪಕ್ಷದ ಸಂಘಟನೆಯ ಬಗ್ಗೆ ಹೆಚ್ಚಿನ ಗಮನವನ್ನು ಯಾರೂ ನೀಡುತ್ತಿಲ್ಲ. ಸಂಘಟನೆಯ ಕಡೆ ಗಮನ ಹರಿಯಬೇಕು ಎಂದಾದರೆ ಬಹುಶಃ ಇನ್ನೊಂದು ಚುನಾವಣೆಯೇ ಎದುರಾಗಬೇಕೇನೋ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.