ADVERTISEMENT

ಪಡಸಾಲೆ ಅಂಕಣ: ಹಿಂದೂ ನಾವೆಲ್ಲ ಒಂದು! ಎಂದು?

ಚ.ಹ.ರಘುನಾಥ
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
   
‘ನಾವೆಲ್ಲ ಒಂದು’ ಘೋಷಣೆಯ ಹಿಂದಿನ ವಸ್ತುಸ್ಥಿತಿಯ ಚಿತ್ರಣ ‘ಹೆಬ್ಬುಲಿ ಕಟ್’ ಸಿನಿಮಾದಲ್ಲಿದೆ. ದಲಿತ ಹಾಗೂ ಮುಸ್ಲಿಂ ಸಮುದಾಯಗಳು ಎದುರಿಸುತ್ತಿರುವ ತಲ್ಲಣಗಳ ಬಹು ಸೂಕ್ಷ್ಮ ಗ್ರಹಿಕೆಯ ಹಾಗೂ ಅಬ್ಬರವಿಲ್ಲದ ನಿರೂಪಣೆಯ ಸಿನಿಮಾ ಸಮಕಾಲೀನ ರಾಜಕಾರಣಕ್ಕೆ ಹಿಡಿದಿರುವ ಕನ್ನಡಿಯೂ ಹೌದು.

ಹಿಂದುತ್ವದ ಸಂಘಟನೆಗಳ ನೆಚ್ಚಿನ ಘೋಷಣೆ: ‘ಹಿಂದೂ ನಾವೆಲ್ಲ ಒಂದು.’ ‘ಸಂಘದ ಜಾತಿ ಒಂದೇ– ಹಿಂದೂ ಹಿಂದೂ ಹಿಂದೂ’ ಎನ್ನುವುದು ದಾಳಿಂಬೆಪ್ರಿಯ ಸಂಸದರೊಬ್ಬರ ಹೇಳಿಕೆ. ‘ನಾವೆಲ್ಲ ಒಂದು’ ಎಂದು ಮತ್ತೆ ಮತ್ತೆ ಹೇಳುತ್ತಿರುವುದೇ ಆ ಮಾತನ್ನು ಅನುಮಾನದಿಂದ ನೋಡುವುದಕ್ಕೆ, ಹೇಳಿಕೆಯಲ್ಲಿನ ಹುಸಿತನ ಎದ್ದುಕಾಣಲಿಕ್ಕೆ ಕಾರಣವಾಗಿದೆ. ಸಮಾಜದಲ್ಲಿನ ಒಡಕಲು ಬಿಂಬಗಳನ್ನು ಮಾತಿನ ಮರೆಯಲ್ಲಿ ಅಡಗಿಸಿಡಲು ‘ಹಿಂದೂ ನಾವೆಲ್ಲ ಒಂದು’ ಘೋಷಣೆ ಎಷ್ಟೇ ಪ್ರಯತ್ನಿಸಿದರೂ, ಆ ಕೂಗು ಒಡಲಾಳದಿಂದ ಹುಟ್ಟದೆ ಬಾಯಿಬೊಬ್ಬೆಯಾಗಿಯಷ್ಟೇ ಉಳಿದಿದೆ. ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಮಾತಿನ ಅಸಲಿಯತ್ತನ್ನು ಉಜ್ಜಿನೋಡುವ ಸೃಜನಶೀಲ ಪ್ರಯತ್ನ ‘ಹೆಬ್ಬುಲಿ ಕಟ್‌’ ಸಿನಿಮಾ.

ಭೀಮರಾವ್‌ ನಿರ್ದೇಶನದ ‘ಹೆಬ್ಬುಲಿ ಕಟ್‌’ ಸಿನಿಮಾ ಕೊನೆಗೊಳ್ಳುವುದು ‘ಹಿಂದೂ ನಾವೆಲ್ಲ ಒಂದು’ ಎನ್ನುವ ಗೋಡೆಯ ಮೇಲಿನ ಮಸುಕು ಬರಹದೊಂದಿಗೆ. ಗೋಡೆಬರಹ ‘ಎದೆಯ ಬರಹ’ ಆಗದಿರುವ ವಿರೋಧಾಭಾಸವನ್ನು ಸಿನಿಮಾ ಪರಿಣಾಮಕಾರಿಯಾಗಿ ಚಿತ್ರಿಸಿದೆ. ‘ಹಿಂದೂ ಒಂದು’ ಎನ್ನುವ ಮಾತು ಮುಸ್ಲಿಮರನ್ನು ಅನ್ಯರನ್ನಾಗಿಸುವ ಹುನ್ನಾರಕ್ಕೆ ಸಂಬಂಧಿಸಿದಂತೆ ಇತಿಹಾಸ ಹಾಗೂ ವರ್ತಮಾನದಲ್ಲಿ ನಿಜವಾಗಿರುವುದು ಹೌದು. ಆದರೆ, ಹಿಂದೂಗಳ ವಿಷಯದಲ್ಲಿ ಈ ಮಾತು ಘೋಷಣೆಯಾಗಿಯಷ್ಟೇ ಉಳಿದಿದೆ; ಆ ಕಾರಣದಿಂದಲೇ, ಹಿಂದೂ ಸಮಾಜದ ಪಾಲಿಗೆ ದಲಿತರು ಅನ್ಯರೂ ಅಸ್ಪೃಶ್ಯರೂ ಆಗಿರುವುದು.

ದಲಿತಪರ‌ ಸಿನಿಮಾ ಎಂದಷ್ಟೇ ಹೇಳುವುದು ‘ಹೆಬ್ಬುಲಿ ಕಟ್’ ಸಿನಿಮಾದ ಸಾಧ್ಯತೆಗೆ ಚೌಕಟ್ಟು ಹಾಕಿದಂತೆ. ಅದು ಮನುಷ್ಯಪರ ಸಿನಿಮಾ. ಭಾರತದ ವರ್ತಮಾನಕ್ಕೆ‌ ಕನ್ನಡಿ ಹಿಡಿದಿರುವ ಕಲಾಕೃತಿ. ಒಂದೆಡೆ, ದಲಿತರ ಮೇಲೆ‌ ದೌರ್ಜನ್ಯ; ಇನ್ನೊಂದೆಡೆ ಮುಸ್ಲಿಂ ಅಲ್ಪಸಂಖ್ಯಾತರನ್ನು ಈ ದೇಶದ‌ ಮುಖ್ಯವಾಹಿನಿಯಿಂದ ಹೊರಗಿಡುವುದನ್ನೇ ಅಧಿಕಾರ ಗಳಿಕೆಯ ತಂತ್ರವನ್ನಾಗಿಸಿಕೊಂಡಿರುವ ರಾಜಕಾರಣ. ಇವೆರಡನ್ನೂ ‘ಹೆಬ್ಬುಲಿ ಕಟ್’ ಬಹು ಸೂಕ್ಷ್ಮವಾಗಿ ಹಾಗೂ ಅಬ್ಬರವಿಲ್ಲದೆ ಕಟ್ಟಿಕೊಡುತ್ತದೆ. ದಲಿತರು ಮತ್ತು ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಒಟ್ಟಿಗೆ ಗ್ರಹಿಸಲು ಪ್ರಯತ್ನಿಸುವ ಇಂಥ ಸಿನಿಮಾ ಮಾದರಿಗಳು ಕನ್ನಡ ಮಾತ್ರವಲ್ಲ, ಎಲ್ಲ ಭಾಷೆಯಲ್ಲೂ ವಿರಳ. ಭೀಮಮಾರ್ಗ– ಬಾಪುಮಾರ್ಗ, ಎರಡನ್ನೂ ಭೀಮರಾವ್‌ ಸಿನಿಮಾ ನೆನಪಿಸುತ್ತದೆ.

ADVERTISEMENT

ಊರಿನಲ್ಲಿ ತೂಕದ ಗುಂಡು ಎತ್ತುವ ಸ್ಪರ್ಧೆಯ ಸನ್ನಿವೇಶದೊಂದಿಗೆ ಸಿನಿಮಾ ಶುರುವಾಗುತ್ತದೆ. ಸ್ಪರ್ಧೆ ಗೆಲ್ಲುವ ಗಂಡಿಗೆ ಬಹುಮಾನ ನೀಡುವುದಾಗಿ ಊರಿನ ಗೌಡ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಾನೆ. ಆ ಸ್ಪರ್ಧೆಯಲ್ಲಿ ಗೆಲ್ಲುವುದು ಓರ್ವ ಮುಸ್ಲಿಂ ಯುವಕ. ಕೊಟ್ಟ ಮಾತಿನಂತೆ ಗೌಡ ಬಹುಮಾನದ ಹಣ ನೀಡಿದರೂ, ತಕ್ಷಣವೇ ಆ ಸ್ಥಳದಿಂದ ನಿರ್ಗಮಿಸುತ್ತಾನೆ. ಗೌಡನ ಮನಃಸ್ಥಿತಿಯನ್ನು ಬಹು ಸೂಚ್ಯವಾಗಿ ಕಟ್ಟಿಕೊಡುವ ದೃಶ್ಯ, ಸಿನಿಮಾದ ಕೊನೆಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ; ಅಸಹನೆ ಮತ್ತಷ್ಟು ತೀವ್ರವಾಗಿ ಅಭಿವ್ಯಕ್ತಗೊಳ್ಳುತ್ತದೆ.

ವಿನ್ಯಾ ಎನ್ನುವ ಹುಡುಗ ಕಾಣೆಯಾದಾಗ, ಆ ಕಣ್ಮರೆಯ ಹಿಂದೆ ರಫೀಕ್‌ನ ಕೈವಾಡ ಇರುವುದಾಗಿ ಶಂಕಿಸುವ ಗುಂಪು, ಅವನ ಮನೆಯ ಮೇಲೆ ದಾಳಿ ನಡೆಸುತ್ತದೆ. ಅದೊಂದು ಆಕಸ್ಮಿಕ ಘಟನೆಯಾಗಿರದೆ, ದೇಶದ ವಿವಿಧ ಭಾಗಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ನಡೆಯುತ್ತಿರುವ ದಾಳಿಗಳನ್ನು ಸಂಕೇತಿಸುವ ಬಿಂಬವಾಗಿದೆ. ಗಿರೀಶ ಕಾಸರವಳ್ಳಿಯವರ ‘ಗುಲಾಬಿ ಟಾಕೀಸ್‌’ ಸಿನಿಮಾದಲ್ಲಿ ಊರಿನ ಎಲ್ಲರಿಗೂ ಬೇಕಾದ ಗುಲಾಬಿ, ಬದಲಾದ ಸಂದರ್ಭದಲ್ಲಿ ಟ್ರಂಕಿನ ಮೇಲೆ ಕುಳಿತು ಅನುಭವಿಸುವ ಒಂಟಿತನ, ಅಸಹಾಯಕತೆಯನ್ನು ‘ಹೆಬ್ಬುಲಿ ಕಟ್‌’ನಲ್ಲಿ ರಫೀಕನ ಅಮ್ಮ ಅನುಭವಿಸುತ್ತಾಳೆ.

ವಿನ್ಯಾ ಎನ್ನುವ ಹದಿಹರೆಯದ ಹುಡುಗನೊಬ್ಬನ ಕೇಶವಿನ್ಯಾಸ ಮಾಡಿಸಿಕೊಳ್ಳುವ ಆಸೆ, ಅವನಿಗೆ ಹಾಗೂ ಅವನ ಕುಟುಂಬಕ್ಕೆ ಎಷ್ಟು ದುಬಾರಿಯಾಗುತ್ತದೆ ಎನ್ನುವುದನ್ನು ನಿರೂಪಿಸುವ ‘ಹೆಬ್ಬುಲಿ ಕಟ್‌’, ಜಾತ್ಯತೀತ ಭಾರತದಲ್ಲಿನ ಜಾತೀಯತೆಯ ರಾಡಿಯನ್ನು ಕಾಣಿಸುವ ಪ್ರಯತ್ನ. ವಿನ್ಯಾ ಚಮ್ಮಾರ ಕುಟುಂಬಕ್ಕೆ ಸೇರಿದವನು. ತನ್ನ ಸಹಪಾಠಿ ಹುಡುಗಿಯ ಅಭಿಮಾನದ ನಟನ ‘ಹೆಬ್ಬುಲಿ ಕಟ್‌’ ಕೇಶವಿನ್ಯಾಸವನ್ನು ಮಾಡಿಸಿಕೊಳ್ಳುವ ಮೂಲಕ ಅವಳ ಮೆಚ್ಚುಗೆ ಪಡೆಯುವ ಆಸೆ ಅವನದು. ಆದರೆ, ವಿನ್ಯಾ ಮತ್ತು ಅವನ ಸಮುದಾಯದ ಕೂದಲನ್ನು ಕತ್ತರಿಸುವ ಮುಸ್ಲಿಂ ವ್ಯಕ್ತಿಗೆ ಆಧುನಿಕ ಕೇಶವಿನ್ಯಾಸದ ಪರಿಣತಿಯಿಲ್ಲ. ಊರಿನ ಮಧ್ಯದಲ್ಲಿರುವ ಸಲೂನಿಗೆ ವಿನ್ಯಾನಿಗೆ ಪ್ರವೇಶವಿಲ್ಲ. ಆ ಸಲೂನಿನ ಒಡೆಯ ಚೆನ್ನನಿಗೆ ವಿನ್ಯಾನ ಆಸೆಯನ್ನು ಈಡೇರಿಸಲು ಮನಸ್ಸಿದ್ದರೂ, ಊರಿನ ಜಾತಿಗೋಡೆಗಳ ಬಗ್ಗೆ ಅವನಿಗೆ ಅರಿವಿದೆ. ಬಾಲಕನನ್ನು ನಿರಾಶೆಪಡಿಸಲು ಇಷ್ಟವಿಲ್ಲದೆ, ಐದುನೂರು ರೂಪಾಯಿ ಕೊಟ್ಟರೆ ಹೆಬ್ಬುಲಿ ಕಟ್‌ ಮಾಡುವುದಾಗಿ ಹೇಳುತ್ತಾನೆ. ಹೊಟ್ಟೆಬಟ್ಟೆಗೆ ತತ್ವಾರವಿರುವ ಚಮ್ಮಾರನ ಮಗ ಐದುನೂರು ರೂಪಾಯಿ ಹೊಂದಿಸುವುದು ಸಾಧ್ಯವೇ ಇಲ್ಲ ಎನ್ನುವುದು ಚೆನ್ನನ ಲೆಕ್ಕಾಚಾರ. ಆದರೆ, ಸ್ಕೂಲಿಗೆ ಚಕ್ಕರ್‌ ಹೊಡೆದು ಚಿಂದಿ ಆಯುವ ವಿನ್ಯಾ ರೂಪಾಯಿಗೆ ರೂಪಾಯಿ ಜೋಡಿಸಿ, ಐದುನೂರು ರೂಪಾಯಿ ಸಂಪಾದಿಸುತ್ತಾನೆ.

ಬೆಳಗಾದರೆ ಕಸುಬುದಾರನಲ್ಲದ ವ್ಯಕ್ತಿಯ ಕತ್ತರಿಗೆ ಕೂದಲು ಒಪ್ಪಿಸುವುದರಿಂದ ಪಾರಾಗಲಿಕ್ಕಾಗಿ ವಿನ್ಯಾ ಮನೆಯಿಂದ ಕಾಣೆಯಾಗುತ್ತಾನೆ. ಮರುದಿನ ನಸುಕಿನಲ್ಲಿ ಸಲೂನಿನ ಮುಚ್ಚಿದ ಬಾಗಿಲೊಳಗೆ ವಿನ್ಯಾನ ಹೆಬ್ಬುಲಿ ಕಟ್‌ಗೆ ತಯಾರಿ ನಡೆಯುತ್ತದೆ. ಒಂದೆಡೆ, ವಿನ್ಯಾನ ಕಣ್ಮರೆಯ ಕಾರಣದಿಂದಾಗಿ ರಫೀಕ್‌ ಮನೆಯ ಮೇಲೆ ದಾಳಿ ನಡೆಯುತ್ತದೆ; ಅದೇ ಸಂದರ್ಭದಲ್ಲಿ ವಿನ್ಯಾನ ‘ಪಟ್ಟಾಭಿಷೇಕ’ದ ವಿಷಯ ಹೇಗೋ ತಿಳಿದು, ಸಲೂನಿನ ಮೇಲೆ ಗೌಡ ದಾಳಿ ಮಾಡುತ್ತಾನೆ. ವಿನ್ಯಾನಿಗೆ ಹೆಬ್ಬುಲಿ ಕಟ್‌ ಮಾಡಬೇಕಾದ ಚೆನ್ನ ತಲೆಬೋಳಿಸುತ್ತಾನೆ. ವಿನ್ಯಾನ ತಂದೆ–ತಾಯಿಯ ಕಾರಣದಿಂದಾಗಿ ರಫೀಕ್‌ನ ಮನೆಯವರು ದೈಹಿಕ ಹಲ್ಲೆಯಿಂದ ಪಾರಾಗುತ್ತಾರೆ. ಆತ್ಮವಿಶ್ವಾಸಕ್ಕೆ ಕಾರಣವಾಗಬೇಕಾಗಿದ್ದ ಕೇಶವಿನ್ಯಾಸದ ಬದಲು, ತಲೆ ಬೋಳಿಸಿಕೊಂಡ ಅವಮಾನದಿಂದ ವಿನ್ಯಾ ತಲೆತಗ್ಗಿಸುತ್ತಾನೆ. ಮಗನ ಪರಿಸ್ಥಿತಿ ನೋಡಿ ಸಂಕಟಪಡುವ ತಂದೆ–ತಾಯಿ ಅಸಹಾಯಕತೆಯಿಂದ ಮಾತು ಕಳೆದುಕೊಳ್ಳುತ್ತಾರೆ. ಸಿನಿಮಾ ಮುಗಿಯುವ ಆ ಕ್ಷಣಕ್ಕೆ, ತೆರೆಯ ಮೇಲೆ ‘ಹಿಂದೂ ನಾವೆಲ್ಲ ಒಂದು’ ಎನ್ನುವ ಗೋಡೆಬರಹ!

ಮಾಹಿತಿ ತಂತ್ರಜ್ಞಾನದ ಉತ್ಕರ್ಷದ ದಿನಗಳ ಭಾರತದಲ್ಲಿ ಎರಡು ಸಮುದಾಯಗಳು ಎದುರಿಸುತ್ತಿರುವ ಭಿನ್ನವಾದ ತಲ್ಲಣಗಳನ್ನು ‘ಹೆಬ್ಬುಲಿ ಕಟ್‌’ ಮಾರ್ಮಿಕವಾಗಿ ಚಿತ್ರಿಸಿದೆ. ಸಹಜ ರೂಪಕಗಳು ಸಿನಿಮಾದ ಹೊಳಪು ಹೆಚ್ಚಿಸಿವೆ. ಬಿಡಿ, ಬಿಳಿ ಹೂವೊಂದು ತಿಳಿ ನೀರಿನಲ್ಲಿ ತೇಲುತ್ತ ಪಯಣಿಸುವ ದೃಶ್ಯ ವಿನ್ಯಾನಂಥವರ ಜೀವನಯಾನವೂ ಆಗಿದೆ. ತಿಳಿನೀರ ಹರಿವು ಬಗ್ಗಡವಾಗುತ್ತದೆ, ಕೊಳೆಯಾಗುತ್ತದೆ. ಹೂವಿನ ಸರಾಗ ಚಲನೆಗೂ ಎಡರುತೊಡರು. ಬಿಡಿಸಿಹೇಳುವುದೇನು: ತಿಳಿನೀರು, ಬಗ್ಗಡ, ಹೂವಿನ ಪಯಣ – ಎಲ್ಲವೂ ಈ ಮಣ್ಣಿನಲ್ಲಿ ಮೂಡುವ ಅನುದಿನದ ಬಿಂಬಗಳೇ. ತಮಟೆ‌‌ಯ ನಾದಕ್ಕೆ ತಕ್ಕಂತೆ ಕುಣಿಯುವ ಮೂಲಕ ವಿನ್ಯಾನ ಕುಟುಂಬ ಹತಾಶೆ–ಸಂಕಟವನ್ನು ಮೀರುವ ಕ್ಷಣ ಕಥನದ ಚೌಕಟ್ಟನ್ನು ದಾಟಿ, ತಳವರ್ಗದ ಬದುಕಿನ ಸಂಕೀರ್ಣತೆ ಹಾಗೂ ಚೆಲುವು ಹಿಡಿದಿಡುವ ರೂಪಕವಾಗಿದೆ.

‘ಹೆಬ್ಬುಲಿ ಕಟ್‌’ ಸಿನಿಮಾ, ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಸಂದರ್ಭದ ವಿದ್ಯಮಾನಗಳನ್ನು ನೆನಪಿಸುತ್ತದೆ. ‘ಈ ಸಮೀಕ್ಷೆ ಜಾತಿಗಣತಿ ಅಲ್ಲ’ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದ್ದರೂ, ಕೆಲವರ ಪಾಲಿಗಿದು ಜಾತಿಗಣತಿಯೇ. ಸಮೀಕ್ಷೆಯಲ್ಲಿ ಭಾಗಿಯಾಗಲು ನಿರಾಕರಿಸಿದ ಉದ್ಯಮಿಯೊಬ್ಬರು, ತಾವು ಮುಂದುವರಿದ ಜಾತಿಗೆ ಸೇರಿರುವುದಾಗಿ ಟಿಪ್ಪಣಿ ಬರೆದರು. ಈ ಘಟನೆ, ವ್ಯಕ್ತಿಯೊಬ್ಬ ತನ್ನನ್ನು ತಾನು ಮುಂದುವರಿದ ಜಾತಿಗೆ ಸೇರಿದ್ದೇನೆಂದು ಹೇಳಿಕೊಳ್ಳುವುದಕ್ಕೆ ಕೊಂಚವೂ ಲಜ್ಜೆಪಡೆದ ಮನಃಸ್ಥಿತಿಯನ್ನು ಸೂಚಿಸುವಂತಿದೆ. ಊರಿನ ಗೌಡನ ಅಸಹನೆಗೂ, ಜಾತಿವ್ಯಸನದ ಉದ್ಯಮಿ ದಂಪತಿಯ ಮನೋಧರ್ಮಕ್ಕೂ ವ್ಯತ್ಯಾಸವೇನಿಲ್ಲ. ಹಣ, ಅಧಿಕಾರ ಹಾಗೂ ಜಾತಿಗರ್ವ ಒಟ್ಟಿಗೆ ಸೇರಿದರೆ, ಮಾನವೀಯತೆ ಅಪ್ರಸ್ತುತವಾಗುವುದರಲ್ಲಿ ಅಚ್ಚರಿಯೇನಲ್ಲ.

ಆಶಯಪ್ರಧಾನ ಪ್ರಯೋಗಗಳು ಸಿನಿಮಾ ವ್ಯಾಕರಣದ ದೃಷ್ಟಿಯಿಂದ ಬಡವಾಗಿರುವುದು ಕನ್ನಡ ಸಿನಿಮಾ ಸಂದರ್ಭದಲ್ಲಿ ಒಪ್ಪಿತ ಎನ್ನುವಂತಾಗಿದೆ. ಆದರೆ, ‘ಹೆಬ್ಬುಲಿ ಕಟ್‌’ ವ್ಯಾಕರಣದ ದೃಷ್ಟಿಯಿಂದಲೂ, ಮೌನೇಶ್‌ ನಟರಂಗ, ಮಹದೇವ ಹಡಪದ ಹಾಗೂ ವೈ.ಜಿ. ಉಮಾ ಅವರ ನಟನೆಯ ಕಸುವಿನಿಂದಲೂ ಗಮನಸೆಳೆಯುವ ಸಿನಿಮಾ. 

‘ಹೆಬ್ಬುಲಿ ಕಟ್‌’ ತೆರೆಕಂಡ ಸುಮಾರು ಮೂರು ತಿಂಗಳ ನಂತರ ಬಿಡುಗಡೆಯಾದ ‘ಕಾಂತಾರ ಅಧ್ಯಾಯ–1’ ಈ ವರ್ಷ ದೇಶದಲ್ಲೇ ಹೆಚ್ಚಿನ ಗಳಿಕೆಯ ದಾಖಲೆಗೆ ಪಾತ್ರವಾಗಿರುವ ಸಿನಿಮಾ. ಎರಡೂ ಸಿನಿಮಾಗಳು ‘ನೆಲದ ಕಥೆ’ಗಳೇ ಆಗಿವೆ. ಕಾಂತಾರವನ್ನು ಕನ್ನಡದ ಹೆಮ್ಮೆಯ ಸಿನಿಮಾ ರೂಪದಲ್ಲಿ ಬಿಂಬಿಸಲಾಗುತ್ತಿದೆ. ‘ಹೆಬ್ಬುಲಿ ಕಟ್’ ತೆರೆಕಂಡಷ್ಟೇ ವೇಗದಲ್ಲಿ ನೇಪಥ್ಯಕ್ಕೆ ಸರಿದು, ಕಿರುತೆರೆಯ ಒಟಿಟಿ ಚಿತ್ರರಾಶಿಯಲ್ಲಿ ಹುದುಗಿರುವ ಕಥನ. ಮಾತು ಹಾಗೂ ವಾಸ್ತವ ಒಟ್ಟಾಗದ ‘ಹಿಂದೂ ನಾವೆಲ್ಲ ಒಂದು’ ಹೇಳಿಕೆ, ‘ಕಾಂತಾರ’ ಹಾಗೂ ‘ಹೆಬ್ಬುಲಿ ಕಟ್‌’ ಸಿನಿಮಾಗಳ ಪ್ರತಿನಿಧೀಕರಣಕ್ಕೂ ಅನ್ವಯಿಸುವಂತಹದ್ದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.