ADVERTISEMENT

ಸೀಮೋಲ್ಲಂಘನ: ಇಸ್ರೇಲ್ ಯುದ್ಧ ಅನಿರೀಕ್ಷಿತವೇ?

ಯುದ್ಧದ ವ್ಯಾಪ್ತಿ ಹಿರಿದಾಗಬಹುದು ಎಂಬ ಸಂಶಯ ಕಾಡತೊಡಗಿದೆ

ಸುಧೀಂದ್ರ ಬುಧ್ಯ
Published 12 ಅಕ್ಟೋಬರ್ 2023, 22:56 IST
Last Updated 12 ಅಕ್ಟೋಬರ್ 2023, 22:56 IST
ಸೀಮೋಲ್ಲಂಘನ
ಸೀಮೋಲ್ಲಂಘನ   

ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಿಂದ ಇಸ್ರೇಲ್ ತತ್ತರಿಸಿದೆ. ಪ್ರತೀಕಾರಕ್ಕಾಗಿ ಹಮಾಸ್ ಮೇಲೆ ಇಸ್ರೇಲ್ ಯುದ್ಧ ಸಾರಿದೆ. ಮೇಲ್ನೋಟಕ್ಕೆ ಇದು ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವಾಗಿ ಕಂಡರೂ ತೆರೆಯ ಹಿಂದಿನ ಲೆಕ್ಕಾಚಾರ ಬೇರೆಯೇ ಇದ್ದಂತಿದೆ.

ಹಮಾಸ್‌ನ ಈ ದಾಳಿ ಅನಿರೀಕ್ಷಿತವೇ? 2006ರಲ್ಲಿ ಗಾಜಾ ಪಟ್ಟಿಯ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡ ಹಮಾಸ್, ಇಸ್ರೇಲ್ ಮೇಲೆ ಈ ಹಿಂದೆ ಅನೇಕ ಬಾರಿ ದಾಳಿ
ನಡೆಸಿತ್ತು. ಅದಕ್ಕೆ ಇಸ್ರೇಲ್ ತನ್ನ ಸೇನೆಯ ಮೂಲಕ ತಿರುಗೇಟು ನೀಡಿತ್ತು. ಇಸ್ರೇಲನ್ನು ಯುದ್ಧದಲ್ಲಿ ಮಣಿಸುವ ಸಾಮರ್ಥ್ಯವಾಗಲೀ ಅದರ ಪ್ರತಿದಾಳಿ ತಡೆದುಕೊಳ್ಳುವಷ್ಟು ರಟ್ಟೆಬಲವನ್ನಾಗಲೀ ಹೊಂದಿಲ್ಲದ ಹಮಾಸ್, ಮತ್ತೊಮ್ಮೆ ಇಸ್ರೇಲ್ ಮೇಲೆ ದಾಳಿ ನಡೆಸಿದೆ ಮತ್ತು ಆ ದಾಳಿಯನ್ನು ‘ಅಲ್ ಅಕ್ಸಾ ಫ್ಲಡ್’ ಎಂದು ಕರೆದಿದೆ!

ಅಲ್ ಅಕ್ಸಾ ಮಸೀದಿಯು ಜೆರುಸಲೇಮ್‌ನಲ್ಲಿರುವ ಪ್ರಮುಖ ಶ್ರದ್ಧಾ ಕೇಂದ್ರ. ಅಲ್ಲಿ ಪ್ಯಾಲೆಸ್ಟೀನಿಯನ್ನರು ಪ್ರಾರ್ಥನೆ ಸಲ್ಲಿಸುತ್ತಾರೆ. ಮುಸ್ಲಿಮರಿಗೆ ಮೀಸಲಾಗಿದ್ದ ಜಾಗದಲ್ಲಿ ಯಹೂದಿಗಳು 2021ರ ಏಪ್ರಿಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು ಎಂಬ ಕಾರಣಕ್ಕೆ ಮೊದಲಿಗೆ ಘರ್ಷಣೆ ಆರಂಭವಾಯಿತು. ನಂತರ ಇಸ್ರೇಲ್ ಸರ್ಕಾರ ಆ
ಭಾಗದಲ್ಲಿ ಭದ್ರತೆಯನ್ನು ಬಿಗಿಗೊಳಿಸಿತು. ಪ್ರಾರ್ಥನೆಗೆ ಬಂದವರನ್ನು ತಡೆಯಲಾಗುತ್ತಿದೆ, ತಪಾಸಣೆಯ ನೆಪದಲ್ಲಿ ಹಿಂಸಿಸಲಾಗುತ್ತಿದೆ, ಶ್ರದ್ಧಾಕೇಂದ್ರವನ್ನು ಅಪವಿತ್ರಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂತು. ಕಲ್ಲುತೂರಾಟಕ್ಕೆ ಪ್ರತಿಯಾಗಿ ಪೊಲೀಸರು ಲಾಠಿ ಬೀಸಿದರು, ಹಲವರನ್ನು ಬಂಧಿಸಿದರು.

ADVERTISEMENT

ಹಮಾಸ್ ದಾಳಿಗೆ ಅಲ್ ಅಕ್ಸಾ ಪ್ರಕರಣ ಕಾರಣ ಎಂಬ ವಿಶ್ಲೇಷಣೆಗಳು ಬರುತ್ತಿವೆ. ಅಷ್ಟೇ ಆಗಿದ್ದರೆ, ಇಸ್ರೇಲಿನ ಜನಸಾಮಾನ್ಯರನ್ನು ಹಮಾಸ್ ಬರ್ಬರವಾಗಿ ಕೊಲ್ಲಬೇಕಾಗಿರಲಿಲ್ಲ. ಶವದ ಮೆರವಣಿಗೆಯಲ್ಲಿ ಕೇಕೆ ಹಾಕಬೇಕಿರಲಿಲ್ಲ. ಹಮಾಸ್ ಅಸಹನೆಗೆ ಬೇರೆಯ ಕಾರಣಗಳೂ ಇವೆ. ವಿಶ್ವಸಂಸ್ಥೆಯಲ್ಲಿ ದ್ವಿರಾಷ್ಟ್ರದ ಪ್ರಸ್ತಾವ ಮಂಡನೆಯಾದಾಗ ಗುರುತಿಸಲಾಗಿದ್ದ ಇಸ್ರೇಲ್ ಮತ್ತು ಪ್ಯಾಲೆಸ್ಟೀನಿನ ಭೂಭಾಗಕ್ಕೂ ಇಂದಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. 1948ರಲ್ಲಿ ಇಸ್ರೇಲ್ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಒಂದು ರಾಷ್ಟ್ರವಾಗಿ ಎದ್ದುನಿಂತಾಗ, ಪ್ಯಾಲೆಸ್ಟೀನ್ ಪರವಾಗಿ ಮುಸ್ಲಿಂ ಜಗತ್ತು ಒಂದಾಗಿತ್ತು. ಅರಬ್ ರಾಷ್ಟ್ರಗಳು ಇಸ್ರೇಲ್ ಮೇಲೆ ದಾಳಿ ಮಾಡಿದ್ದವು. ಆದರೆ ಯುದ್ಧ ಮುಗಿದಾಗ ಇಸ್ರೇಲ್ ತನ್ನ ಗಡಿಯನ್ನು ವಿಸ್ತರಿಸಿಕೊಂಡಿತ್ತು.

1967ರ ಆರು ದಿನಗಳ ಯುದ್ಧದಲ್ಲಿ, ಜೋರ್ಡನ್‌ ಸುಪರ್ದಿಯಲ್ಲಿದ್ದ ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಮ್, ಈಜಿಪ್ಟಿನ ಹಿಡಿತದಲ್ಲಿದ್ದ ಸಿನಾಯ್ ಪರ್ಯಾಯ ದ್ವೀಪ ಮತ್ತು ಗಾಜಾ ಪಟ್ಟಿ, ಸಿರಿಯಾದ ಗೋಲನ್ ಹೈಟ್ಸ್ ಇಸ್ರೇಲ್ ತೆಕ್ಕೆಗೆ ಬಂದವು. 1973ರ ಅಕ್ಟೋಬರ್ ಯುದ್ಧದಲ್ಲಿ ಈಜಿಪ್ಟ್ ಮತ್ತು ಸಿರಿಯಾ ಇತರ ಅರಬ್ ರಾಷ್ಟ್ರಗಳ ಬೆಂಬಲದೊಂದಿಗೆ ಮತ್ತೊಮ್ಮೆ ಇಸ್ರೇಲಿನ ಮೇಲೆ ಯುದ್ಧ ಸಾರಿದವು. ಆ ಯುದ್ಧ ಮುಗಿದಾಗ ಇಸ್ರೇಲಿನ ನಕ್ಷೆ ಮತ್ತಷ್ಟು ಹಿಗ್ಗಿತ್ತು.

ಐದು ವರ್ಷಗಳ ಬಳಿಕ 1978ರಲ್ಲಿ ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಕ್ಯಾಂಪ್ ಡೇವಿಡ್ ಒಪ್ಪಂದ ಏರ್ಪಟ್ಟಿತು. ಸಿನಾಯ್ ಪರ್ಯಾಯ ದ್ವೀಪವನ್ನು ಈಜಿಪ್ಟಿಗೆ ಮರಳಿಸಿ ಶಾಂತಿ ಒಪ್ಪಂದ ಮಾಡಿಕೊಂಡ ಇಸ್ರೇಲ್, ಅಷ್ಟರಮಟ್ಟಿಗೆ ಪ್ಯಾಲೆಸ್ಟೀನ್ ಪರ ಧ್ವನಿಯನ್ನು ಮಂದವಾಗಿಸಿತು. ದಶಕದ ಬಳಿಕ ಇಸ್ರೇಲ್ ಗೆಳೆತನಕ್ಕೆ ಜೋರ್ಡನ್‌ ಕೈಚಾಚಿತು.

1993ರಲ್ಲಿ ಅಮೆರಿಕದ ಅಧ್ಯಕ್ಷ ಬಿಲ್‌ ಕ್ಲಿಂಟನ್ ಮಧ್ಯಸ್ಥಿಕೆಯಲ್ಲಿ ಓಸ್ಲೊ ಒಪ್ಪಂದ ಆಗುವ ಹೊತ್ತಿಗೆ ಪ್ಯಾಲೆಸ್ಟೀನ್ ನಾಯಕ ಯಾಸರ್ ಅರಾಫತ್ ಅವರಿಗೂ ಇಸ್ರೇಲ್ ಎನ್ನುವುದು ವಾಸ್ತವ ಎಂಬುದು ಅರಿವಾಗಿತ್ತು. ಪ್ಯಾಲೆಸ್ಟೀನಿಯನ್ನರನ್ನು ಪ್ರತಿನಿಧಿಸುತ್ತಿದ್ದ ಪಿಎಲ್ಒಗೆ (ಪ್ಯಾಲೆಸ್ಟೀನ್ ಲಿಬರೇಷನ್ ಆರ್ಗನೈಸೇಷನ್) ಇಸ್ರೇಲ್ ಮಾನ್ಯತೆ ನೀಡಿತು. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಒಂದಾಗಿ ಇಟ್ಟ ಬಹುಮುಖ್ಯ ಹೆಜ್ಜೆ ಇದಾಗಿತ್ತು.

ಆದರೆ 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿ ಮತ್ತು ನಂತರ ಭಯೋತ್ಪಾದನೆಯ ವಿರುದ್ಧ ಅಮೆರಿಕ ಸಾರಿದ ಸಮರ, ಅಮೆರಿಕದ ಆದ್ಯತೆಯನ್ನು, ಮಧ್ಯಪ್ರಾಚ್ಯದ ರಾಜಕೀಯ ಸಮೀಕರಣವನ್ನು, ಮುಸ್ಲಿಂ ಜಗತ್ತಿನ ಆಲೋಚನಾ ಕ್ರಮವನ್ನು ಬದಲು ಮಾಡಿದವು. ಅದುವರೆಗೂ ಅರಬ್ ರಾಷ್ಟ್ರಗಳ ಯಾವುದೇ ಚರ್ಚೆಯಲ್ಲಿ ಕೇಂದ್ರ ಸ್ಥಾನದಲ್ಲಿ ಇರುತ್ತಿದ್ದ ಪ್ಯಾಲೆಸ್ಟೀನ್ ವಿಷಯ ಬದಿಗೆ ಸರಿಯಿತು. ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳಲ್ಲಿ ಹೊಸ ನಾಯಕತ್ವ ಬಂತು. ಈ ರಾಷ್ಟ್ರಗಳು ಅಭಿವೃದ್ಧಿ ಮತ್ತು ಆಧುನಿಕತೆಯ ಕುರಿತು ಮಾತನಾಡತೊಡಗಿದವು.
ಮುಸ್ಲಿಂ ಜಗತ್ತು ಪ್ಯಾಲೆಸ್ಟೀನ್ ವಿಷಯ ಮರೆತಾಗ, ಇಸ್ರೇಲ್ ಪಶ್ಚಿಮದಂಡೆಯಲ್ಲಿ ತನ್ನ ಹಿಡಿತವನ್ನು
ಹೆಚ್ಚಿಸಿಕೊಳ್ಳುತ್ತಾ ಹೋಯಿತು.

ಟ್ರಂಪ್ ಅವರ ಆಡಳಿತ ಅವಧಿಯಲ್ಲಿ ಇಸ್ರೇಲ್ ಜೊತೆಗೆ ಯುಎಇ ಮತ್ತು ಬಹರೇನ್ ಸಂಬಂಧ ವೃದ್ಧಿಸಿಕೊಂಡವು. ಸೌದಿ ಅರೇಬಿಯಾ ಮತ್ತು ಇಸ್ರೇಲ್ ಅನ್ನು ಬೆಸೆಯುವ ಕಾರ್ಯಕ್ಕೆ ಬೈಡನ್ ಕೈಹಾಕಿದರು. ಪ್ಯಾಲೆಸ್ಟೀನ್ ವಿಷಯ ಉಪೇಕ್ಷೆಗೆ ಒಳಗಾಗಿದ್ದು, ಒಂದೊಂದೇ ಅರಬ್ ರಾಷ್ಟ್ರ ಇಸ್ರೇಲ್ ಜೊತೆಗೆ ಹೆಜ್ಜೆಹಾಕತೊಡಗಿದ್ದು, ವಾಸ್ತವಕ್ಕೆ ಬೆನ್ನುತಿರುಗಿಸಿರುವ ಮತ್ತು ಇಸ್ರೇಲ್ ನಾಶವನ್ನೇ ಗುರಿಯಾಗಿಸಿಕೊಂಡಿರುವ ಇರಾನ್ ಮತ್ತು ಹಮಾಸ್ ಅನ್ನು ಕೆರಳಿಸಿತು. ಇದೀಗ ಹಮಾಸ್ ತನ್ನ ಹೀನ ಕೃತ್ಯವನ್ನು ‘ಅಲ್ ಅಕ್ಸಾ ಫ್ಲಡ್’ ಎಂದು ಕರೆದಿರುವುದು ಮುಸ್ಲಿಂ ಜಗತ್ತಿನ ಗಮನವನ್ನು ಮತ್ತೊಮ್ಮೆ ಪವಿತ್ರ ಭೂಮಿ (ಜೆರುಸಲೇಮ್) ಮತ್ತು ಪ್ಯಾಲೆಸ್ಟೀನ್ ಕಡೆ ಸೆಳೆಯುವ, ಜಾಗತಿಕವಾಗಿ ಮುಸ್ಲಿಮರ ಸಹಾನುಭೂತಿ ಗಳಿಸುವ ಪ್ರಯತ್ನವಷ್ಟೇ.

ಇಲ್ಲಿ ಮತ್ತೊಂದು ಪ್ರಶ್ನೆಯಿದೆ. ಉಕ್ರೇನ್ ಯುದ್ಧ ಮತ್ತು ಇಸ್ರೇಲ್ ಯುದ್ಧವನ್ನು ಪ್ರತ್ಯೇಕವಾಗಿ ನೋಡಬೇಕೆ? ಮಧ್ಯಪ್ರಾಚ್ಯದ ರಾಜಕಾರಣದಲ್ಲಿ ರಷ್ಯಾ ಬಹುಮುಖ್ಯ ಪಾತ್ರಧಾರಿ. ಉಕ್ರೇನ್ ಯುದ್ಧದ ಆರಂಭದಲ್ಲಿ ಅಂದಿನ ಇಸ್ರೇಲ್ ಪ್ರಧಾನಿ ನಫ್ಟಾಲಿ ಬೆನೆಟ್ ಅವರು ರಷ್ಯಾಕ್ಕೆ ಭೇಟಿ ನೀಡಿ ರಷ್ಯಾ- ಉಕ್ರೇನ್ ನಡುವಿನ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಪ್ರಯತ್ನ ಮಾಡಿದ್ದರು. ಒಂದೊಮ್ಮೆ ಯುದ್ಧ ತಾರಕಕ್ಕೇರಿದರೆ
ತಾನು ಉಕ್ರೇನ್ ಪರ ನಿಲ್ಲಬೇಕಾಗುತ್ತದೆ, ರಷ್ಯಾದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಮತ್ತು ಅದು ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ಗೆ ಸಂಕಷ್ಟ ತಂದೊಡ್ಡಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ರಷ್ಯಾ ಮತ್ತು ಇರಾನ್ ನಡುವಿನ ಸಖ್ಯ, ಹಮಾಸ್ ಮತ್ತು ಇರಾನ್ ನಂಟು ಮತ್ತು ಹಮಾಸ್ ದಾಳಿಯ ಕುರಿತ ರಷ್ಯಾದ ಪ್ರತಿಕ್ರಿಯೆ
ಯನ್ನು ಒಟ್ಟಾಗಿ ನೋಡಿದಾಗ ಬೇರೆಯದೇ ಚಿತ್ರಣ ಕಾಣುತ್ತದೆ. ಉಕ್ರೇನ್ ಬೆಂಬಲಕ್ಕೆ ಇಡಿಯಾಗಿ ನಿಂತಿರುವ ಅಮೆರಿಕವನ್ನು ಇನ್ನೊಂದು ಯುದ್ಧದತ್ತ ಎಳೆಯುವ ಪ್ರಯತ್ನ ನಡೆದಿರಬಹುದೇ, ಆಧುನಿಕ ತಂತ್ರಜ್ಞಾನದ, ಸುಲಭಕ್ಕೆ ಭೇದಿಸಲಾಗದ ಗಡಿಬೇಲಿಯನ್ನು ನಿಷ್ಕ್ರಿಯಗೊಳಿಸಿ ಒಳನುಗ್ಗಲು ಹಮಾಸ್‌ಗೆ ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆಗಳು ಮೂಡುತ್ತವೆ.

ಹಾಗಾದರೆ, ಇಸ್ರೇಲ್ ಯುದ್ಧದ ವ್ಯಾಪ್ತಿ ಹಿರಿದಾಗ
ಬಹುದೇ? ಅಂತಹದೊಂದು ಸಂಶಯ ಅಮೆರಿಕಕ್ಕೆ ಬಂದಂತಿದೆ. ಇಸ್ರೇಲ್ ತನ್ನ ಆಂತರಿಕ ರಾಜಕೀಯ ವಿಪ್ಲವ ಮತ್ತು ಗುಪ್ತಚರ ಇಲಾಖೆಯ ವೈಫಲ್ಯ ಮರೆಮಾಚಲು, ಉನ್ಮಾದದಿಂದ ಯುದ್ಧ ಮಾಡುವಾಗ ಕೊಂಚ ಎಡವಿದರೂ, ಅದು ಇರಾನ್ ಮತ್ತು ಇತರ ರಾಷ್ಟ್ರಗಳನ್ನು ಯುದ್ಧಕ್ಕೆ ಎಳೆಯುವ ಸಾಧ್ಯತೆ ಇದೆ. ಆದರೆ ಅಮೆರಿಕಕ್ಕೆ ಎರಡು ಯುದ್ಧಗಳನ್ನು ಏಕಕಾಲಕ್ಕೆ ಪೋಷಿಸುವ ಶಕ್ತಿ ಸದ್ಯದ ಮಟ್ಟಿಗೆ ಇಲ್ಲ. ಹಾಗಾಗಿಯೇ ಅದು ತನ್ನ ಯುದ್ಧನೌಕೆಯನ್ನು (USS Gerald R. Ford) ಮೆಡಿಟರೇನಿಯನ್ ಸಮುದ್ರದಲ್ಲಿ ಸಜ್ಜಾಗಿಸಿದೆ. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ಜೊತೆ ಜಂಟಿ ಹೇಳಿಕೆ ಹೊರಡಿಸಿ ಇಸ್ರೇಲಿಗೆ ಬೆಂಬಲ ಸೂಚಿಸಿದೆ. ಹಮಾಸ್ ಅನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಹೋಲಿಸಿ ಇದನ್ನು ಭಯೋತ್ಪಾದನೆಯ ವಿರುದ್ಧದ ಸಮರ ಎಂದು ಚಿತ್ರಿಸಲು ನೋಡುತ್ತಿದೆ. ಯುಎಇ ಮೂಲಕ ಹಮಾಸ್ ಬೆಂಬಲಿಸದಂತೆ ಸಿರಿಯಾದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದೆ. ಸೌದಿ-ಇಸ್ರೇಲ್ ಒಪ್ಪಂದ ಆಗಿಬಿಡಲಿ ಎಂದು ತುದಿಗಾಲಲ್ಲಿ ನಿಂತಿದೆ.

ಸೀಮೋಲ್ಲಂಘನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.