ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೆಜ್ಜೆಯನ್ನು ಇಟ್ಟಿದ್ದಾರೆ. ಇದೇ 20ರಂದು ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಚೀನಾದ ವರಿಷ್ಠ ಷಿ ಜಿನ್‌ಪಿಂಗ್ ಮತ್ತು ಇತರ ಕೆಲವು ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದಾರೆ. ಇದುವರೆಗೆ ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇತರ ದೇಶಗಳ ನಾಯಕರು ಭಾಗವಹಿಸಿದ ಉದಾಹರಣೆ ಇಲ್ಲ. ಮೊದಲ ಅವಧಿಗಿಂತ ಟ್ರಂಪ್ 2.0 ಭಿನ್ನವಾಗಿ ಇರಲಿದೆ ಎಂಬುದಕ್ಕೆ ಇದು ಸೂಚನೆ ಇರಬಹುದು.
2017ರ ಟ್ರಂಪ್ ಮತ್ತು 2025ರ ಟ್ರಂಪ್ ಹೇಗೆ ಭಿನ್ನ ಎಂದು ನೋಡಿದರೆ, ಟ್ರಂಪ್ ಮೊದಲ ಆಡಳಿತಾವಧಿಯಲ್ಲಿ ರಾಜಕೀಯವಾಗಿ ಅನನುಭವಿಯಾಗಿದ್ದರು. ಅಮೆರಿಕದಲ್ಲಿ ಯಾವುದೂ ಸರಿ ಇಲ್ಲ, ಎಲ್ಲವನ್ನೂ ಬದಲಿಸುತ್ತೇನೆ ಎಂಬ ಧೋರಣೆ ಅವರ ಮಾತಿನಲ್ಲಿ ಕಾಣುತ್ತಿತ್ತು. ವ್ಯವಸ್ಥೆಯನ್ನು ಬುಡಸಮೇತ ಬದಲಾಯಿಸುವ ಹುಂಬತನ ಅವರ ನಡೆಯಲ್ಲಿ ವ್ಯಕ್ತವಾಗುತ್ತಿತ್ತು. ಚೀನಾ ಎಂಬ ಗುಮ್ಮನನ್ನು ತೋರಿಸಿ ಅವರು ಜನರನ್ನು ಆಕರ್ಷಿಸಿದ್ದರು. ನಂತರ ಚೀನಾದ ವಿರುದ್ಧ ವಾಣಿಜ್ಯ ಸಮರ ಸಾರಿದ್ದರು.
ಕೊರೊನಾ ಜಾಗತಿಕ ಮಹಾಮಾರಿಯಾಗಿ ಉಲ್ಬಣಗೊಂಡಾಗ, ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ನಡುವಿನ ಸಖ್ಯವೇ ಇದಕ್ಕೆ ಕಾರಣ ಎಂದು ದೂರಿದ್ದರು. ಹಸಿರು ಇಂಧನ ಬಳಕೆಯ ಕುರಿತು ಅಸಡ್ಡೆಯ ನಿಲುವು ತಾಳಿದ್ದರು. ಟಿಕ್‌ಟಾಕ್ ಎಂಬ ಮೊಬೈಲ್ ಅಪ್ಲಿಕೇಶನ್‌ನಿಂದ ಅಮೆರಿಕದ ರಕ್ಷಣೆಗೆ ಅಪಾಯವಿದೆ ಎಂದು, ಅದರ ನಿಷೇಧಕ್ಕೆ ವಕಾಲತ್ತು ವಹಿಸಿದ್ದರು.
ಆದರೆ ಇದೀಗ ಕೆಲವು ವಿಷಯಗಳಲ್ಲಾದರೂ ಅವರ ನಿಲುವು ಬದಲಾದಂತಿದೆ. ಟಿಕ್‌ಟಾಕ್ ಅನ್ನು ಸಂಪೂರ್ಣ ನಿಷೇಧಿಸುವ ಕುರಿತು ತಕ್ಷಣಕ್ಕೆ ತೀರ್ಮಾನಿಸುವುದು ಬೇಡ ಎಂದು ಅವರು ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿರುವುದು ವರದಿಯಾಗಿದೆ. ಎಚ್-1ಬಿ ವೀಸಾ ಕುರಿತು ತಮ್ಮ ಆಪ್ತ ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರು ಹೊಂದಿರುವ ನಿಲುವನ್ನು ಟ್ರಂಪ್ ಬೆಂಬಲಿಸಿದ್ದಾರೆ. ಹಸಿರು ಇಂಧನದ ಬಳಕೆಯನ್ನು ಉತ್ತೇಜಿಸಲು ಅವರು ಕ್ರಮ ಕೈಗೊಂಡರೆ ಅಚ್ಚರಿಯಿಲ್ಲ. ಈ ಎಲ್ಲ ಸಂಗತಿಗಳೂ ಟ್ರಂಪ್ ತಮ್ಮ ಎರಡನೆಯ ಅವಧಿಯಲ್ಲಿ ಭಿನ್ನಹಾದಿಯನ್ನು ತುಳಿಯಲಿದ್ದಾರೆ ಎಂಬುದನ್ನು ಸೂಚಿಸುತ್ತಿವೆ.
ಹಾಗಾದರೆ, ಚೀನಾ ವಿಷಯದಲ್ಲೂ ಟ್ರಂಪ್ ಅವರ ನಿಲುವು ಬದಲಾಗಬಹುದೇ? ಟ್ರಂಪ್ ಓರ್ವ ವಾಸ್ತವವಾದಿ. ಕೆಲವು ಜಾಗತಿಕ ಸಮಸ್ಯೆಗಳಿಗೆ ಉತ್ತರ ಹುಡುಕಬೇಕಾದರೆ ಅಮೆರಿಕ ಮತ್ತು ಚೀನಾ ಜೊತೆಯಾಗಿ ಹೆಜ್ಜೆ ಹಾಕಬೇಕು ಎಂಬುದು ಅವರಿಗೆ ತಿಳಿಯದ್ದಲ್ಲ. ಹಾಗಾಗಿ, ವಾಣಿಜ್ಯಿಕ ವ್ಯವಹಾರದ ವಿಷಯದಲ್ಲಿ ‘ಚೀನಾ ವಿರೋಧ’ ಅವರ ನಿಲುವಿನ ಒಂದು ಭಾಗ ಅಷ್ಟೇ.
ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದು ಹೇಗೆ, ಇರಾನ್- ಇಸ್ರೇಲ್ ಬಿಕ್ಕಟ್ಟಿಗೆ ಉತ್ತರವೇನು, ಕೃತಕ ಬುದ್ಧಿಮತ್ತೆಯ ಅಭಿವೃದ್ಧಿ ಮತ್ತು ಬಳಕೆ ಯಾವ ಪರಿಧಿಯೊಳಗೆ ಇರಬೇಕು, ಹವಾಮಾನ ಬದಲಾವಣೆ ತಡೆಗೆ ಯಾವ ಕ್ರಮ ಸೂಕ್ತ, ಆರ್ಥಿಕ ಕುಸಿತ ಮತ್ತು ರಾಜಕೀಯ ಅರಾಜಕತೆ ಉಂಟು ಮಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರವೇನು ಎಂಬ ಕುರಿತು ಹಿರಿಯಣ್ಣ ಅಮೆರಿಕ ಏಕಮುಖ ನಿಲುವು ತಳೆಯಲು ಸಾಧ್ಯವಿಲ್ಲ.
ಉಕ್ರೇನ್ ಯುದ್ಧದ ವಿಷಯದಲ್ಲಿ ಪರೋಕ್ಷವಾಗಿ ರಷ್ಯಾಕ್ಕೆ ಬೆಂಬಲವಾಗಿ ನಿಂತಿರುವುದರ ಜೊತೆಗೆ, ಉತ್ತರ ಕೊರಿಯಾವನ್ನು ನಿಯಂತ್ರಿಸಲು ಚೀನಾ ಯಾವುದೇ ಉಪಕ್ರಮ ಕೈಗೊಂಡಿಲ್ಲ ಎಂಬ ಸಿಟ್ಟು ಅಮೆರಿಕಕ್ಕಿದೆ. ಅತ್ತ ಇರಾನ್ ಬಗಲಿಗೆ ನಿಂತಿರುವುದು ಕೂಡ ರಷ್ಯಾ ಮತ್ತು ಚೀನಾ. ಹಾಗಾಗಿ, ಚೀನಾದೊಂದಿಗೆ ಸಂಬಂಧವನ್ನು ಸರಳೀಕರಿಸಿಕೊಂಡರೆ, ರಷ್ಯಾ ಮತ್ತು ಇರಾನನ್ನು ಏಕಾಂಗಿಯಾಗಿಸಬಹುದು. ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ!
ಚೀನಾವು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ದಾಪುಗಾಲು ಇಟ್ಟಿದೆ. ಚೀನಾವನ್ನು ಹೊರಗಿಟ್ಟು ಎಐ ಬಳಕೆಗೆ ಒಂದು ಪರಿಧಿ ನಿರ್ಧರಿಸಲು ಸಾಧ್ಯವಿಲ್ಲ. 2024ರ ನವೆಂಬರಿನಲ್ಲಿ ಏಷ್ಯಾ- ಪೆಸಿಫಿಕ್ ಆರ್ಥಿಕ ಸಹಕಾರ ವೇದಿಕೆಯ ಸಭೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾದ ಷಿ ಜಿನ್‌ಪಿಂಗ್, ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ನಿರ್ಧಾರ ಮಾನವ ನಿಯಂತ್ರಣದಲ್ಲೇ ಇರಬೇಕು ಎಂಬುದನ್ನು ಅನುಮೋದಿಸಿದ್ದಾರೆ, ಅರ್ಥಾತ್ ಅಣ್ವಸ್ತ್ರ ಬಳಕೆಯ ಕುರಿತ ನಿರ್ಧಾರವನ್ನು ಕೃತಕ ಬುದ್ಧಿಮತ್ತೆ ತಳೆಯುವಂತೆ ಆಗಬಾರದು ಎಂಬುದನ್ನು ಒಪ್ಪಿದ್ದಾರೆ. ಇದು ಮೊದಲ ಹೆಜ್ಜೆ. ಟ್ರಂಪ್ ಮುಂದಡಿ ಇಡಬೇಕಿದೆ.
ಅಮೆರಿಕ ಮತ್ತು ಚೀನಾ ಇಂಗಾಲ ಹೊರಸೂಸುವ ಪ್ರಮುಖ ರಾಷ್ಟ್ರಗಳು ಕೂಡ ಹೌದು. ಹವಾಮಾನ ಬದಲಾವಣೆ ತಡೆಗಟ್ಟುವ ದಿಸೆಯಲ್ಲಿ ಈ ರಾಷ್ಟ್ರಗಳು ಒಮ್ಮತದ ಹೆಜ್ಜೆ ಇಡಬೇಕಾದ ಅವಶ್ಯಕತೆ ಇದೆ. ಜೊತೆಗೆ ಆರ್ಥಿಕ ಕುಸಿತ ಮತ್ತು ರಾಜಕೀಯ ಅರಾಜಕತೆ ಹಲವು ದೇಶಗಳನ್ನು ಬಾಧಿಸುತ್ತಿವೆ. ಮಧ್ಯಪ್ರಾಚ್ಯದ ಲಿಬಿಯಾ, ಯೆಮನ್, ಸುಡಾನ್, ಲೆಬನಾನ್, ಸಿರಿಯಾ ಮತ್ತು ಸೊಮಾಲಿಯಾದಂತಹ ರಾಷ್ಟ್ರಗಳಿಗೆ ಈ ಸಮಸ್ಯೆ ಸೀಮಿತವಾಗಿಲ್ಲ. ಚೀನಾದೊಂದಿಗೆ ಬೆಸೆದುಕೊಂಡ ವೆನಿಜುವೆಲಾ, ಜಿಂಬಾಂಬ್ವೆ, ಮ್ಯಾನ್ಮಾರ್, ಶ್ರೀಲಂಕಾ, ಅರ್ಜೆಂಟೀನಾ, ಕೀನ್ಯಾ, ಮಲೇಷ್ಯಾ, ಪಾಕಿಸ್ತಾನದಂತಹ ರಾಷ್ಟ್ರಗಳೂ ದೃಢವಾಗಿ ನಿಲ್ಲುವ ಸಾಮರ್ಥ್ಯ ಹೊಂದಿಲ್ಲ. ಈ ಪೈಕಿ ಹಲವು ರಾಷ್ಟ್ರಗಳಿಗೆ ಚೀನಾ ದೊಡ್ಡಮಟ್ಟದ ಸಾಲ ನೀಡಿದೆ ಮತ್ತು ಅದನ್ನು ಹಿಂಪಡೆಯಲು ನಿಡುಸುಯ್ಯುತ್ತಿದೆ. ಈ ವಿಷಯದಲ್ಲಿ ಅಮೆರಿಕದೊಂದಿಗೆ ಒಂದು ಒಪ್ಪಂದಕ್ಕೆ ಬರುವ ಜರೂರು ಚೀನಾಕ್ಕಿದೆ.
ಮೊದಲ ಅವಧಿಯಲ್ಲಿ ಟ್ರಂಪ್, ಚೀನಾದ ಉತ್ಪನ್ನಗಳಿಗೆ ಸುಂಕ ಏರಿಸುವ ಮಾತನ್ನಾಡುತ್ತಿದ್ದರೆ, ದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಚೀನಾ ಹೆಜ್ಜೆಯಿರಿಸಿತ್ತು. ವಿದ್ಯುತ್‌ಚಾಲಿತ ಕಾರು ಮತ್ತು ರೋಬೊಟಿಕ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಿತು. ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಯಿತು. ಚೀನಾದ ರಫ್ತು ಸಾಮರ್ಥ್ಯ ಹೆಚ್ಚಿತು. ಅತ್ಯಾಧುನಿಕ, ಸುಧಾರಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತುಂಬಲು ಚೀನಾ ಸಜ್ಜಾಯಿತು. ಹಾಗಾಗಿ, ಟ್ರಂಪ್ ತಮ್ಮ ಎರಡನೆಯ ಅವಧಿಯಲ್ಲಿ ಬೇರೆಯದೇ ಚೀನಾವನ್ನು ಎದುರಿಸಬೇಕಿದೆ.
ಈ ಸಂಗತಿಗಳನ್ನು ಅರಿತಿರುವ ಟ್ರಂಪ್ 1972ರ ಅವಕಾಶಕ್ಕಾಗಿ ಮತ್ತೊಮ್ಮೆ ಎದುರು ನೋಡುತ್ತಿದ್ದರೆ ಅಚ್ಚರಿಯಿಲ್ಲ! 1972ರಲ್ಲಿ ರಿಚರ್ಡ್ ನಿಕ್ಸನ್ ಚೀನಾಕ್ಕೆ ಭೇಟಿಯಿತ್ತು ಮಾವೋ ಜಿಡಾಂಗ್ ಅವರ ಕೈಕುಲುಕಿದ್ದರು. ಆಗ ರಷ್ಯಾವನ್ನು ಅಂಕೆಯಲ್ಲಿಡಲು ಚೀನಾದ ಸಖ್ಯ ಅಮೆರಿಕಕ್ಕೆ ಬೇಕಿತ್ತು. ಇದೀಗ ಅಮೆರಿಕ ಮತ್ತು ಚೀನಾ ಒಂದೇ ಮೇಜಿಗೆ ಬಂದರೆ, ಜಾಗತಿಕ ಸಮಸ್ಯೆಗಳಿಗೆ ಉತ್ತರ ಹುಡುಕುವುದು ಸುಲಭ ಎಂಬ ಆಲೋಚನೆ, ಟ್ರಂಪ್ ಅವರು ಷಿ ಜಿನ್‌ಪಿಂಗ್ ಅವರನ್ನು ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿರುವುದರ ಹಿಂದೆ ಇರಬಹುದು.
ಈ ಬೆಳವಣಿಗೆಯನ್ನು ನಾವು ಎಚ್ಚರಿಕೆಯಿಂದಲೇ ನೋಡಬೇಕು. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಅಮೆರಿಕದ ಬಾಂಧವ್ಯ ಗಟ್ಟಿಗೊಂಡಿದ್ದರೆ ಅದಕ್ಕೆ ಮುಖ್ಯ ಕಾರಣ ಚೀನಾ. ಒಂದೊಮ್ಮೆ ಚೀನಾದೊಂದಿಗೆ ಅಮೆರಿಕ ಸಂಬಂಧವನ್ನು ಸುಧಾರಿಸಿಕೊಳ್ಳಲು ಮುಂದಾದರೆ, ಚೀನಾದ ವಿರುದ್ಧ ಸಹಾಯಕ್ಕೆ ನಾವು ಅಮೆರಿಕವನ್ನು ಅವಲಂಬಿಸಲು ಸಾಧ್ಯವಿಲ್ಲ. ಭಾರತ ತನ್ನ ಕಾರ್ಯತಂತ್ರವನ್ನು ಬದಲಿಸಬೇಕಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ನಾವು ಜಾಗತಿಕ ಪೂರೈಕೆ ಜಾಲದಲ್ಲಿ ಮಹತ್ವದ ಕೊಂಡಿಯಾಗುವ ಅಭಿಲಾಷೆ ಹೊಂದಿದ್ದೇವೆ. ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿಯು ಭಾರತಕ್ಕೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂಬುದು ಲೆಕ್ಕಾಚಾರ. ಆದರೆ ಭೂಸ್ವಾಧೀನ ಪ್ರಕ್ರಿಯೆ ಮತ್ತು ಕಾರ್ಮಿಕ ಕಾನೂನುಗಳ ತೊಡಕು, ಉತ್ಪಾದನಾ ಕೇಂದ್ರವಾಗುವ ಭಾರತದ ಮಹತ್ವಾಕಾಂಕ್ಷೆಗೆ ಹಿನ್ನಡೆ ಉಂಟು ಮಾಡುತ್ತಿವೆ. ವಿಯೆಟ್ನಾಂ ಮತ್ತು ಮಲೇಷ್ಯಾ ಸ್ಪರ್ಧೆಗೆ ಇಳಿದಿವೆ.
1990 ಮತ್ತು 2000ರ ದಶಕದಲ್ಲಿ ಜಾಗತಿಕ ಉತ್ಪಾದನಾ ಕೇಂದ್ರವಾಗುವ ಅವಕಾಶವನ್ನು ಭಾರತ ಕೈಚೆಲ್ಲಿತು ಎಂದು ವಿದೇಶಾಂಗ ಸಚಿವ ಜೈಶಂಕರ್ ಆಗಾಗ ಹೇಳುತ್ತಿರುತ್ತಾರೆ. ‘ರಿಫಾರ್ಮ್, ಪರ್ಫಾರ್ಮ್, ಟ್ರಾನ್ಸ್‌ಫಾರ್ಮ್’ ಎಂಬ ಪ್ರಾಸಬದ್ಧ ಘೋಷಣೆಗಳಿಗೆ ನಮ್ಮ ಪ್ರಯತ್ನ ಸೀಮಿತವಾದರೆ, ಮತ್ತೊಮ್ಮೆ ಅವಕಾಶ ಕೈತಪ್ಪಬಹುದು. ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ವೈಯಕ್ತಿಕ ಗೆಳೆತನ ಭಾರತಕ್ಕೆ ಅವಕಾಶದ ಬಾಗಿಲು ತೆರೆಯಲಿದೆ ಎಂದು ನಾವು ಮೈಮರೆಯುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.