ADVERTISEMENT

ಸೀಮೋಲ್ಲಂಘನ: ನವರೋಜಿ ಅವರನ್ನು ಮರೆತೆವೆ?

ಸುಧೀಂದ್ರ ಬುಧ್ಯ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
   
ಭಾರತದ ಸ್ವಾತಂತ್ರ್ಯ ಚಳವಳಿಯ ಬುನಾದಿಯನ್ನು ಆಂಗ್ಲರ ನೆಲದಲ್ಲಿ ನಿಂತೇ ಹದಗೊಳಿಸಿದ ಅಪೂರ್ವ ಚೇತನ ದಾದಾಭಾಯಿ ನವರೋಜಿ. ಮಹಾತ್ಮ ಗಾಂಧೀಜಿಗೆ ಗುರುವಿನ ಸ್ಥಾನದಲ್ಲಿದ್ದ ನವರೋಜಿ ಅವರ ದ್ವಿಶತಮಾನೋತ್ಸವ ಸಂದರ್ಭ ವರ್ತಮಾನದ ರಾಜಕಾರಣಕ್ಕೆ ಮುಖ್ಯ ಅನ್ನಿಸಿದಂತಿಲ್ಲ.

ಸೆಪ್ಟೆಂಬರ್‌ 4, 1888ರಂದು ಮೋಹನದಾಸ ಕರಮಚಂದ ಗಾಂಧಿ ಅವರು ಲಂಡನ್ನಿಗೆ ಮೊದಲ ಬಾರಿ ಹೊರಟಾಗ, ಅವರ ಬಳಿ ಮೂರು ಪರಿಚಯ ಪತ್ರಗಳಿದ್ದವು. ಆ ಪೈಕಿ ಮಹಾರಾಷ್ಟ್ರದ ವೈದ್ಯರು ನೀಡಿದ್ದ ಪತ್ರವೂ ಇತ್ತು. ಆ ಪತ್ರವನ್ನು ನೀಡಿದ್ದ ವೈದ್ಯರು ‘ನನಗೆ ಅವರ ನೇರ ಪರಿಚಯವಿಲ್ಲ. ಅವರನ್ನು ನಾನು ಇದುವರೆಗೆ ನೋಡಿಲ್ಲ. ಆದರೆ, ಅವರು ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯಿಂದಾಗಿ, ಭಾರತ ದೇಶವಾಸಿಗಳು ಅವರನ್ನು ಚೆನ್ನಾಗಿ ಬಲ್ಲರು. ಅಸಲಿಗೆ ನೀನು ಈ ಪರಿಚಯ ಪತ್ರವನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ನೀನೊಬ್ಬ ಭಾರತೀಯ ಎಂದು ಅವರಿಗೆ ತಿಳಿದರೆ ಸಾಕು, ನಿನಗೆ ಅಗತ್ಯವಿರುವ ಸಹಾಯ ಅವರಿಂದ ದೊರೆಯುತ್ತದೆ. ನೀನು ಅಂಜುಬುರುಕನಾದ್ದರಿಂದ, ಇದು ಮೊದಲ ಪ್ರಯಾಣವಾದ ಕಾರಣ, ಧೈರ್ಯ ಹಾಗೂ ಭರವಸೆ ಮೂಡಲಿ ಎಂದು ಈ ಪರಿಚಯ ಪತ್ರವನ್ನು ಕೊಡುತ್ತಿದ್ದೇನೆ ಎಂದಿದ್ದರು.

ಹೀಗೆ ಆ ದಿನಗಳಲ್ಲಿ ಭಾರತದಿಂದ ಇಂಗ್ಲೆಂಡಿಗೆ ವ್ಯಾಸಂಗಕ್ಕೆಂದು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಭರವಸೆಯಾಗಿ, ಕಷ್ಟಗಳಿಗೆ ಸ್ಪಂದಿಸುವ ತಂದೆಯಾಗಿ, ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಕೊಂಡಿಯಾಗಿ ಇದ್ದವರು ‘ದಿ ಗ್ರಾಂಡ್‌ ಓಲ್ಡ್‌ ಮ್ಯಾನ್‌ ಆಫ್‌ ಇಂಡಿಯಾ’ ಎಂದು ಕರೆಸಿಕೊಂಡ ದಾದಾಭಾಯಿ ನವರೋಜಿ!

ಸೆಪ್ಟೆಂಬರ್‌ 4, 1825ರಂದು ಮುಂಬೈನ ಪಾರ್ಸಿ ಕುಟುಂಬದಲ್ಲಿ ಜನಿಸಿದ ದಾದಾಭಾಯಿ ಅವರಿಗೆ ವಿದ್ಯಾರ್ಥಿದೆಸೆಯಲ್ಲಿ ವಿವಿಧ ಜನಾಂಗಗಳು, ಭಾಷಿಕರು ಹಾಗೂ ವರ್ತಕರ ಒಡನಾಟ ದೊರಕಿತು. ವ್ಯಾಸಂಗದ ಬಳಿಕ ಎಲ್ಫಿನ್‌ಸ್ಟೋನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡ ಭಾರತೀಯರ ಪೈಕಿ ನವರೋಜಿ ಮೊದಲಿಗರು. ಸಮಾನಮನಸ್ಕರನ್ನು ಸಂಘಟಿಸಿ ಸಾಮಾಜಿಕ ಕೈಂಕರ್ಯಗಳಲ್ಲಿ ತೊಡಗಿಕೊಂಡಿದ್ದ ಅವರು, ಪಾರ್ಸಿ ಸಮುದಾಯವನ್ನು ಸಾಂಪ್ರದಾಯಿಕತೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಿದರು. ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನು ಸಾರಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸಂಸ್ಥೆಗಳನ್ನು ಹುಟ್ಟುಹಾಕಿದರು. 1849ರಲ್ಲಿ ಐದು ಶಾಲೆಗಳನ್ನು ಬಾಲಕಿಯರಿಗಾಗಿ ತೆರೆದರು. ಆಗ ಅವರಿಗೆ 24 ವರ್ಷ!

ADVERTISEMENT

‘ರಾಸ್ಟ್ ಗೋಪ್ತಾರ್‌’ (ಟ್ರೂತ್‌ ಟೆಲ್ಲರ್‌) ಎಂಬ ಉಚಿತ ಪಾಕ್ಷಿಕವನ್ನು ಆರಂಭಿಸಿದ ನವರೋಜಿ, ಸಮಾಜ ಹಾಗೂ ಮತೀಯ ಸುಧಾರಣೆಗಳ ಅವಶ್ಯಕತೆ ಹಾಗೂ ನಾಗರಿಕರ ಕರ್ತವ್ಯ ಕುರಿತು ಜನರನ್ನು ಜಾಗೃತಿಗೊಳಿಸಲು ಪ್ರಯತ್ನಿಸಿದರು. ಜನಮನ್ನಣೆಯಿಂದಾಗಿ ಪಾಕ್ಷಿಕವನ್ನು ವಾರಪತ್ರಿಕೆಯನ್ನಾಗಿ ಬದಲಿಸಲಾಯಿತು.

1855ರಲ್ಲಿ ಕಾಮಾ ಕುಟುಂಬದವರು ಲಂಡನ್ನಿನಲ್ಲಿ ಭಾರತೀಯರ ಮೊದಲ ವ್ಯಾಪಾರಿ ಸಂಸ್ಥೆ
ಯನ್ನು ಸ್ಥಾಪಿಸಿದಾಗ ಅದರ ಪಾಲುದಾರರಾಗಿ ನವರೋಜಿ ಲಂಡನ್ನಿಗೆ ತೆರಳಿದರು. ಅದೊಂದು ಸಂಕ್ರಮಣ ಕಾಲ. ಗ್ಲಾಡ್‌ಸ್ಟೋನ್‌, ಕೋಬ್‌ಡನ್‌ ರೀತಿಯ ನಾಯಕರು ಬ್ರಿಟನ್‌ನಲ್ಲಿ ಉದಾರೀಕರಣದ ಕುರಿತು ಚರ್ಚೆ ಹುಟ್ಟುಹಾಕಿದ್ದರು. ಹರ್ಬರ್ಟ್‌ ಸ್ಪೆನ್ಸರ್‌, ಮಿಲ್‌ ಹಾಗೂ ಥಾಮಸ್ ಕ್ಯಾರ್ಲಿಲ್‌ ಸಮಾಜ ಪುನರ್‌ರಚನೆಯ ಸಿದ್ಧಾಂತವನ್ನು ಮರು ವ್ಯಾಖ್ಯಾನಿಸಿದ್ದರು. ದಾದಾಭಾಯಿ ಅವರ ರಾಜಕೀಯ ಪ್ರಜ್ಞೆ ಪಕ್ವಗೊಂಡಿತು. ಪ್ರಜಾಸತ್ತಾತ್ಮಕ ಸಂಸ್ಥೆಗಳು ಹಾಗೂ ಸಂಸತ್ತು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಅವರು ಅಭ್ಯಾಸ ಮಾಡಿದರು.

ನವರೋಜಿ ಅವರ ಹಾದಿ ಸ್ಪಷ್ಟಗೊಂಡಿತು. ‘ಭಾರತೀಯರಿಗಾಗಿ ಭಾರತ’ ಎನ್ನುವುದನ್ನು ಬಲವಾಗಿ ಪ್ರತಿಪಾದಿಸುವುದು, ಭಾರತದಲ್ಲಿನ ಬ್ರಿಟಿಷ್‌ ಆಳ್ವಿಕೆಯ ಮಾದರಿಯನ್ನು ಬ್ರಿಟಿಷ್‌ ನಾಗರಿಕರಿಗೆ ಪರಿಚಯ ಮಾಡಿಕೊಡುವುದು, ನಾಗರಿಕ ಸೇವೆಗಳಿಗೆ ಸೇರಲು ಲಂಡನ್ನಿಗೆ ಬರುವ ಭಾರತದ ವಿದ್ಯಾರ್ಥಿಗಳಿಗೆ ಆಸರೆಯಾಗುವುದು ದಾದಾಭಾಯಿ ಅವರ ಗುರಿಯಾಯಿತು.

1856ರಲ್ಲಿ ಲಂಡನ್ನಿನ ಯುನಿವರ್ಸಿಟಿ ಕಾಲೇಜಿನಲ್ಲಿ ಗುಜರಾತಿ ಭಾಷೆಯ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಕಾಮಾ ಕುಟುಂಬದ ಸಂಸ್ಥೆಯ ವ್ಯಾವಹಾರಿಕ ನಡೆ ನೈತಿಕವಾಗಿ ಸರಿಕಾಣದಿದ್ದಾಗ, ‘ನವರೋಜಿ ಆ್ಯಂಡ್ ಕಂಪನಿ’ ಆರಂಭಿಸಿ ಹತ್ತಿ ಉದ್ಯಮದಲ್ಲಿ ತೊಡಗಿಕೊಂಡರು. ‘ಕ್ವೀನ್‌’ ವಿಮಾ ಕಂಪನಿಯ ನಿರ್ದೇಶಕರಾದರು. ಮ್ಯಾಂಚೆಸ್ಟರ್‌ ಕಾಟನ್‌ ಸಪ್ಲೈ ಅಸೋಸಿಯೇಷನ್‌ನ ಸದಸ್ಯರಾದರು.

ನವರೋಜಿ 1865ರಲ್ಲಿ ‘ಲಂಡನ್‌ ಇಂಡಿಯನ್‌ ಸೊಸೈಟಿ’ಯನ್ನು ಆರಂಭಿಸಿದರು. ಭಾರತೀಯ ದೃಷ್ಟಿಕೋನವನ್ನು ಬ್ರಿಟಿಷ್‌ ನಾಗರಿಕರ ಮುಂದೆ ಮಂಡಿಸಲು, ‘ಈಸ್ಟ್‌ ಇಂಡಿಯಾ ಅಸೋಸಿಯೇಷನ್‌’ ಅಸ್ತಿತ್ವಕ್ಕೆ ಬಂದಿತು. ಈ ವೇದಿಕೆಯನ್ನು ಬಳಸಿಕೊಂಡ ನವರೋಜಿ 1867ರಲ್ಲಿ ‘ಇಂಗ್ಲೆಂಡ್ಸ್‌ ಡ್ಯೂಟೀಸ್‌ ಟು ಇಂಡಿಯಾ’ ಎಂಬ ವಿಷಯದ ಮೇಲೆ ವಿಚಾರ ಮಂಡಿಸಿದರು. ಭಾರತದ ಸಂಪತ್ತು ಹೇಗೆ ಇಂಗ್ಲೆಂಡಿಗೆ ಹರಿದು ಬರುತ್ತಿದೆ ಹಾಗೂ ಭಾರತೀಯರನ್ನು ಹೇಗೆ ಆಡಳಿತ ವ್ಯವಸ್ಥೆಯಿಂದ ಹೊರಗಿಡುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದನ್ನು ವಿವರಿಸಿದರು. ಅದೇ ವರ್ಷ ಜುಲೈನಲ್ಲಿ ‘ಮೈಸೂರು’ ಎಂಬ ವಿಷಯವಾಗಿ ವಿಚಾರ ಮಂಡನೆ ಮಾಡಿ, ಮೈಸೂರಿನಲ್ಲಿ ಸ್ಥಳೀಯ ಆಡಳಿತದ ಮುಂದುವರಿಕೆಯನ್ನು ಬ್ರಿಟಿಷ್‌ ಸರ್ಕಾರ ಒಪ್ಪಿಕೊಳ್ಳುವುದು ಅನಿವಾರ್ಯವೇಕೆ ಎಂದು ಆಧಾರಗಳ ಸಮೇತ ಹೇಳಿದರು.

ಭಾರತದ ಆಡಳಿತ ಸೇವೆಯಲ್ಲಿ ಭಾರತೀಯರು ಹೆಚ್ಚು ಸ್ಥಾನ ಪಡೆಯಬೇಕು; ಆಗಷ್ಟೇ ಭಾರತದ ಜನರ ಸಂಕಷ್ಟಗಳಿಗೆ ಪರಿಹಾರ ಒದಗಿಸಲು, ಸಂಪತ್ತಿನ ಸೋರಿಕೆಯನ್ನು ತಡೆಯಲು ಸಾಧ್ಯ ಎನ್ನುವುದು ನವರೋಜಿ ಅವರ ನಿಲುವಾಗಿತ್ತು. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಸಿಗಬೇಕು ಎಂದು ಆಗ್ರಹಿಸಿದರು. ಪರೀಕ್ಷೆಗೆ ಅರ್ಹತೆಯ ಮಾನದಂಡವನ್ನು ಹಾಗೂ ವಿಷಯಸೂಚಿಯನ್ನು ಕೊನೆಗಳಿಗೆಯಲ್ಲಿ ಬದಲಿಸಿ, ಭಾರತೀಯರನ್ನು ಅವಕಾಶವಂಚಿತರನ್ನಾಗಿ ಮಾಡುವ ಪ್ರಯತ್ನಗಳಾದಾಗ ಪ್ರತಿಭಟಿಸಿದರು. ಭಾರತೀಯರು ಬ್ರಿಟಿಷ್‌ ಆಡಳಿತದ ಅಡಿಯಲ್ಲಿ ಇದ್ದಾರೆ ಎಂದ ಮೇಲೆ, ಬ್ರಿಟಿಷ್‌ ನಾಗರಿಕರಿಗೆ ಕೊಡಲಾದ ಹಕ್ಕುಗಳು ಭಾರತೀಯರಿಗೂ ದೊರೆಯಬೇಕು ಎಂದು ಒತ್ತಾಯಿಸಿದರು.

ನವರೋಜಿ ಅವರ ಕುರಿತು ‘ನವಜೀವನ’ ಪತ್ರಿಕೆಯಲ್ಲಿ ಬರೆದಿದ್ದ ಗಾಂಧೀಜಿ ‘ಲಂಡನ್‌ನಲ್ಲಿ ಅವರ ಕಚೇರಿಗೆ ನಾನು ಹೋದದ್ದು ಅದೇ ಮೊದಲು. ಅದೊಂದು ಕಿರಿದಾದ ಕೊಠಡಿ. ಒಂದು ಮೇಜು, ಕುರ್ಚಿ ಹಾಗೂ ಪತ್ರಗಳಿಂದ ತುಂಬಿದ್ದ ಆ ಕೊಠಡಿಯಲ್ಲಿ ಮತ್ತೊಂದು ಕುರ್ಚಿ ಹಾಕಲು ಸ್ಥಳದ ಅಭಾವವಿತ್ತು. ಭಾರತೀಯ ವಿದ್ಯಾರ್ಥಿಗಳು ನವರೋಜಿ ಅವರನ್ನು ಯಾವ ಸಮಯದಲ್ಲಿ ಬೇಕಾದರೂ ಸಂಪರ್ಕಿಸಬಹುದಿತ್ತು. ವಿದ್ಯಾರ್ಥಿಗಳಿಗೆ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದರು’ ಎಂದು ಉಲ್ಲೇಖಿಸಿದ್ದರು.

1873ರಲ್ಲಿ ಭಾರತಕ್ಕೆ ಹಿಂದಿರುಗಿದ ನವರೋಜಿ, 1874ರಲ್ಲಿ ಬರೋಡಾದ ದಿವಾನರಾದರು. ಬಾಂಬೆಯ ಶಾಸಕಾಂಗ ಪರಿಷತ್ತಿನ ಸದಸ್ಯರಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗುವ ಮೊದಲು, ಅದೇ ಉದ್ದೇಶಕ್ಕಾಗಿ ಸುರೇಂದ್ರನಾಥ್ ಬ್ಯಾನರ್ಜಿಯವರು ಸ್ಥಾಪಿಸಿದ್ದ ಭಾರತೀಯ ರಾಷ್ಟ್ರೀಯ ಸಂಘದ ಸದಸ್ಯರಾಗಿ ಇದ್ದರು.

‘ಹೋಮ್‌ ರೂಲ್‌’ ಪ್ರತಿಪಾದಕರಾಗಿದ್ದ ನವರೋಜಿ, ಬ್ರಿಟಿಷ್‌ ಡೊಮಿನಿಯನ್‌ಗಳಿಗೆ ನೀಡ
ಲಾಗುತ್ತಿದ್ದ ಸ್ವಯಂ ಆಡಳಿತದ ಹಕ್ಕನ್ನು ಭಾರತಕ್ಕೂ ನೀಡಬೇಕು ಎಂದು ಪ್ರತಿಪಾದಿಸಿದರು. ನಂತರ ಇತರ ನಾಯಕರು ಆ ಆಗ್ರಹವನ್ನು ಮುಂದಕ್ಕೆ ಕೊಂಡೊಯ್ದರು. 1885ರಲ್ಲಿ ಕಾಂಗ್ರೆಸ್ ಸ್ಥಾಪನೆ
ಯಾದ ನಂತರ, ನವರೋಜಿ ಅವರು ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ಪ್ರಭಾವ ಬೀರುವ ಯೋಜನೆಯನ್ನು ಮುಂದುವರಿಸಿದರು. ಐರಿಷ್‌ ರಾಷ್ಟ್ರೀಯತೆಯ ಪ್ರತಿಪಾದಕ ವಿಲಿಯಂ ಗ್ಲಾಡ್ಸ್‌ಸ್ಟೋನ್‌ ಅವರಿಂದ ಸ್ಫೂರ್ತಿ ಪಡೆದು, 1892ರಲ್ಲಿ ಬ್ರಿಟಿಷ್ ಸಂಸತ್ತನ್ನು ಪ್ರವೇಶಿಸಿದರು. ಬ್ರಿಟಿಷ್‌ ಸಂಸತ್ತು ಪ್ರವೇಶಿಸಿದ ಏಷ್ಯಾದ ಮೊದಲಿಗ ಎನಿಸಿಕೊಂಡರು.

ಮೂರು ಸಂದರ್ಭಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ನವರೋಜಿ ಅವರು ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ ಸೇರಿದಂತೆ ಅನೇಕ ನಾಯಕರಿಗೆ ಗುರುಸ್ಥಾನದಲ್ಲಿ ಇದ್ದರು. ಒಂದೆಡೆ, ಬ್ರಿಟಿಷ್ ಆಡಳಿತವನ್ನು ಖಂಡಿಸುತ್ತಾ, ಮತ್ತೊಂದೆಡೆ ಬ್ರಿಟಿಷರ ನ್ಯಾಯಯುತ ಮನೋಭಾವದಲ್ಲಿ ನಂಬಿಕೆ ಉಳಿಸಿಕೊಂಡು, ಭಾರತದ ಸ್ವಾತಂತ್ರ್ಯಕ್ಕಾಗಿ ಧ್ವನಿಯೆತ್ತಿದ ನವರೋಜಿ ಅವರ ಮಾರ್ಗದ ಕುರಿತಾಗಿ ಮಂದಗಾಮಿ ಹಾಗೂ ತೀವ್ರಗಾಮಿ ಗುಂಪುಗಳಲ್ಲಿ ಗುರುತಿಸಿಕೊಂಡಿದ್ದ ಹಲವು ನಾಯಕರಿಗೆ ತಕರಾರಿತ್ತು.

1938ರಲ್ಲಿ ದಾದಾಭಾಯಿ ನವರೋಜಿ ಅವರ ಕುರಿತ ಆರ್.ಪಿ. ಮಸಾನಿ ಅವರು ಬರೆದ ಕೃತಿಗೆ ಮುನ್ನುಡಿ ಬರೆದಿದ್ದ ಗಾಂಧೀಜಿ ‘ದಕ್ಷಿಣ ಆಫ್ರಿಕಾದಲ್ಲಿ ಇದ್ದ ಸಂದರ್ಭದಲ್ಲಿ ನವರೋಜಿ ಅವರು ನನಗೆ ಸ್ಫೂರ್ತಿಯಾಗಿದ್ದರು ಮತ್ತು ಅಗತ್ಯವಾದ ಸಲಹೆಗಳನ್ನು ನೀಡುತ್ತಿದ್ದರು. ವಾರಕ್ಕೊಂದರಂತೆ ನಾನು ಅವರಿಗೆ ಪತ್ರ ಬರೆಯುವುದು ಸಾಮಾನ್ಯವಾಗಿತ್ತು ಎಂದು ಬರೆದಿದ್ದರು.

ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ದಿನಗಳಲ್ಲಿ, ಆಂಗ್ಲರ ನಾಡಿನಲ್ಲಿ ಭಾರತದ ಪತಾಕೆಯಾದವರು ನವರೋಜಿ. ಭಾರತದ ಅನಧಿಕೃತ ರಾಯಭಾರಿಯಾಗಿ ಇಂಗ್ಲೆಂಡಿನಲ್ಲಿ ಭಾರತದ ಪರ ಕೆಲಸ ಮಾಡಿದ, ಸ್ವಾತಂತ್ರ್ಯ ಚಳವಳಿಗೆ ಶಂಖನಾದ ಮಾಡಿದ ಈ ಮಹನೀಯರ ಜನ್ಮದಿನವು ಸೆಪ್ಟೆಂಬರ್‌ 4ರಂದು ಸದ್ದಿಲ್ಲದೆ ಕಳೆದುಹೋಯಿತು. ಪ್ರಾತಃಸ್ಮರಣೀಯರಾದ ನವರೋಜಿ ಅವರ ದ್ವಿಶತಮಾನೋತ್ಸವ ಸಂದರ್ಭ ದೇಶದ ಸಂಭ್ರಮ ಆಗಬೇಕಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.