
ಎರಡನೇ ಅವಧಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚು ಅಪಾಯಕಾರಿಯಾಗಿ ಕಾಣಿಸುತ್ತಿದ್ದಾರೆ. ಮಿತ್ರರಾಷ್ಟ್ರಗಳನ್ನೂ ಅವರು ವಿಶ್ವಾಸದಿಂದ ನಡೆಸಿಕೊಳ್ಳುತ್ತಿಲ್ಲ. ಟ್ರಂಪ್ ಅವರ ಅಹಂ, ಮಹತ್ವಾಕಾಂಕ್ಷೆ ಹಾಗೂ ಮನ್ನಣೆಯ ದಾಹ, ವಿಶ್ವದ ಕಣ್ಣಲ್ಲಿ ಅಮೆರಿಕದ ವಿಶ್ವಾಸಾರ್ಹತೆ ಕುಗ್ಗಲು ಕಾರಣವಾಗಿವೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಹೆನ್ರಿ ಕಿಸಿಂಜರ್ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ, ‘ಅಮೆರಿಕದ ಶತ್ರುವಾಗುವುದು ಅಪಾಯಕಾರಿ. ಆದರೆ, ಅಮೆರಿಕದ ಸ್ನೇಹಿತನಾಗಿರುವುದು ಮಾರಕ’ ಎಂಬ ಮಾತನ್ನು ಆಡಿದ್ದರು. ಅಮೆರಿಕದ ಜೊತೆಗಿನ ಸ್ನೇಹಕ್ಕೂ ಬೆಲೆ ತೆರಬೇಕಾಗುತ್ತದೆ ಎನ್ನುವುದು ಆ ಮಾತಿನ ಅರ್ಥವಾಗಿತ್ತು. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾತು ಹಾಗೂ ಕೃತಿಯ ಮೂಲಕ ಅದನ್ನು ನೆನಪಿಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿರುವ ಟ್ರಂಪ್, ಈಗ ಹೆಚ್ಚು ಆಕ್ರಮಣಕಾರಿಯಾಗಿ ಕಾಣುತ್ತಿದ್ದಾರೆ. ಅಮೆರಿಕವನ್ನು ಮಿತ್ರರಾಷ್ಟ್ರ ಎಂದು ಪರಿಗಣಿಸಿದ್ದ, ವಿವಿಧ ಒಕ್ಕೂಟಗಳ ಮೂಲಕ ಹಿರಿಯಣ್ಣನೊಂದಿಗೆ ಹೆಣೆದುಕೊಂಡಿದ್ದ ದೇಶಗಳು, ಇದೀಗ ಮೈಚಿವುಟಿಕೊಂಡು ಅಮೆರಿಕ ಜೊತೆಗಿನ ಮಿತ್ರತ್ವ ನಿಜವೇ ಎಂದು ಕೇಳಿಕೊಳ್ಳಬೇಕಾದ ಪರಿಸ್ಥಿತಿಯನ್ನು ಟ್ರಂಪ್ ಸೃಷ್ಟಿಸುತ್ತಿದ್ದಾರೆ.
ಟ್ರಂಪ್ ಭಾಷಣಗಳನ್ನು ಗಮನಿಸಿದರೆ ಅವರು ನೇರವಾಗಿ ಅಥವಾ ಪರೋಕ್ಷವಾಗಿ ಎರಡು ಅಂಶಗಳನ್ನು ಹೇಳುತ್ತಾರೆ. ಮೊದಲನೆಯದಾಗಿ, ತಮ್ಮನ್ನು ಅಮೆರಿಕದ ಶ್ರೇಷ್ಠ ಅಧ್ಯಕ್ಷ ಎಂದು ಕರೆದುಕೊಂಡು ಬೆನ್ನು ತಟ್ಟಿಕೊಳ್ಳುತ್ತಾರೆ. ಎರಡನೆಯದಾಗಿ, ಕಡಿಮೆ ಅವಧಿಯಲ್ಲಿ ತಾವು ಸಾಧಿಸಿದ ಕೆಲಸಗಳಿಗೆ ಸಾಕಷ್ಟು ಮನ್ನಣೆ ಸಿಕ್ಕಿಲ್ಲ ಎನ್ನುತ್ತಾ ಅನುಕಂಪ ಮತ್ತು ಶ್ಲಾಘನೆಯನ್ನು ಬಯಸುತ್ತಾರೆ.
ಶ್ರೇಷ್ಠ ಅಧ್ಯಕ್ಷ ಎನ್ನಿಸಿಕೊಳ್ಳಬೇಕಾದರೆ ತಾನು ಕಠಿಣ ನಿಲುವುಗಳನ್ನು ತಳೆಯಬೇಕು; ಇತರ ರಾಷ್ಟ್ರಗಳನ್ನು ಅಂಕೆಯಲ್ಲಿ ಇರಿಸಿಕೊಳ್ಳಬೇಕು; ಜಾಗತಿಕ ರಾಜಕಾರಣದ ಮೇಲೆ ಹಿಡಿತ ಸಾಧಿಸಬೇಕು ಎಂದು ಟ್ರಂಪ್ ಅಂದುಕೊಂಡಂತಿದೆ. 1991ರ ಸೋವಿಯತ್ ಪತನದ ಬಳಿಕ ಏಕೈಕ ಸೂಪರ್‌ಪವರ್ ಎಂದು ಬೀಗುತ್ತಿದ್ದ ಅಮೆರಿಕಕ್ಕೆ ಇದೀಗ ಚೀನಾ ಸಡ್ಡುಹೊಡೆದು ನಿಂತಿದೆ. ಅಮೆರಿಕವನ್ನು ಹಿಂಬಾಲಿಸಿ ಹೆಜ್ಜೆಯಿರಿಸುತ್ತಿದ್ದ ಪಶ್ಚಿಮ ದೇಶಗಳು ಚೀನಾದ ಕೈಕುಲುಕಲು ಸರತಿಯಲ್ಲಿ ನಿಂತಿವೆ. ಅಮೆರಿಕದ ಹಿತ್ತಿಲು ಎನಿಸಿಕೊಳ್ಳುವ ಲ್ಯಾಟಿನ್ ಅಮೆರಿಕಕ್ಕೂ ಚೀನಾ ಕಾಲಿಟ್ಟಿದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳು ಅಮೆರಿಕಕ್ಕೆ ಪ್ರತಿಯಾಗಿ ಚೀನಾದತ್ತ ನೋಡುತ್ತಿವೆ. ಅಮೆರಿಕದ ಪ್ರಭಾವಲಯ ಕಿರಿದಾಗಿ, ಚೀನಾದ ಹಿಡಿತ ಬಿಗಿಯಾಗುತ್ತಿದೆ. ವೆನೆಜುವೆಲಾ, ಗ್ರೀನ್‌ಲ್ಯಾಂಡ್ ಮತ್ತು ಇರಾನ್ ಕುರಿತ ಟ್ರಂಪ್ ಅವರ ಕಠಿಣ ನಿಲುವು, ಪ್ರಸ್ತಾಪ ಮತ್ತು ಧಮಕಿಯನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕು.
ಈ ಹಿಂದೆ ಅಮೆರಿಕ ತನ್ನ ಸೇನಾಬಲ ಹಾಗೂ ಮಾರುಕಟ್ಟೆ ಸಾಮರ್ಥ್ಯವನ್ನು ಬಳಸಿ ಇತರ ದೇಶಗಳ ಮೇಲೆ ಹಿಡಿತ ಸಾಧಿಸುವ ಕೆಲಸ ಮಾಡುತ್ತಿತ್ತು. ಸೋವಿಯತ್ ಪ್ರಾಬಲ್ಯದಿಂದಾಗಿ ಕಂಗಾಲಾಗಿದ್ದ ಯುರೋಪಿಗೆ ನ್ಯಾಟೊ ಮೂಲಕ ‘ನಾನಿದ್ದೇನೆ’ ಎಂಬ ಅಭಯ ನೀಡಿತು. ತೈಲ ಸಂಪನ್ನ ರಾಷ್ಟ್ರಗಳಿಗೆ ಭದ್ರತೆಯ ಭರವಸೆ ನೀಡಿ ತೈಲದ ಥೈಲಿಗೆ ಕೈ ಹಾಕಿತು. ಅಮೆರಿಕದ ಅಪೇಕ್ಷೆಗೆ ತಕ್ಕಂತೆ ವಿಶ್ವಸಂಸ್ಥೆಯೂ ಸೇರಿದಂತೆ ಜಾಗತಿಕ ಸಂಸ್ಥೆಗಳನ್ನು ಸಂಯೋಜಿಸಿತು. ಸೋವಿಯತ್ ತನ್ನ ಸೇನೆಯ ಶಕ್ತಿ ವೃದ್ಧಿಸುವ, ಬತ್ತಳಿಕೆಗೆ ಅಣ್ವಸ್ತ್ರಗಳನ್ನು ತುಂಬುವ ಕೆಲಸ ಮಾಡಿತು ನಿಜ, ಆದರೆ ಅಮೆರಿಕದ ಆರ್ಥಿಕ ಸಾಮರ್ಥ್ಯಕ್ಕೆ ಪೆಟ್ಟು ನೀಡುವ ಅಥವಾ ತನ್ನದೇ ಅರ್ಥ ವ್ಯವಸ್ಥೆಯನ್ನು ವಿಸ್ತರಿಸುವ ಕೆಲಸ ಮಾಡಲಿಲ್ಲ. ವಿಘಟನೆ ಅನಿವಾರ್ಯವಾಯಿತು.
ಚೀನಾ ಭಿನ್ನಮಾರ್ಗ ಆಯ್ದುಕೊಂಡಿತು. ಸೇನಾ ಪ್ರಾಬಲ್ಯದ ಮೂಲಕ ಅಮೆರಿಕವನ್ನು ಹಿಂದಿಕ್ಕುವ ತಂತ್ರ ಅನುಸರಿಸುವ ಸಾಹಸಕ್ಕೆ ಚೀನಾ ಮುಂದಾಗಲಿಲ್ಲ. ಉತ್ಪಾದನಾ ಸಾಮರ್ಥ್ಯದ ಹೆಚ್ಚಳ ಮತ್ತು ಆ ಮೂಲಕ ಗಳಿಸಿಕೊಂಡ ಆರ್ಥಿಕ ಬಲವನ್ನು ಬಂಡವಾಳವಾಗಿಸಿಕೊಂಡು ತನ್ನ ಪ್ರಭಾವ ವಿಸ್ತರಿಸುವ ಕೆಲಸ ಮಾಡಿತು. ಚೀನಾ ಉತ್ಪನ್ನಗಳ ಮೇಲಿನ ಅವಲಂಬನೆ ಮತ್ತು ಆರ್ಥಿಕ ನೆರವು, ಹಲವು ದೇಶಗಳನ್ನು ಅದರ ಮರ್ಜಿಗೆ ಬೀಳುವಂತೆ ಮಾಡಿತು. ಕಳೆದ ನಾಲ್ಕು ದಶಕಗಳಲ್ಲಿ ಚೀನಾದ ತಾಂತ್ರಿಕ–ಕೈಗಾರಿಕಾ ಪ್ರಗತಿ ಮತ್ತು ಪಶ್ಚಿಮ ದೇಶಗಳ ತಾಂತ್ರಿಕ ಹಾಗೂ ಕೈಗಾರಿಕಾ ಮಂದಗತಿ ಚೀನಾದ ಓಘಕ್ಕೆ ಪುಷ್ಟಿ ನೀಡಿತು. ಅಮೆರಿಕಕ್ಕೆ ನೈಜ ಪ್ರತಿಸ್ಪರ್ಧಿಯಾಗಿ ಚೀನಾ ಹೊರಹೊಮ್ಮಿತು. ಹಾಗಾಗಿಯೇ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಕಾರ್ಯನೀತಿಯ ಪ್ರಮುಖ ಭಾಗ ಚೀನಾದ ಓಘವನ್ನು ತಡೆಯುವುದಾಗಿದೆ.
‘ಅಮೆರಿಕ ಪರವಾಗಿ ಇರದಿದ್ದರೆ ಅಮೆರಿಕದ ವಿರುದ್ಧ ಎಂದೇ ಭಾವಿಸಲಾಗುವುದು’– ಇದು ಶೀತಲ ಸಮರದ ಅವಧಿಯಲ್ಲಿ ಅಮೆರಿಕ ಅನುಸರಿಸುತ್ತಿದ್ದ ನೀತಿ. ಟ್ರಂಪ್ ಅವಧಿಯಲ್ಲಿ ಆ ನೀತಿ ‘ಅಮೆರಿಕದ ಪರವಾಗಿ ಇಲ್ಲ ಎಂದಾದರೆ ಚೀನಾದ ಪರ ಎಂದೇ ಅರ್ಥ’ ಎಂದು ಬದಲಾಗಿದೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡೊರೊ ಅವರನ್ನು ಬಂಧಿಸಿ ಅಮೆರಿಕಕ್ಕೆ ಕರೆತಂದಾಗ, ಮಾದಕವಸ್ತು ಕಳ್ಳಸಾಗಾಣಿಕೆ, ಹುಚ್ಚರು ಮತ್ತು ಅಪರಾಧಿಗಳ ನುಸುಳುವಿಕೆ, ಮಡೊರೊ ಅವರ ಜನವಿರೋಧಿ ಆಡಳಿತದ ಕಾರಣಕ್ಕೆ ಕಾರ್ಯಾಚರಣೆ ಅನಿವಾರ್ಯವಾಯಿತು ಎನ್ನಲಾಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ವೆನೆಜುವೆಲಾ ಚೀನಾಕ್ಕೆ ಅಗ್ಗದ ದರಕ್ಕೆ ತೈಲ ಪೂರೈಕೆ ಮಾಡುತ್ತಿತ್ತು. ಉತ್ತರ ಅಮೆರಿಕದಲ್ಲಿ ಚೀನಾದ ಪ್ರಭಾವ ಹೆಚ್ಚಲು ವೆನೆಜುವೆಲಾ ಕಾರಣವಾಗಿತ್ತು.
ಇದೀಗ ಗ್ರೀನ್‌ಲ್ಯಾಂಡ್ ಕುರಿತು ಚರ್ಚೆ ನಡೆಯುತ್ತಿದೆ. ಅಮೆರಿಕ, ಯುರೋಪ್, ಚೀನಾ ಮತ್ತು ರಷ್ಯಾದ ನೌಕಾ ಕಾರ್ಯಾಚರಣೆಗಳಿಗೆ ಗ್ರೀನ್‌ಲ್ಯಾಂಡ್ ವ್ಯೂಹಾತ್ಮಕ ದೃಷ್ಟಿಯಿಂದ ನಿರ್ಣಾಯಕ ಪ್ರದೇಶ. ವಿರಳ ಖನಿಜಗಳ ನಿಕ್ಷೇಪಗಳನ್ನೂ ಅದು ಹೊಂದಿದೆ. ನ್ಯಾನೊ ತಂತ್ರಜ್ಞಾನ ಮತ್ತು ಎಐ ಕೇಂದ್ರಿತ ಜಗತ್ತಿನಲ್ಲಿ ಯಾವುದೇ ರಾಷ್ಟ್ರದ ಪಾರಮ್ಯವನ್ನು ನಿರ್ಣಯಿಸುವುದು ಈ ವಿರಳ ಹಾಗೂ ನಿರ್ಣಾಯಕ ಖನಿಜಗಳು. ಆ ಕಾರಣದಿಂದಲೇ ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕ ಹಾಗೂ ಚೀನಾ ಕಣ್ಣಿಟ್ಟಿವೆ. ಗ್ರೀನ್‌ಲ್ಯಾಂಡ್ ಬಿಕರಿಗೆ ಇಲ್ಲ, ನಾವು ಅಮೆರಿಕದ ಭಾಗವಾಗಲು ಇಚ್ಛಿಸುವುದಿಲ್ಲ ಎಂದು ಅಲ್ಲಿನ ನಾಗರಿಕರು ಹೇಳುತ್ತಿದ್ದಾರೆ. ಟ್ರಂಪ್ ಮಾತ್ರ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಪಡೆದುಕೊಳ್ಳದಿದ್ದರೆ ಅಲ್ಲಿ ಇತರರು ಬಂದು ಕುಳಿತುಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ.
ಚೀನಾ ಸುಮ್ಮನೆ ಕುಳಿತಿಲ್ಲ. ಅದು ಕೆನಡಾ ಮತ್ತು ಐರೋಪ್ಯ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಳ್ಳುವ ಕೆಲಸ ಮಾಡುತ್ತಿದೆ. ಮೊದಲಿಗೆ, ಕೆನಡಾದ ಜೊತೆಗೆ ಸಂಬಂಧ ವೃದ್ಧಿಸಿಕೊಳ್ಳುವ ಕೆಲಸ ಮಾಡಿತು. ಟ್ರಂಪ್ ಕೆನಡಾದ ಮೇಲೆ ಹೆಚ್ಚಿನ ಸುಂಕ ವಿಧಿಸಿ ಅದು ಕುಸಿಯುವಂತೆ ಮಾಡುತ್ತೇವೆ ಎಂದು ಬೆದರಿಸಿದರು. ಆದರೆ, ಕೆನಡಾ ತನ್ನ ಮಾರುಕಟ್ಟೆಯನ್ನು ಚೀನಾದ ವಿದ್ಯುತ್ ವಾಹನಗಳಿಗೆ ತೆರೆಯುವ ಒಪ್ಪಂದಕ್ಕೆ ಸಹಿ ಹಾಕಿತು. ಬಳಿಕ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಚೀನಾಕ್ಕೆ ಭೇಟಿಯಿತ್ತರು. ಬಳಿಕ ಷೀ ಜಿನ್‌ಪಿಂಗ್ ಅವರನ್ನು ಭೇಟಿಯಾಗಲು ಇಂಗ್ಲೆಂಡ್ ಸೇರಿದಂತೆ, ಯುರೋಪಿನ ಹಲವು ರಾಷ್ಟ್ರಗಳು ಸರತಿಯಲ್ಲಿ ನಿಂತವು. ನ್ಯಾಟೊ ಕುರಿತು ಟ್ರಂಪ್ ಅವರ ಅಸಮಾಧಾನಕ್ಕೆ ಮೂಲ ಇದು.
ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ನ್ಯಾಟೊ ಕುರಿತು ಮಾತನಾಡಿದ್ದರು. ನ್ಯಾಟೊಕ್ಕಾಗಿ ಅಮೆರಿಕ ಹೆಚ್ಚಿನ ಹಣ ವ್ಯಯಿಸುತ್ತಿದೆ. ನ್ಯಾಟೊ ಮೂಲಕ ಭದ್ರತೆ ಅಪೇಕ್ಷಿಸುವ ಇತರ ದೇಶಗಳು ಕೂಡ ಸಮಪ್ರಮಾಣದಲ್ಲಿ ವೆಚ್ಚ ಭರಿಸಬೇಕು ಎಂಬುದು ಅವರ ವಾದವಾಗಿತ್ತು. ಅಮೆರಿಕ ತನಗೆ ಸಂಬಂಧಿಸದ ಯುದ್ಧಗಳಲ್ಲಿ ತೊಡಗಬಾರದು ಎಂಬುದು ಅವರ ನಿಲುವಾಗಿತ್ತು. ಆ ಮಾತಿನ ಹಿಂದೆ ಇದ್ದದ್ದು ಕೇವಲ ಆರ್ಥಿಕ ಆಯಾಮ. ಇದೀಗ ನ್ಯಾಟೊ ಸದಸ್ಯ ರಾಷ್ಟ್ರವಾದ ಡೆನ್ಮಾರ್ಕ್ ಅಧೀನದಲ್ಲಿರುವ ಗ್ರೀನ್‌ಲ್ಯಾಂಡ್ ಮೇಲೆ ಒಡೆತನ ಸಾಧಿಸಲು ಬಯಸುತ್ತಿರುವ ಅಮೆರಿಕ, ತನ್ನ ಆಕಾಂಕ್ಷೆಗೆ ಅಡ್ಡವಾಗುವುದಾದರೆ ನ್ಯಾಟೊದ ಉಸಾಬರಿಯೇ ಬೇಕಿಲ್ಲ ಎನ್ನುತ್ತಿದೆ. ನ್ಯಾಟೊಗೆ ಅಮೆರಿಕದ ನೆರವು ಬೇಕೆ ಹೊರತು, ಅಮೆರಿಕಕ್ಕೆ ನ್ಯಾಟೊ ಅಗತ್ಯವಿಲ್ಲ ಎಂಬರ್ಥದಲ್ಲಿ ಟ್ರಂಪ್ ಮಾತನಾಡುತ್ತಿದ್ದಾರೆ. ಈ ಮಾತನ್ನು ಅಲ್ಲಗೆಳೆಯುವ ಚೈತನ್ಯವನ್ನು ಯುರೋಪ್ ಉಳಿಸಿಕೊಂಡಿಲ್ಲ.
ಹಲವು ಜಾಗತಿಕ ಸಂಸ್ಥೆಗಳಿಂದ ಹೊರಬರುವ ಮಾತನ್ನೂ ಟ್ರಂಪ್ ಆಡಿದ್ದಾರೆ. ಅಮೆರಿಕ ಈಗಾಗಲೇ ಯುನೆಸ್ಕೊ, ವಿಶ್ವ ಆರೋಗ್ಯ ಸಂಸ್ಥೆ, ಮತ್ತು ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಗಳಿಂದ ಹೊರಬಂದಿದೆ. ಗಾಜಾ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹುಟ್ಟುಹಾಕಿದ್ದ ಶಾಂತಿ ಮಂಡಳಿಯ ವ್ಯಾಪ್ತಿ ವಿಸ್ತರಿಸಲು ಟ್ರಂಪ್ ಮುಂದಡಿಯಿಟ್ಟಿದ್ದಾರೆ. ಹಾಗಾಗಿ, ವಿಶ್ವಸಂಸ್ಥೆಗೆ ಪರ್ಯಾಯವಾಗಿ ನೂತನ ಜಾಗತಿಕ ಸಂಸ್ಥೆಯನ್ನು ಹುಟ್ಟುಹಾಕಲು ಟ್ರಂಪ್ ಬಯಸುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಭಾರತದ ವಿಷಯದಲ್ಲಿ ಟ್ರಂಪ್ ಅವರು ತಳೆಯುತ್ತಿರುವ ನಿಲುವು ಅವರ ಅಹಂಗೆ ತಾಕಿಕೊಂಡಂತಿದೆ. ‘ಆಪರೇಷನ್ ಸಿಂಧೂರ’ದ ಬಳಿಕ ಏರ್ಪಟ್ಟ ಕದನ ವಿರಾಮದಲ್ಲಿ ಟ್ರಂಪ್ ಅವರ ಪಾತ್ರವನ್ನು ಭಾರತ ನಿರಾಕರಿಸಿದ್ದು, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡದಿದ್ದುದು, ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದು, ವಾಣಿಜ್ಯಿಕ ಮಾತುಕತೆಗೆ ಸಂಬಂಧಿಸಿದಂತೆ ಟ್ರಂಪ್ ಅವರ ಅಪೇಕ್ಷೆಗೆ ಪೂರಕವಾಗಿ ಪ್ರಧಾನಿ ಮೋದಿ ಅವರು ಕರೆ ಮಾಡದೇ ಉಳಿದದ್ದು, ಇವೆಲ್ಲ ಸಂಗತಿಗಳು ಟ್ರಂಪ್ ಅವರ ಭಾರತ ಕುರಿತ ಅಸಹನೆಯನ್ನು ಹೆಚ್ಚಿಸಿವೆ.
ಒಂದಂತೂ ಖರೆ, ಅಮೆರಿಕದ ಶ್ರೇಷ್ಠ ಅಧ್ಯಕ್ಷನಾಗಬೇಕು ಎಂಬ ಟ್ರಂಪ್ ಅವರ ಆಕಾಂಕ್ಷೆ, ಅಹಂ ಮತ್ತು ಮನ್ನಣೆಯ ದಾಹ, ಅಮೆರಿಕದ ವಿಶ್ವಾಸಾರ್ಹತೆಯನ್ನು ಕೆಳಕ್ಕೆ ಜಗ್ಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.