ADVERTISEMENT

ಸ್ಪಂದನ: ಬ್ರೆಸ್ಟ್‌ಪಂಪ್‌ ಬಳಕೆ ಒಳ್ಳೆಯದೇ? ಡಾ. ವೀಣಾ ಎಸ್. ಭಟ್ ಅವರ ಅಂಕಣ

ನೋವು ನೆನೆಸಿಕೊಂಡರೆ ಹಾಲು ಕುಡಿಸುವುದೇ ಬೇಡವೆನಿಸುತ್ತದೆ. ಏನು ಮಾಡುವುದು ತೋಚುತ್ತಿಲ್ಲ..

ಡಾ.ವೀಣಾ ಎಸ್‌ ಭಟ್ಟ‌
Published 12 ಏಪ್ರಿಲ್ 2024, 22:50 IST
Last Updated 12 ಏಪ್ರಿಲ್ 2024, 22:50 IST
<div class="paragraphs"><p><strong>ಬ್ರೆಸ್ಟ್‌ಪಂಪ್‌</strong></p></div>

ಬ್ರೆಸ್ಟ್‌ಪಂಪ್‌

   

ನಾನು ಐದು ತಿಂಗಳ ಮಗುವಿನ ತಾಯಿ. ಮಗುವಿಗೆ ಹಾಲುಣಿಸುವಾಗ ಬಲಗಡೆ ಸ್ತನತೊಟ್ಟಿನ ಹತ್ತಿರ ತುಂಬಾ ನೋವು ಬರುತ್ತದೆ. ಬ್ರೆಸ್ಟ್‌ಪಂಪ್‌ ಬಳಸುತ್ತಿದ್ದೇನೆ. ವೈದ್ಯರ ಬಳಿ ತೋರಿಸಿದಾಗ ಮಾತ್ರೆ ಬರೆದುಕೊಟ್ಟಿದ್ದಾರೆ. ಅಜ್ಜಿ ಮತ್ತು ಅಮ್ಮ ಬ್ರೆಸ್ಟ್‌ಪಂಪ್‌ ಒಳ್ಳೆಯದಲ್ಲ. ಅದರ ಬಳಕೆಯಿಂದ ಹಾಲು ಕಡಿಮೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ನೋವು ನೆನೆಸಿಕೊಂಡರೆ ಹಾಲು ಕುಡಿಸುವುದೇ ಬೇಡವೆನಿಸುತ್ತದೆ. ಏನು ಮಾಡುವುದು ತೋಚುತ್ತಿಲ್ಲ..

–ಸುಷ್ಮಾ ಚನ್ನರಾಯಪಟ್ಟಣ, ಸರ್ಕಾರಿ ಶಿಕ್ಷಕಿ

ADVERTISEMENT

ನಿಮ್ಮ ವಿವರಣೆ ಗಮನಿಸಿದರೆ ಸ್ತನತೊಟ್ಟಿನಲ್ಲಿ ಬಿರುಕು ಉಂಟಾಗಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕೆ ಕಾರಣ ತಪ್ಪುಭಂಗಿಯಲ್ಲಿ ಹಾಲುಣಿಸುವುದು. ಹಾಲುಣಿಸುವಾಗ ಸ್ತನತೊಟ್ಟು ಮತ್ತು ಅದರ ಸುತ್ತವಿರು ಕಪ್ಪು ಭಾಗ ಅಂದರೆ ಕಿರುಡ (ಏರಿಯೋಲಾ) ಪೂರ್ಣಪ್ರಮಾಣದಲ್ಲಿ ಮಗುವಿನ ಬಾಯಿಗೆ ಹಾಕಿರುವುದಿಲ್ಲ. ಇದು ತಪ್ಪು. ತೊಟ್ಟು ಹಾಗೂ ಕಿರುಡ ಪೂರ್ಣಪ್ರಮಾಣದಲ್ಲಿ ಮಗುವಿನ ಬಾಯಿಯೊಳಗೆ ಇರುವಂತೆ ಹಾಲುಣಿಸಬೇಕು. ಮುಗಿಯುವ ಹಂತದಲ್ಲಿ ಮಗುವಿನ ಬಾಯಿ ಬಿಡಿಸುವಾಗ ನಿಧಾನವಾಗಿ ನಿಮ್ಮ ಕಿರುಬೆರಳನ್ನು ಮಗುವಿನ ಬಾಯೊಳಗೆ ಹಾಕಿ ಮಗು ಸ್ತನತೊಟ್ಟು ಕಚ್ಚದ ಹಾಗೆ ನೋಡಿಕೊಳ್ಳಬೇಕು. ಹಾಲುಣಿಸುವಾಗ ಮಧ್ಯೆ ಎದೆಹಾಲನ್ನೆ ತೊಟ್ಟಿಗೆ ಹಚ್ಚಿ ಗಾಳಿಗೆ ಬಿಡಿ. ಇದು ಮುಲಾಮಿನಂತೆ ಕೆಲಸ ಮಾಡುತ್ತದೆ. ಬಿರುಕು ಗುಣವಾಗುತ್ತದೆ. 

ಎದೆ ಬಾವುಂಟಾಗಿ ಮಗು ಹಾಲು ಕುಡಿಯದಿದ್ದರೆ ಕೈಗಳಿಂದ ಹಿಂಡಿ ಅಥವಾ ಬ್ರೆಸ್ಟ್‌ ಪಂಪ್‌ ಬಳಸಿ ಹಾಲು ಕುಡಿಸಬಹುದು. ಬ್ರೆಸ್ಟ್‌ ಪಂಪ್‌ನಿಂದ ಹಿಂಡುವ ಹಾಲಿನಲ್ಲಿ ಫೋಷಕಾಂಶಗಳಿಗೇನೂ ನಷ್ಟವಾಗದು. ಅನಿವಾರ್ಯ ಅನಿಸಿದಾಗ, ಕೈಯಲ್ಲಿ ಹಿಂಡಲು ಸಾಧ್ಯವೇ ಆಗದಿದ್ದಾಗ , ಮಗು ಹಾಲು ಕುಡಿಯದಿದ್ದಾಗ ಅಥವಾ ನೀವು ಕೆಲಸಕ್ಕೆ ಹೋಗುವ ಮೊದಲು ಬ್ರೆಸ್ಟ್‌ಪಂಪ್‌ನಿಂದ ಎದೆಹಾಲು ಹಿಂಡಿ, ಶೇಖರಿಸಿ ಕುಡಿಸಬಹುದು. 

ನೆನಪಿರಲಿ ಸ್ತನ್ಯಪಾನವೆಂಬುದು ಬರೀ ಪೋಷಕಾಂಶಗಳ ಪೂರೈಕೆಯಷ್ಟೆ ಅಲ್ಲಾ. ತಾಯಿಯ ಬೆಚ್ಚನೆಯ ಸ್ಪರ್ಶ, ಮೈವಾಸನೆ, ವಾತ್ಸಲ್ಯಭರಿತ ನೋಟ, ಮೆಲುದನಿ, ರುಚಿಯಾದ ಹಾಲು ಎಲ್ಲವನ್ನೂ ಮಗು ಆಸ್ವಾದಿಸಲು ಸಹಾಯಕವಾಗುತ್ತದೆ. ತಾಯಿ ಮಗುವಿನ ನಡುವೆ ಗಟ್ಟಿಯಾದ ಬಾಂಧವ್ಯ ಬೆಳೆಯುತ್ತದೆ. ಭಾವಾನಾತ್ಮಕ ನಂಟು ಹೆಚ್ಚುತ್ತದೆ. ಶಿಶುವಿನ ಸಂವೇದನಾಶೀಲತೆ ಹೆಚ್ಚಲು ಇದು ಸಹಾಯಕ. ಇಂಥ ಮಕ್ಕಳಲ್ಲಿ ಬುದ್ಧಿಯ ವಿಕಸನ ಹೆಚ್ಚುವುದಲ್ಲದೇ, ದೀರ್ಘಾವಧಿ ಸ್ತನ್ಯಪಾನ ಮುಂದುವರೆಸಲು ಸಹಾಯಕಾರಿ.

ಯಾವುದೇ ಕಾರಣಕ್ಕೂ ಮಗುವಿಗೆ ಸ್ತನ್ಯಪಾನ ನಿಲ್ಲಿಸಬೇಡಿ. ಆರು ತಿಂಗಳ ನಂತರವೂ ಪೂರಕ ಆಹಾರದ ಜತೆಗೆ ಸ್ತನ್ಯಪಾನವನ್ನು ಕನಿಷ್ಠ ಎರಡು ವರ್ಷದವರೆಗೆ ಮುಂದುವರಿಸಿ. ಅನಿವಾರ್ಯ ಎನಿಸಿದಾಗ ಮಾತ್ರ ಬ್ರೆಸ್ಟ್‌ಪಂಪ್‌ನಿಂದ ಹಾಲು ಹಿಂಡಿ ಇಡಿ. ಕೊಠಡಿಯ ಉಷ್ಣತೆಯಲ್ಲಿ 6ರಿಂದ 8 ತಾಸು ಇಟ್ಟು ಬಳಸಬಹುದು. ಸಂದರ್ಭ ಸಿಕ್ಕಾಗೆಲ್ಲ ನೇರವಾಗಿ ಸ್ತನ್ಯಪಾನ ಮಾಡಿಸುವುದು ಉತ್ತಮ.

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.