ADVERTISEMENT

ಸ್ಪಂದನ| ಹೆರಿಗೆಯ ನಂತರ ಲೈಂಗಿಕಾಸಕ್ತಿ ಕುಂದುವುದೇ?

ಡಾ.ವೀಣಾ ಎಸ್‌ ಭಟ್ಟ‌
Published 10 ಡಿಸೆಂಬರ್ 2022, 0:15 IST
Last Updated 10 ಡಿಸೆಂಬರ್ 2022, 0:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೆಸರು ತಿಳಿಸಿಲ್ಲ, ಬೆಳಗಾವಿ.

1. ನನ್ನ ವಯಸ್ಸು 33 ವರ್ಷ. ನನ್ನ ಪತ್ನಿಯ ವಯಸ್ಸು 27ವರ್ಷ. ಮದುವೆಯಾಗಿ 5 ವರ್ಷಗಳಾಗಿವೆ. 4 ವರ್ಷ ಹಾಗೂ ಆರು ತಿಂಗಳು ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಈಗ ಹೆಂಡತಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ. ತೃಪ್ತಿಯ ಮಟ್ಟ ಶೂನ್ಯ. ಹೆಂಡತಿಯ ಲೈಂಗಿಕ ಆಸಕ್ತಿ ಹೆಚ್ಚಿಸಲು ಪರಿಹಾರವೇನು?

ಉತ್ತರ: ನವಮಾಸಗಳವರೆಗೆ ಗರ್ಭಧರಿಸಿ, ಮಗುವಿಗೆ ಜನ್ಮ ನೀಡಿದ ಮಹಿಳೆಗೆ, ಹೆರಿಗೆ ನಂತರ ಆರರಿಂದ ಒಂಬತ್ತು ತಿಂಗಳವರೆಗೂ ಲೈಂಗಿಕ ಬಯಕೆ ಕಡಿಮೆಯಾಗುವುದು ಸಹಜ. ಮಗು ಹುಟ್ಟಿದ ನಂತರ ಮೊದಲ ಆರು ತಿಂಗಳು ಬಾಣಂತಿಯರಲ್ಲಿ ಹೆಣ್ತನದ ಹಾರ್ಮೋನು ಇಸ್ಟ್ರೊಜನ್ ಕಡಿಮೆ ಮಟ್ಟದಲ್ಲಿರುತ್ತದೆ. ಮಗುವಿಗೆ ನಿರಂತರ ಹಾಲುಣಿಸುವುದರಿಂದ(ಅದು ಅನಿವಾರ್ಯ ಅತ್ಯಗತ್ಯ) ಎದೆ ಹಾಲಿನಲ್ಲಿರುವ ಪ್ರೋಲ್ಯಾಕ್ಟಿನ್ ಮತ್ತು ಆಕ್ಸಿಟೋಸಿನ್ ಎಂಬ ಹಾರ್ಮೋನುಗಳ ಉತ್ಪಾದನೆಯೂ ಹೆಚ್ಚಿರುತ್ತದೆ. ಇದು ಲೈಂಗಿಕ ಬಯಕೆಯನ್ನು ಇನ್ನಷ್ಟು ಕಡಿಮೆಮಾಡಬಹುದು. ಜೊತೆಗೆ ನವಜಾತ ಶುವಿನ ಬಗ್ಗೆ ಕಾಳಜಿವಹಿಸಲು ತಾಯಂದಿರು ನಿದ್ದೆಗೆಡುತ್ತಾರೆ. ಆಹಾರ ಸೇವನೆಯಲ್ಲೂ ವ್ಯತ್ಯಾಸವಾಗಿ ಅದರಿಂದ ರಕ್ತಹೀನತೆ, ಅಪೌಷ್ಠಿಕತೆಯಂತಹ ಸಮಸ್ಯೆಯೂ ಉಂಟಾಗುವ ಸಾಧ್ಯತೆ ಇರುತ್ತದೆ. ಇಂಥವು ಲೈಂಗಿಕಾಸಕ್ತಿಗಳನ್ನು ಕುಂದಿಸಿರಬಹುದು.

ADVERTISEMENT

ಹೆಚ್ಚಿನ ಮಹಿಳೆಯರಿಗೆ ಇವೆಲ್ಲ ಸಾಮಾನ್ಯ ಸಂಗತಿಗಳು. ನಿಮಗೆ ಲೈಂಗಿಕಾಸಕ್ತಿ ಆದ್ಯತೆ ಎನಿಸಿದರೂ, ಮಗುವಿನ ತಾಯಿಗೆ ಅದು ಕೊನೆಯ ಆದ್ಯತೆ ಎನಿಸಬಹುದು. ಹೆಚ್ಚಿನ ತಾಯಿಯಂದಿರಿಗೆ ಹೆರಿಗೆಯಾಗಿ ಒಂಬತ್ತು ತಿಂಗಳ ಒಳಗೆ ಲೈಂಗಿಕ ಆಸಕ್ತಿ ಸಹಜವಾಗಿ ಮರುಕಳಿಸಬಹುದು. ನೀವು ನಿರಾಶೆಯಾಗದೇ ನಿಮ್ಮ ಮಡದಿಯೊಂದಿಗೆ ಹೆಚ್ಚು ಆತ್ಮೀಯವಾಗಿ ವರ್ತಿಸಲು ತೊಡಗಿರಿ. ಮಗುವಿನ ಲಾಲನೆ–ಪಾಲನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಪತಿ–ಪತ್ನಿಯರಿಬ್ಬರೂ ಸಾಧ್ಯವಾದಷ್ಟು ಒಟ್ಟಿಗೇ ಸಮಯ ಕಳೆಯಿರಿ. ಪರಸ್ಪರ ಕಾಳಜಿವಹಿಸಿ. ಮುಕ್ತವಾಗಿ ಮಾತನಾಡಿ ಲೈಂಗಿಕ ಸಮಾಸಕ್ತಿ ಸಾಧಿಸಿ. ಹೀಗೆ ಪರಸ್ಪರ ಅನ್ಯೋನ್ಯವಾಗಿರುವುದು ಲೈಂಗಿಕ ಕ್ರಿಯೆಗಿಂತ ಹೆಚ್ಚಿನದ್ದಾಗಿರುತ್ತದೆ.

ನಿಮ್ಮ ಮಡದಿಗೆ ಹೆರಿಗೆಯ ನಂತರ ದೈಹಿಕ ಬದಲಾವಣೆಯಾಗಿದೆ ಎಂಬ ಆತಂಕವಿರುವ ಬಗ್ಗೆ ಚರ್ಚಿಸಿ. ಸಮತೂಕ ಹೊಂದಲು ಪ್ರಯತ್ನಿಸಲು ತಿಳಿಸಿ. ನಿತ್ಯ ’ಕೆಗಲ್ಸ್‌‘ ವ್ಯಾಯಾಮ ಮಾಡುವುದರಿಂದ ಯೋನಿಸ್ನಾಯುಗಳ ಸಂವೇದನೆ ಹೆಚ್ಚಿ ಲೈಂಗಿಕ ಕ್ರಿಯೆಗೆ ಸಹಾಯವಾಗುತ್ತದೆ. ಯಾವುದೇ ರೀತಿಯ ಶಾರೀರಿಕ ಅಸ್ವಸ್ಥತೆ ಅಥವಾ ಖಿನ್ನತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೂ ಲೈಂಗಿಕಾಸಕ್ತಿ ಕುಂದಬಹುದು. ಆದ್ದರಿಂದ ನೀವು ತಜ್ಞವೈದ್ಯರ ಸಲಹೆ ಸೂಚನೆ ಪಡೆಯಲು ಖಂಡಿತ ಹಿಂಜರಿಯಬೇಡಿ.

ಯಾವುದೇ ಸಂಕೋಚ ಇಲ್ಲದೇ ನೀವಿಬ್ಬರೂ ಲೈಂಗಿಕಕ್ರಿಯೆ ಬಗ್ಗೆ ಚರ್ಚಿಸಿ. ಈ ವೇಳೆ ಪತ್ನಿಯಲ್ಲಿ ಲೈಂಗಿಕಾಸಕ್ತಿ ಏಕೆ ಕುಂದಿದೆ ಎಂಬುದನ್ನು ಗುರುತಿಸಿ. ಅದನ್ನು ನಿವಾರಿಸಲು ಪ್ರಯತ್ನಿಸಿ. ಕೆಲವೊಮ್ಮೆ ಲೈಂಗಿಕ ಪ್ರಚೋದಕ ಸಾಹಿತ್ಯ, ಚಿತ್ರಗಳನ್ನು ನಿಮ್ಮ ಮಡದಿಗೆ ತೋರಿಸಿ. ಇದು ಚಿಕಿತ್ಸೆಯ ಭಾಗವಾಗಿರಲಿ. ಇದನ್ನು ಹೊರತುಪಡಿಸಿ ಯಾವುದೇ ಔಷಧ, ಇಂಜೆಕ್ಷನ್‌ ಅಗತ್ಯ ಇಲ್ಲ. ಈರುಳ್ಳಿ, ನುಗ್ಗೆಕಾಯಿ, ಬೆಳ್ಳುಳ್ಳಿ, ಮದ್ಯ, ಮಾಂಸ ಇಂಥವೆಲ್ಲ ಲೈಂಗಿಕ ಆಸಕ್ತಿ ಹೆಚ್ಚಿಸುವುದಿಲ್ಲ(ಅದು ಪೌಷ್ಠಿಕ ಆಹಾರದ ಭಾಗವಾಗಬಹುದಷ್ಟೇ). ನೀವು, ಈ ತಾತ್ಕಾಲಿಕ ಸಮಸ್ಯೆಗೆ ಚಿಂತಿಸದೇ, ಅದನ್ನು ಸರಿಪಡಿಸಿಕೊಳ್ಳಿ. ಉತ್ತಮ ದಾಂಪತ್ಯ ಜೀವನ ನಿಮ್ಮದಾಗಲಿ.

ಹೆಸರು, ಊರು ತಿಳಿಸಿಲ್ಲ.

2. ನನಗೆ 21ವರ್ಷ. ಕಳೆದ ಎರಡು ತಿಂಗಳಿಂದ ಪ್ರತಿ ತಿಂಗಳು 2 ಬಾರಿ ಮುಟ್ಟಾಗುತ್ತಿದ್ದೇನೆ. ಉದಾಹರಣೆ ಈ ತಿಂಗಳು 25ನೇ ದಿನ ಮುಟ್ಟಾಗಿದ್ದರೆ, ಮುಂದಿನ ತಿಂಗಳು 9 ರಂದು ಮುಟ್ಟಾಗಿ, ಅದೇ ತಿಂಗಳು 25 ರಂದು ಮತ್ತೊಮ್ಮೆ ಮುಟ್ಟಾಗುತ್ತೇನೆ. ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ತಿಳಿಸಿ.

ಉತ್ತರ: ನಿಮಗೆ ವಿವಾಹವಾಗಿದೆಯೇ? ನೀವು ಲೈಂಗಿಕವಾಗಿ ಸಕ್ರಿಯವಾಗಿದ್ದೀರಾ ? ಈ ಬಗ್ಗೆ ನೀವು ತಿಳಿಸಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಪದೇ ಪದೇ ಮುಟ್ಟಾಗುವುದಕ್ಕೆ ಭಾವನಾತ್ಮಕ ಏರಿಳಿತವೂ ಕಾರಣವಾಗುತ್ತದೆ. ಗರ್ಭಕೋಶ, ಅಂಡಾಶಯದ, ಗರ್ಭನಾಳದ ಸೋಂಕಿದ್ದಾಗಲೂ ಅಂಡಾಶಯದಲ್ಲಿ ನೀರು ಗುಳ್ಳೆಗಳಿದ್ದಾಗಲೂ ಈ ರೀತಿ ಪದೇ ಪದೇ ಮುಟ್ಟಾಗಲೂಬಹುದು. ಸೋಂಕಿನಿಂದ ಈ ರೀತಿ ಉಂಟಾಗಿದ್ದರೆ ಸೂಕ್ತ ಆ್ಯಂಟಿಬಯೋಟಿಕ್ಸ್‌ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನೀವು ತಜ್ಞವೈದ್ಯರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.