ADVERTISEMENT

ಸೂರ್ಯ–ನಮಸ್ಕಾರ | ದೆಹಲಿ ಫಲಿತಾಂಶ: ಉಚಿತ ಕೊಡುಗೆ ಅಂತ್ಯ?

ಜನರ ತೀರ್ಪು ಮತ್ತು ಸುಪ್ರೀಂ ಕೋರ್ಟ್‌ ಮಾತುಗಳು ಹೊಸ ಆಸೆಯೊಂದನ್ನು ಮೂಡಿಸಿವೆ

ಎ.ಸೂರ್ಯ ಪ್ರಕಾಶ್
Published 25 ಫೆಬ್ರುವರಿ 2025, 19:30 IST
Last Updated 25 ಫೆಬ್ರುವರಿ 2025, 19:30 IST
   

ರಾಜಕೀಯ ಪಕ್ಷಗಳು ಚುನಾವಣೆಗಳ ಸಂದರ್ಭದಲ್ಲಿ ಜನರಿಗೆ ಪ್ರಲೋಭನೆ ಒಡ್ಡುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಈಚೆಗೆ ಆಡಿರುವ ಮಾತುಗಳು ಹಾಗೂ ದಶಕದ ಹಿಂದೆ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಪಸರಿಸಿದ ಆಮ್‌ ಆದ್ಮಿ ಪಕ್ಷವು (ಎಎಪಿ) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವುದು, ಮತದಾರರಿಗೆ ಲಂಚ ನೀಡುವ ಪ್ರವೃತ್ತಿಯನ್ನು ಕೊನೆಗೊಳಿಸಲು ನ್ಯಾಯಾಲಯ ಅಥವಾ ಜನಸಮೂಹ ಮುಂದಾಗುತ್ತದೆ ಎಂಬ ಸಣ್ಣ ಆಸೆಯೊಂದನ್ನು ಮೂಡಿಸಿದೆ. ಉಚಿತ ಕೊಡುಗೆಗಳು ದೇಶದ ಅರ್ಥ ವ್ಯವಸ್ಥೆಯನ್ನು ಖಂಡಿತವಾಗಿಯೂ ಹಾಳುಮಾಡುತ್ತವೆ.

ಉಚಿತ ಕೊಡುಗೆಗಳ ಘೋಷಣೆ ಇದ್ದರೂ ದೆಹಲಿಯ ಜನ ಎಎಪಿಯನ್ನು ತಿರಸ್ಕರಿಸಿದ್ದಾರೆ. ಆರ್ಥಿಕವಾಗಿ ಅಪಾಯಕಾರಿಯಾಗಿರುವ ಇಂತಹ ಕೊಡುಗೆಗಳನ್ನು ನೀಡುವುದರ ವಿರುದ್ಧ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಅವರು ತೀಕ್ಷ್ಣ ಮಾತುಗಳನ್ನು ಆಡಿದ್ದಾರೆ. ‘ಪರಾವಲಂಬಿ ವರ್ಗವನ್ನು ಸೃಷ್ಟಿಸುತ್ತಿವೆ’ ಎಂದು ಗವಾಯಿ ಅವರು ರಾಜಕೀಯ ಪಕ್ಷಗಳಿಗೆ ಛೀಮಾರಿ ಹಾಕಿದ್ದಾರೆ. ವೈಯಕ್ತಿಕವಾಗಿ ಕಂಡಿರುವುದನ್ನು ಆಧರಿಸಿ ಕೆಲವು ಮಾತು ಹೇಳಿರುವ ಅವರು, ಉಚಿತ ಕೊಡುಗೆಗಳು ಜನ ಕೆಲಸ ಮಾಡುವುದನ್ನು ನಿರುತ್ತೇಜಿಸುತ್ತಿವೆ ಎಂದಿದ್ದಾರೆ. ಇಂತಹ ಪ್ರಲೋಭನೆಗಳ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದಿದ್ದಾರೆ. ಲಾಡ್ಕಿ ಬಹೀಣ್‌ನಂತಹ ಯೋಜನೆಗಳ ಕಾರಣದಿಂದಾಗಿ ಜನ ಕೆಲಸ ಮಾಡಲು ಮನಸ್ಸು ಮಾಡುತ್ತಿಲ್ಲ. ಕೆಲಸ ಮಾಡದೆಯೇ ಅವರಿಗೆ ಉಚಿತ ಪಡಿತರ ಮತ್ತು ಹಣ ಸಿಗುತ್ತಿದೆ. ಇದರ ಪರಿಣಾಮವಾಗಿ ಕಾರ್ಮಿಕರ ಕೊರತೆ ಉಂಟಾಗಿದೆ ಎಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಘೋಷಿಸುವ ಇಂತಹ ಪ್ರಲೋಭನೆಗಳ ವಿಚಾರದಲ್ಲಿ ನ್ಯಾಯಮೂರ್ತಿಯವರು ಹಿಂದೆಯೂ ತೀಕ್ಷ್ಣವಾಗಿ ಮಾತನಾಡಿದ್ದಿದೆ. ಯಾವುದೇ ಕೆಲಸ ಮಾಡದೆ ಇರುವವರಿಗೆ ಕೊಡಲು ಸರ್ಕಾರಗಳ ಬಳಿ ಹಣವಿರುತ್ತದೆ, ಆದರೆ ನ್ಯಾಯಾಂಗದ ಅಧಿಕಾರಿಗಳಿಗೆ ಪಿಂಚಣಿ, ವೇತನ ನೀಡುವಾಗ ಹಣದ ಕೊರತೆ ಉಂಟಾಗುತ್ತದೆ ಎಂದು ಅವರು ಈಚೆಗೆ ಒಮ್ಮೆ ಹೇಳಿದ್ದರು.

ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ತಮಿಳುನಾಡಿನ ರಾಜಕೀಯ ಪಕ್ಷಗಳು ಎರಡು ದಶಕಗಳ ಹಿಂದೆ ಹುಟ್ಟುಹಾಕಿದವು. ಮತದಾರರಿಗೆ ಟಿ.ವಿ., ಮಿಕ್ಸರ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮನೆಬಳಕೆಯ ಕೆಲವು ಉಪಕರಣಗಳು, ಉಚಿತ ಪಡಿತರದಂತಹ ಕೊಡುಗೆಗಳನ್ನು ಅವು ನೀಡಲಾರಂಭಿಸಿದವು. ಈ ಕಾಯಿಲೆಯು ನೆರೆಯ ಕರ್ನಾಟಕ, ಕೇರಳ ಸೇರಿದಂತೆ ಇತರ ರಾಜ್ಯಗಳಿಗೆ ಬಹುಕಾಲ ಹಬ್ಬಿರಲಿಲ್ಲ. ಆದರೆ ಅರವಿಂದ ಕೇಜ್ರಿವಾಲ್‌ ಅವರು ರಾಜಕೀಯ ಪ್ರವೇಶಿಸಿದ ನಂತರ ಅದು ಬದಲಾಯಿತು. ಅವರ ಎಎಪಿಯು 2014ರಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಮಹಿಳೆಯರಿಗೆ ಹಣದ ನೆರವಿನ ಮೂಲಕ ದೆಹಲಿಯ ಮತದಾರರನ್ನು ಸೆಳೆಯಿತು. ಈ ಪ್ಯಾಕೇಜ್‌ ಅದೆಷ್ಟು ಆಕರ್ಷಕವಾಗಿತ್ತೆಂದರೆ, ಎಎಪಿಯು ದೆಹಲಿ ವಿಧಾನಸಭೆಯ 70 ಸೀಟುಗಳ ಪೈಕಿ 67 ಸೀಟುಗಳನ್ನು ಗೆದ್ದುಕೊಂಡಿತು. ಎಎಪಿಯು ಬಿಜೆಪಿಗಿಂತ ಶೇಕಡ 22ರಷ್ಟು ಹೆಚ್ಚು ಮತಗಳನ್ನು ಗಳಿಸಿತು, ಚುನಾವಣಾ ಇತಿಹಾಸ ಸೃಷ್ಟಿಸಿತು. ಆಗ ಕಾಂಗ್ರೆಸ್‌ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.

ADVERTISEMENT

ಮತದಾರರನ್ನು ಸೆಳೆಯುವ ಇಂತಹ ಯೋಜನೆಗಳನ್ನು ಎಎಪಿಯು 2019ರ ವಿಧಾನಸಭಾ ಚುನಾವಣೆಯಲ್ಲಿಯೂ ಮುಂದುವರಿಸಿತು. ಆಗ ಅದು 70 ಸ್ಥಾನಗಳ ಪೈಕಿ 62ರಲ್ಲಿ ಗೆಲುವು ಸಾಧಿಸಿತು. 2014ರಲ್ಲಿ ಮೂರು ಸ್ಥಾನ ಗೆದ್ದುಕೊಂಡಿದ್ದ ಬಿಜೆಪಿಯು 2019ರಲ್ಲಿ ಎಂಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಆದರೆ ಎಎಪಿಗೆ ಹೋಲಿಸಿದಾಗ ಬಹಳ ಹಿಂದಿತ್ತು. ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಪರಿಸ್ಥಿತಿ ಹೇಗಿತ್ತೆಂದರೆ, ಎಎಪಿ ನೀಡುವ ಕೊಡುಗೆಗಳಿಗೆ ಪ್ರತಿಯಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಅಂಥ ಕೊಡುಗೆಗಳನ್ನು ಘೋಷಿಸದೇ ಇದ್ದರೆ ಅವು ಮತ್ತೆ ಪುಟಿದೇಳಲು ಸಾಧ್ಯವೇ ಇಲ್ಲ ಎಂಬಂತೆ ಅನ್ನಿಸುತ್ತಿತ್ತು. ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷದ ಹಿನ್ನಡೆ ಮುಂದುವರಿಯಿತಾದರೂ, ಅದರ ನಾಯಕರು ಹೊಸ ಕಾರ್ಯತಂತ್ರ ರೂಪಿಸಿದರು. ಪಕ್ಷವು ಕರ್ನಾಟಕದಲ್ಲಿ ಉಚಿತ ಕೊಡುಗೆಗಳ ದೊಡ್ಡ ಯೋಜನೆಯನ್ನು ರೂಪಿಸಿತು. 2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿತು. ಮಹಿಳೆಯರಿಗೆ ತಿಂಗಳಿಗೆ ₹2,000, ಅವರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮತ್ತು ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಘೋಷಣೆಗಳ ಮೂಲಕ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಸೋಲಿಸಿತು. ಈ ಘೋಷಣೆಗಳಲ್ಲದೆ ಇತರ ಕೆಲವು ಘೋಷಣೆಗಳೂ ಇದ್ದವು.

ದೆಹಲಿಯಲ್ಲಿ ಎಎಪಿ ಎದುರು ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಎದುರು ಸೋಲು ಕಂಡ ಬಿಜೆಪಿಯು ಆ ಪಕ್ಷಗಳ ಮಾದರಿಯನ್ನು ತಾನೂ ಅನುಕರಿಸದೇ ಇದ್ದರೆ ಜನರ ಎದುರು ತೊಂದರೆ ಎದುರಿಸಬೇಕಾಗುತ್ತದೆ ಎಂದು ಭಾವಿಸಿತು. ಇದರ ಪರಿಣಾಮವಾಗಿ ಬಿಜೆಪಿ ಕೂಡ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ತೆಲಂಗಾಣದಲ್ಲಿ ಉಚಿತ ಕೊಡುಗೆಗಳ ಘೋಷಣೆ ಮಾಡಿತು. 2023ರ ನವೆಂಬರ್‌ನಲ್ಲಿ ನಡೆದ ಈ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಲಾಡ್ಲಿ ಲಕ್ಷ್ಮಿ ಯೋಜನೆ (ಮಹಿಳೆಯರಿಗೆ ತಿಂಗಳಿಗೆ ₹1,250 ಕೊಡುವ ಯೋಜನೆ), ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿಗೆ ಸ್ಕೂಟಿ ನೀಡುವಂತಹ ಘೋಷಣೆಗಳನ್ನು ಮಾಡಿತು.

ಬಡವರ ಜೀವನಮಟ್ಟವನ್ನು ಸುಧಾರಿಸಲು ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂವಿಧಾನದ ನಿರ್ದೇಶನ ತತ್ವಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೇಳುತ್ತವೆ. ಅಂತಹ ಕ್ರಮಗಳು ಜಾರಿಯಲ್ಲಿ ಇವೆ. ಆದರೆ ಎಎಪಿಯು ಎಲ್ಲ ವರ್ಗಗಳ ಮಹಿಳೆಯರಿಗೂ ಅನ್ವಯವಾಗುವಂತಹ ಉಚಿತ ಬಸ್‌ ಪ್ರಯಾಣ, ತಿಂಗಳಿಗೊಮ್ಮೆ ಹಣಕಾಸಿನ ನೆರವು ಮುಂತಾದ ಘೋಷಣೆಗಳನ್ನು ಮಾಡಿತು. ಇದೇ ಮಾದರಿಯನ್ನು ಕರ್ನಾಟಕದಲ್ಲಿ ಅನುಕರಿಸಿದ ಕಾಂಗ್ರೆಸ್‌, ಮಹಿಳೆಯರಿಗೆಲ್ಲರಿಗೂ ಉಚಿತ ಬಸ್‌ ಪ್ರಯಾಣ ಸೌಲಭ್ಯ, ತಿಂಗಳಿಗೊಮ್ಮೆ ಆರ್ಥಿಕ ನೆರವು, ಎಲ್ಲ ಕುಟುಂಬಗಳಿಗೆ ತಿಂಗಳಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ಘೋಷಣೆಗಳನ್ನು ಮಾಡಿತು. ಕಾಂಗ್ರೆಸ್‌ ಮತ್ತು ಎಎಪಿಯ ಹಾದಿಯಲ್ಲಿ ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳೂ ಸಾಗಿದವು. 2024ರ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಇದೇ ಬಗೆಯ ಘೋಷಣೆಗಳು ಬಂದವು. ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿದ ಯಶಸ್ಸು, ಉಚಿತ ಕೊಡುಗೆಗಳು ಬೊಕ್ಕಸವನ್ನು ಬರಿದು ಮಾಡುವ ಯೋಜನೆಗಳಾದರೂ ಅವು ಅನಿವಾರ್ಯ ಎಂಬುದನ್ನು ಖಚಿತಪಡಿಸಿದಂತೆ ಇತ್ತು.

ಆದರೆ ಈ ಮೊದಲೇ ಉಲ್ಲೇಖಿಸಿರುವಂತೆ 2025ರಲ್ಲಿ ಆಗಿರುವ ಎರಡು ಬೆಳವಣಿಗೆಗಳು ಮತದಾರರ ಮುಂದೆ ಇರಿಸುವ ಪ್ರಲೋಭನೆಗಳನ್ನು ನಿಲ್ಲಿಸಲು ಆಗದಿದ್ದರೂ ಅವುಗಳನ್ನು ಕಡಿಮೆ ಮಾಡಬಹುದು ಎಂಬ ಭರವಸೆ ಮೂಡಿಸಿವೆ. ದೆಹಲಿಯಲ್ಲಿ ಎಎಪಿ ಕಂಡಿರುವ ಸೋಲು ಮೊದಲ ಭರವಸೆಯನ್ನು ಮೂಡಿಸಿದೆ. ಎರಡನೆಯ ಭರವಸೆ, ನ್ಯಾಯಮೂರ್ತಿ ಗವಾಯಿ ಅವರು ಎಗ್ಗಿಲ್ಲದ ಈ ಉಚಿತ ಕೊಡುಗೆಗಳ ಬಗ್ಗೆ ಆಡಿರುವ ಮಾತುಗಳು. ಉಚಿತ ಕೊಡುಗೆಗಳಿಗೆ ಸಂಬಂಧಿಸಿದ ವಿಚಾರವು ಸುಪ್ರೀಂ ಕೋರ್ಟ್‌ನ ಇನ್ನೊಂದು ಪೀಠದ ಮುಂದಿದೆ. ಕೊಡುಗೆಗಳ ಪರವಾಗಿ ಹಾಗೂ ವಿರುದ್ಧವಾಗಿ ಇರುವವರು ಬಲವಾಗಿ ವಾದ ಮಂಡಿಸುತ್ತಾರೆ ಎಂಬುದು ನಿಜ. ಬಡತನದ ನಿರ್ಮೂಲನೆಗೆ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ಸಂವಿಧಾನವು ಸರ್ಕಾರಗಳಿಗೆ ನೀಡಿರುವ ಸಲಹೆಯನ್ನು ಕೋರ್ಟ್‌ ಯಾವ ರೀತಿ ಗ್ರಹಿಸುತ್ತದೆ ಎಂಬುದರ ಮೇಲೆ ಹೆಚ್ಚಿನ ಅಂಶಗಳು ತೀರ್ಮಾನವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.