ADVERTISEMENT

ಸೂರ್ಯ ನಮಸ್ಕಾರ ಅಂಕಣ | ವಿವಿಧತೆಯಲ್ಲಿ ಏಕತೆ ಸಾಧನೆ

ಎ.ಸೂರ್ಯ ಪ್ರಕಾಶ್
Published 30 ಜೂನ್ 2025, 0:54 IST
Last Updated 30 ಜೂನ್ 2025, 0:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂಬ ಪ್ರಶ್ನೆಯು ಡಿಎಂಕೆ ಪಕ್ಷದ ಸಂಸದೆ ಕನಿಮೊಳಿ ಅವರಿಗೆ ಸ್ಪೇನ್‌ ದೇಶದಲ್ಲಿ ಎದುರಾದಾಗ, ಅವರು ಬಹಳ ಅದ್ಭುತವಾದ ಉತ್ತರ ನೀಡಿದರು. ‘ವಿವಿಧತೆಯಲ್ಲಿ ಏಕತೆ’ಯು ಭಾರತದ ರಾಷ್ಟ್ರೀಯ ಭಾಷೆ ಎಂದು ಬಹಳ ಸಹಜವಾಗಿ ಅವರು ಹೇಳಿದರು. ಕ್ಲಿಷ್ಟಕರವಾದ ಪ್ರಶ್ನೆಯೊಂದಕ್ಕೆ ಎಂತಹ ಗಮನಾರ್ಹವಾದ ಉತ್ತರ ಇದು, ಅದೂ ವಿದೇಶಿ ನೆಲದಲ್ಲಿ!

ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನವು ನಿರಂತರವಾಗಿ ಉತ್ತೇಜನ ನೀಡುತ್ತಿರುವುದು, ಅದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು 26 ಜನರ ಹತ್ಯೆ ನಡೆದಿದ್ದುದು, ನಂತರ ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದರ ವಿಚಾರವಾಗಿ ದೇಶದ ನಿಲುವನ್ನು ವಿವರಿಸಲು ಸ್ಪೇನ್‌ ಮತ್ತು ಇತರ ಕೆಲವು ದೇಶಗಳಿಗೆ ತೆರಳಿದ್ದ ಸಂಸದರ ನಿಯೋಗದ ನೇತೃತ್ವವನ್ನು ಕನಿಮೊಳಿ ವಹಿಸಿದ್ದರು.

ADVERTISEMENT

ಭಾರತವು ಸರ್ವಪಕ್ಷಗಳ ಸದಸ್ಯರ ಏಳು ನಿಯೋಗಗಳನ್ನು 30ಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಿತ್ತು. ನಿಯೋಗಗಳ ರಚನೆಯು ಭಾರತದ ರಾಜಕೀಯ ಮತ್ತು ಸಾಮಾಜಿಕ ಬಹುತ್ವವನ್ನು ನಿಜವಾಗಿಯೂ ಪ್ರತಿನಿಧಿಸುವಂತೆ ಇತ್ತು. ಕನಿಮೊಳಿ ನೇತೃತ್ವದ ನಿಯೋಗದಲ್ಲಿ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಪ್ರೇಮ್‌ ಚಂದ್‌ ಗುಪ್ತ, ನ್ಯಾಷನಲ್‌ ಕಾನ್ಫರೆನ್ಸ್‌ನ (ಎನ್‌ಸಿ) ಮಿಯಾಂ ಅಲ್ತಾಫ್ ಅಹ್ಮದ್, ಸಮಾಜವಾದಿ ಪಕ್ಷದ (ಎಸ್‌ಪಿ) ರಾಜೀವ್ ರಾಯ್, ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ರಾಯಭಾರಿ ಜಾವೇದ್ ಅಶ್ರಫ್ ಅವರು ಸದಸ್ಯರಾಗಿದ್ದರು. ಈ ನಿಯೋಗಕ್ಕೆ ರಷ್ಯಾ, ಸ್ಲೊವೇನಿಯಾ, ಲಾಟ್ವಿಯಾ  ಮತ್ತು ಸ್ಪೇನ್ ದೇಶವನ್ನು ಭೇಟಿ ಮಾಡುವ ಹೊಣೆ ವಹಿಸಲಾಗಿತ್ತು.

ಭಾರತವು ಏಕಭಾಷೆಯ ದೇಶ ಆಗಿದ್ದಿದ್ದರೆ, ಇಲ್ಲಿ ಇರುವುದು ಒಂದು ಪ್ರಮುಖ ಭಾಷೆ ಮಾತ್ರ ಆಗಿದ್ದಿದ್ದರೆ, ಇಲ್ಲಿನ ಜನ ಮಾತೃಭಾಷೆ ಎಂದು ವರ್ಗೀಕರಿಸಲಾಗಿರುವ 122 ಭಿನ್ನ ಭಾಷೆಗಳನ್ನು ಮತ್ತು 270 ಉಪಭಾಷೆಗಳನ್ನು ಮಾತನಾಡುವವರಾಗಿಲ್ಲದೇ ಇದ್ದಿದ್ದರೆ, ಕನಿಮೊಳಿ ಅವರಿಗೆ ಎದುರಾದ ಪ್ರಶ್ನೆಯು ಬಹಳ ಸರಳವಾಗಿ ಕಾಣುತ್ತಿತ್ತು.

ಭಾಷೆಗೆ ಸಂಬಂಧಿಸಿದ ರಾಜಕಾರಣದಲ್ಲಿ ಸಿಲುಕಿಲ್ಲದ ಕಾಂಗ್ರೆಸ್ ಅಥವಾ ಬೇರೆ ಯಾವುದಾದರೂ ಪಕ್ಷದ ರಾಜಕಾರಣಿಗೆ ಈ ಪ್ರಶ್ನೆ ಎದುರಾಗಿದ್ದರೆ, ಆಗಲೂ ಅದು ಸರಳವಾಗಿ ಕಾಣುತ್ತಿತ್ತು. ಆದರೆ, ವಸ್ತುಸ್ಥಿತಿ ಹಾಗಿರಲಿಲ್ಲ. ಕನಿಮೊಳಿ ಅವರು ಪ್ರತಿನಿಧಿಸುವುದು ಡಿಎಂಕೆ ಪಕ್ಷವನ್ನು. ಈ ಪಕ್ಷವು ಜವಾಹರಲಾಲ್ ನೆಹರೂ ಮತ್ತು ಡಿಎಂಕೆ ಸಂಸ್ಥಾ‍ಪಕ ಅಣ್ಣಾದೊರೈ ಅವರ ಕಾಲದಿಂದಲೂ ತಾನು ‘ಹಿಂದಿ ಹೇರಿಕೆ’ ಎಂದು ಕರೆಯುವುದರ ವಿರುದ್ಧ ನಿರಂತರ ಅಭಿಯಾನ ನಡೆಸಿಕೊಂಡು ಬಂದಿದೆ ಎಂಬುದು ಗಮನಾರ್ಹ.

ಕನಿಮೊಳಿ ಅವರು ತಾವು ಡಿಎಂಕೆ ಪಕ್ಷಕ್ಕೆ ಸೇರಿದ್ದರೂ ಅವರ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಬಿಜೆಪಿ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜೊತೆ ಭಾಷೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಸ್ಪೇನ್‌ನಲ್ಲಿ ಈ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಅವರು ರಾಷ್ಟ್ರದ ಹಿತಾಸಕ್ತಿಯನ್ನು ಎಲ್ಲದಕ್ಕಿಂತ ಹೆಚ್ಚು ಮುಖ್ಯ ಆಗಿಸಿಕೊಂಡರು. ಪ್ರಾಸಂಗಿಕವಾಗಿ ಹೇಳುವುದಾದರೆ, ಇವೆಲ್ಲ ಸ್ಪೇನ್‌ ದೇಶದಲ್ಲಿ ನಡೆಯುತ್ತಿದ್ದ ಹೊತ್ತಿನಲ್ಲಿ ಕನಿಮೊಳಿ ಅವರ ಪಕ್ಷದ ಮಿತ್ರ, ನಟ ಕಮಲ್ ಹಾಸನ್ ಅವರು ಕನ್ನಡವು ತಮಿಳಿನಿಂದ ಜನಿಸಿದ್ದು ಎಂದು ಹೇಳುವ ಮೂಲಕ ಭಾಷಾಜ್ವಾಲೆಯನ್ನು ಹೊತ್ತಿಸುತ್ತಿದ್ದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಕೆಲವು ನಿಕಟವರ್ತಿಗಳು ಆರ್ಭಟದ ಮಾತುಗಳನ್ನು ಆಡುತ್ತಿದ್ದರೂ ಕಾಂಗ್ರೆಸ್ ಪಕ್ಷದ ಕೆಲವು ಸಂಸದರು ಸೇರಿದಂತೆ ಹಲವಾರು ಮಂದಿ ಇತರ ಸಂಸತ್ ಸದಸ್ಯರು ದೇಶದ ಪರವಾಗಿ ನಿಂತರು, ಒಗ್ಗಟ್ಟು ಪ್ರದರ್ಶಿಸಿದರು.

ಕಾಂಗ್ರೆಸ್ ಸಂಸದರ ಪೈಕಿ ಶಶಿ ತರೂರ್ ಅವರು ಬಹಳ ಮುಖ್ಯವಾಗಿದ್ದರು, ಅವರು ಬಹಳ ಗಟ್ಟಿಯಾಗಿ ವಿಚಾರ ಮಂಡನೆ ಮಾಡಿದರು. ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ನಿಯೋಗವನ್ನು ವಿಶ್ವದ ಎಲ್ಲೆಡೆ ಕಳುಹಿಸಿದ್ದಕ್ಕಾಗಿ ತರೂರ್ ಅವರು ಮೋದಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸಿದರು. ದೇಶವು ಬಿಕ್ಕಟ್ಟಿನಲ್ಲಿ ಇದ್ದಾಗ ನೆರವಿನ ಹಸ್ತ ಚಾಚುವುದು ಎಲ್ಲ ಪ್ರಜೆಗಳ ಕರ್ತವ್ಯ ಎಂದು ತರೂರ್ ಹೇಳಿದರು.

‘ರಾಜಕೀಯವನ್ನು ಪಕ್ಕಕ್ಕೆ ಇರಿಸಬೇಕು. ಇದರಲ್ಲಿ ನನಗೆ ರಾಜಕೀಯ ಕಾಣುವುದಿಲ್ಲ. ನಾವೆಲ್ಲ ಭಾರತೀಯರು. ದೇಶವು ಬಿಕ್ಕಟ್ಟಿನಲ್ಲಿ ಇದ್ದಾಗ, ಕೇಂದ್ರ ಸರ್ಕಾರವು ಪ್ರಜೆಯ ನೆರವನ್ನು ಕೇಳಿದಾಗ, ನೀವು ಬೇರೆ ಯಾವ ಉತ್ತರ ಹೇಳುತ್ತಿದ್ದಿರಿ’ ಎಂದು ತರೂರ್ ಪ್ರಶ್ನಿಸಿದರು.

ದೇಶದ ಪರವಾಗಿ ನಿಲ್ಲುವ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರೂ ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ಖುರ್ಷಿದ್ ಅವರು ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಆಗಿದ್ದವರು. ‘ಸಿಂಧೂರ ಕಾರ್ಯಾಚರಣೆ’ಯನ್ನು ಖುರ್ಷಿದ್ ಅವರು ಶ್ಲಾಘಿಸಿದರು, ‘ನಮ್ಮ ಅಧಿಕಾರಿಗಳಿಗೆ ಒಂದು ಸೆಲ್ಯೂಟ್‌, ಅವರ ಬಗ್ಗೆ ಹೆಮ್ಮೆ ಇದೆ... ಸಶಸ್ತ್ರ ಪಡೆಗಳು ಗಮನಾರ್ಹವಾದ ನಿರ್ಧಾರಗಳನ್ನು ತೆಗೆದುಕೊಂಡಿವೆ’ ಎಂದು ಹೇಳಿದರು. ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಯೋತ್ಪಾದಕ ಶಿಬಿರಗಳನ್ನು ಮಾತ್ರವೇ ಗುರಿ‍ಪಡಿಸಿಕೊಳ್ಳಲಾಗಿತ್ತೇ ವಿನಾ ಪಾಕಿಸ್ತಾನವನ್ನಲ್ಲ ಎಂದು ಅವರು ಒತ್ತಿ ಹೇಳಿದರು.

ಸಿಂಧೂರ ಕಾರ್ಯಾಚರಣೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದ ಭಾರತದ ರಾಜಕಾರಣಿಗಳ ಒಂದು ವರ್ಗದ (ತಮ್ಮದೇ ಪಕ್ಷದವರೂ ಸೇರಿದಂತೆ) ವಿರುದ್ಧ ಖುರ್ಷಿದ್ ಅವರು ಹರಿಹಾಯ್ದರು. ‘ಭಯೋತ್ಪಾದನೆ ವಿರುದ್ಧದ ಒಂದು ಅಭಿಯಾನದಲ್ಲಿ ಭಾಗಿಯಾಗಿದ್ದಾಗ, ಭಾರತದ ಸಂದೇಶವನ್ನು ವಿಶ್ವಕ್ಕೆ ರವಾನಿಸುವಾಗ, ತಾಯ್ನಾಡಿನಲ್ಲಿ ಜನ ರಾಜಕೀಯ ಒಲವುಗಳ ಬಗ್ಗೆ ಲೆಕ್ಕಾಚಾರ ಹಾಕುತ್ತಿರುವುದನ್ನು ನೋಡಲು ಸಂಕಟವಾಗುತ್ತದೆ. ದೇಶಭಕ್ತ ಆಗಿರುವುದು ಅಷ್ಟೊಂದು ಕಷ್ಟವೇ’ ಎಂದು ಖುರ್ಷಿದ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನ ಖಾತೆಯಲ್ಲಿ ಬರೆದಿದ್ದರು.

ಇಂಡೊನೇಷ್ಯಾದಲ್ಲಿ ನಡೆದ ಸಭೆಯೊಂದರಲ್ಲಿ ಖುರ್ಷಿದ್ ಅವರು, ‘ಈ ನಿಯೋಗದಲ್ಲಿ ನಿಮಗೆ ಕಾಣುವುದು ಭಾರತದ ನಿಜವಾದ ಚಿತ್ರಣ. ಇದನ್ನು ನಾವು ಬಹಳ ಮೌಲ್ಯಯುತ ಎಂದು ಭಾವಿಸಿದ್ದೇವೆ, ಇದನ್ನು ನಾವು ಪೋಷಿಸುತ್ತೇವೆ. ನಮ್ಮ ದೇಶ ನಮ್ಮ ತಾಯಿ ಎಂಬುದು ನಮ್ಮ ನಂಬಿಕೆ’ ಎಂದು ಹೇಳಿದರು.

ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದ ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಡಿರುವ ಸಮೃದ್ಧಿಯನ್ನು ಹಾಳುಮಾಡುವುದು ಪಾಕಿಸ್ತಾನದ ಬಯಕೆ ಎಂದು ಖುರ್ಷಿದ್ ಹೇಳಿದರು. 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದರ ಬಗ್ಗೆ ಅವರ ಪಕ್ಷವು ತಾಳಿರುವ ನಿಲುವಿಗೆ ಈ ಮಾತು ಭಿನ್ನವಾಗಿದೆ.

ನಿಯೋಗ ಕಳುಹಿಸುವ ಕ್ರಮವನ್ನು ಇನ್ನೊಬ್ಬ ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಅವರೂ ಶ್ಲಾಘಿಸಿದರು. ಭಯೋತ್ಪಾದನೆಗೆ ಉತ್ತೇಜನ ನೀಡುವಲ್ಲಿ ಪಾಕಿಸ್ತಾನದ ಮಿಲಿಟರಿ ವಹಿಸುತ್ತಿರುವ ಪಾತ್ರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮೋದಿ ನೇತೃತ್ವದ ಸರ್ಕಾರವು ನಿಯೋಗ ಕಳುಹಿಸಲು ತೀರ್ಮಾನಿಸಿದ್ದನ್ನು ಶರ್ಮಾ ಅವರು ಬಹಳ ಮುಖ್ಯವಾದ ಕ್ರಮ ಎಂದು ಬಣ್ಣಿಸಿದರು. ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರು ನಿಯೋಗವನ್ನು ಸೇರಿಕೊಂಡರು, ರಾಷ್ಟ್ರದ ಕರೆಯು ಬೇರೆ ಎಲ್ಲವುಗಳಿಗಿಂತ ದೊಡ್ಡದು ಎಂದು ಹೇಳಿದರು.

ಇವೆಲ್ಲವುಗಳ ನಡುವೆ ಉದಯಿಸಿದ ಇನ್ನೊಬ್ಬ ‘ರಾಷ್ಟ್ರೀಯವಾದಿ’ ತಾರೆ ಎಂದರೆ ಅಖಿಲ ಭಾರತ ಮಜ್ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ನಾಯಕ ಅಸದುದ್ದೀನ್ ಒವೈಸಿ. ಪಾಕಿಸ್ತಾನವು ಭಯೋತ್ಪಾದನೆಗೆ ನಿರಂತರವಾಗಿ ಉತ್ತೇಜನ ನೀಡುತ್ತಿರುವ ಪರಿಣಾಮವಾಗಿ ಭಾರತವು ತೆರುತ್ತಿರುವ
ಬೆಲೆಯ ಬಗ್ಗೆ ಒವೈಸಿ ಅವರು ಮನಬಿಚ್ಚಿ ಮಾತನಾಡಿದರು. ಅವರ ಮಾತುಗಳು, ಈ ಸಮಸ್ಯೆಯನ್ನು ಜಗತ್ತು ಅರ್ಥ ಮಾಡಿಕೊಳ್ಳುವಲ್ಲಿ ಬಹಳ ದೊಡ್ಡ ಕೊಡುಗೆ ನೀಡಿವೆ. ಸೌದಿ ಅರೇಬಿಯಾ, ಕುವೈತ್, ಬಹರೇನ್, ಅಲ್ಜೀರಿಯಾಕ್ಕೆ ತೆರಳಿದ ನಿಯೋಗದಲ್ಲಿ ಒವೈಸಿ ಇದ್ದರು. ಈ ನಿಯೋಗದ ನೇತೃತ್ವವನ್ನು ಬಿಜೆಪಿಯ ಮುಖಂಡ ಬೈಜಯಂತ್ ಪಾಂಡಾ ವಹಿಸಿದ್ದರು.

ಈ ನಿಯೋಗದಲ್ಲಿ ಗುಲಾಂ ನಬಿ ಆಜಾದ್ ಅವರೂ ಇದ್ದರು. ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳು ಭಾರತದ ಬಹುತ್ವವಾದಿ, ಉದಾರವಾದಿ ಮತ್ತು ಪ್ರಜಾತಂತ್ರವಾದಿ ಸಮಾಜವನ್ನು ಆಪತ್ತಿಗೆ ನೂಕುವ ಯತ್ನ ನಡೆಸುತ್ತಿವೆ ಎಂದು ಈ ನಿಯೋಗವು ಬಲವಾಗಿ ಪ್ರತಿಪಾದಿಸಿತು.

ಜಗತ್ತಿನ ಎಲ್ಲೆಡೆಗಳಿಗೆ ಇಂತಹ ನಿಯೋಗಗಳನ್ನು ಕಳುಹಿಸುವ ಯೋಜನೆ ಸಿದ್ಧಪಡಿಸಿದ್ದಕ್ಕಾಗಿ ಮತ್ತು ಈ ದಿಸೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೆಚ್ಚುಗೆ ಸಲ್ಲಬೇಕು.

ಕನಿಮೊಳಿ ಅವರು ನೀಡಿದ ‘ವಿವಿಧತೆಯಲ್ಲಿ ಏಕತೆ’ ಎನ್ನುವ ಪ್ರತಿಕ್ರಿಯೆಯು ಭಾಷಾ ಬಹುತ್ವಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಭಾರತದ ಸಾಮಾಜಿಕ, ಜನಾಂಗೀಯ, ಆರ್ಥಿಕ, ಧಾರ್ಮಿಕ ಮತ್ತು ಭಾಷಿಕ ಬಹುತ್ವಕ್ಕೆ ಸಾಟಿಯೇ ಇಲ್ಲ. ಭಾರತವು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಮಾತ್ರವೇ ಅಲ್ಲ. ಇದು ಅತ್ಯಂತ ಹೆಚ್ಚು ವೈವಿಧ್ಯಮಯವಾಗಿರುವ ಹಾಗೂ ಅತ್ಯಂತ ಹೆಚ್ಚು ಪ್ರಜಾತಾಂತ್ರಿಕವಾಗಿರುವ ದೇಶವೂ ಹೌದು. ಧಾರ್ಮಿಕ, ಭಾಷಿಕ ಮತ್ತು ಇತರ ಅಲ್ಪಸಂಖ್ಯಾತರಿಗೆ ಅನ್ವಯವಾಗುವ ವಿಶಿಷ್ಟವಾದ ಹಕ್ಕುಗಳನ್ನು ಹೊಂದಿರುವ ಸಂವಿಧಾನ ಇರುವ, ನಮ್ಮಷ್ಟು ಪ್ರಜಾತಾಂತ್ರಿಕವಾಗಿರುವ ಇನ್ನೊಂದು ದೇಶ ಇಲ್ಲ.

‘ದೇಶ ಮೊದಲು’ ಎಂಬುದನ್ನು ಯಾವಾಗ ಹೇಳಬೇಕು ಎನ್ನುವ ಬಗ್ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಇತರ ಕೆಲವರು ಕನಿಮೊಳಿ, ಕಾಂಗ್ರೆಸ್ಸಿಗೆ ಸೇರಿದ ಕೆಲವು ಸಂಸದರು ಮತ್ತು ಇತರ ಪಕ್ಷಗಳ ಸಂಸದರಿಂದ ಕಲಿಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.